ಡಿಟಿಪಿಗೇನು ಗೊತ್ತು ಮೊಳೆ ಜೋಡಿಸುವ ಸಂಭ್ರಮ?!

ಒಂದು ದಿನ ನಾಟಕೀಯವಾಗಿ ಕಂಪೋಸಿಂಗ್ ವಿಭಾಗದ ಬಹುತೇಕ ಎಲ್ಲ ಸಿಬ್ಬಂದಿಗಳನ್ನು ಉದ್ಯೋಗದಿಂದ ತೆಗೆದುಹಾಕಲಾಯಿತು, ಆಗಲೇ ಹೊರಗೆಲ್ಲೋ ಗುಪ್ತವಾಗಿ ತರಬೇತಿ ಪಡೆದು ಸಿದ್ಧರಾಗಿದ್ದ ಆರೇಳು ಜನ ಮಾತ್ರವಿದ್ದ ಡೆಸ್ಕ್ ಟಾಪ್ ಪಬ್ಲಿಷಿಂಗ್ ತಂಡ ಪ್ರತ್ಯಕ್ಷವಾದ ಸ್ಥಿತ್ಯಂತರದ ಗಳಿಗೆ ಕುರಿತು ವಿವರಿಸಿದ್ದಾರೆ

ಬ್ಯಾಂಕುಗಳಲ್ಲಿ, ಬೇರೆ ವ್ಯವಹಾರ ರಂಗಗಳಲ್ಲಿ ಕಂಪ್ಯೂಟರೀಕರಣದ ಆರಂಭದ ದಿನಗಳವು. ಕಂಪ್ಯೂಟರುಗಳು ಬಂದರೆ ನಾಲ್ಕೈದು ಜನರ ಕೆಲಸ ಒಂದೇ ಯಂತ್ರ ಮಾಡತ್ತಂತೆ, ಕೆಲಸಗಳೇ ಇರುವುದಿಲ್ಲ ಎಂಬೆಲ್ಲ ವದಂತಿಗಳು ರಾರಾಜಿಸುತ್ತಿದ್ದ ದಿನಗಳವು; ಮೇಲಾಗಿ ಕಾರ್ಮಿಕ ಸಂಘಟನೆಗಳು ಬಲವಾಗಿದ್ದ ಕೇರಳಕ್ಕೆ ಅಂಟಿಕೊಂಡಿರುವ ಜಿಲ್ಲೆ ನಮ್ಮದು.

ಕಂಪ್ಯೂಟರು ಬಂದರೆ ನಿರುದ್ಯೋಗ ಹೆಚ್ಚುವುದೇ? ಎಂಬ ಪ್ರಶ್ನೆಗೆ ಈವತ್ತಿಗೂ ಸ್ಪಷ್ಟ ಉತ್ತರ ದೊರೆತಿಲ್ಲವಾದರೂ ಭಾರತದ ಐಟಿ ರಂಗದ ಉತ್ಕರ್ಷದಿಂದಾಗಿ ಕುಟುಂಬದೊಳಗೆ ಕೈತುಂಬಾ ಹರಿದಾಡತೊಡಗಿರುವ ಕಾಸು ಕರಾವಳಿಯ ಮಟ್ಟಿಗೆ ಈ ಪ್ರಶ್ನೆಯನ್ನು ಮರೆಸಿಬಿಟ್ಟಿದೆ. ಏಕೆಂದರೆ ಇಲ್ಲಿ ಪ್ರತೀ ಕುಟುಂಬದಲ್ಲಿ ಈವತ್ತು ಕನಿಷ್ಠ ಒಬ್ಬರಾದರೂ ಟೆಕ್ಕಿ ಇದ್ದಾರೆ.

ಈಗ ಮುಂಗಾರು ಕಥೆಗೆ ಹಿಂದಿರುಗುತ್ತೇನೆ.

