ಕರೋನಾ ವಿರುದ್ಧ ಹೋರಾಡುತ್ತಿರುವ ಆಸ್ಪತ್ರೆಗಳ ಮೇಲೆ ‘ಸೈಬರ್ ಹ್ಯಾಕರ್ಸ್‌’ ಕಣ್ಣು!

ಕೋವಿಡ್-19‌ ರೋಗದ ಜೊತೆ ಸೆಣಸಾಡುತ್ತಿರುವ ದೇಶದ ಪ್ರತಿಷ್ಠಿತ ಆಸ್ಪತ್ರೆಗಳು ಅಲರ್ಟ್‌ ಆಗಬೇಕಿದೆ. ಏಕೆಂದರೆ, ಆಸ್ಪತ್ರೆಯ ಕಂಪ್ಯೂಟರ್‌ಗಳಲ್ಲಿ ʼಸೇವ್‌ʼ ಆಗಿರುವ ದತ್ತಾಂಶಗಳನ್ನ ಹ್ಯಾಕ್‌ ಮಾಡಲು ಹ್ಯಾಕರ್‌ಗಳು ತುದಿಗಾಲಲ್ಲಿ ನಿಂತು ಹೊಂಚು ಹಾಕುತ್ತಿದ್ದಾರೆ. ಆದ್ದರಿಂದ ʼಡೇಟಾ ಸೆಕ್ಯೂರಿಟಿ ಕೌನ್ಸಿಲ್‌ ಆಫ್‌ ಇಂಡಿಯಾʼ ಎಚ್ಚರಿಕೆ ವಹಿಸುವಂತೆ ಆಸ್ಪತ್ರೆ ಸಹಿತ ಆನ್‌ಲೈನ್‌ ಬಳಕೆದಾರರಿಗೆ ಎಚ್ಚರಿಸಿದೆ

ದೇಶಾದ್ಯಂತ ಕರೋನಾ ಸೋಂಕು ಅಟ್ಟಹಾಸ ಮೆರೆಯುತ್ತಿದ್ದಂತೆ ಸೈಬರ್‌ ಹ್ಯಾಕರ್ಗಳ ದಾಳಿ ನಡೆಯವ ಸಂಭವ ಜಾಸ್ತಿಯಿದೆ. ಈಗಾಗಲೇ ಬೆಂಗಳೂರು ಸೇರಿದಂತೆ ಮಹಾನಗರದಲ್ಲಿ ವಾಸಿಸುತ್ತಿರುವ ಮಂದಿಯನ್ನ ಗುರಿಮಾಡಿ ಈ ರೀತಿಯ ವ್ಯವಸ್ಥಿತ ಸಂಚು ನಡೆಯುತ್ತಿದೆ. ಬೆಂಗಳೂರಿನಲ್ಲಿ ಲಾಕ್‌ಡೌನ್‌ ಆದ ಬಳಿಕ ಸೈಬರ್‌ ಕ್ರೈಂ ಪ್ರಕರಣಗಳು ಹೆಚ್ಚಾಗತೊಡಗಿದ್ದು, ಹ್ಯಾಕರ್ಸ್‌ಗಳ ಕೈಗೆ ಸಿಕ್ಕಿ ಅನಾಯಾಸವಾಗಿ ಹಣ ಕಳೆದುಕೊಂಡವರಿದ್ದಾರೆ. ಆನ್‌ಲೈನ್‌ನಲ್ಲಿ ಕನ್ನ ಹಾಕುವ ಖದೀಮರು ಲಾಕ್ ಡೌನ್‌ ಲಾಭ ಪಡೆದು ಇನ್ನೊಬ್ಬರ ಬ್ಯಾಂಕ್‌ ಖಾತೆಗೆ ಕ್ಷಣಮಾತ್ರದಲ್ಲಿ ಕನ್ನ ಹಾಕಿ ಹಣ ವರ್ಗಾಯಿಸಿಕೊಳ್ಳುತ್ತಿದ್ದಾರೆ. ಗ್ರಾಹಕ ಎಚ್ಚೆತ್ತುಕೊಳ್ಳುವ ಮುನ್ನವೇ ಅಲ್ಲೊಂದು ಅನಾಹುತ ನಡೆದು ಹೋಗಿರುತ್ತದೆ.

