5ಜಿ ತರಂಗಗಳಿಂದ ಕರೋನಾ ಸೋಂಕು ಹರಡುತ್ತದೆ ಎಂದು ಮೊಬೈಲ್‌ ಟವರ್‌ಗಳಿಗೇ ಬೆಂಕಿ ಇಟ್ಟರು!

ಕರೋನಾ ವೈರಾಣು ಹುಟ್ಟಿಸಿರುವ ಆತಂಕ ಜನರಲ್ಲಿ ಹಲವು ತಪ್ಪು ಕಲ್ಪನೆಗಳಿಗೆ ಕಾರಣವಾಗಿದೆ. ವೈರಾಣುವಿನ ಬಗ್ಗೆ ಇರುವ ಮಾಹಿತಿ, ಅದರ ಸುತ್ತಲೂ ಸೃಷ್ಟಿಯಾಗಿರುವ ಕಲ್ಪಿತ ವಿಚಾರಗಳು ಹಲವು ಗೊಂದಲ, ಅನಾಹುತಗಳಿಗೆ ಕಾರಣವಾಗುತ್ತಿದೆ

ಕಣ್ಣಿಗೆ ಕಾಣದ ಕರೋನಾ ವೈರಾಣು ಹಲವು ದೇಶಗಳನ್ನು ನಗ್ನವಾಗಿಸಿದೆ. ಅವುಗಳ ನಿಜ ಸಾಮರ್ಥ್ಯಕ್ಕೆ ಬೆಳಕು ಚೆಲ್ಲಿದೆ, ಆ ದೇಶಗಳ ಮೇಲೆ ಇದುವರೆಗೆ ಇದ್ದ ನಂಬಿಕೆಯನ್ನು ಅಲುಗಾಡಿಸಿದೆ. ಅಪಾಯಗಳನ್ನು ಎದುರಿಸಲು ಅಮೆರಿಕ ನಾವಂದುಕೊಂಡಷ್ಟು ಶಕ್ತವಾಗಿಲ್ಲ ಎಂಬುದು ಕರೋನಾ ತಿಳಿಸಿದ ಒಂದು ಸತ್ಯಾಂಶವಾದರೆ ಐರೋಪ್ಯ ರಾಷ್ಟ್ರಗಳ ಮಂದಿ ನಾವು ಅಂದುಕೊಂಡಷ್ಟು ವಿದ್ಯಾವಂತರೂ ಬುದ್ಧಿವಂತರೂ ಅಲ್ಲ ಎಂಬುದು ಮತ್ತೊಂದು. ಇನ್ನೂ ಸಂಶಯವೇ? ಈ ಸುದ್ದಿ ಓದಿ.  

ವಿಷಯ ಆದದ್ದಿಷ್ಟು. ಬ್ರಿಟನ್‍ನಲ್ಲಿ ಕಳೆದ ವಾರ ಗಾಳಿಸುದ್ದಿಯೊಂದು ಹರಿದಾಡಲು ಆರಂಭವಾಯಿತು. ಮೊಬೈಲ್ ತಂತ್ರಜ್ಞಾನಕ್ಕಾಗಿ ಬಳಸುವ 5ಜಿ ತರಂಗಾಂತರದ ಮೂಲಕ ಕರೋನಾ ವ್ಯಾಪಕವಾಗಿ ಹಬ್ಬುತ್ತದೆ ಎಂಬುದು ಆ ಸುದ್ದಿಯ ಸಾರ. ಸಾಮಾಜಿಕ ಜಾಲತಾಣಗಳ ಮೂಲಕ ಕೆಲವು ದಿನ ಮೊಬೈಲುಗಳಲ್ಲಿ ಓಡಾಡಿದ ಈ ಸುದ್ದಿ ಏಪ್ರಿಲ್ 3 ರ ಶುಕ್ರವಾರದಂದು ನಿಜಕ್ಕೂ ಸ್ಫೋಟಿಸಿತು. ಲಿವರ್‍ಪೂಲ್ ಪಟ್ಟಣದ ಸನಿಹ 70 ಅಡಿ ಎತ್ತರದ 5ಜಿ ಅವರಿಗೆ ಕಿಡಿಗೇಡಿಗಳು ಕಿಡಿ ಹತ್ತಿಸಿಯೇ ಬಿಟ್ಟರು.

