ಕರೋನಾ ವೈರಸ್‌ ಆತಂಕ | ಶಾಲೆ ಕಾಲೇಜು ಮುಚ್ಚಿದ್ದು ಎಷ್ಟು ಸರಿ?

ಯಾವುದೋ ಸೋಂಕು ರೋಗ ಬಂದರೂ ಇಂತಹ ಕ್ರಮ ಬೇಕೇ? ಇದು ಬಹುಶಃ ಬೇಕಿಲ್ಲ. ಏಕೆಂದರೆ ಎಲ್ಲ ಸೋಂಕು ರೋಗಗಳೂ ಕೂಡ ಒಂದೇ ರೀತಿ ಹರಡುವುದಿಲ್ಲ. ಪ್ರಪಂಚದ ವಿವಿಧ ಪ್ರದೇಶಗಳಲ್ಲಿ ಕಂಡು ಬಂದ ವಿಭಿನ್ನ ಸೋಂಕು ರೋಗಗಳ ಕಾಲದಲ್ಲಿ ಕೈಗೊಂಡ ಕ್ರಮಗಳನ್ನು ಅಧ್ಯಯನ ಮಾಡಿದ ತಜ್ಞರು ಹೇಳುವ ಮಾತುಗಳು ಇಲ್ಲಿವೆ ಓದಿ

ಇಂದಿನಿಂದ ಕರ್ನಾಟಕದ ಶಾಲೆ, ಕಾಲೇಜು, ವಿವಿಗಳು ಹಾಗೂ ಇತರೆ ಸಾರ್ವಜನಿಕ ಸ್ಥಳಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಇದೀಗ ಸುದ್ದಿಯಲ್ಲಿರುವ ಕೊರೊನಾ ವೈರಸ್ಸಿನ ಸೋಂಕು ತಡೆಗಟ್ಟುವ ಮುನ್ನೆಚ್ಚರಿಕೆಯ ಕ್ರಮವಾಗಿ ಇದನ್ನು ಕೈಗೊಳ್ಳಲಾಗಿದೆ ಎಂಬುದು ಸರಕಾರದ ಹೇಳಿಕೆ. ಆದರೆ ಇದನ್ನು ವಿರೋಧಿಸುವವರೂ ಇದ್ದಾರೆ. ಇಷ್ಟು ತೀವ್ರ ಕ್ರಮ ಬೇಕಿರಲಿಲ್ಲ. ಸೋಂಕು ಇನ್ನೂ ಆರಂಭದ ಹಂತದಲ್ಲಿದೆ ಎನ್ನುವುದು ಕೆಲವರ ಅಭಿಪ್ರಾಯ. ಈ ಬಗ್ಗೆ ವಿಜ್ಞಾನಿಗಳ ಅಭಿಪ್ರಾಯವನ್ನು ಮೊನ್ನೆ ಸೈನ್ಸ್‌ ಪತ್ರಿಕೆಯಲ್ಲಿ ಈ ಬಗ್ಗೆ ಪ್ರಕಟವಾಗಿರುವ ಒಂದು ಸಂದರ್ಶನ ತಿಳಿ ಹೇಳಿದೆ. ಕಳೆದ ಹಲವು ಶತಮಾನಗಳಲ್ಲಿ ಪ್ರಪಂಚದ ವಿವಿಧ ಪ್ರದೇಶಗಳಲ್ಲಿ ಕಂಡು ಬಂದ ವಿಭಿನ್ನ ಸೋಂಕು ರೋಗಗಳ ಕಾಲದಲ್ಲಿ ಹೀಗೆ ಕೈಗೊಂಡ ಕ್ರಮಗಳನ್ನು ಅಧ್ಯಯನ ಮಾಡಿದ ಯೇಲ್‌ ವಿಶ್ವವಿದ್ಯಾನಿಲಯದ ನಿಕೊಲಾಸ್‌ ಕ್ರಿಸ್ಟಾಕಿಸ್ರವರು ಜೆನ್ನಿಫರ್‌ ಕಜಿನ್‌ ಫ್ರಾಂಕೆಲ್‌ ರವರ ಜೊತೆಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.  ಸಂದರ್ಶನದ ಹೂರಣ ಇಲ್ಲಿದೆ.