ಲಾಕ್‌ಡೌನ್‌ ನಿಂದ ಮನೆಯಲ್ಲೇ ಇರುವ ಮಂದಿ ಆನ್‌ಲೈನ್‌ ಮೊರೆ ಹೋಗುವುದು ಹೆಚ್ಚಿದೆ. ಅದರಲ್ಲೂ ಆನ್‌ಲೈನ್‌ ಮಾರ್ಕೆಟಿಂಗ್‌ ಹುಡುಕಾಟ, ಇನ್ನು ʼಹೋಮ್‌ ಫ್ರಂ ವರ್ಕ್‌ʼ ಅವಧಿಯಲ್ಲಿರುವ ಕೆಲಸಗಾರರನ್ನು ಆನ್‌ಲೈನ್‌ ವಂಚಕರು ಸುಲಭವಾಗಿ ಗಮನಸೆಳೆಯುವ ಕೆಲಸ ಮಾಡುತ್ತಾರೆ. ಗೂಗಲ್‌ ಸರ್ಚ್‌ ಇಂಜಿನ್‌ ನಲ್ಲಿ ಜಾಹೀರಾತಿನಂತೆ ಕಾಣಸಿಗುವ ಆಕರ್ಷಕ ಪೋಸ್ಟರ್‌ಗಳು ಸುಲಭವಾಗಿ ಗಮನಸೆಳೆಯುತ್ತವೆ. ವಿಶಿಷ್ಟ ಆಫರ್‌ ಬೇರೆ ಇದ್ದಂತೆ ಗೋಚರಿಸುತ್ತವೆ. ಹೀಗೆ ನೋಡಿದವರು ಏನಾದ್ರೂ ಕ್ಲಿಕ್‌ ಮಾಡಿದ್ರೆ ಮುಂದಿನ ಪ್ಲ್ಯಾನ್‌ನಂತೆ ನೀವು ಹ್ಯಾಕರ್ಸ್‌ಗಳ ಕೈಯಲ್ಲಿ ಬಂಧಿಯಾಗುವಿರಿ. ಅಂತಹದ್ದೇ ಒಂದು ಘಟನೆ ಬೆಂಗಳೂರಿನ ಆಡುಗೋಡಿಯಲ್ಲಿ ನಡೆದಿದ್ದು, ಮದ್ಯದ ಆಸೆಗೆ ಬಿದ್ದ ಖಾಸಗಿ ಕಂಪೆನಿ ಉದ್ಯೋಗಿಯೊಬ್ಬರು ಇಂತಹದ್ದೇ ಜಾಹೀರಾತನ್ನ ಫೇಸ್‌ಬುಕ್‌ ನಲ್ಲಿ ಕಂಡು ಸಂಪರ್ಕಿಸಿದ್ದಾರೆ. ಮೊದಲೇ ಲಾಕ್‌ಡೌನ್‌ ಆದ ನಂತರ ಆಲ್ಕೋಹಾಲ್‌ ರುಚಿ ನೋಡದ ಈ ವ್ಯಕ್ತಿ 2,400 ರೂಪಾಯಿ ಜಮೆ ಮಾಡಿದ್ದಾರೆ. ಇನ್ನೇನು ಮದ್ಯದ ಬಾಟಲಿಗಳು ಮನೆ ಬಾಗಿಲಿಗೆ ಬರುತ್ತೆ ಅಂದ್ಕೊಂಡಿದ್ದ ವ್ಯಕ್ತಿಯ ಮೊಬೈಲ್‌ ಗೆ ʼಲಿಂಕ್‌ʼವೊಂದು ಬಂದಿದ್ದು, ರಿಜಿಸ್ಟರ್‌ ಮಾಡಿಕೊಳ್ಳುವಂತೆ ಕರೆ ಮಾಡಿ ತಿಳಿಸಲಾಗಿದೆ. ಯಾವಾಗ ಕ್ಲಿಕ್‌ ಮಾಡದಿರೋ, ಅದಾಗಲೇ ಐನಾತಿ ಕಳ್ಳರು 17,390 ರೂ. ವರ್ಗಾಯಿಸಿಕೊಂಡಿದ್ದಾರೆ. ತಕ್ಷಣ ಮೋಸ ಹೋಗಿರುವ ವಿಚಾರ ತಿಳಿದ ವ್ಯಕ್ತಿ ಪೊಲೀಸರ ಮೊರೆ ಹೋಗಿದ್ದಾರೆ.

ಸದ್ಯ ಲಾಕ್‌ಡೌನ್‌, ಕರೋನಾ ಸಾಂಕ್ರಾಮಿಕ ರೋಗದ ನಡುವೆಯೂ ಆನ್‌ಲೈನ್‌ ವಂಚಕರ ಮೋಸದ ಜಾಲ ಕಡಿಮೆಯಾಗಿಲ್ಲ. ಅದೆಲ್ಲೋ ಕೂತು ಇವರು ಹೆಣೆಯುವ ಷಡ್ಯಂತ್ರದ ಬಲೆಗೆ ಕಾಸು ಉಳ್ಳವರು, ಇಲ್ಲದವರೂ ಸುಲಭ ತುತಾಗುತ್ತಿದ್ದಾರೆ. ಅದೆಷ್ಟೇ ಬ್ಯಾಂಕ್‌ ಗಳು ತಮ್ಮ ಗ್ರಾಹಕರಿಗೆ ʼPINʼ (PERSONAL IDENTIFICATION NUMBER) ನೀಡದಂತೆ ಕೇಳಿಕೊಂಡರೂ ಗ್ರಾಹಕರು ತೋರುವ ನಿರ್ಲಕ್ಷ್ಯ ಅಥವಾ ಅತಿಯಾದ ಹಣದ ಆಸೆ ಸುಲಭವಾಗಿ ಅವರ ಬ್ಯಾಂಕ್‌ ಖಾತೆಗೆ ಕನ್ನ ಹಾಕಿಸುತ್ತಿವೆ.

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಸೈಬರ್‌ ವಂಚಕರು ನಕಲಿ ಕರೋನಾ ಖಾತೆಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಜಾಲತಾಣಗಳಲ್ಲಿ ಹಾಗೂ ಕರೆ ಮಾಡುವ ಮೂಲಕ ʼಕರೋನಾ ವಿರುದ್ಧದ ಹೋರಾಟಕ್ಕೆ ಧನ ಸಹಾಯ ಮಾಡುವಂತೆʼ ಕೇಳತೊಡಗಿದ್ದಾರೆ. ಇದನ್ನು ನಂಬಿದ ಕೆಲವು ಗ್ರಾಹಕರು ತಮ್ಮಿಂದಾದಷ್ಟು ದೇಣಿಗೆ ನೀಡಲು ಮುಂದಾಗಿದ್ದಾರೆ. ಈ ಮೂಲಕ ರೋಗದ ಹೆಸರಲ್ಲೂ ಇಂತಹ ನಯವಂಚನೆಗಳು ನಡೆಯುತ್ತಿರುವುದು ಪತ್ತೆಯಾಗಿದೆ. ರಾಜ್ಯದ ಕರಾವಳಿ ಭಾಗದಲ್ಲಿ ಇಂತಹ ಹಲವು ಪ್ರಕರಣಗಳು ನಡೆದಿದ್ದು, ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಲಕ್ಷ್ಮೀ ಪ್ರಸಾದ್‌ ಅವರು ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ.