ಮೊದಲಿಗೆ ಇದೊಂದು ಆಕಸ್ಮಿಕ ಎಂದುಕೊಂಡ ಆಡಳಿತ ಅಗ್ನಿಶಾಮಕ ದಳ ಕರೆಸಿ ಬೆಂಕಿ ನಂದಿಸಿತು. ಇದು ಕಿಡಿಗೇಡಿಗಳ ಕೃತ್ಯ ಎಂಬುದು ತಿಳಿದುಬಂದದ್ದು ರಾತ್ರೆ ಯುಟ್ಯೂಬಿನಲ್ಲಿ ಈ ಬೆಂಕಿಯ ದೃಶ್ಯಾವಳಿಗಳು ಬಿತ್ತರವಾದಾಗಲೇ. ಅಷ್ಟರಲ್ಲಿ ಅದರ ಬೆನ್ನಿಗೇ ಬರ್ಮಿಂಗ್‍ಹ್ಯಾಮ್‍ನಲ್ಲಿನ ಮತ್ತೊಂದು ಟವರಿಗೂ ಬೆಂಕಿ ಹಾಕಲಾಯಿತು. ಹೀಗೆ 24 ತಾಸಿನ ಒಳಗೆ ವೊಡಾಫೋನಿನ 4 ಟವರುಗಳಿಗೆ ಬೆಂಕಿ ಹಚ್ಚಲಾಯಿತು. ಇಇ ಎಂಬ ಮತ್ತೊಂದು ಕಂಪನಿಯ 5ಜಿ ಅಲ್ಲದ ಟವರೂ ಬೆಂಕಿಗೆ ಬಲಿಯಾಯಿತು.

ಕಡೆಗೆ 5ಜಿಗೂ ಕರೋನಾಕ್ಕೂ ಸಂಬಂಧವಿಲ್ಲ ಎಂದು ಫೋನ್ ಕಂಪನಿಗಳು ಪತ್ರಿಕಾ ಪ್ರಕಟಣೆಯನ್ನೇ ನೀಡಬೇಕಾಯಿತು.

ಈ ಸುಳ್ಳು ಸುದ್ದಿಯ ವಾದಗಳೂ ಮಜವಾಗಿದೆ. ಒಂದು ವಾದದ ಪ್ರಕಾರ ಚೈನಾದ ವುಹಾನ್ ಪಟ್ಟಣದಲ್ಲಿ ಇತ್ತೀಚೆಗೆ 5ಜಿ ತರಂಗಾಂತರ ಬಳಕೆಗೆ ಅವಕಾಶ ಮಾಡಲಾಯಿತು. ಕರೋನಾ ಹುಟ್ಟಿದ್ದು ಎಲ್ಲಿ ಹೇಳಿ? ಅದೇ ವುಹಾನ್‍ನಲ್ಲಿ ತಾನೆ..? ನಂತರದ ದಿನಗಳಲ್ಲಿ ಕರೋನಾ ಮಹಾಮಾರಿ 5ಜಿ ಬಳಕೆ ಮಾಡುತ್ತಿದ್ದ ಇತರ ನಗರಗಳಿಗೂ ಹಬ್ಬಿತು. ಇನ್ನೇನು ಬೇಕು ಸಾಕ್ಷಿ? ಹಚ್ಚಿ ಬೆಂಕಿ!!

ಮತ್ತೊಂದು ವಾದದ ಪ್ರಕಾರ ನಿಮ್ಮ ಶ್ವಾಸಕೋಶದಲ್ಲಿರುವ ಆಮ್ಲಜನಕವನ್ನು 5ಜಿ ಹೀರುತ್ತದೆ ಎನ್ನಲಾಯಿತು. ಇದನ್ನು ಬ್ರಿಟನ್‍ನ ಜನ ನಂಬಿದರು ಎಂಬುದು ಮಾತ್ರ ಸುಳ್ಳಲ್ಲ.

ಅಲ್ಲಿನ ಜನ ಇದನ್ನು ಯಾವ ಪರಿ ನಂಬಿದರು ಎಂದರೆ 5ಜಿ ತರಂಗಾಂತರಕ್ಕೆ ಒಎಫ್‍ಸಿ ಕೇಬಲ್ ಹಾಕುತ್ತಿದ್ದ ಮಂದಿಗೂ ತೊಂದರೆ ನೀಡಿದರು.

ನಾವುಗಳೇ ಪರ್ವಾಗಿಲ್ಲ, ಬರೀ ದೀಪ ಹೊತ್ತಿಸಿದೆವು, ಟವರುಗಳನ್ನಲ್ಲ. ಬಹುಶಃ ಅದಕ್ಕೇ ಇರಬೇಕು ಭಾರತೀಯರನ್ನು ಶಾಂತಿ ಪ್ರಿಯರು ಎನ್ನುವುದು.  

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.