ಅರ್ಧ ಮಿಲಿಯನ್ ಭಾರತೀಯರಿಗೆ 150 ಕೋಟಿ ರೂ. ಪಂಗನಾಮ ಹಾಕಿದ ಚೀನಾ ಮೂಲದ ಆ್ಯಪ್ಗಳು

ಜೂನ್ 2ರ ನಂತರ ದೆಹಲಿ ಮತ್ತು ಪಶ್ಚಿಮ ಬಂಗಾಳದಲ್ಲಿ ಸತತ ದಾಳಿಗಳನ್ನು ನಡೆಸಿದ ನಂತರ ಈ ಪ್ರಕರಣದ ಮೂಲ ಪತ್ತೆಯಾಗಿದೆ. ಸುಮಾರು 11 ಕೋಟಿ ರೂ. ಹಣವಿರುವ ಬ್ಯಾಂಕ್ ಖಾತೆಗಳನ್ನು ಹಾಗೂ ಭಾರತ ಸೇರಿದಂತೆ ಚೀನಾದಿಂದ ಕಾರ್ಯನಿರ್ವಹಿಸುತ್ತಿದ್ದ ಆನ್ಲೈನ್ ಪೇಮೆಂಟ್’ಗಳನ್ನು ಸ್ಥಗಿತಗೊಳಿಸಲಾಗಿದೆ

ಭಾರತದ ಸುಮಾರು ಅರ್ಧ ಮಿಲಿಯನ್ ಜನರಿಗೆ ರೂ. 150 ಕೋಟಿಗೂ ಹೆಚ್ಚು ರೂ.ಗಳ ಪಂಗನಾಮ ಹಾಕಿದ 11 ಜನರನ್ನು ಸೈಬರ್ ಕ್ರೈಂ ಪೊಲೀಸರು ದೆಹಲಿಯಲ್ಲಿ ಬಂಧಿಸಿದ್ದಾರೆ. ಮೊಬೈಲ್ ಆ್ಯಪ್‌ಗಳ ಮೂಲಕ ಆನ್ಲೈನ್ ನಲ್ಲಿ ಹಣ ಗಳಿಸಿ ಎಂದು ಜನರನ್ನು ಪುಸಲಾಯಿಸುತ್ತಿದ್ದ ಸಿಂಡಿಕೇಟ್ ಈಗ ಪೊಲೀಸರ ವಶದಲ್ಲಿದೆ.

Power Bank ಮತ್ತು EZPlan ಎಂಬ ಚೀನಾ ಮೂಲದ ಎರಡು ಆ್ಯಪ್‌ಗಳ ಮುಖಾಂತರ ಈ ಮೋಸದಾಟ ನಡೆಯುತ್ತಿತ್ತು. ಟಿಬೇಟ್ ಮೂಲದ ಓರ್ವ ಮಹಿಳೆ, ಇಬ್ಬರು ಚಾರ್ಟೆಡ್ ಅಕೌಂಟೆಂಟ್ ಸೇರಿದಂತೆ ಒಟ್ಟು ಹನ್ನೊಂದು ಜನರು ಈ ಷಡ್ಯಂತ್ರದಲ್ಲಿ ಭಾಗಿಯಾಗಿದ್ದರು. ಪಶ್ಚಿಮ ಬಂಗಾಳ, ದೆಹಲಿ, ಬೆಂಗಳೂರು, ಒಡಿಶಾ, ಅಸ್ಸಾಂ ಮತ್ತು ಸೂರತ್’ಗಳಲ್ಲಿ ಈ ಜಾಲ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿತ್ತು.

