90ರ ದಶಕದ ನಡುವಿನ ತನಕವೂ ಸುದ್ದಿಮನೆಗಳು ಹೇಗಿದ್ದವು ಗೊತ್ತೇನು?

ಸುದ್ದಿಮನೆಯ ಡೆಡ್ ಲೈನ್ ಮುಗಿಯುವ ಮುನ್ನ, ತಂತ್ರಜ್ಞಾನದ, ಹವಾಮಾನದ, ಯಂತ್ರಗಳ ಎಲ್ಲ ಸವಾಲುಗಳನ್ನು ಮೀರಿ ಸುದ್ದಿಯೊಂದನ್ನು ಸುದ್ದಿಮನೆಗೆ ತಲುಪಿಸಿ, ಅಲ್ಲಿಂದ ತಲುಪಿದೆ ಎಂಬ ಸಂದೇಶ ಬಂದಾಗ ಸಿಗುತ್ತಿದ್ದ ನಿರಾಳ ಭಾವ ಇಂದು ಅಂಗೈಯೆಟುಕಿನಲ್ಲೇ ಸುದ್ದಿ ಸಂವಹನದ ಕಾಲದಲ್ಲಿ ಯಾವತ್ತೂ ಸಿಕ್ಕಿದ್ದಿಲ್ಲ!

ಸುದ್ದಿ ಮನೆಯ ಸುದ್ದಿಕೋಣೆಗೆ ಪಕ್ಕದಲ್ಲೊಂದು ಕೋಣೆಯಲ್ಲಿ ಕಿವಿಗಡಚಿಕ್ಕುವ ಕಟಕಟ ಶಬ್ದ ಮಾಡುವ ಟೆಲಿಪ್ರಿಂಟರ್ ಗಳ ಭರಾಟೆ. ನಡುನಡುವೆ ಬ್ರೇಕಿಂಗ್ ನ್ಯೂಸ್ ಬಂದಾಗ ಅಲಾರಂ. ಹೊತ್ತೇರುತ್ತಾ ಹೋದಂತೆ ಸುದ್ದಿಯಲ್ಲಿ ತಿರುವುಗಳು ಸಿಕ್ಕಾಗಲೆಲ್ಲ ಸುದ್ದಿಯ ಹೊಸ ಹೊಸ ಆವೃತ್ತಿಗಳು, ಅಕಸ್ಮಾತ್ ಸುದ್ದಿ ಕಳುಹಿಸಿದ ಮೇಲೆ ಅದು ತಪ್ಪು ಮಾಹಿತಿ ಎಂದು ಗೊತ್ತಾದರೆ KILL KILL KILL ಸಂದೇಶ! ಟೆಲಿಪ್ರಿಂಟರ್ ಗೆ ಮುದ್ರಿಸಲು ಕಾಗದದ ರೋಲ್ ಸಿಕ್ಕಿಸುವುದಕ್ಕೆ ಒಬ್ಬರು ಆಪರೇಟರ್. ನೆನಪು ತಪ್ಪಿ ಕಾಗದದ ರೋಲ್ ಇಲ್ಲದಿದ್ದರೆ, ಸುದ್ದಿ ನಷ್ಟ!!

ರಾಷ್ಟ್ರೀಯ- ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಸುದ್ದಿಸಂಸ್ಥೆಗಳ (PTI, UNI, ANI, FP, UPI, Reuters ಇತ್ಯಾದಿ) ಚಂದಾದಾರಿಕೆ ಪಡೆದವರಿಗೆ ಟೆಲೆಪ್ರಿಂಟರ್ ಮೂಲಕ ಸುದ್ದಿಮನೆಗೆ ಸುದ್ದಿ ತಲುಪುತ್ತಿತ್ತು. ಸುದ್ದಿ ಮೂಲ ಸಂಸ್ಥೆಯಲ್ಲಿ ಟೈಪ್ ಮಾಡಿದ ಸುದ್ದಿಗಳು ಟೆಲಿಗ್ರಾಂ ಮಾದರಿಯಲ್ಲೇ ಚಂದಾಪಡೆದಿರುವ ಸುದ್ದಿಮನೆಗೆ ಸಾಗಿ, ಅಲ್ಲಿ ಇರಿಸಲಾಗಿರುವ ಟೆಲಿಪ್ರಿಂಟರ್ ನಲ್ಲಿ ಸಿಕ್ಕಿಸಲಾಗಿರುವ ಕಾಗದದ ಮೇಲೆ ಮುದ್ರಣಗೊಳ್ಳುವ ತಂತ್ರ ಇದು.

ಕಾಲೇಜಲ್ಲಿರುವಾಗ ಸುದ್ದಿಮನೆ ನೋಡಲು ಮಣಿಪಾಲ ಪ್ರವಾಸಕ್ಕೆ ಹೋಗಿದ್ದಾಗ ಈ ಟೆಕ್ನಾಲಜಿ ಕಂಡು ಬೆಕ್ಕಸಬೆರಗಾಗಿದ್ದ ನನಗೆ 1989 ಹೊತ್ತಿಗೆ ಅದರಿಂದ ಸುದ್ದಿ ಪಡೆಯುವ ಅವಕಾಶ ಪ್ರಾಪ್ತಿ ಆದದ್ದು ಮುಂಗಾರು ಪತ್ರಿಕೆಯಲ್ಲಿ.