ಮೊದಲನೆಯದಾಗಿ, ಯಾವುದೋ ಸೋಂಕು ರೋಗ ಬಂದರೂ ಇಂತಹ ಕ್ರಮ ಬೇಕೇ? ಇದು ಬಹುಶಃ ಬೇಕಿಲ್ಲ. ಏಕೆಂದರೆ ಎಲ್ಲ ಸೋಂಕು ರೋಗಗಳೂ ಕೂಡ ಒಂದೇ ರೀತಿ ಹರಡುವುದಿಲ್ಲ. ಉದಾಹರಣೆಗೆ, ಮಲೇರಿಯಾ ಹರಡುವುದು ಸೊಳ್ಳೆಗಳಿಂದ. ಈ ಸೊಳ್ಳೆಗಳನ್ನು ನಿಯಂತ್ರಿಸಿದರೆ ಮಲೇರಿಯಾ ಹರಡುವುದನ್ನು ನಿಯಂತ್ರಿಸಬಹುದು. ಆದರೆ ಕೇವಲ ಮನುಷ್ಯರಿಂದ, ಮನುಷ್ಯರಿಗೆ ಮಾತ್ರ ಹರಡುವಂತಹ ಸೋಂಕುಗಳನ್ನು ನಿಯಂತ್ರಿಸುವ ಸಂದರ್ಭದಲ್ಲಿ ಮಾತ್ರ ಶಾಲೆ, ಕಾಲೇಜುಗಳನ್ನು ಹಾಗೂ ಇತರೆ ಸಾಮೂಹಿಕ ಜನಜಂಗುಳಿ ಸೇರುವಂತಹ ಚಟುವಟಿಕೆಗಳನ್ನು ನಿರ್ಬಂಧಿಸುವುದು ಉಚಿತ. ಈಗ ಬಂದಿರುವ ಕೊರೊನಾ ಸೋಂಕು ಇಂತಹುದೊಂದು ಸೋಂಕು. ಇದು ಕೇವಲ ಮನುಷ್ಯರಿಂದ, ಮನುಷ್ಯರಿಗಷ್ಟೆ ಹರಡುತ್ತದೆಯಾದ್ದರಿಂದ ಈ ಕ್ರಮ ಬಹುಶಃ ಸೋಂಕು ಹರಡದಿರಲು ನೆರವಾಗಬಹುದು. ಚೀನಾದಲ್ಲಿ ಈ ಖಾಯಿಲೆಯ ಪತ್ತೆ ಆದ ಕೂಡಲೇ ಇಡೀ ವುಹಾನ್‌ ನಗರವನ್ನೇ ಮುಚ್ಚಲಾಯಿತು ಎನ್ನುವುದು ನೆನಪಿರಲಿ.

ಅದೇನೋ ಸರಿ. ಆದರೆ ವುಹಾನ್‌ ನಗರದಲ್ಲಿ ಈ ಸೋಂಕು ಬಹಳ ತೀವ್ರವಾಗಿತ್ತು. ನಮ್ಮ ಬೆಂಗಳೂರಿನಲ್ಲಿ ಇನ್ನೂ ನಾಲ್ಕೋ, ಐದೋ ಜನರಿಗಷ್ಟೆ ಈ ಸೋಂಕು ತಗುಲಿದೆ. ಅದಕ್ಕೂ ಹೀಗೆ ಮಾಡುವುದು ಕೇವಲ ಆತಂಕದ ವಿಷಯವಲ್ಲವೇ? ಈ ಪ್ರಶ್ನೆಗೆ ಸ್ವಲ್ಪ ವಿವರವಾದ ಉತ್ತರ ಬೇಕು. ಯಾವುದೇ ಸಾಮೂಹಿಕ ಸೋಂಕನ್ನೂ ವೈದ್ಯ-ವಿಜ್ಞಾನಿಗಳು ಎರಡು ರೀತಿಯಲ್ಲಿ ಗುರುತಿಸುತ್ತಾರೆ. ಆಯಾ ಸಮೂಹದಲ್ಲಿಯೇ ಕಾಣಿಸಿಕೊಂಡು ಹರಡುವ ಸಾಂಕ್ರಾಮಿಕ ರೋಗ. ಎರಡನೆಯದು ಇನ್ನೆಲ್ಲೋ ಹೊರಗೆ ಕಾಣಿಸಿಕೊಂಡು ಈ ಸಮುದಾಯದೊಳಗೆ ನುಸುಳುವ ಸೋಂಕು. ಕೋವಿಡ್‌ 19 ಎರಡನೆಯ ಬಗೆಯದ್ದು. ಮೊದಲನೆಯ ಬಗೆಗೆ ಅಮೆರಿಕೆಯಲ್ಲಿರುವ ಫ್ಲೂ ಅಥವಾ ಇನ್ಫ್ಲುಯೆಂಜಾವನ್ನು ಉದಾಹರಣೆಯನ್ನಾಗಿ ನೀಡಬಹುದು. ನಮ್ಮಲ್ಲಿ ಇದಕ್ಕ ಬಲು ನಿಕಟವಾದ ಉದಾಹರಣೆ ಎಂದರೆ ಕಾಲರಾ. ಉಳಿದೆಲ್ಲ ಸೋಂಕೂ ನಮ್ಮಲ್ಲಿ ಬೇರೊಂದು ಜೀವಿಯಿಂದ ಹರಡುತ್ತದೆ. ಪ್ಲೇಗು ಇಲಿಯಿಂದ. ಮಂಗನಖಾಯಿಲೆ ಉಣ್ಣಿಯಿಂದ. ಮಲೇರಿಯಾ ಸೊಳ್ಳೆಯಿಂದ. ಡೆಂಗ್ಯೂ, ಚಿಕುನ್‌ ಗುನ್ಯಾ ಸೊಳ್ಳೆಯಿಂದ. ಹೀಗೆ ಸಮುದಾಯದಲ್ಲಿಯೇ ಇರುವ ಸೋಂಕು ಹೆಚ್ಚಳವಾದಾಗ ಈ ಶಾಲೆ, ಕಾಲೇಜು ಮುಚ್ಚುವುದಕ್ಕಿಂತಲೂ, ಆ ಸಮುದಾಯದ ಸಾಮೂಹಿಕ ಚಟುವಟಿಕೆಗಳಾದ ಜಾತ್ರೆ, ಮದುವೆ ಸಮಾರಂಭಗಳನ್ನು ನಿಯಂತ್ರಿಸಬೇಕು.

ಎರಡನೆಯದಾಗಿ ಈ ಸೋಂಕು ಯಾರನ್ನು ಹೆಚ್ಚು ಬಾಧಿಸುತ್ತದೆ ಎನ್ನುವುದೂ ಮುಖ್ಯ. ಮಕ್ಕಳನ್ನೇ ಇದು ಬಲಿ ತೆಗೆದುಕೊಳ್ಳುತ್ತದಾದರೆ ಅಗ ಶಾಲೆಗಳನ್ನು ಮುಚ್ಚುವುದು ಮುಖ್ಯ. ಆದರೆ ಇನ್ನೂ ಒಂದು ವಿಷಯ ಇದೆ. ಮಕ್ಕಳ ಮೇಲಿನ ಅನುಕಂಪದಿಂದಾಗಿ ಶಾಲೆ, ಕಾಲೇಜುಗಳನ್ನು ಮುಚ್ಚುವುದಿಲ್ಲ. ಇದಕ್ಕೆ ಇನ್ನೂ ಒಂದು ವೈಜ್ಞಾನಿಕ ಕಾರಣವಿದೆ. ಕೋವಿಡ್‌ 