ಒಂದಾನೊಂದು ದಿನ ನಾಟಕೀಯವಾಗಿ ಕಂಪೋಸಿಂಗ್ ವಿಭಾಗದ ಬಹುತೇಕ ಎಲ್ಲ ಸಿಬ್ಬಂದಿಗಳನ್ನು ಉದ್ಯೋಗದಿಂದ ತೆಗೆದುಹಾಕಲಾಯಿತು, ಆಗಲೇ ಹೊರಗೆಲ್ಲೋ ಗುಪ್ತವಾಗಿ ತರಬೇತಿ ಪಡೆದು ಸಿದ್ಧರಾಗಿದ್ದ ಆರೇಳು ಜನ ಮಾತ್ರವಿದ್ದ ಡೆಸ್ಕ್ ಟಾಪ್ ಪಬ್ಲಿಷಿಂಗ್ ತಂಡ ತಮಗಾಗಿ ಸಿದ್ಧಪಡಿಸಲಾಗಿದ್ದ ಕೆಂಪು ಮೆತ್ತೆಹಾಸಿನ ಏರ್ ಕಂಡೀಷನ್ಡ್ ಕೊಠಡಿಯನ್ನು ತಮ್ಮ ಸಲಕರಣೆಗಳೊಂದಿಗೆ ಹೊಕ್ಕು ಕೆಲಸ ಆರಂಭಿಸಿಬಿಟ್ಟಿದ್ದರು.

ಅವು 286ಮಾದರಿಯ ಕಂಪ್ಯೂಟರ್ ಗಳು. DOS ಆಪರೇಟಿಂಗ್ ಸಿಸ್ಟಮ್, ವೆಂಚುರಾ ಪ್ರಕಾಶಕ್ ಎಂಬ ಪುಟ ಕಟ್ಟುವ- ಅಕ್ಷರ ಟೈಪಿಸುವ ಸಾಫ್ಟ್ ವೇರ್. ನಾಲ್ಕೋ ಐದೋ ಕಂಪ್ಯೂಟರ್ ಜೊತೆಗೆ ಒಂದು A4ಗಾತ್ರದ ಪ್ರಿಂಟ್ ತೆಗೆಯಬಲ್ಲ ಲೇಸರ್ ಪ್ರಿಂಟರ್.

ಜೀವಮಾನದಲ್ಲಿ ಮೊದಲ ಬಾರಿಗೆ ಹತ್ತಿರದಿಂದ ಕಂಪ್ಯೂಟರ್ ನೋಡುತ್ತಿದ್ದ ನಮಗೋ ಡಿ ಟಿ ಪಿ ಆಪರೇಟರ್ ಗಳೆಂದು ಕರೆಸಿಕೊಳ್ಳುತ್ತಿದ್ದಆ ಜನ ಮೆಜೀಷಿಯನ್ ಗಳಂತೆ ಕಾಣಿಸುತ್ತಿದ್ದರು.  ಅವರು ಬಳಸುತ್ತಿದ್ದ ಶಬ್ದಗಳೂ ನಮ್ಮ ಲೋಕದವಾಗಿರಲಿಲ್ಲ.  ಸುದ್ದಿಮನೆಯಲ್ಲಿ ಕೈಬರಹದಲ್ಲಿ ಬರೆದುಕೊಟ್ಟ ಸುದ್ದಿಗಳನ್ನು ಅವರು ಟೈಪಿಸಿ ಪರದೆಯ ಮೇಲೆ ಮೂಡಿಸುತ್ತಿದ್ದರು. ಸುದ್ದಿಯ ಫಾಂಟ್ ಗಾತ್ರವಾಗಲೀ, ತಲೆಬರಹದ ಫಾಂಟ್ ಗಾತ್ರವಾಗಲೀ ಮೊದಲಿನಂತೆ ಗಾತ್ರಮಿತಿಯ ಅಗತ್ಯವನ್ನು ಹೊಂದಿರಲಿಲ್ಲ.