ಸುದ್ದಿಯ ಜೊತೆ ಪ್ರಕಟವಾಗಬೇಕಿದ್ದ ಚಿತ್ರಗಳು ತುರ್ತು ಪೋಸ್ಟ್ ಮೂಲಕವೇ ತಲುಪಬೇಕಿತ್ತು. ಹಾಗಾಗಿ ಯಾವತ್ತೂ ಸುದ್ದಿಚಿತ್ರಗಳು ಕಾಣಸಿಗುತ್ತಿದ್ದುದು ವಿಳಂಬವಾಗಿಯೇ. ಇನ್ನು ಸ್ಥಳೀಯ ಸುದ್ದಿಗಳನ್ನು ಆಯಾಯ ಊರಿನ ಸುದ್ದಿಗಾರರು ಸಂಜೆ ಹೊತ್ತಿಗೆ ಟ್ರಂಕ್ ಕಾಲ್ ಬಕ್ ಮಾಡಿಕೊಂಡು, ದೂರವಾಣಿ ಮೂಲಕ ಡಿಕ್ಟೇಟ್ ಮಾಡಬೇಕಿತ್ತು; ಅದನ್ನು ಬರೆದುಕೊಂಡು ಎಡಿಟ್ ಮಾಡುವುದಕ್ಕೇ ಒಂದಿಬ್ಬರು ಸಂಪಾದಕೀಯ ಸಿಬ್ಬಂದಿ ಬೇಕಾಗುತ್ತಿತ್ತು. ಕರಾವಳಿಯಲ್ಲಂತೂ ಟೆಲಿಕಾಂ ಕ್ರಾಂತಿ (* ಟೆಲಿಕಾಂ ರಾಮ ಕ್ರಾಂತಿ!) ಆಗುವ ಮೊದಲು ಮಳೆಗಾಲದಲ್ಲಿ ಎಲ್ಲಾದರೂ ತಂತಿ ತುಂಡಾಗಿ, ಟೆಲಿಫೋನ್ ಹಾಳಾಗಿ ಸಂಪರ್ಕ ಸಾಧ್ಯ ಇಲ್ಲ ಎಂದಾದರೆ ಮರುದಿನ ಆ ಊರ ಸುದ್ದಿಯೇ ಇಲ್ಲ! ತೀರಾ ಮಹತ್ವದ ಸುದ್ದಿಯೇನಾದರೂ ಇದೆಯೆಂದಾದರೆ, ಒಂದೋ ಅವನ್ನು ಬಾಡಿಗೆ ವಾಹನದಲ್ಲಿ ಬಂದು ಪತ್ರಿಕಾ ಕಚೇರಿಗೆ ಕೊಟ್ಟು ಹೋಗಬೇಕು ಇಲ್ಲವೇ ಪತ್ರಿಕಾ ವಿತರಣೆ ವಾಹನವನ್ನು ಕಾದು, ಅವರ ಬಳಿ ಪಾರ್ಸೆಲ್ ಕಳುಹಿಸಿಕೊಡಬೇಕು.

1995-96ರ ಸುಮಾರಿಗೆ ಟೆಲಿಫ್ಯಾಕ್ಸ್/ಫ್ಯಾಕ್ಸಿಮಿಲಿ/ಫ್ಯಾಕ್ಸ್ ಸಂದೇಶ ತಂತ್ರಜ್ಞಾನ ಕರಾವಳಿಯ ಸುದ್ದಿಮನೆಗಳನ್ನು ತಲುಪಿತ್ತು. ದೂರವಾಣಿ ಸಂಪರ್ಕದ ಮೂಲಕವೇ ಒಂದು ಸ್ಕ್ಯಾನ್ ಆದ ದಾಖಲೆ/ಬರಹ/ಚಿತ್ರವನ್ನು ನಿರ್ದಿಷ್ಟ ಗುರಿಗೆ ತಲುಪಿಸುವ, ಆ ಹೊತ್ತಿಗೆ ಕ್ರಾಂತಿಕಾರಕವೆನ್ನಿಸಿದ್ದ ತಂತ್ರಜ್ಞಾನ ಇದು.