19 ಈಗ ಮಕ್ಕಳಲ್ಲಿ ಕಾಣಿಸಿಕೊಂಡರೂ, ಸಾವಿನ ಪ್ರಮಾಣ ವೃದ್ಧರಲ್ಲಿಯೇ ಹೆಚ್ಚು. ಹೀಗಾಗಿ ಮಕ್ಕಳು ಸೋಂಕಿನಿಂದಾಗುವ ಅಪಾಯಕ್ಕೆ ಗುರಿಯಾಗುವುದು ಕಡಿಮೆ ಎನ್ನಬಹುದು. ಹಾಗಿದ್ದೂ ಮಕ್ಕಳಲ್ಲಿ ಸೋಂಕು ಇದ್ದರೆ ಅದು ವೃದ್ಧರಿಗೂ ಇತರರಿಗೂ ಹರಡಬಹುದು. ಜೊತೆಗೆ ಮಕ್ಕಳ ಆಟಪಾಟಗಳಿಂದಾಗಿ ಅವರು ಸಂಪರ್ಕಕ್ಕೆ ಬರುವ ಜನರ ಸಂಖ್ಯೆ ಪ್ರತಿಯೊಬ್ಬ ವಯಸ್ಕರು ತನ್ನ ನಿತ್ಯ ಬದುಕಿನಲ್ಲಿ ನೇರ ಸಂಪರ್ಕಕ್ಕೆ ಬರುವ ಜನರ ಸಂಖ್ಯೆಗಿಂತಲೂ ಬಲು ಹೆಚ್ಚು. ಹೀಗಾಗಿ ಸೋಂಕನ್ನು ಹರಡುವುದರಲ್ಲಿ ಮಕ್ಕಳ ಪಾತ್ರ ಹಿರಿದು. ಅದನ್ನು ನಿಯಂತ್ರಿಸಬೇಕೆಂದರೆ ಶಾಲೆ, ಕಾಲೇಜುಗಳನ್ನು ಮುಚ್ಚದೇ ವಿಧಿಯಿಲ್ಲ.

ಮೂರನೆಯದಾಗಿ, ಸೋಂಕು ಹೊರಗಿನಿಂದ ಬಂದಿದ್ದರೆ ಅದನ್ನು ಹರಡುವ ಮೊದಲೇ ನಿಯಂತ್ರಿಸುವುದು ಮುಖ್ಯ. ಏಕೆಂದರೆ ಯಾವುದೇ ಸೋಂಕೂ ಕೂಡ ನಿರಂತರವಲ್ಲ. ಆದರೆ ಆರಂಭದಲ್ಲಿ ಅದು ಮಾಡುವ ಹಾನಿ, ಕೊಲ್ಲುವ ಜನರ ಸಂಖ್ಯೆ ಹೆಚ್ಚು. ಸಮುದಾಯವೊಂದರೊಳಗೆ ಸೋಂಕು ನುಸುಳಿದ ಆರಂಭದಲ್ಲಿ ಅದು ಬಲು ನಿಧಾನವಾಗಿ ಹರಡಲು ಆರಂಭಿಸುತ್ತದೆ. ಸ್ವಲ್ಪ ಕಾಲ ಕಳೆದ ನಂತರ, ಇದ್ದಕ್ಕಿದ್ದ ಹಾಗೆ ಅದು ಹೆಚ್ಚಾಗುತ್ತದೆ. ಗರಿಷ್ಟ ಮಟ್ಟವನ್ನು ಮುಟ್ಟುತ್ತದೆ. ಇದು ಬಲು ಪ್ರಮುಖವಾದ ಹಂತ. ಸೋಂಕು ಒಬ್ಬ ವ್ಯಕ್ತಿಯಲ್ಲಿ ಎಷ್ಟು ದಿನ ಇರಬಲ್ಲುದು? ಅದರ ಲಕ್ಷಣಗಳನ್ನು ನಾವು ಎಷ್ಟು ಬೇಗ ಗುರುತಿಸಬಹುದು? ಅದನ್ನು ನಾವು ಎಷ್ಟು ಬೇಗ ಗುಣಪಡಿಸಬಹುದು? ಇವೆಲ್ಲವೂ ಈ ಹಂತದಲ್ಲಿ ಬಲು ಮುಖ್ಯವಾಗುತ್ತದೆ. ಹೊಸದೊಂದು ಸೋಂಕು ಬಂದಾಗ ಇವು ಯಾವುದರಲ್ಲಿಯೂ ನಮಗೆ ಸ್ಪಷ್ಟ ಅರಿವು ಇರುವುದಿಲ್ಲ. ಅಂತಹ ಸಂದರ್ಭದಲ್ಲಿ ಶಾಲೆ, ಕಾಲೇಜು, ಸಾಮೂಹಿಕ ಚಟುವಟಿಕೆಗಳನ್ನು ನಿರ್ಬಂಧಿಸುವುದರಿಂದ ಮೊದಲ ಹಂತದಲ್ಲಿಯೇ ಸೋಂಕು ಹರಡದಂತೆ ತಡೆಯಬಹುದು. ಈ ಬಗ್ಗೆ ಉದಾಹರಣೆಗಳೂ ಇವೆ. ಇಪ್ಪತ್ತನೆಯ ಶತಮಾನದ ಆರಂಭದಲ್ಲಿ 1918ನೇ ಇಸವಿಯಲ್ಲಿ ಸ್ಪೇನಿನಲ್ಲಿ ಫ್ಲೂ ಹರಡಿತ್ತು. ಆಗ ಅಲ್ಲಿನ ಎರಡು ನಗರಗಳಲ್ಲಿ ಒಂದಾದ ಪಿಟ್ಸ್‌ ಬರ್ಗ್‌ ಸೋಂಕು ಹೆಚ್ಚಿ ಸಾವುನೋವುಗಳು ಅಧಿಕವಾದ ಮೇಲೆ ನಗರದಲ್ಲಿ ಶಾಲೆಗಳನ್ನು ಮುಚ್ಚಿತ್ತು. ಅದು ಕೇವಲ ಐವತ್ತೇ ದಿನ ಶಾಲೆಗಳನ್ನು ಮುಚ್ಚಿದ್ದರೂ ಅಲ್ಲಿ ಸಂಭವಿಸಿದ ಸಾವುಗಳ ಸಂಖ್ಯೆ ಹೆಚ್ಚು. ಮತ್ತೊಂದು ನಗರ, ಸೈಂಟ್‌ ಲೂಯಿಸ್‌  ಅದಕ್ಕೂ ಮೊದಲೇ ಅಂದರೆ ಸೋಂಕು ಬಂದಿದೆ ಎಂದ ಕೂಡಲೇ ಮುಂಜಾಗರೂಕತೆಯ ಕ್ರಮವಾಗಿ ಶಾಲೆಗಳನ್ನು ಮುಚ್ಚಿತ್ತು. ಇದು ಬಲು ದೀರ್ಘಕಾಲ ಶಾಲೆಯನ್ನು ಮುಚ್ಚಿತ್ತು. ಆದರೂ ಅಲ್ಲಿ ಆದ ಸಾವುಗಳು ಬಲು ಕಡಿಮೆ.  ಪಿಟ್ಸ್‌ ಬರ್ಗಿನಲ್ಲಿ ಸೈಂಟ್‌ ಲೂಯಿಗಿಂತಲೂ 30% ಹೆಚ್ಚು ಸಾವಾಗಿತ್ತು. ಇದು ಇಂತಹ ಕ್ರಮದ ಅವಶ್ಯಕತೆಯನ್ನು ಸೂಚಿಸುತ್ತದೆ.

