ಎಲ್ಲರನ್ನೂ ಕೆಲಸದಿಂದ ತೆಗೀತಾರಂತೆ; ಕಂಪ್ಯೂಟರ್ ಬರತ್ತಂತೆ…!

ತಂತ್ರಜ್ಞಾನ ಅತ್ಯಂತ ವೇಗ ಬೆಳೆಯುತ್ತಿರುವ ಕ್ಷೇತ್ರ. ಕಳೆದ ಎರಡು ದಶಕಗಳ ಅವಧಿಯಲ್ಲಿ ಮನುಕುಲ ಬೆರಗಾಗುವಷ್ಟು, ಮನುಕುಲದ ಸಮಾನವಾಗಿ ನಿಲ್ಲುವಷ್ಟು ಮನ್ವಂತರವನ್ನು ಕಂಡಿದೆ. ಈ ಅಂಕಣದಲ್ಲಿ ಲೇಖಕರು ಇಂಥದ್ದೇ ರೂಪಾಂತರದ ಕಾಲವನ್ನು ಕಟ್ಟಿಕೊಡಲಿದ್ದಾರೆ

ಹೀಗೊಂದು ಗುಲ್ಲು ಸಣ್ಣಗೆ ಎಲ್ಲರ ಬೆನ್ನುಹುರಿಗಳಲ್ಲಿ ಕಂಪನ ಹುಟ್ಟಿಸುತ್ತಿರುವಂತೆಯೇ, ಇನ್ನೊಂದೆಡೆ ವಿಶೇಷ ಕೋಣೆಯೊಂದು ತಯಾರಾಗುತ್ತಿತ್ತು. ಮೆತ್ತನೆಯ ಕೆಂಪು ನೆಲಹಾಸು, ಏರ್ ಕಂಡೀಷನರ್, ಎರ್ಗಾನಾಮಿಕ್ ಮೇಜು ಕುರ್ಚಿಗಳ ಸಹಿತ.

ಅದು 90-91ಇರಬೇಕು. ಒಂದು ವರ್ಷ ಹಿಂದೆಯಷ್ಟೇ ಸುದ್ದಿಮನೆ ಹೊಕ್ಕು, ಕಣ್ಣರಳಿಸಿ  ನಾನು ನನ್ನ ಸುತ್ತ ನಡೆಯುತ್ತಿರುವುದನ್ನೆಲ್ಲ ಅರ್ಥಮಾಡಿಕೊಳ್ಳಲು ಯತ್ನಿಸುತ್ತಿದ್ದ ದಿನಗಳವು. ಆಗ ನಾನು ಮಂಗಳೂರಿನಿಂದ ಪ್ರಕಟವಾಗುತ್ತಿದ್ದ ಮುಂಗಾರು ದಿನಪತ್ರಿಕೆಯಲ್ಲಿ ಆಗಷ್ತೇ ಉದ್ಯೋಗ ಖಾಯಂ ಎಂದು ಪತ್ರ ಪಡೆದಿದ್ದ ಎಳೆಯ ಪತ್ರಕರ್ತ.

ನನ್ನ ಕಾಲದ ಕೆಲವೇ ಕೆಲವು ಪತ್ರಕರ್ತರು ಒಂದು ದ್ರಷ್ಟಿಯಿಂದ “ಚಾರಿತ್ರಿಕರು.” ಕಳೆದ 50ವರ್ಷಗಳಲ್ಲಿ ಮುದ್ರಣ ತಂತ್ರಜ್ಞಾನ ಹಾದುಬಂದ ಎಲ್ಲ ಮಜಲುಗಳಿಗೆ ಫಸ್ಟ್ ಹ್ಯಾಂಡ್ ಸಾಕ್ಷಿ ಆಗುವ ಭಾಗ್ಯ ನಮಗೆ ದೊರೆತಿದೆ. ತೀರಾ ದೊಡ್ಡ ಅಥವಾ ತೀರಾ ಸಣ್ಣ ಪತ್ರಿಕೆಗಳಲ್ಲಿ ಕೆಲಸ ಮಾಡಿದವರಿಗೆ ಈ ಅವಕಾಶ ದೊರಕಿರುವುದಿಲ್ಲ. ನಾವು ಕೆಲವೇ ಕೆಲವು ಮಂದಿಈ ಮಟ್ಟಿಗೆ ರೈಟ್ ಟೈಮ್, ರೈಟ್ ಪ್ಲೇಸ್ ನಲ್ಲಿದ್ದೆವು.

