ಉಭಯವಾಸಿ ಜೀವಿ ಮೊಸಳೆ ಯಾರಲ್ಲೂ ನಡುಕ ಹುಟ್ಟಿಸುತ್ತದೆ. ಅದರ ಉದ್ದನೆಯ ಬಾಯಿ, ಗರಗಸದಂತಹ ಹಲ್ಲುಗಳನ್ನು ನೋಡಿದರೆ, ಅದು ಹುಲ್ಲು ತಿಂದು ಬದುಕಿದ ಜೀವಿಯಂತೆ ಕಾಣಿಸಲು ಸಾಧ್ಯವೇ ಇಲ್ಲ. ಆದರೆ ಇದು ನಿಜ!

ಮೊಸಳೆಗಳು ಹುಲ್ಲು ತಿನ್ನುತ್ತಿದ್ದುವೇ? ಹೌದು ಎಂಬುದು ಅಚ್ಚರಿಯ ವಿಷಯ. ಮೊಸಳೆಗಳ ಹಲ್ಲುಗಳ ಹಾಗೂ ದಂತವಿನ್ಯಾಸವನ್ನು ಅಳೆದು ಪರೀಕ್ಷಿಸಿದ ಅಧ್ಯಯನವೊಂದು ಈ ಪ್ರಾಣಿಗಳು ಒಂದಾನೊಂದು ಕಾಲದಲ್ಲಿ ಸಸ್ಯಹಾರಿಗಳಾಗಿದ್ದ ಸಾಧ್ಯತೆಯಿದೆ ಎಂದು ಹೇಳುತ್ತಿದೆ. ಕೆಲವು ಅಳಿದು ಹೋದ ಮೊಸಳೆಗಳ, ಅಂದರೆ ಇಂದಿನ ಮೊಸಳೆಗಳ ಬಂಧುಗಳ ದಂತವಿನ್ಯಾಸ ಇಂದಿನದರವುಗಳಿಗಿಂತಲೂ ಸಂಕೀರ್ಣವಾಗಿತ್ತು. ಹೀಗಾಗಿ ಅವುಗಳ ಆಹಾರ ಪದ್ಧತಿಯೂ ವೈವಿಧ್ಯಮಯವಾಗಿದ್ದಿರಬೇಕು ಎಂದು ಯೂಟಾ ವಿಶ್ವವಿದ್ಯಾಲಯದ ಮೆಲ್ಸ್ಟೋರಮ್ ಮತ್ತು ಅವರ ಸಹೋದ್ಯೋಗಿ ರಂದಲ್.ಬಿ.ಇರ್ಮಿಸ್ ರವರು ವರದಿ ಮಾಡಿದ್ದಾರೆ.
ಎಂದೋ ಅಳಿದು ಹೋದ ಮೊಸಳೆಗಳು ಏನನ್ನು ತಿನ್ನುತ್ತಿದ್ದವು ಎಂಬುದನ್ನು ನಿರ್ಣಯಿಸಲು, ಅವುಗಳ ದಂತವಿನ್ಯಾಸವನ್ನು ಈಗಿನ ಮೊಸಳೆಗಳೊಂದಿಗೆ ಹೋಲಿಸಿ ನೋಡಿದ್ದಾರೆ. ಒಟ್ಟಾರೆ, ಸಂಶೋಧಕರು ಗತಿಸಿ ಹೋದ ಹದಿನಾರು ವಿವಿಧ ಜಾತಿಯ ಮೊಸಳೆಗಳ 146 ಹಲ್ಲುಗಳನ್ನು ಅಳತೆ ಮಾಡಿದ್ದಾರೆ. ಅವುಗಳ ಉದ್ದ, ದಪ್ಪ, ಎತ್ತರ ಮುಂತಾದವುಗಳನ್ನು ಅಳೆದಿದ್ದಾರೆ. ಇವುಗಳ ಆಧಾರದ ಮೇಲೆ ಹಲ್ಲುಗಳನ್ನು ವಿಂಗಡಿಸಿದ್ದಾರೆ. ವಿಂಗಡಿಸಿದ ಹಲ್ಲುಗಳಲ್ಲಿ ಎಷ್ಟೆಷ್ಟು ಇದ್ದುವು ಎನ್ನುವುದು ದಂತವಿನ್ಯಾಸವನ್ನು ಸೂಚಿಸುತ್ತದೆ. ಈ ಮಾಹಿತಿಯನ್ನು ಆಧರಿಸಿ ಹಾಗೂ ಹಲ್ಲಿನ ಮೇಲಿರುವ ಉಬ್ಬು, ತಗ್ಗುಗಳು, ಆಕಾರ ಮೊದಲಾದವುಗಳನ್ನು ಬಳಸಿ ಮೂರು ಆಯಾಮದ ಚಿತ್ರಗಳನ್ನು ರಚಿಸಿದ್ದಾರೆ. ಈ ಫಲಿತಾಂಶಗಳ ಪ್ರಕಾರ ಸುಮಾರು ಮಿಲಿಯನ್ ವರ್ಷಗಳಷ್ಟು ಹಿಂದೆ ಜೀವಿಸಿದ್ದ ಪೂರ್ವಜರ ಹಲ್ಲುಗಳ ವಿನ್ಯಾಸ ಸಂಕೀರ್ಣವಾಗಿತ್ತು. ಈ ಹುಲ್ಲು ತಿನ್ನುವ ಮೊಸಳೆಗಳು ವಿಕಾಸವಾಗಲು ಆರಂಭಿಸಿದಂದಿನಿಂದ, ಡೈನೊಸರಸ್‍ಗಳು ಕೊನೆಯಾಗುವವರೆಗೂ ಅಂದರೆ ಸುಮಾರು 60 ಕೋಟಿ ವರ್ಷಗಳ ಹಿಂದಿನವರೆಗೂ ವಾಸವಿದ್ದವು.
