ಕಳೆದ ಎರಡು ವರ್ಷಗಳಲ್ಲಿ ಅತಿ ಹೆಚ್ಚು ಸ್ಟಾರ್ಟ್‌ಅಪ್‌ಗಳು ದೆಹಲಿಯಲ್ಲಿ ಆರಂಭವಾಗಿದ್ದು, ಸ್ಟಾರ್ಟಪ್ ನಗರಿ ಎಂಬ ಬೆಂಗಳೂರಿನ ಹಿರಿಮೆಯನ್ನು ಕಸಿದುಕೊಂಡಿದೆ.
2019 ಏಪ್ರಿಲ್‌ನಿಂದ 2021 ಡಿಸೆಂಬರ್ ನಡುವೆ ಬೆಂಗಳೂರಿನಲ್ಲಿ 4,514 ಸ್ಟಾರ್ಟ್‌ಅಪ್‌ಗಳು ಆರಂಭವಾಗಿದ್ದರೆ, ದೆಹಲಿಯಲ್ಲಿ 5 ಸಾವಿರಕ್ಕೂ ಹೆಚ್ಚು ನವೋದ್ಯಮಗಳು ನೋಂದಣಿಯಾಗಿವೆ ಪಡೆದಿವೆ ಎಂದು ಸೋಮವಾರ ಸಂಸತ್ತಿನಲ್ಲಿ ಮಂಡಿಸಲಾದ 2021-22ರ ಆರ್ಥಿಕ ಸಮೀಕ್ಷೆಯಲ್ಲಿ ತಿಳಿಸಲಾಗಿದೆ.
ಮಹಾರಾಷ್ಟ್ರವು ಒಟ್ಟು 11,308 ಸ್ಟಾರ್ಟ್‌ಅಪ್‌ಗಳನ್ನು ಹೊಂದಿದ್ದು ಅತಿ ಹೆಚ್ಚು ಸ್ಟಾರ್ಟ್‌ಅಪ್‌ಗಳಿರುವ ರಾಜ್ಯವಾಗಿ ಹೊರಹೊಮ್ಮಿದೆ. 2022ರ ಜನವರಿ 10ರ ಹೊತ್ತಿಗೆ ಭಾರತದಲ್ಲಿ ಸುಮಾರು 61,400 ಕ್ಕೂ ಹೆಚ್ಚು ಸ್ಟಾರ್ಟ್ಅಪ್‌ಗಳು ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದ್ದಾರೆ.
ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ 2016-17ರ ಅವಧಿಯಲ್ಲಿ 733 ಸ್ಟಾರ್ಟ್‌ಅಪ್‌ಗಳು ಆರಂಭವಾಗಿದ್ದರೆ, 2021-22ರಲ್ಲಿ ಶುರುವಾದ ನವ್ಯೋದ್ಯಮಗಳ ಸಂಖ್ಯೆ 14,000 ಕ್ಕೂ ಹೆಚ್ಚಿದೆ.
ಕೇಂದ್ರ ಸರ್ಕಾರ ಕೊಡಮಾಡುವ 2021ನೇ ಸಾಲಿನ ರಾಷ್ಟ್ರೀಯ ಸ್ಟಾರ್ಟ್‌ಅಪ್ ಪ್ರಶಸ್ತಿಗೆ ಒಟ್ಟು 46 ನವ್ಯೋದ್ಯಮಗಳು ಆಯ್ಕೆಯಾಗಿದ್ದವು. ಅದರಲ್ಲಿ ಬೆಂಗಳೂರಿನ 14 ಕಂಪನಿಗಳಿದ್ದವು.
ದೇಶದ ಅತಿ ಹೆಚ್ಚಿನ ಸ್ಟಾರ್ಟ್‌ಅಪ್‌ಗಳು ಮಾಹಿತಿ ತಂತ್ರಜ್ಞಾನ ಹಾಗೂ ಜ್ಞಾನಾಭಿವೃದ್ಧಿ ವಲಯಕ್ಕೆ ಸಂಬಂಧಿಸಿವೆ. ಕಳೆದ ಮೂರು ವರ್ಷಗಳಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿನ ಸ್ಟಾರ್ಟ್ಅಪ್‌ಗಳ ಸಂಖ್ಯೆ 11 ರಿಂದ 47 ಕ್ಕೆ ಏರಿದೆ.