ಅವರು ಕೊಡುವ ಡಾಟ್ ಮ್ಯಾಟ್ರಿಕ್ಸ್ ಕರಡು ಪ್ರತಿಯನ್ನು ತಿದ್ದಿದ ಬಳಿಕ ಅವರೇ ತಿದ್ದುಪಡಿ ಮಾಡಿ ತಮ್ಮ ಲೇಸರ್ ಪ್ರಿಂಟರಿನಲ್ಲಿ ಅಂತಿಮ ಅರೆಪಾರದರ್ಶಕ ಪ್ರಿಂಟ್ ನೀಡುತ್ತಿದ್ದರು.  ಅರೆಪಾರದರ್ಶಕ ಪೇಪರ್  ಗಳನ್ನು ಕತ್ತರಿಸಿ ಮರುಜೋಡಿಸಿ ಪುಟ ಕಟ್ಟಲು ಈಗ “ ಪೇಸ್ಟ್ ಅಪ್ ಆರ್ಟಿಸ್ಟ್” ಗಳೆಂಬ ಹೊಸ ಕಲಾವಿದರು ಸನ್ನದ್ಧರಾಗಿದ್ದರು. ಹಿಂದೆಲ್ಲ  ಬರೀ ಫೋಟೋಗಳ ಲಿಥೋ ಪ್ರಿಂಟ್ ಅಂಟಿಸಿ, ರೋಟರಿಂಗ್ ಪೆನ್ ಬಳಸಿ ಗೆರೆಗಳನ್ನು ಎಳೆಯುವ ಕೆಲಸಕ್ಕೆ ಸೀಮಿತರಾಗಿದ್ದ ಪೇಸ್ಟ್ ಅಪ್ ತಂಡ ಈಗ ಇಡಿಯ ಪುಟವನ್ನು ಕತ್ತರಿಸಿ ಜೋಡಿಸುವ ಮಹತ್ವದ ಜಾಗದಲ್ಲಿದ್ದರು. ಮುಂದೆ ಬರಬರುತ್ತಾ ಅನುಭವ ಹೆಚ್ಚಾದಂತೆ, ಈ ಕತ್ತರಿಸಿ ಜೋಡಿಸುವ ಆವಶ್ಯಕತೆ ಕಡಿಮೆಯಾಗುತ್ತಾ ಬಂತು.

ಆಗಿನ್ನೂ ಲೇಸರ್ ಪ್ರಿಂಟರ್ ಗಳು ಶೈಶವಾವಸ್ಥೆಯಲ್ಲಿದ್ದವು. ನಿರ್ದಿಷ್ಟ ರೀತಿಯ ಅರೆಪಾರದರ್ಶಕ ಕಾಗದ  (ಬಟರ್ ಪೇಪರ್) ಇಲ್ಲದಿದ್ದರೆ ಪ್ರಿಂಟರ್ ನ ಬಿಸಿಗೆ ಸುಟ್ಟು ಮುರುಟಿ ಹೊರಬರುತ್ತಿದ್ದ ಬಟರ್ ಪೇಪರ್ ಗಳು ರಾಶಿರಾಶಿ. ಜೊತೆಗೆ ಒಂದು ಪುಟ ಪ್ರಿಂಟ್ ತೆಗೆಯಲು 8-10ನಿಮಿಷಗಳು. ಡೆಡ್ ಲೈನ್ ಸಮೀಪಿಸುತ್ತಿದ್ದಾಗ ಪ್ರಿಂಟರ್ ಎದುರು ನಿಂತು ಬೇಗ ಪ್ರಿಂಟ್ ಕೊಡು ಎಂದು ಅಂಗಲಾಚುವುದು ಸಾಮಾನ್ಯವಾಗಿತ್ತು.

ಹೀಗೆ ಪಡೆದ ಪ್ರಿಂಟ್  ಪೇಸ್ಟ್ ಅಪ್ ಆರ್ಟಿಸ್ಟ್ ಗಳ ಮೂಲಕ ಹಾದು ಪುಟಗಳಾಗಿ ರೂಪುಗೊಂಡು ಬಳಿಕ ಪ್ಲೇಟ್ ಆಗಿ ಡೆವಲಪ್ ಆಗಲು ಸಾಗಬೇಕಿತ್ತು.