ಡೈನೊಸರಸ್‍ಗಳ ಕಾಲದಲ್ಲಿ ಇದ್ದ ಜೀವಿಗಳಲ್ಲಿ ಇಂದು ಇರುವ ಜೀವಿಗಳಲ್ಲಿ ಕಾಣುವುದಕ್ಕಿಂತಲೂ ಹೆಚ್ಚು ವೈವಿಧ್ಯವಿತ್ತು. ಅದರಲ್ಲೂ ನಿರ್ಧಿಷ್ಟವಾಗಿ ಮೊಸಳೆಗಳಲ್ಲಿ ವಿವಿಧ ಕಾಲಘಟ್ಟದಲ್ಲಿ ಮತ್ತೆ ಮತ್ತೆ ಹಲ್ಲಿನ ವಿಕಾಸದಲ್ಲಿ ಬದಲಾವಣೆಯಾಗಿದೆ.
ಈ ಫಲಿತಾಂಶಗಳಿಂದ, ಮೊಸಳೆಗಳಲ್ಲಿ ಕನಿಷ್ಟ ಮೂರು ಬಾರಿಯಾದರೂ ದಂತವಿನ್ಯಾಸಗಳು ಬದಲಾಗಿರುವುದು ತಿಳಿದು ಬರುತ್ತದೆ. ಅದರಲ್ಲಿ ಕೆಲವದರಲ್ಲಿ ವಿಷಪೂರಿತ ಹಲ್ಲುಗಳೂ ಇದ್ದುವು. ಮೊಸಳೆಗಳ ದಂತವೈವಿಧ್ಯ ಆಗ ಬದುಕಿದ್ದ ಸಸ್ಯಾಹಾರಿ ಡೈನೊಸರಸ್‍ಗಳು ಹಾಗೂ ಅವುಗಳ ಜೊತೆಗೆ ಸ್ಪರ್ಧೆಗೆ ಇಳಿದಿದ್ದ ಸಸ್ಯಾಹಾರಿ ಹಾಗೂ ಮಾಂಸಾಹಾರಿ ಸಸ್ತನಿಗಳ ದಂತವೈವಿಧ್ಯತೆಯನ್ನೂ ಮೀರಿಸಿದ್ದವು. ಇವುಗಳಲ್ಲಿ ಸಸ್ಯಾಹಾರಿ ಮೊಸಳೆಗಳ ಸಂತತಿ ಬಹಳ ಸಾಮಾನ್ಯವಾಗಿತ್ತು. ಇಂತಹ ಬಹಳಷ್ಟು ಮೊಸಳೆಗಳು, ಸಿನಾಪ್ಸಿಡ ವರ್ಗದ ಸಸ್ಯಹಾರಿ ಅಥವಾ ಮಾಂಸಾಹಾರಿ ಸರೀಸೃಪಗಳ ಜೊತೆಯಲ್ಲಿ ಬದುಕಿದ್ದವು. ಇಂದು ಕಾಣಸಿಗದ ಪರಿಸರ ವಿಭಜನೆಗೆ ಇದೊಂದು ನಿದರ್ಶನವಾಗಿದೆ. ಡೈನೊಸರಸ್‍ಗಳು ಬದುಕಿದ್ದ ಮೀಸೋಜೋಯಿಕ್ ಕಾಲದುದ್ದಕ್ಕೂ ಇಂತಹ ಮೊಸಳೆಗಳು ಪ್ರಪಂಚದ ಎಲ್ಲಾ ಖಂಡಗಳಲ್ಲಿಯೂ ವಾಸಿಸಿದ್ದವು ಎಂಬುದನ್ನು ಈ ಅಧ್ಯಯನವು ತಿಳಿಸುತ್ತದೆ.