ಲಾಕ್‌ಡೌನ್‌ ಆಗಿರುವ ಹಿನ್ನೆಲೆ ಬಹುತೇಕ ಮಂದಿ ಆನ್‌ಲೈನ್‌ ಖರೀದಿಯಿಂದ ಹಿಂದೆ ಸರಿದಿದ್ದಾರೆ. ಇದನ್ನ ಅರಿತ ಹ್ಯಾಕರ್ಸ್‌ ಇಮೇಲ್‌, ಕಂಪ್ಯೂಟರ್‌ ದತ್ತಾಂಶಗಳ ಮೇಲೆ ಕನ್ನ ಹಾಕುತ್ತಿದ್ದಾರೆ. ʼಆರ್ಮಿ ಸರ್ವಿಸ್‌ʼ ಹೆಸರಿನಲ್ಲಿ ಯಾಮಾರಿಸಿ ಹಣ ದೋಚುವ ಸ್ಕೀಮ್‌ ಹಾಕಿಕೊಂಡಿದ್ದಾರೆ. ಈ ಮೋಸದ ಜಾಲಕ್ಕೆ ಸಿಕ್ಕಿ ಹಣ ಕಳೆದುಕೊಂಡವರೂ ಇದ್ದಾರೆ. ಇನ್ನು ಫೇಸ್‌ಬುಕ್‌ ನಲ್ಲಿ ಹುಡುಗಿಯ ಹೆಸರಿನಲ್ಲಿ ಕಾಣಸಿಗುವ ನಕಲಿ ಖಾತೆಗಳು ಅದೆಷ್ಟೋ ಯುವಕರ ಜೇಬಿಗೆ ಕತ್ತರಿ ಹಾಕಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ ಸರಿ. ಆದರೆ ಕರೋನಾ ಸಾಂಕ್ರಾಮಿಕ ರೋಗದ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಸೈಬರ್‌ ಹ್ಯಾಕರ್ಸ್‌ಗಳು ಇನ್ನೊಂದು ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಸದ್ಯ ಅವರ ಟಾರ್ಗೆಟ್‌ ಆಗಿರೋದೆ ಹೈಟೆಕ್‌ ಆಸ್ಪತ್ರೆಗಳು.. ಅದರಲ್ಲೂ ಕರೋನಾ ಸೋಂಕಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಗಳನ್ನೇ ಗುರಿಯಾಗಿಸಿ ಸೈಬರ್‌ ಕಳ್ಳರು ದಾಳಿ ನಡೆಸಲು ಸಂಚು ಹೂಡಿದ್ದಾರೆ.

ಈಗಾಗಲೇ ಕರೋನಾ ವೈರಸ್‌ ವಿರುದ್ಧ ಹೋರಾಡುತ್ತಿರುವ ಆಸ್ಪತ್ರೆಗಳ ದತ್ತಾಂಶಗಳನ್ನು ಲಾಕ್‌ ಮಾಡುವ ನಿಟ್ಟಿನಲ್ಲಿ ಈ ಹ್ಯಾಕರ್ಸ್‌ಗಳು ಕೆಲವು ದೇಶಗಳಲ್ಲಿ ಪ್ರಯತ್ನಿಸಿದ್ದಾರೆ. ಇದರಿಂದಾಗಿ ಡೇಟಾ ಸೆಕ್ಯೂರಿಟಿ ಕೌನ್ಸಿಲ್‌ ಆಫ್‌ ಇಂಡಿಯಾ ದೇಶದಲ್ಲಿರುವ ಆಸ್ಪತ್ರೆಗಳಿಗೂ ಎಚ್ಚರಿಕೆಯನ್ನು ರವಾನಿಸಿದೆ. ವಿಶೇಷವಾಗಿ ಕರೋನಾ ಸೋಂಕಿನ ವಿರುದ್ಧ ಹೋರಾಟ ನಡೆಸುತ್ತಿರುವ ಆಸ್ಪತ್ರೆಗಳ ಡೇಟಾಗಳನ್ನು ಸಂರಕ್ಷಿಸುವಂತೆ ಕರೆ ನೀಡಿದೆ.