ಭಾರತದೊಳಗೆ ಕಂಪ್ಯೂಟರ್ ಗಳು ಮುದ್ರಣ ಮಾಧ್ಯಮ ಕ್ಷೇತ್ರವನ್ನು ಆವರಿಸುವ ಮುನ್ನ ಇದ್ದ ಎರಡು ತಂತ್ರಜ್ಞಾನಗಳೆಂದರೆ ಒಂದು ಮೊನೊಟೈಪ್ ಮತ್ತೊಂದು ಟ್ರಾಡಲ್ ಪ್ರಿಂಟಿಂಗ್. ಕರಾವಳಿಯ ಅಂದಿನ ಮೂರು ಪ್ರಮುಖ ಪತ್ರಿಕೆಗಳಾದ ನವಭಾರತ, ಉದಯವಾಣಿ ಮತ್ತು ಮುಂಗಾರು ಪತ್ರಿಕೆಗಳಲ್ಲಿ ನವಭಾರತ ಸಂಪೂರ್ಣವಾಗಿ ಟ್ರಾಡಲ್ ಪ್ರಿಂಟಿಂಗ್ ಆಧರಿಸಿತ್ತು. ಅದು ಮುಚ್ಚಿ ಅದರ ಜಾಗ ತುಂಬಿದ ಉದಯವಾಣಿ ಟ್ರಾಡಲ್ ನಿಂದ ಕ್ರಮೇಣ ಮೊನೊಟೈಪ್ – ಆಫ್ ಸೆಟ್ ಮುದ್ರಣಕ್ಕೆ ತೆರೆದುಕೊಂಡು ಕರಾವಳಿಗೆ ಮುದ್ರಣದ ನಾವೀನ್ಯತೆಯನ್ನು ಪರಿಚಯಿಸಿತು ಮುಂಗಾರು ತಡವಾಗಿ ಆರಂಭಗೊಂಡಿದ್ದರೂ ಹಳೆಯ ಟ್ರಾಡಲ್ ಪ್ರಿಂಟಿಂಗ್ – ಆಫ್ ಸೆಟ್ ಮುದ್ರಣದ ಕಾಂಬಿನೇಷನ್ ಅನ್ನೇ ಅವಲಂಬಿಸಿತ್ತು. ಕರಾವಳಿಯ ಮುದ್ರಣ ತಂತ್ರಜ್ಞಾನದ ಇತಿಹಾಸವನ್ನು ಅಥವಾ ಪತ್ರಿಕೋದ್ಯಮದ ಚರಿತ್ರೆಯನ್ನು ಕರಾರುವಾಕ್ ಆಗಿ ದಾಖಲಿಸುವುದು ಈ ಅಂಕಣದ ಉದ್ದೇಶ ಅಲ್ಲವಾಗಿರುವುದರಿಂದ ಆ ಬಗ್ಗೆ ನಾನು ವಿವರವಾಗಿ ಬರೆಯುವುದಿಲ್ಲ. 

ನಾನು ಮುಂಗಾರು ಪತ್ರಿಕೆಗೆ ಸೇರಿಕೊಂಡಾಗ (1989) ಅದು ಕೈಯಲ್ಲಿ ಮೊಳೆ ಜೋಡಿಸಿ ಸಿದ್ಧಪಡಿಸಿದ ಮೂಲ ಪ್ರತಿ ಮುದ್ರಣವನ್ನು ನೆಚ್ಚಿಕೊಂಡ ವೆಬ್ ಆಫ್ ಸೆಟ್ ಮುದ್ರಣಾಲಯ ಹೊಂದಿತ್ತು. ಹಾಗೆಂದರೆ, ಮುದ್ರಿಸಬೇಕಾದ ಪತ್ರಿಕೆಯ ಮೂಲ ಪ್ರಿಂಟ್ ಅನ್ನು ಮೊಳೆಜೋಡಿಸಿದ ಬಳಿಕ ಟ್ರಾಡಲ್ ಯಂತ್ರದಲ್ಲಿಅರೆ ಪಾರದರ್ಶಕ ಹಾಳೆಯ ಮೇಲೆ ಮುದ್ರಿಸಿ, ಆ ಪ್ರತಿಯನ್ನು ಆಫ್ ಸೆಟ್ ಮುದ್ರಣಕ್ಕೆ ಬೇಕಾದ ಪ್ಲೇಟ್ ಗಳನ್ನು ಡೆವಲಪ್ ಮಾಡಲು ಬಳಸಲಾಗುತ್ತಿತ್ತು. (ಅದೇ ಕಾಲದಲ್ಲಿ ಲಭ್ಯವಿದ್ದ ಇನ್ನೊಂದು ತಂತ್ರಜ್ಞಾನ ಎಂದರೆ ಮೊನೊಟೈಪ್ ಅಥವಾ ಲಿನೋಟೈಪ್ ಕ್ಯಾಸ್ಟಿಂಗ್ ವಿಧಾನ. ಇಲ್ಲಿ ಕೈಯಾರೆ ಮೊಳೆ ಜೋಡಿಸುವ ಬದಲು ತಾಂತ್ರಿಕ ಸಹಾಯದಿಂದ ಮೊಳೆಗಳನ್ನು ಎರಕ ಮಾಡಿ ಬಳಸಿಕೊಂಡು ಆ ಮೊಳೆಗಳಿಂದ ಮೂಲ ಅರೆಪಾರದರ್ಶಕ ಹಾಳೆಯನ್ನು ಮುದ್ರಿಸಿ ಬಳಿಕ ಪ್ಲೇಟ್ ಡೆವಲಪ್ ಮಾಡಲಾಗುತ್ತಿತ್ತು. ಈ ತಂತ್ರಜ್ಞಾನ ಆಗ ಉದಯವಾಣಿ ಬಳಗದಲ್ಲಿ ಲಭ್ಯವಿತ್ತು.)

