ಮಿತ್ರೋ ಹೆಸರಿನಲ್ಲಿ ಬಂದ ದೇಸಿ ಟಿಕ್‌ ಟಾಕ್‌, ಭಾರತದಲ್ಲ, ಪಾಕಿಸ್ತಾನದ್ದಂತೆ!

ಟಿಕ್‌ಟಾಕ್‌ ಹೆಸರಿನ ವಿಡಿಯೋ ಆಪ್‌ ಚೀನಾ ಮೂಲದ್ದು ಎಂಬ ಕಾರಣಕ್ಕೆ ಹಲವು ವಿರೋಧ, ಟೀಕೆ ಎದುರಿಸುತ್ತಿದೆ. ನಿಷೇಧವೆಂಬ ಆಗ್ರಹವೂ ತೀವ್ರವಾಗಿದೆ. ಈ ಬೆನ್ನಲ್ಲೇ ದೇಸಿ ಟಿಕ್‌ ಟಾಕ್‌ ಹೆಸರಿನಲ್ಲಿ ಆಪ್‌ವೊಂದು ಬಿಡುಗಡೆಯಾಗಿದ್ದು, ವಾಸ್ತವದಲ್ಲಿ ಅದು ಪಾಕ್‌ ಮೂಲದ್ದು ಎಂಬ ಅಂಶವೂ ಬಯಲಾಗಿದೆ!

ಬೆಂಗಳೂರು ಮೂಲದ ಸಂಸ್ಥೆಯೊಂದು ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಲಾಗಿರುವ ಮಿತ್ರೋ ಮೊಬೈಲ್‌ ಆಪ್‌ ಈಗ ಸುದ್ದಿಯಲ್ಲಿದೆ. ಎರಡು ದಿನಗಳ ಹಿಂದೆ ಬಿಡುಗಡೆಯಾದ ಈ ಆಪ್‌ ಟಿಕ್‌ಟಾಕ್‌ನ ದೇಸಿ ಆವೃತ್ತಿ ಎಂದು ಪ್ರಚಾರ ಮಾಡಲಾದ ಕಾರಣ ಈಗಾಗಲೇ 50 ಲಕ್ಷ ಡೌನ್‌ಲೋಡ್‌ಗಳಾಗಿವೆ.

ಟಿಕ್‌ಟಾಕ್‌, ದ್ವೇಷ, ಹಿಂಸೆಯನ್ನು ಪ್ರಚೋದಿಸುತ್ತದೆ ಎಂಬ ಕಾರಣಕ್ಕೆ ಸಾಕಷ್ಟು ಟೀಕೆಗೆ ಗುರಿಯಾಗಿದ್ದ ಈ ಆಪ್‌ ಚೀನಾ ಮೂಲದ್ದು ಎಂಬ ಕಾರಣಕ್ಕೆ ರಾಷ್ಟ್ರೀಯವಾದಿಗಳು, ಆಡಳಿತಾರೂಢ ಸರ್ಕಾರದ ಕೆಂಗಣ್ಣಿಗೂ ಗುರಿಯಾಗಿತ್ತು. ಈ ಅವಕಾಶದ ಲಾಭ ಪಡೆಯುವುದಕ್ಕಾಗಿ ಭಾರತ ಮೂಲದ ಕಂಪನಿಯೊಂದು ದೇಸಿ ಟಿಕ್‌ಟಾಕ್‌ ಹೆಸರಿನಲ್ಲಿ ‘ಮಿತ್ರೋ’ ಹೆಸರಿನಲ್ಲಿ ಆಪ್‌ ಬಿಡುಗಡೆ ಮಾಡಿತ್ತು. ‘ಮಿತ್ರೋ’ ಪ್ರಧಾನಿ ನರೇಂದ್ರ ಮೋದಿ ಅವರ ಬಳಸುವ ಅತ್ಯಂತ ಜನಪ್ರಿಯ ಸಂಬೋಧನೆ.

ಆದರೆ ವಾಸ್ತವದಲ್ಲಿ ಇದು ಭಾರತದಲ್ಲಿ ಅಭಿವೃದ್ಧಿಪಡಿಸಲಾದ ಆಪ್‌ ಅಲ್ಲವೆಂದು ನೆಟ್‌ವರ್ಕ್‌18 ವರದಿ ಮಾಡಿದೆ. ಪಾಕಿಸ್ತಾನ ಮೂಲದ ಸಾಫ್ಟ್‌ವೇರ್‌ ಡೆವಲಪರ್‌ ಕಂಪನಿ ಕ್ಯೂಬಾಕ್ಸಸ್‌ ಹೆಸರಿನ ಕಂಪನಿಯು ಟಿಕ್‌ಟಿಕ್‌ ಹೆಸರಿನಲ್ಲಿ ವಿಡಿಯೋ ಆಪ್‌ಅನ್ನು ಬಿಡುಗಡೆ ಮಾಡಿತ್ತು. ಅದರ ಸೋರ್ಸ್‌ ಕೋಡನ್ನು ಕೇವಲ 2500 ರೂ.ಗಳಿಗೆ ಮಾರಿದ್ದಾಗಿ ನೆಟ್‌ವರ್ಕ್‌18ಗೆ ಹೇಳಿಕೆ ನೀಡಿರುವ ಕ್ಯೂಬಾಕ್ಸಸ್‌ ಸಿಇಒ ಇರ್ಫಾನ್‌ ಶೇಖ್‌ ಹೇಳಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.