ಆಸ್ಪತ್ರೆಗಳ ಇಮೇಲ್‌ಗೆ ಕನ್ನ ಹಾಕುವ ಈ ಸೈಬರ್‌ ಖದೀಮರು, ಇಮೇಲ್‌ ಐಡಿಯ ದುರುಪಯೋಗಪಡಿಸಿ ಸಂದೇಶ ಕಳುಹಿಸುತ್ತಾರೆ. ಹಾಗೆ ಬಂದ ಸಂದೇಶವನ್ನ ಸ್ವೀಕರಿಸಿದ್ದಲ್ಲಿ, ಆ ನಂತರ ಅವರು ಕಾರ್ಯನಿರ್ವಹಿಸುವ ಕಂಪ್ಯೂಟರ್‌ಗಳು ತಕ್ಷಣಕ್ಕೆ ಕಾರ್ಯಸ್ಥಗಿತಗೊಳಿಸುತ್ತದೆ. ಅಲ್ಲದೇ ಕ್ಷಣಮಾತ್ರದಲ್ಲೇ ಹ್ಯಾಕರ್ಸ್‌ಗಳು ಕಂಪ್ಯೂಟರ್‌ನ ಸ್ಕ್ರೀನ್‌ ಮೇಲೆ ಕಾಣಿಸುವಂತೆ ʼನಿಮ್ಮ ಕಂಪ್ಯೂಟರ್‌ ಲಾಕ್‌ ಆಗಿದೆ, ಮುಂದೆ ನಾವು ಹೇಳಿದ್ದನ್ನು ಅನುಸರಿಸಿʼ ಎಂದು ಸಂದೇಶ ನೀಡುತ್ತಾರೆ. ಆ ನಂತರ ಅವರು ಇಟ್ಟ ಡಿಮ್ಯಾಂಡ್‌ನಷ್ಟು ಹಣವನ್ನ ಪೂರೈಸಬೇಕಾಗುತ್ತದೆ.

ಸಹಜವಾಗಿಯೇ ಇಂದಿನ ಹೈಟೆಕ್‌ ಆಸ್ಪತ್ರೆಗಳು ರೋಗಿಗಳ ಡೇಟಾಗಳನ್ನು ಡಿಜಿಟಲ್‌ ರೂಪದಲ್ಲಿ ಕಾಪಿಡುತ್ತವೆ. ಅಂತಹ ಕಂಪ್ಯೂಟರ್‌ಗಳನ್ನೇ ಸೈಬರ್‌ ಕಳ್ಳರು ಹ್ಯಾಕ್‌ ಮಾಡಲು ಹಾತೊರೆಯುತ್ತಿದ್ದಾರೆ. ಒಂದು ವೇಳೆ ಅದರಲ್ಲಿ ಯಶಸ್ವಿಯಾದರೆ ಅದೆಷ್ಟೋ ರೋಗಿಗಳ ದತ್ತಾಂಶ ಕಳೆದುಕೊಳ್ಳಬೇಕಾಗುತ್ತದೆ. ಇಲ್ಲವೇ ಪುನರಪಿ ಪಡೆಯಲು ಅವರು ಇಡುವ ಡಿಮ್ಯಾಂಡ್‌ಗೆ ತಲೆಬಾಗಬೇಕಾಗುತ್ತದೆ. ಆದ್ದರಿಂದ ದೇಶದಲ್ಲಿರುವ ಆಸ್ಪತ್ರೆಗಳು ಈ ನಿಟ್ಟಿನಲ್ಲಿ ಜಾಗ್ರತೆ ವಹಿಸಿಕೊಳ್ಳಬೇಕಿದೆ. ಯಾಕೆಂದರೆ ಒಮ್ಮೆ ರೋಗಿಯೊಬ್ಬನ ಡೇಟಾ ಕಳೆದುಕೊಂಡರೆ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಗಳಿಗೆ ಚಿಕಿತ್ಸೆ ಒದಗಿಸಲು ಅಷ್ಟು ಸುಲಭವಾಗಿ ಸಾಧ್ಯವಾಗದು.