ಮಂಗಳೂರು ಮೂಲದ ಕೆನರಾಟೈಮ್ಸ್ ಬಳಗದ ವರದಿಗಾರನಾಗಿ ಕುಂದಾಪುರದಿಂದ ಕಾರ್ಯಾಚರಿಸುತ್ತಿದ್ದ ನನಗೆ ಸಂಸ್ಥೆಯಿಂದ INLAND CREDIT CARD for TELEGRAMS and BUREAUFAXES ಅನ್ನು ಒದಗಿಸಲಾಗಿತ್ತು. ಸುದ್ದಿಗಳನ್ನು ಸಂಗ್ರಹಿಸಿದ ಬಳಿಕ, ಅಂಚೆ ಕಛೇರಿಗೆ ಹೋಗಿ, ಅಲ್ಲಿ ಈ ಕಾರ್ಡ್ ತೋರಿಸಿ, ಫ್ಯಾಕ್ಸ್ ಸಂದೇಶವನ್ನು ನನ್ನ ಪತ್ರಿಕಾಕಚೇರಿಗೆ ತಲುಪಿಸಬಹುದಿತ್ತು. ಆದರೆ ಚಿತ್ರಗಳನ್ನು ಕಳುಹಿಸಲು ಮಾತ್ರ ಹಿಂದಿನಂತೆಯೇ ಪಾರ್ಸೆಲ್ ಸೇವೆಯೊಂದೇ ದಾರಿಯಾಗಿತ್ತು.

ಹೆಚ್ಚಾಗಿ ಕೆಟ್ಟಿರುತ್ತಿದ್ದ ಈ ಅಂಚೆಕಚೇರಿಯ ಫ್ಯಾಕ್ಸ್ ಯಂತ್ರದ ಬದಲು, ನಾನೆ ಹುಡುಕಿಕೊಂಡ ಖಾಸಗಿ ಸಂಸ್ಥೆಯೊಂದರ ಮೂಲಕ ಪ್ರತೀ ಪುಟಕ್ಕೆ 10ರೂ. ಗಳಂತೆ ತೆತ್ತು ಫ್ಯಾಕ್ಸ್ ಮೂಲಕ ಸುದ್ದಿಗಳನ್ನು ಕಳುಹಿಸಿದ್ದೇ ಹೆಚ್ಚು.

ತುರ್ತು ಸಂದರ್ಭಗಳಲ್ಲಿ ಸುದ್ದಿಮನೆಯ ಡೆಡ್ ಲೈನ್ ಮುಗಿಯುವ ಮುನ್ನ, ತಂತ್ರಜ್ಞಾನದ, ಹವಾಮಾನದ, ಯಂತ್ರಗಳ ಎಲ್ಲ ಸವಾಲುಗಳನ್ನು ಮೀರಿ ಸುದ್ದಿಯೊಂದನ್ನು ಸುದ್ದಿಮನೆಗೆ ತಲುಪಿಸಿ, ಅಲ್ಲಿಂದ ತಲುಪಿದೆ ಎಂಬ ಸಂದೇಶ ಬಂದಾಗ ಎರಡೂ ತುದಿಗಳಲ್ಲಿ (ಅಂದರೆ ಕಳುಹಿಸಿದವರಿಗೂ ಸ್ವೀಕರಿಸಿದವರಿಗೂ) ಸಿಗುತ್ತಿದ್ದ ನಿರಾಳ ಭಾವ ಇಂದು ಅಂಗೈಯೆಟುಕಿನಲ್ಲೇ ಸುದ್ದಿ ಸಂವಹನದ ಕಾಲದಲ್ಲಿ ಯಾವತ್ತೂ ಸಿಕ್ಕಿದ್ದಿಲ್ಲ! ಹಾಗಾಗಿಯೇ ಈವತ್ತಿಗೂ Slow is Beautiful!!

[* ಟೆಲಿಕಾಂ ರಾಮ ಕ್ರಾಂತಿ ಎಂದರೆ – ಕರಾವಳಿ ಟೆಲಿಕಾಂ ವಲಯಕ್ಕೆ ಕೆ. ರಾಮ ಎಂಬ ಒಬ್ಬರು ಅಧಿಕಾರಿ ಮುಖ್ಯಸ್ಥರಾಗಿ ಬಂದಿದ್ದ ಕಾಲಕ್ಕೇ ಟೆಲಿಕಾಂ ಕ್ರಾಂತಿಯ ಫಲವಾಗಿ ದೂರವಾಣಿ ಸಂಪರ್ಕಗಳು ಲಿಬರಲ್ ಆಗಿ ಸಿಗಲಾರಂಭಗೊಂಡವು. ಸ್ವತಃ ಆ ಅಧಿಕಾರಿ ಬಹಳ ಆಸಕ್ತಿಯಿಂದ ಈ ಕೆಲಸದಲ್ಲಿ ತೊಡಗಿಕೊಂಡದ್ದರಿಂದ ಕರಾವಳಿ ಜಿಲ್ಲೆಗಳಲ್ಲಿ “ ಟೆಲಿಕಾಂ ರಾಮ” ಎಂದು ಬಹಳ ಜನಪ್ರಿಯರಾಗಿದ್ದರು. ಸ್ವತಃ ಪ್ರಚಾರಪ್ರಿಯರೂ ಆಗಿದ್ದ ಅವರ ಸುದ್ದಿಗಳು ಕರಾವಳಿಯ ಸುದ್ದಿಮನೆಗೆ ತಲುಪುವುದೇ ಸುದ್ದಿಮನೆಗಳಲ್ಲಿ ಒಂದು ತಮಾಷೆಯ ವಸ್ತು ಆಗಿದ್ದದ್ದೂ ಸತ್ಯ.]

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.