ಮೂರು ಷಿಫ್ಟ್ ಗಳಲ್ಲಿ ಸುಮಾರು 150-200ಮಂದಿ ಕಂಪೋಸಿಟರ್ ಗಳು ಕೈಯಿಂದ ಮೊಳೆಜೋಡಿಸಿ ಸುದ್ದಿಗಳನ್ನು ಸಿದ್ಧಪಡಿಸುವುದೇ ಒಂದು ಸಂಭ್ರಮ. ಮೊಳೆಗಳನ್ನಿಟ್ಟ ನೂರಕ್ಕೂ ಮಿಕ್ಕಿ ಕಂಡಿಕೋಣೆಗಳನ್ನು ಕಣ್ಣಿಟ್ಟು ನೋಡದೆ ಬರಿಯ ಅನುಭವದ ಆಧಾರದಲ್ಲಿ ಹೆಕ್ಕಿ ಅಕ್ಷರಕ್ಷರ ಜೋಡಿಸುತ್ತಾ, ಅದೇ ವೇಳೆಗೆ ಮಾತು – ಚರ್ಚೆ-ಜಗಳ – ಪ್ರೀತಿಗಳಲ್ಲಿ ತೊಡಗಿದ್ದ ಹುಡುಗ ಹುಡುಗಿಯರು, ನಡುವಯಸ್ಕ ಗಂಡಸರು-ಹೆಂಗಸರನ್ನು ನೋಡುವುದೇ ಒಂದು ವಿಶಿಷ್ಟ ಅನುಭೂತಿ.

ಹೀಗೆ ಕಂಪೋಸ್ ಆದಸುದ್ದಿಯನ್ನು ಒಂದು ಪ್ರೂಫಿಂಗ್ ಮಷೀನಿಗೆ ಕರಿಹಚ್ಚಿ, ಅದರ ಪ್ರಿಂಟ್ ತೆಗೆದು ಕರಡು ತಿದ್ದಲು ಕಳಿಸುತ್ತಾರೆ. ಕರಡು ತಿದ್ದಿದ ಬಳಿಕ, ಜೋಡಿಸಿದ ಮೊಳೆಗಳ ನಡುವೆ ಇರುವ ತಪ್ಪುಗಳನ್ನು ನಿಖರವಾಗಿ ಸರಿಪಡಿಸುತ್ತಾರೆ. ಅಕ್ಷರದ ಕನ್ನಡಿ ಪ್ರತಿಬಿಂಬವಾಗಿರುವ ಅಚ್ಚುಮೊಳೆಗಳನ್ನು ಅವರು ಸರಾಗ ಓದುತ್ತಾ ಕರಡಿನಲ್ಲಿ ಗುರುತುಹಾಕಿದ ತಿದ್ದುಪಡಿಗಳನ್ನು  ತಮ್ಮ ಮೊಳೆಜೋಡಣೆಯಲ್ಲಿ ಹುಡುಕಿ, ತಪ್ಪು ಮೊಳೆ ಬದಲಿಸಿ ಸರಿಪಡಿಸುವುದೇ ಒಂದು ಅದ್ಭುತ ಕೌಶಲ.