ಜೂನ್ 2ರ ನಂತರ ದೆಹಲಿ ಮತ್ತು ಪಶ್ಚಿಮ ಬಂಗಾಳದಲ್ಲಿ ಸತತ ದಾಳಿಗಳನ್ನು ನಡೆಸಿದ ನಂತರ ಈ ಪ್ರಕರಣದ ಮೂಲ ಪತ್ತೆಯಾಗಿದೆ. ಸುಮಾರು 11 ಕೋಟಿ ರೂ. ಹಣವಿರುವ ಬ್ಯಾಂಕ್ ಖಾತೆಗಳನ್ನು ಹಾಗೂ ಭಾರತ ಸೇರಿದಂತೆ ಚೀನಾದಿಂದ ಕಾರ್ಯನಿರ್ವಹಿಸುತ್ತಿದ್ದ ಆನ್ಲೈನ್ ಪೇಮೆಂಟ್’ಗಳನ್ನು ಸ್ಥಗಿತಗೊಳಿಸಲಾಗಿದೆ.

ಹಣವನ್ನು ಭಾರತದಿಂದ ಚೀನಾಕ್ಕೆ ತಲುಪಿಸಲು 110 ನಕಲಿ ಕಂಪನಿಗಳನ್ನು ಸೃಷ್ಟಿಸಿದ್ದ ಸಿಎ ಅವಿಕ್ ಕೆಡಿಯಾ ಅವರಿಂದ 97 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ.

ಈ ಜಾಲದ ಕುರಿತು ಮಾಹಿತಿ ನೀಡಿರುವ ಸೈಬರ್ ಕ್ರೈಂ ವಿಭಾಗಹದ ಡಿಸಿಪಿ ರಾಯ್ ಅವರು, Power Bank ಮತ್ತು EZPlan ಎಂಬ ಎರಡು ಆ್ಯಪ್’ಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ನೀಡಲಾಗುತ್ತಿತ್ತು. ಇವೆರಡೂ ಆ್ಯಪ್’ಗಳು 25-35 ದಿನಗಳ ಒಳಗಾಗಿ ಹಣವನ್ನು ದ್ವಿಗುಣಗೊಳಿಸುವ ಆಮೀಷ ಒಡ್ಡುತ್ತಿದ್ದವು. 300 ರೂ. ನಿಂದ ಲಕ್ಷದವರೆಗೆ ಹಣ ಹೂಡಿಕೆ ಮಾಡಲು ಅವಕಾಶ ನೀಡಲಾಗಿತ್ತು.

Power Bank ಆ್ಯಪ್ ಗೂಗಲ್ ಪ್ಲೇ ಸ್ಟೋರ್’ನಲ್ಲಿ ಲಭ್ಯವಿದ್ದರೆ, EZPlan ಆ್ಯಪ್’ಅನ್ನು ಒಂದು ಖಾಸಗಿ ವೆಬ್ಸೈಟ್’ನಿಂದ ಡೌನ್ಲೋಡ್ ಮಾಡಿಕೊಳ್ಳಲು ಖದೀಮರು ಹೇಳುತ್ತಿದ್ದರು. Power Bank ಆ್ಯಪ್ ಬೆಂಗಳೂರು ಮೂಲದ ಆ್ಯಪ್ ಎಂದು ಹೇಳಿದ್ದರೂ, ಅದರ ಸರ್ವರ್ ಚೀನಾದಿಂದ ಪಡೆಯಲಾಗಿತ್ತು ಎಂದು ಸೈಬರ್ ಸೆಲ್ ಅಧಿಕಾರಿಗಳು ಕಂಡುಹುಡುಕಿದ್ದರು. ಈ ಆ್ಯಪ್, ಬಳಕೆದಾರರ ಕ್ಯಾಮೆರಾ, ಸ್ಟೋರೇಜ್ ಮತ್ತು ಮೊಬೈಲ್’ನಲ್ಲಿ ಇರುವಂತಹ ಮೊಬೈಲ್ ನಂಬರ್’ಗಳನ್ನು ಪಡೆಯುವ ಅನುಮತಿಯನ್ನು ಕೇಳುತ್ತಿತ್ತು ಎಂದು ಡಿಸಿಪಿ ರಾಯ್ ಹೇಳಿದ್ದಾರೆ.

