ಈ ಡಿಜಿಟಲ್‌ ಐನ್‌ಸ್ಟೀನ್‌ ಜೊತೆಗೆ ನೀವು ಹರಟೆ ಹೊಡೆಯಬಹುದು, ಪಾಠ ಹೇಳಿಸಿಕೊಳ್ಳಬಹುದು!

ಜಗತ್ತು ಕಂಡ ಅಪರೂಪದ ಮೇಧಾವಿ ಆಲ್ಬರ್ಟ್‌ ಐನ್‌ಸ್ಟೀನ್‌ ಕೊಡುಗೆ ಏನು ಎಂಬುದು ಎಲ್ಲ ವಿಜ್ಞಾನಾಸಕ್ತರಿಗೆ ಗೊತ್ತು. ಎಷ್ಟೋ ಬಾರಿ ಅಂತಹವರು ನಮ್ಮ ಕಾಲದಲ್ಲಿರಬೇಕು ಅನ್ನಿಸಿದ್ದುಂಟು. ಹೊಸ ಕಾಲದ ತಂತ್ರಜ್ಞಾನ, ಅವರನ್ನಲ್ಲದಿದ್ದರೂ, ಅವರ ಜೊತೆಗೆ ಮಾತನಾಡುವ ಅವಕಾಶ ಸೃಷ್ಟಿಸಿದೆ. ಐನ್‌ಸ್ಟೀನ್‌ ಅವರ ಡಿಜಿಟಲ್‌ ಆವೃತ್ತಿಯ ಜೊತೆಗೆ ನಾವು ಹರಟೆ ಹೊಡೆಯಬಹುದು!

ಆಲ್ಬರ್ಟ್ ಐನ್‍ಸ್ಟೀನ್ 20ನೇ ಶತಮಾನ ಕಂಡ ಮಹಾ ಮೇಧಾವಿ ಭೌತವಿಜ್ಞಾನಿ. ಕಾಲ, ಚಲನೆ, ದ್ರವ್ಯರಾಶಿ, ಅವಕಾಶ ಮತ್ತು ಗುರುತ್ವಶಕ್ತಿಗಳನ್ನು ಒಳಗೊಂಡ ಸಾಪೇಕ್ಷತಾ ಸಿದ್ದಾಂತವನ್ನು ನೀಡಿದ ಆಲ್ಬರ್ಟ್‌ ಐನ್‌ಸ್ಟೀನ್‌ ವಿಜ್ಞಾನ ಲೋಕದ ವಿಸ್ಮಯ. ಅವರ ಮೇಧಾವಿತನದ ಕುರಿತು ಹಲವು ದೃಷ್ಟಾಂತಗಳನ್ನು ಹಂಚಿಕೊಳ್ಳುತ್ತಿರುತ್ತೇವೆ. ಆಗೆಲ್ಲಾ ಅವರ ಜೊತೆ ಮಾತನಾಡುವ ಆಸೆ ಕೆಲವರಿಗಾದರೂ ಆಗಿರುತ್ತದೆ.

ಈಗ ಆಸೆಯನ್ನು ಈಡೇರಿಸಿಕೊಳ್ಳಲು ಸಾಧ್ಯವಿದೆ. ಆಲ್ಬರ್ಟ್‌ ಐನ್‌ಸ್ಟೀನ್‌ ಅವರೊಂದಿಗೆ ಮಾತನಾಡುವ, ಅವರೊಂದಿಗೆ ಚರ್ಚಿಸುವ ಅವಕಾಶವನ್ನು ಲಂಡನ್ನಿನ ಅಪ್ಲೋರಿಥಮಿಕ್‌ ಮತ್ತು ಡಿಜಿಟಲ್‌ ಹ್ಯೂಮನ್‌ ಕಂಪನಿಯಾದ ಯೂನೀಕ್‌ ಎಂಬ ಸಂಸ್ಥೆ ಕಲ್ಪಿಸಿಕೊಟ್ಟಿದೆ.
ಹೇಗೆ ಅಂತೀರಾ?

ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಮತ್ತು ಡೀಪ್‌ ಫೇಕ್‌ ಟೆಕ್ನಾಲಜಿ ಬಳಸಿ ಆಲ್ಬರ್ಟ್‌ ಐನ್‌ಸ್ಟೀನ್‌ ಅವರ ಡಿಜಿಟಲ್‌ ಆವೃತ್ತಿಯನ್ನು ಅಭಿವೃದ್ಧಿ ಪಡಿಸಿದೆ ಈ ಅಪ್ಲೋರಿಥಮಿಕ್‌ ಸಂಸ್ಥೆ. ವಾಸ್ತವದಲ್ಲಿ ಇದೊಂದು ಚಾಟ್‌ಬಾಟ್‌. ಆದರೆ ಅವರದೇ ದನಿಯಲ್ಲಿ ಮಾತನಾಡುತ್ತದೆ. ಧ್ವನಿಯ ಮೂಲಕ ಅಥವಾ ಪ್ರಶ್ನೆಗಳನ್ನು ಅಕ್ಷರ ರೂಪದಲ್ಲಿ ಅಥವಾ ಈಗಾಗಲೇ ಪೂರ್ವ ನಿಗದಿ ಮಾಡಿದ ಪ್ರಶ್ನೆಗಳ ಮೂಲಕ ಐನ್‌ಸ್ಟೀನ್‌ ಜೊತೆ ಮಾತನಾಡಬಹುದು.

ಈ ಡಿಜಿಟಲ್‌ ಐನ್‌ಸ್ಟೀನ್‌ ರೂಪಿಸಲು ಬಹಳ ದೊಡ್ಡ ಸವಾಲಾಗಿದ್ದು ಅವರ ಧ್ವನಿ. ಲಭ್ಯವಿರುವ ಎಲ್ಲ ಭಾಷಣ, ಸಂದರ್ಶನ ಧ್ವನಿ ಮುದ್ರಿಕೆಗಳನ್ನು ಬಳಸಿಕೊಳ್ಳಲಾಗಿದೆ. ಆದರೆ ಬಹಳಷ್ಟು ಆಡಿಯೋ ರೆಕಾರ್ಡಿಂಗ್‌ಗಳ ಗುಣಮಟ್ಟ ಉತ್ತಮವಾಗಿರಲಿಲ್ಲ. ಈ ಅಧ್ಯಯನದಲ್ಲಿ ಐನ್‌ಸ್ಟೀನ್‌ ಮಾತಿನಲ್ಲಿ ಜರ್ಮನ್‌ ಭಾಷೆ ಸೊಗಡು ಹೆಚ್ಚಾಗಿರುವುದು, ಏರಿದ ದನಿ, ಆದರೆ ನಿಧಾನವಾಗಿ, ಆತ್ಮೀಯವಾಗಿ ಮಾತನಾಡುವ ಶೈಲಿಯನ್ನು ಮುಖ್ಯವಾಗಿ ಗುರುತಿಸಿದ ಸಂಸ್ಥೆ, ಈ ಚಾಟ್‌ಬಾಟ್‌ಗೆ ಧ್ವನಿಯನ್ನು ಸೃಷ್ಟಿಸಿದೆ.

ಚಾಟ್‌ಬಾಟ್‌ ರಿಯಲ್‌ಟೈಮ್‌ನಲ್ಲಿ ಸ್ಪಂದಿಸುತ್ತದೆ. ಆದರೆ ನೀವು ಪ್ರಶ್ನೆ ಕೇಳಿದ ಕೂಡಲೇ -ಅಂದರೆ 3 ಸೆಕೆಂಡ್‌ಗಳಲ್ಲಿ – ಉತ್ತರಿಸುತ್ತದೆ. ವ್ಯಕ್ತಿಯೊಬ್ಬರೊಂದಿಗೆ ಮಾತನಾಡಿದ ಅನುಭವವನ್ನು ನೀಡುತ್ತದೆ. ಐನ್‌ಸ್ಟೀನ್‌ ಜೀವನದ ಬಗ್ಗೆ ಪ್ರಶ್ನೆಗಳನ್ನು ಕೇಳಬಹುದು, ಅವರ ಸಂಶೋಧನೆಗಳ ಬಗ್ಗೆ, ವೈಜ್ಞಾನಿಕ ಸಾಧನೆಗಳ ಬಗ್ಗೆ ಚರ್ಚಿಸಬಹುದು.

ಐನ್‌ಸ್ಟೀನ್‌ ಅವರೊಂದಿಗಿನ ಸಂಭಾಷಣೆಯ ತುಣುಕು ಇಲ್ಲಿದೆ ನೋಡಿ.

ಈ ಡಿಜಿಟಲ್‌ ಆಲ್ಬರ್ಟ್‌ ಐನ್‌ಸ್ಟೀನ್‌ ಜೊತೆ ಮಾತನಾಡಲು ಈ ಲಿಂಕ್‌ ಕ್ಲಿಕ್‌ ಮಾಡಿ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.