ಇದು ಮಾತ್ರವಲ್ಲದೇ ಬ್ಯಾಂಕ್‌ ʼPINʼ ಅಥವಾ ATM ನಂಬರ್‌ ಕೇಳಿಕೊಂಡುವ ಬರುವ ಅದೆಷ್ಟೋ ಕರೆಗಳು ಇಂತಹದ್ದೇ ನಕಲಿ ಹಾಗೂ ಖಾತೆಗೆ ಕನ್ನ ಹಾಕುವ ಕರೆಗಳಾಗಿರುತ್ತವೆ. ಸ್ವಲ್ಪ ಎಚ್ಚರ ತಪ್ಪಿದರೂ ಗ್ರಾಹಕನ ಅಕೌಂಟ್‌ ಅನ್ನೋದು ಹ್ಯಾಕರ್ ಗಳ ಪಾಲಾಗುವುದು. ಆದ್ದರಿಂದ ಇಂತಹ ಕರೆಗಳು ಬಂದಾಗ ತಕ್ಷಣ ತಾವು ಖಾತೆಯನ್ನು ಹೊಂದಿರುವ ಬ್ಯಾಂಕ್‌ ಸಿಬ್ಬಂದಿ ಇಲ್ಲವೇ ಮ್ಯಾನೇಜರ್‌ ಗಳಿಗೆ ಕರೆ ಮಾಡಿ ವಿಚಾರಿಸಬೇಕು. ಯಾಕೆಂದರೆ ಬ್ಯಾಂಕ್‌ ಶಾಖೆಯಿಂದ ಯಾವತ್ತೂ ಎಟಿಎಂ ʼPINʼ ಕೇಳುವ ಯಾವುದೇ ಸಂದರ್ಭ ಬರುವುದಿಲ್ಲ. ಆದ್ದರಿಂದ ಬ್ಯಾಂಕ್ ಗ್ರಾಹಕರು‌ ತಮ್ಮ ಶಾಖೆಗಳ ಸಿಬ್ಬಂದಿಗಳ ಜೊತೆ ಹೆಚ್ಚು ಸಂಪರ್ಕದಲ್ಲಿರಬೇಕಾಗುತ್ತದೆ. ಇನ್ನು ಲಾಕ್‌ಡೌನ್‌ ಆರಂಭವಾದ ಬಳಿಕ ಶೇಕಡಾ 260 ರಷ್ಟು ಸೈಬರ್‌ ಕ್ರೈಂ ಪ್ರಕರಣಗಳು ಹೆಚ್ಚಾಗಿವೆ.

ದೇಶದಲ್ಲಿ ಈಗಾಗಲೇ ಸೈಬರ್‌ ಕ್ರೈಂ ಹತ್ತಿಕ್ಕಲು ಕಾನೂನುಗಳಿದ್ದರೂ ಹೆಚ್ಚಿನ ಪ್ರಗತಿ ಸಾಧಿಸಲು ಭಾರತಕ್ಕೆ ಸಾಧ್ಯವಾಗಿಲ್ಲ. ಗೂಗಲ್‌ ಸರ್ಚ್‌ ಇಂಜಿನ್‌, ಜಾಲತಾಣ ಕಂಪೆನಿಗಳ ಅಸಹಕಾರ, ದೇಶದಲ್ಲಿ ಪ್ರಮುಖ ಸರ್ಚ್‌ ಇಂಜಿನ್‌ಗಳ ಪ್ರಾದೇಶಿಕ ಕಚೇರಿ ಇಲ್ಲದಿರುವುದು, ವಿದೇಶಿ ಹ್ಯಾಕರ್‌ಗಳ ಮಾಹಿತಿ ಸಂಗ್ರಹಿಸಲು ತೊಡಕಾಗುವ ಅಂತರಾಷ್ಟ್ರೀಯ ಕಾನೂನು ಹಾಗೂ ಭಾರತದಲ್ಲಿ ಹ್ಯಾಕರ್ಸ್‌ಗಳ ಕಟ್ಟಿಹಾಕಲು ಇರುವ ಮಾಹಿತಿ ತಂತ್ರಜ್ಞಾನದ ಕೊರತೆ, ಇದೆಲ್ಲವೂ ದೇಶದಲ್ಲಿ ಹ್ಯಾಕರ್‌ಗಳ ಹಿಂಬಾಲಿಸಲು ತೊಡಕಾಗುತ್ತಿದೆ.