ಈ ಸ್ಥಿತ್ಯಂತರದ ವೇಳೆ ನಾನು ಗಮನಿಸಿದ ಒಂದು ಮಹತ್ವದ ಸಂಗತಿ ಎಂದರೆ, ಸಾಂಪ್ರದಾಯಿಕ ಕಂಪೋಸಿಟರ್ ಗಳು ಸುಶಿಕ್ಷಿತರಲ್ಲದಿದ್ದರೂ, ತಮ್ಮ ಅನುಭವದ ಕಾರಣದಿಂದಾಗಿ ಕನ್ನಡ ಕಾಗುಣಿತ, ವ್ಯಾಕರಣಗಳಲ್ಲಿ ಪಕ್ವಗೊಂಡಿರುತ್ತಿದ್ದರು. ಸಂಪಾದಕೀಯ ವಿಭಾಗದ ಕಾಗುಣಿತ ತಪ್ಪುಗಳನ್ನೂ ಗುರುತಿಸಬಲ್ಲಷ್ಟು ಪರಿಣತಿ ಇದ್ದವರಿದ್ದರು. ಆದರೆ, ಯಾವತ್ತಿಗೆ ಡಿ ಟಿ ಪಿ ಆಪರೇಟರ್ ಗಳೆಂಬ ಟೈಪಿಂಗ್ ಪರಿಣತರು ಆ ಜಾಗವನ್ನು ಆವರಿಸಿಕೊಂಡರೋ, ಅಲ್ಲಿಂದೀಚೆಗೆ ಕನ್ನಡ ಮುದ್ರಣ ಪ್ರಪಂಚದಲ್ಲಿ ಮಹಾಪರಾಧ ಎಂದು ಪರಿಗಣಿತವಾಗಿದ್ದ ಕಾಗುಣಿತದ ತಪ್ಪುಗಳು ತೀರಾ ಸಾಮಾನ್ಯ ಎಂಬಂತೆ ಕಾಣಿಸಿಕೊಳ್ಳತೊಡಗಿದವು. ಈವತ್ತಿಗೂ ದಿನಪತ್ರಿಕೆಗಳಲ್ಲಿ ಇದನ್ನು ಅನುಭವಿಸಬಹುದು.

ಕೊಟೇಷನ್ ಪುರಾಣ

ಇದೇ ಸಂದರ್ಭದ ಇನ್ನೊಂದು ನೆನಪು – ನಾನು ಪಡೆದ ಮೊದಲ ಕಂಪ್ಯೂಟರ್ ದರ ಕೊಟೇಷನ್. ಆಗ ಉದ್ಯೋಗದ ಜೊತೆ ಮೇಲುಸಂಪಾದನೆಗೆಂದು ಸ್ಕ್ರೀನ್ ಪ್ರಿಂಟಿಂಗ್, ಜಾಹೀರಾತು ವಿನ್ಯಾಸ ಮಾಡುವ ಪುಟ್ಟ ಸಂಸ್ಥೆಯೊಂದನ್ನು ನಡೆಸುತ್ತಿದ್ದೆ. ಅದನ್ನು ಆರಂಭಿಸುವ ವೇಳೆಗೆ ನಾನೇ ಒಂದು ಕಂಪ್ಯೂಟರ್ ಖರೀದಿಸಿದರೆ ಹೇಗೆ ಎಂಬ ಯೋಚನೆ ಬಂದಿತ್ತು.

ಆ ಹೊತ್ತಿಗ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿದ್ದ ಏಕೈಕ ಡಿಟಿಪಿ ಯೂನಿಟ್ ಎಂದರೆ ಮಂಗಳೂರಿನ ಮೋತಿಮಹಲ್ ಹೊಟೇಲಿನವರ ಕುಟುಂಬದ ಮಾಲಕತ್ವಕ್ಕೆ ಸೇರಿದ್ದ ಒಂದು ಗ್ರಾಫಿಕ್ಸ್ ಸಂಸ್ಥೆ. ಅದು ಪ್ರಸಿದ್ಧ ಅತ್ರಿ ಬುಕ್ ಸೆಂಟರ್ ಪಕ್ಕದ ಅಂಗಡಿಯಾಗಿತ್ತು. ಅಲ್ಲಿ ನಮಗೆ ಬೇಕಾದ ಅಕ್ಷರಗಳನ್ನು ಕಾಗದದಲ್ಲಿ ಬರೆದು ಬೆಳಗ್ಗಿನ ಹೊತ್ತಿಗೆ ಕೊಟ್ಟರೆ, ಸಂಜೆಯ ವೇಳೆ ಅದರ ಕಂಪ್ಯೂಟರ್ ಪ್ರಿಂಟೌಟ್ ( ಬ್ರೋಮೈಡ್ ಕಾಗದದಲ್ಲಿ) ಸಿಗುತ್ತಿತ್ತು.  ಅಳತೆ ಪಟ್ಟಿ ಹಿಡಿದು ಸೆಂಟಿಮೀಟರ್ ಲೆಕ್ಕದಲ್ಲಿ ಹಣ ಪಾವತಿಸಬೇಕಿತ್ತು.  A4ಗಾತ್ರದ ಒಂದು ಪ್ರಿಂಟೌಟಿಗೆ ಅಂದಾಜು 300ರೂ. ಬೀಳುತ್ತಿತ್ತೆಂದು ನೆನಪು.