ಹೀಗೆ ಸಿದ್ಧಗೊಂಡ ಸುದ್ದಿಗಳನ್ನು ಸಂಪಾದಕೀಯ ಬಳಗ ಹಾಕಿಕೊಟ್ಟ ವಿನ್ಯಾಸದಲ್ಲಿ ಇರಿಸಿ ಪುಟ ಕಟ್ಟುವುದು ಇನ್ನೊಂದೇ ಕೌಶಲ. ಇಂತಿಷ್ಟು ಕಾಲಂಗೆ ಇಂತಿಷ್ಟು ಫಾಂಟ್ ಗಾತ್ರದ ಇಂತಿಷ್ಟೇ ಅಕ್ಷರಾಂಶಗಳು ಹಿಡಿಯಬಲ್ಲವು ಎಂಬ ಲೆಕ್ಕಾಚಾರ ಆಗೆಲ್ಲ ಸುದ್ದಿಮನೆಯಲ್ಲಿ ಕೆಲಸ ಮಾಡುವವರಿಗೆ ಕಡ್ಡಾಯವಾಗಿ ತಿಳಿದಿರಬೇಕಾದ ಲೆಕ್ಕಾಚಾರ. ಮೊದಮೊದಲು ಸಂಪಾದಕೀಯ ಬಳಗದ ಸೀನಿಯರ್ ಕಸುಬುದಾರರು ಅದನ್ನೆಲ್ಲ ಮಾಡುವಾಗ, ಆ ಲೆಕ್ಕಾಚಾರಗಳಿಗೆ ಅನುಗುಣವಾಗಿಯೇ ಸುದ್ದಿಯ ತಲೆಬರಹಗಳನ್ನು ತಿದ್ದುವಾಗ ಅಬ್ಬಾ ಇವರು ಯಾವ ಲೆಕ್ಕ ಪಂಡಿತರಿಗೂ ಕಡಿಮೆ ಇಲ್ಲ ಆನ್ನಿಸುತ್ತಿತ್ತು. ಜೊತೆಗೆ ಸುದ್ದಿ ಉದ್ದವಾಗಬೇಕು-ಗಿಡ್ಡವಾಗಬೇಕು ಎಂಬ ಬೇಡಿಕೆ ಬಂದಾಗ ಸ್ಥಳದಲ್ಲೇ ಅದನ್ನು ಮಾಡಿಕೊಡಬಲ್ಲ ಸುದ್ದಿ-ಭಾಷಾ ಪಾಂಡಿತ್ಯ ಎರಡು ಬೇಕಾಗುತ್ತಿತ್ತು.

ಪತ್ರಿಕೆಯ ಪುಟದಲ್ಲಿ ಚಿತ್ರಗಳು ಬರಬೇಕಾದ ಜಾಗವನ್ನು ಖಾಲಿ ಬಿಟ್ಟು, ಉಳಿದ ಜಾಗಗಳಲ್ಲಿ ಅಕ್ಷರಗಳನ್ನು ತುಂಬಿಸಿ, ಜಾರದಂತೆ ಬಿಗಿ ಮಾಡಿ – ವಸ್ತುಶಃ ಪುಟವನ್ನು ದಾರದಿಂದ ಕಟ್ಟಿ, ಬಳಿಕ ಟ್ರಾಡಲ್ ಯಂತ್ರದಲ್ಲಿ ಒಂದು ಅಂತಿಮ ಕರಡುಪ್ರತಿ ತೆಗೆಯಲಾಗುತ್ತಿತ್ತು. ಇದನ್ನು ಸಂಪಾದಕೀಯ ಪ್ರತಿನಿಧಿ ಸರಿಯಾಗಿದೆ ಎಂದ ಬಳಿಕ, ಪೇಸ್ಟ್ ಅಪ್ ಕಲಾವಿದರೊಬ್ಬರು ಆ ಪುಟದಲ್ಲಿರಬೇಕಾದ ಚಿತ್ರಗಳ ಲಿಥೊ ಪ್ರಿಂಟನ್ನು ಆಯಾ ಜಾಗದಲ್ಲಿ ಅಂಟಿಸಿ, ಗೆರೆಗಳು ಬೇಕಾದಲ್ಲಿ ರೋಟರಿಂಗ್ ಪೆನ್ನಿನಿಂದ ಅವನ್ನು ಎಳೆದು ಪುಟವನ್ನು ಅಂತಿಮಗೊಳಿಸುತ್ತಿದ್ದರು. ಅಲ್ಲಿಂದ ಪುಟ ಪ್ಲೇಟ್ ಮೇಕಿಂಗ್ ವಿಭಾಗಕ್ಕೆ ಹೋದ ಬಳಿಕವಷ್ಟೇ ಆಫ್ ಸೆಟ್ ಮುದ್ರಣದ ಪ್ರಕ್ರಿಯೆಗಳು ಆರಂಭಗೊಳ್ಳುತ್ತಿದ್ದವು. ಅಲ್ಲಿಯ ತನಕವೂ ಅಕ್ಷರಕ್ಷರ ಮಾನವ ಶ್ರಮದಿಂದಲೇ ಸಿದ್ಧವಾಗಬೇಕಿತ್ತು.