ಈ ಜಾಲ ಕಾರ್ಯನಿರ್ವಹಿಸುತ್ತಿದ್ದ ರೀತಿ ಹೇಗಿತ್ತೆಂದರೆ, ಮೊದಲು ಸಣ್ಣ ಮೊತ್ತದಲ್ಲಿ ಹಣ ಹೂಡಿಕೆ ಮಾಡುತ್ತಿದ್ದ ಬಳಕೆದಾರರಿಗೆ 5-10%ದಷ್ಟು ಹಣವನ್ನು ವಾಪಾಸ್ ನೀಡಲಾಗುತ್ತಿದ್ದು. ಇದರಿಂದ ಈ ಆ್ಯಪ್’ಗಳ ಮೇಲೆ ನಂಬಿಕೆ ಹುಟ್ಟಿ, ಬಳಕೆದಾರರು ಈ ಆ್ಯಪ್’ಅನ್ನು ತಮ್ಮ ಸ್ನೇಹಿತರು ಹಾಗೂ ಕುಟುಂಬದವರೊಂದಿಗೆ ಹಂಚಿಕೊಳ್ಳುತ್ತಿದ್ದರು. ಯಾವಾಗ ನಿರ್ದಿಷ್ಟ ವ್ಯಕ್ತಿ ದೊಡ್ಡ ಮೊತ್ತದ ಹಣವನ್ನು ಹೂಡಿಕೆ ಮಾಡುತ್ತಿದ್ದರೋ, ಆ ಸಂದರ್ಭದಲ್ಲಿ ಅವರ ಆ್ಯಪ್ ಬ್ಲಾಕ್ ಆಗುತ್ತಿತ್ತು. ಇದರಿಂದ ಬಳಕೆದಾರರು ತೀವ್ರವಾದ ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಿದ್ದರು.

ಸಿನಿಮೀಯ ರೀತಿಯ ವಿಚಾರಣೆ:

ಈ ಜಾಲವನ್ನು ಬೆಳಕಿಗೆ ತರಲು ದೆಹಲಿಯ ಸೈಬರ್ ಕ್ರೈ ವಿಭಾಗದ ಪೊಲೀಸರು ಸಾಕಷ್ಟು ಬೆವರು ಸುರಿಸಿದ್ದಾರೆ. ಪೊಲೀಸರೇ ಆ್ಯಪ್’ನ ಬಳಕೆದಾರರಾಗಿ ಹಣ ಎಲ್ಲಿ ಎಲ್ಲಾ ವರ್ಗಾವಣೆ ಆಗುತ್ತಿದೆ ಎಂಬ ಕುರಿತು ತನಿಖೆ ನಡೆಸಿದ್ದಾರೆ. ಆ್ಯಪ್ ಬಳಕೆದಾರರು ಪಾವತಿಸಿದ ಹಣ ಸುಮಾರು 25 ನಕಲಿ ಕಂಪನಿಗಳ ಖಾತೆಗೆ ವರ್ಗಾವಣೆಯಾಗುತ್ತಿತ್ತು. ಈ ನಕಲಿ ಖಾತೆಗಳೊಂದಿಗೆ ಹಲವು ಮೊಬೈಲ್ ನಂಬರ್’ಗಳು ಲಿಂಕ್ ಆಗಿದ್ದವು. ಈ ನಂಬರ್’ಗಳ ಜಾಡು ಪತ್ತೆ ಹಚ್ಚಲು ಹೊರಟ ಪೊಲೀಸರಿಗೆ ದಾರಿ ಕಂಡಿದ್ದು ಪಶ್ಚಿಮ ಬಂಗಾಳದೆಡೆಗೆ.

ಪಶ್ಚಿಮ ಬಂಗಾಳದ ಉಲುಬೇರಿಯಾ ಪ್ರದೇಶದಲ್ಲಿರುವ ಶೇಖ್ ರಾಬಿನ್ ಎಂಬಾತನನ್ನು ಜೂನ್ 2ರಂದು ಪೊಲೀಸರು ಬಂಧಿಸಿದ್ದರು. ಅದೇ ದಿನ ಒಂಬತ್ತು ಇತರ ಆರೋಪಿಗಳನ್ನು ಕುಡಾ ಬಂಧಿಸಲಾಗಿತ್ತು. ಟಿಬೇಟ್ ಮೂಲದ ಮಹಿಳೆಯಾದ ಪೆಮಾ ವಾಂಗ್ಮೊ ಎಂಬಾಕೆಯನ್ನು ದೆಹಲಿಯ ಇಂದಿರಾಗಾಂಧಿ ಏರ್’ಪೋರ್ಟ್ ನಲ್ಲಿ ಬಂಧಿಸಲಾಗಿತ್ತು. ಈಕೆ ಚೀನಾ ಮೂಲದ ವ್ಯಕ್ತಿಗಳಿಗೆ ಭಾರತದ ನಕಲಿ ಕಂಪನಿಗಳೊಂದಿಗೆ ಸಂಪರ್ಕ ಕಲ್ಪಿಸುತ್ತಿದ್ದಳು.

