ಚಂದ್ರಯಾನ-2 | ಇಸ್ರೋದ 15 ಲಕ್ಷ ರೂ. ಉಳಿಸಿದ ತಮಿಳುನಾಡಿನ ಹಳ್ಳಿಗಳು!

ಚಂದ್ರಯಾನ -2ರ ಪ್ರಯೋಗದ ವೇಳೆ ಬಹಳ ಮುಖ್ಯವಾಗಿ ಬೇಕಿದ್ದ ವಿಶೇಷ ವಸ್ತುವನ್ನು ಅಮೆರಿಕದಿಂದ ತರಿಸಿಕೊಳ್ಳಬೇಕಿತ್ತು. ಅದಿಲ್ಲದೆ ವಿಜ್ಞಾನಿಗಳು ಒಂದು ಹೆಜ್ಜೆ ಮುಂದಿಡುವುದೇ ಆದರೆ ದೊಡ್ಡ ಅಪಾಯವನ್ನೇ ಮೈಮೇಲೆ ಎಳೆದುಕೊಳ್ಳುವುದಕ್ಕೆ ಸಿದ್ಧರಾಗಬೇಕಿತ್ತು. ಆದರೆ ಪರ್ಯಾಯ ಸಾಧ್ಯತೆಗಳನ್ನು ಸಿಟ್ಟಾಂಪುಡಿ ಮತ್ತು ಕುನ್ನಾಮಲೈಗಳು ಕೊಟ್ಟಿವೆ. ಏನದು?

ವಿಶೇ‍ಷ ಮಣ್ಣು!

ಹೌದು ಚಂದ್ರಯಾನ-2ರ ಅಂತಿಮ ಪರೀಕ್ಷೆ ನಡೆಸಲು ಬೇಕಾಗಿದ್ದು ಮರಳನ್ನು ಹೋಲುವ ವಿಶೇಷ ರೀತಿ ಮಣ್ಣು. ಅದನ್ನು ಅನಾರ್ಥೊಸೈಟ್‌ ಮಣ್ಣು ಎನ್ನುತ್ತಾರೆ. ಚಂದ್ರನ ಮೇಲ್ಮೈ ಮೇಲೆ ನೌಕೆಯನ್ನು ಇಳಿಸುವುದರ ಪ್ರಯೋಗ ನಡೆಯಬೇಕಿತ್ತು. ಚಂದ್ರನ ಮೇಲ್ಮೈನ ಸೃಷ್ಟಿಸಲು ಬೇಕಾಗಿದ್ದು ಈ ಅನಾರ್ಥೋಸೈಟ್‌ ಮಣ್ಣು. ಇದನ್ನು ಸಾಮಾನ್ಯವಾಗಿ ಅಮೆರಿಕದಿಂದ ತರಿಸಿಕೊಳ್ಳಲಾಗುತ್ತಿತ್ತು.

ಚಂದ್ರಯಾನ­-1ರ ವೇಳೆ ಸುಮಾರು ಹತ್ತು ಕೆ ಜಿ ಮಣ್ಣನ್ನು ತರಿಸಿಕೊಳ್ಳಲಾಗಿತ್ತು. ಈ ಮಣ್ಣಿನ ಒಂದು ಕೆಜಿಯ ಬೆಲೆ 150 ಡಾಲರ್‌ಗಳು. ಅಂದರೆ ಸುಮಾರು 10000 ರೂ.ಗಳು. ಚಂದ್ರಯಾನ-2ರ ಪ್ರಯೋಗಕ್ಕೆ ಬೇಕಾಗಿದ್ದು ಸುಮಾರು 60ರಿಂದ 70 ಕೆ ಜಿ ಮಣ್ಣು. ಅಂದರೆ ಏಳು ಲಕ್ಷಕ್ಕೂ ಹೆಚ್ಚು ಹಣವನ್ನು ಮಣ್ಣಿಗೆ ತೆರಬೇಕಾಗಿತ್ತು. ಇದು ಅತ್ಯಂತ ದುಬಾರಿ ವ್ಯವಹಾರ ಎನಿಸಿ, ಇಸ್ರೋ ವಿಜ್ಞಾನಿಗಳು ಪರ್ಯಾಯವನ್ನು ಹುಡುಕಲಾರಂಭಿಸಿದರು.

ಇಸ್ರೋದ ಮಾಜಿ ನಿರ್ದೇಶಕರಾದ ಮೈಲಸ್ವಾಮಿ ಅನ್ನಾದೊರೈ ಮತ್ತು ವಿಜ್ಞಾನಿ ವೇಣುಗೋಪಾಲ್‌ ನೇತೃತ್ವದ ನಡೆದ ಹುಡುಕಾಟದಲ್ಲಿ ಭಾರತದ ಎರಡು ರಾಜ್ಯಗಳಲ್ಲಿ ಅನಾರ್ಥೋಸೈಟ್‌ ಸಮಾನವಾದ ಮರಳು ಮಣ್ಣು ರೂಪಿಸಲು ಬೇಕಾದ ಶಿಲೆಗಳು ಪತ್ತೆಯಾಯಿತು. ಒಂದು ಮಹಾರಾಷ್ಟ್ರದಲ್ಲಿ, ಮತ್ತೊಂದು ತಮಿಳುನಾಡಿನ ನಮಕ್ಕಾಲ್‌ ಜಿಲ್ಲೆಯ ಸಿಟ್ಟಾಂಪುಡಿ ಮತ್ತು ಕುನ್ನಾಮಲೈನಲ್ಲಿ.

ಇದನ್ನೂ ಓದಿ | ಚಂದಿರನ ಬಗ್ಗೆ ನಮಗೆ ಇಷ್ಟೇಕೆ ಕುತೂಹಲ?

ಕೃಷಿಭೂಮಿಯೊಂದರಲ್ಲಿ ಸುಮಾರು ಆರು ಅಡಿ ಆಳಕ್ಕೆ ಕೊರೆದು ಕಲ್ಲುಗಳನ್ನು ಸಂಗ್ರಹಿಸಲಾಯಿತು. ನಂತರ ಸೇಲಂನಲ್ಲಿ ಕಲ್ಲುಗಳನ್ನು ಪುಡಿ ಮಾಡಿ ಇಸ್ರೋದ ಪ್ರಯೋಗಾಲಯಕ್ಕೆ ರವಾನಿಸಲಾಯಿತು. ಸುಮಾರು ಹದಿನೈದು ಲಕ್ಷದಷ್ಟು ಖರ್ಚನ್ನು ಉಳಿಸಿದ ವಿಜ್ಞಾನಿಗಳು, ಭವಿಷ್ಯದ ಪ್ರಯೋಗಗಳಿಗೂ ಬೇಕಾದ ಸಂಪನ್ಮೂಲವನ್ನು ಪತ್ತೆ ಮಾಡಿದರು.