ಇದನ್ನೂ ಓದಿ | ಎಲ್ಲರನ್ನೂ ಕೆಲಸದಿಂದ ತೆಗೀತಾರಂತೆ; ಕಂಪ್ಯೂಟರ್ ಬರತ್ತಂತೆ…!

 ಈ ಕಾರಣದಿಂದಾಗಿಯೇ ಸ್ವಂತ ಕಂಪ್ಯೂಟರ್ ಖರೀದಿಸುವ ಯೋಚನೆ ಬಂದದ್ದು.  ಹಾಗಾಗಿ ಕಷ್ಟಪಟ್ಟು ಹುಡುಕಿ (ಯಾಕೆಂದರೆ ಆಗ ಇಂಟರ್ನೆಟ್ ಆಗಲೀ ಗೂಗಲ್ ಗುರುವಾಗಲೀ ಇರಲಿಲ್ಲ) ಬೆಂಗಳೂರಿನಲ್ಲಿ ಕಂಪ್ಯೂಟರ್ ಡೀಲರ್ ಒಬ್ಬರಿಂದ ಮಂಗಳೂರಿನ ಏಜಂಟರೊಬ್ಬರ ಮೂಲಕ ಒಂದು ಹೊಸ ಕಂಪ್ಯೂಟರಿಗೆ ಒಂದು ಕೊಟೇಷನ್ ಪಡೆದಿದ್ದೆ. ನನ್ನನ್ನು ನಂಬಿ :  286ಮಾದರಿಯ A4ಗಾತ್ರದ ಪ್ರಿಂಟ್ ನೀಡಬಲ್ಲ ಲೇಸರ್ ಪ್ರಿಂಟರ್ ಸಹಿತ  ಡಿ ಟಿ ಪಿ ಯೂನಿಟ್ ಬೆಲೆ ಸುಮಾರು 11ಲಕ್ಷ ರೂಪಾಯಿಗಳು!

ಯಾಕೋ ಇದು ನನ್ನ ಕೈಯಲ್ಲಾಗುವ ಬಾಬ್ತಲ್ಲ ಎಂದು ತೀರ್ಮಾನಿಸಿ, ಕಂಪ್ಯೂಟರ್ ಖರೀದಿಸುವ ಯೋಜನೆಯನ್ನು ಅಲ್ಲಿಗೇ ಕೈಬಿಟ್ಟಿದ್ದೆ. ನನ್ನ ಬದುಕಿನಲ್ಲಿ ನಾನು ತೆಗೆದುಕೊಂಡ ಅತ್ಯುತ್ತಮ ಬ್ಯುಸಿನೆಸ್ ತೀರ್ಮಾನಗಳಲ್ಲಿ ಅದೂ ಒಂದು ಎಂದು ಈವತ್ತಿಗೂ ನನಗೆ ಖಚಿತವಾಗಿ ಗೊತ್ತು!

ಮುಂದಿನ ಕಂತು: ಆಡಾಡ್ತಾ ಕಲಿತು, ಕಂಪ್ಯೂಟರ್ ಕ್ಲಾಸಿನವರ ಹೊಟ್ಟೆಗೆ ಹೊಡೆದದ್ದು!