ಸಂಕ್ಷಿಪ್ರವಾಗಿ ಕರ್ನಾಟಕದ ಅಂಕಿಅಂಶಗಳನ್ನೇ ಪರಿಗಣಿಸೋದಾದರೂ ನಾವು ಎಷ್ಟರ ಮಟ್ಟಿಗೆ ಸೈಬರ್‌ ತಂತ್ರಜ್ಞಾನ ಅಳವಡಿಸಿಕೊಂಡಿದ್ದೇವೆ ಅನ್ನೋದು ಗೊತ್ತಾಗುತ್ತದೆ. ಕಳೆದ ವರುಷ ಅಂದ್ರೆ 2019 ರಲ್ಲಿ ರಾಜ್ಯದಲ್ಲಿ ಸೈಬರ್‌ ಕ್ರೈಂ ಸಂಬಂಧ ರಾಜ್ಯಾದ್ಯಂತ ಒಟ್ಟು 12,014 ಪ್ರಕರಣಗಳು ದಾಖಲಾದರೆ, ಪತ್ತೆ ಹಚ್ಚಲು ಸಾಧ್ಯವಾಗಿದ್ದು ಬರೇ 193 ಪ್ರಕರಣಗಳಷ್ಟೇ. ಅದರಲ್ಲೂ ಬೆಂಗಳೂರು ನಗರ ಒಂದರಲ್ಲೇ 10 ಸಾವಿರಕ್ಕೂ ಅಧಿಕ ಪ್ರಕರಣ ದಾಖಲಾಗಿತ್ತಾದರೂ, ಪೊಲೀಸರು ಹಿಂಬಾಲಿಸಲು ಸಾಧ್ಯವಾದದ್ದು ಕೇವಲ 175 ಪ್ರಕರಣಗಳು ಮಾತ್ರ.

ಆದ್ದರಿಂದ ಆನ್‌ಲೈನ್‌ ಮೊರೆ ಹೋಗುವವರು ಈ ಮೋಸದ ಜಾಲದ ಬಗ್ಗೆ ಮಾಹಿತಿ ಅರಿತುಕೊಳ್ಳುವ ಅಗತ್ಯವಿದೆ. ಸ್ವಲ್ಪ ಯಾಮಾರಿದರೂ ಖಾತೆಯಲ್ಲಿದ್ದ ಹಣ ಖೋತಾ ಆಗೋದರಲ್ಲಿ ಸಂಶಯವಿಲ್ಲ. ಟಿಕ್‌ಟಾಕ್‌, ಇಮೇಲ್‌, ಗೇಮ್‌ ಆಪ್‌, ಜಾಲತಾಣಗಳನ್ನು ಉಪಯೋಗಿಸುವವರು ಹೆಚ್ಚು ನಿಗಾವಹಿಸಬೇಕಿದೆ. ಯಾಕೆಂದರೆ ಸೈಬರ್‌ ಕಳ್ಳರು ತಮ್ಮ ಪ್ಲ್ಯಾನ್‌ ಅನ್ನು ಬದಲಾಯಿಸುತ್ತಲೇ ಇರುತ್ತಾರೆ. ಆದ್ದರಿಂದ ನಾವು ಎಷ್ಟು ಅಲರ್ಟ್‌ ಆಗಿ ಇರ್ತೀವೋ ಅಷ್ಟು ಸೇಫ್‌ ಆಗಿ ಇರ್ತೀವಿ ಅನ್ನೋದು ಮಾತ್ರ ಸತ್ಯ.

(ಈ ಲೇಖನ ಮೊದಲು ಪ್ರತಿಧ್ವನಿ.ಕಾಂ ನಲ್ಲಿ ಪ್ರಕಟಗೊಂಡಿತ್ತು)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.