ಶೇಖ್ ರಾಬಿನ್ ನನ್ನು ಬಂಧಿಸುವಾಗ ಅವನ ಬಳಿ 30 ಮೊಬೈಲ್ ಫೋನ್’ಗಳು ಮತ್ತು 29 ಬ್ಯಾಂಕ್ ಖಾತೆಗಳಿದ್ದವು. ಇವನ ಬಂಧನ ಈ ವ್ಯವಸ್ಥಿತ ಜಾಲದ ಬೇರನ್ನೇ ಕಿತ್ತು ಹಾಕಿತು.

ಸೈಬರ್ ಅಪರಾಧಗಳ ಕುರಿತು ಎಚ್ಚರವಿರಲಿ:

ಉಚಿತವಾಗಿ ಕಾರ್, ಬೈಕ್, ವಾಚ್, ಉಡುಗೊರೆ ನೀಡುತ್ತಾರೆ ಎಂಬ ಕಾರಣಕ್ಕೆ ಗೊತ್ತುಗುರಿಯಿಲ್ಲದ ಲಿಂಕ್’ಗಳನ್ನು ತೆರೆದು ತಮ್ಮ ವೈಯಕ್ತಿಕ ಮಾಹಿತಿಯನ್ನು ‘ದಾನ’ವಾಗಿ ನಿಡಬೇಡಿ. ಈ ಕುರಿತಾಗಿ ಸೈಬರ್ ಕ್ರೈಂ ವಿಭಾಗದ ಪೊಲೀಸರು ಪದೇ ಪದೇ ಎಚ್ಚರಿಕೆ ನೀಡುತ್ತಿದ್ದರೂ, ಜನರು ಮೋಸ ಹೋಗುವುದು ತಪ್ಪುತ್ತಿಲ್ಲ. ನಂಬಲಾರ್ಹ ಮೂಲವಿಲ್ಲದ ಯಾವುದೇ ಆ್ಯಪ್’ಗಳನ್ನು ಡೌನ್ಲೋಡ್ ಮಾಡಬೇಡಿ.

ನಿಮ್ಮ ಹಣವನ್ನು ದ್ವಿಗುಣಗೊಳಿಸುತ್ತೇವೆ ಎಂದು ಹೇಳುವ ಆ್ಯಪ್’ಗಳ ಸಹವಾಸಕ್ಕೆ ಹೋಗಬೇಡಿ. ಈಗಾಗಲೇ ಅಂತಹ ಆ್ಯಪ್’ಗಳನ್ನು ಬಳಸುತ್ತಿದ್ದರೆ ಅವುಗಳಿಂದ ಇನ್ನು ಮುಂದೆಯಾದರೂ ದೂರವಿರಿ. ಇಂತಹ ಆ್ಯಪ್’ಗಳಿಗೆ ಹಣ ಪಾವತಿಸಬೇಡಿ.

ಮುಖ್ಯವಾಗಿ, ಇಂತಹ ಆ್ಯಪ್’ಗಳ ಕುರಿತಾಗಿ ನಿಮ್ಮ ಸಂಬಂಧಿಕರು ಮತ್ತು ಸ್ನೇಹಿತರಿಗೆ ಮಾಹಿತಿ ನಿಡಿ ಅವರು ಕುಡಾ ಸಂಕಷ್ಟಕ್ಕೆ ಸಿಲುಕುವಂತೆ ಮಾಡಬೇಡಿ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.