ಮುಂಗಾರು ಪತ್ರಿಕೆಯಲ್ಲಿ ಈ ಕಾರಣದಿಂದಾಗಿಯೇ ಇನ್ನೂರಕ್ಕೂ ಮಿಕ್ಕಿ ಸಿಬ್ಬಂದಿ ಮೂರು ಶಿಫ್ಟ್ ಗಳಲ್ಲಿ ಕೆಲಸಮಾಡಬೇಕಿತ್ತು, ಸಿಬ್ಬಂದಿಗಳ ಸಂಖ್ಯೆಯೂ ಪತ್ರಿಕೆಯ ಆರ್ಥಿಕ ಅನಾರೋಗ್ಯದ ಮೇಲೆ ಪ್ರಭಾವ ಬೀರುತ್ತಿತ್ತು. ಈ ಆರ್ಥಿಕ ಸಂಕಟಗಳು ಎಷ್ಟು ಗಂಭೀರವಾಗಿದ್ದವೆಂದರೆ, ತಿಂಗಳ ಸಂಬಳ (ನನಗಾಗ ಸಿಗುತ್ತಿದ್ದ ಮಾಸಿಕ 700ರೂ.) ಮೂರು ನಾಲ್ಕು ಕಂತುಗಳಲ್ಲಿ ಬರುತ್ತಿತ್ತು. ಮೊದಲ ಕಂತು ಐದನೇ ತಾರೀಕಿನೊಳಗೆ ಬರುತ್ತಿದ್ದುದು ಬಸ್ ಖರ್ಚು ಎಂದು 50-100ರೂ. ಅದೂ ಪತ್ರಿಕೆ ವಿತರಕರಿಂದ ಸಂಗ್ರಹಿಸಿದ ಚಿಲ್ಲರೆ ನಾಣ್ಯಗಳಲ್ಲಿ! ಆ ಬಳಿಕ 2-3 ಕಂತುಗಳಲ್ಲಿ ತಲಾ 200-300ರೂಗಳಂತೆ ತಿಂಗಳ ಸಂಬಳ ತಿಂಗಳ ಅಂತ್ಯದೊಳಗೆ ತಲುಪುತ್ತಿತ್ತು. ನನಗೋ ನಮ್ಮಪ್ಪ ಸರ್ಕಾರಿ ನೌಕರಿಯಲ್ಲಿದ್ದರು, ಹಾಗಾಗಿ ಕಷ್ಟ ಅನ್ನಿಸುತ್ತಿರಲಿಲ್ಲ. ಜೊತೆಗೆ ಕಸುಬು ಕಲಿಯುವ ಹುಮ್ಮಸ್ಸಿತ್ತು. ಆದರೆ ಇದೇ ಸಂಬಳವನ್ನು ಅವಲಂಬಿಸಿಕೊಂಡಿದ್ದವರೂ ಪತ್ರಿಕೆಯ ಬಗ್ಗೆ ಪ್ರೀತಿಯಿಂದಲೇ ದುಡಿಯುತ್ತಿದ್ದರು.

ದಿನ ಕಳೆದಂತೆಲ್ಲ ಸಂಸ್ಥೆಯ ಆರ್ಥಿಕ ಸಮಸ್ಯೆ  ಹಿಗ್ಗುತ್ತಾ ಹೋಗಿ, ಪತ್ರಿಕೆ ಏದುಸಿರು ಬಿಡತೊಡಗಿತ್ತು. ಆಗಲೇ ಈ ಸುದ್ದಿ ಹೊರಟದ್ದು. ಎಲ್ಲರನ್ನೂ ಕೆಲಸದಿಂದ ತೆಗೆಯುತ್ತಾರಂತೆ; ಕಂಪ್ಯೂಟರ್ ಗಳು ಬರಲಿವೆಯಂತೆ ಎಂಬ ಸುದ್ದಿ ಅದು.