ಇವೆಲ್ಲವನ್ನೂ ಗಮನಿಸಿದರೆ ಸರ್ಕಾರದ ಈ ಕ್ರಮ ಅವಶ್ಯಕ. ಆದರೆ ಇದು ಫಲ ನೀಡುವುದೇ? ಇದರಿಂದ ಸೋಂಕು ಹರಡುವುದು ನಿಲ್ಲುವುದೇ? ಒಂದು ವಿಷಯವನ್ನು ನಾವು ಗಮನಿಸಬೇಕು. ಒಂದು ಶತಮಾನದ ಹಿಂದೆ ಸಾಮೂಹಿಕ ಚಟುವಟಿಕೆಗಳು ವೈಯಕ್ತಿಕ ಸಮಾರಂಭಗಳು, ಶಾಲೆ, ಕಾಲೇಜು, ಸಂತೆಗಳಿಗೆ ಸೀಮಿತವಾಗಿದ್ದುವು. ಆದರೆ ಈಗ ಇವು ಬಸ್ಸು, ರೈಲು, ವಿಮಾನ ಸಂಚಾರ, ಮನರಂಜನೆಯ ಸ್ಥಾನಗಳು, ಕ್ರೀಡೆಗಳು ಇವೆಲ್ಲವನ್ನೂ ಆವರಿಸಿವೆ. ಈ ಎಲ್ಲ ಸಾಮೂಹಿಕ ಚಟುವಟಿಕೆಗಳನ್ನೂ ಸಂಪೂರ್ಣವಾಗಿ ನಿಯಂತ್ರಿಸುವುದು, ನಿರ್ಬಂಧಿಸುವುದು ಅಸಾಧ್ಯ. ಹೀಗಾಗಿ ನಮ್ಮ, ನಮ್ಮ ವೈಯಕ್ತಿಕ ಎಚ್ಚರಿಕೆ ಕೂಡ ಅವಶ್ಯಕ. ಕೋವಿಡ್‌ 19 ವೈರಸ್ಸು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಕೈ ಕುಲುಕಿದಾಗ, ರೋಗಿಯೊಬ್ಬನ ಕಣ್ಣು ಮೂಗಿನ ನೀರು ಅಂಟಿದ ಜಾಗವನ್ನು ಮುಟ್ಟಿದರೆ ಸೋಂಕು ಹರಡುತ್ತದೆ. ಇದು ಬಸ್ಸು, ರೈಲಿನಲ್ಲಿ ಆಗಬಹುದು. ಅದಾಗದಷ್ಟು ಸ್ವಚ್ಛವಾಗಿ ಬಸ್ಸು, ರೈಲುಗಳನ್ನು ನಾವು ಇಟ್ಟುಕೊಂಡಿದ್ದೇವೆಯೇ? ಅಥವಾ ಈ ಪ್ರತಿ ಓಟದ ನಂತರ ಅಲ್ಲಿ ವೈರಸ್‌ ಏನಾದರೂ ಇದ್ದರೆ ಅದು ನಿಷ್ಕ್ರಿಯವಾಗುವಂತೆ ಹನ್ನೆರಡು ಗಂಟೆಗಳ ಕಾಲ ಬಿಡುವು ಕೊಟ್ಟು ಮತ್ತೆ ರಸ್ತೆ ಬಿಡುವಷ್ಟು ತಾಳ್ಮೆ, ಸಂಪನ್ಮೂಲ ನಮ್ಮಲ್ಲಿ ಇವೆಯೇ? ಇವೆಲ್ಲವೂ ಅನಿಶ್ಚಿತಗಳು.

ಎಲ್ಲಕ್ಕಿಂತಲೂ ಮುಖ್ಯವಾಗಿ ಸಾಮುದಾಯಿಕ ಸೋಂಕು ನಿರ್ವಹಣೆ ಹಾಗೂ ಅಧ್ಯಯನ ಅರ್ಥಾತ್‌ ಎಪಿಡೆಮಿಯಾಲಜಿ ಎನ್ನುವ ವೈದ್ಯ ವಿಜ್ಞಾನ ನಮ್ಮಲ್ಲಿ ಇನ್ನೂ ಬೆಳೆದಿಲ್ಲ. ಹಲವು ಸೋಂಕುರೋಗಗಳ ಹರಡುವಿಕೆಯ ವಿಧಾನಗಳ ಬಗ್ಗೆ ಇನ್ನೂ ಅನುಮಾನಗಳು ಇವೆ. ಈಗ ಈ ಒಂದು ವೈದ್ಯಕೀಯ ವಿಜ್ಞಾನದ ಶಾಖೆಯನ್ನು ಬಲಪಡಿಸಬೇಕಾದ ತುರ್ತು, ಅಗತ್ಯ ಎರಡೂ ಬಂದಿದೆ. ಅದಾದರೂ ಆಗಬಹುದು ಎಂದು ಆಶಿಸೋಣ. ಅಷ್ಟೆ. ಕೊನೆಯದಾಗಿ, ಹೀಗೆ ಎಷ್ಟು ದಿನಗಳವರೆಗೆ ಸಾಮೂಹಿಕ ಚಟುವಟಿಕೆಗಳನ್ನು ನಿರ್ಬಂಧಿಸಬೇಕು? ಈ ಪ್ರಶ್ನೆಗೆ ಮಾತ್ರ ಯಾರಿಗೂ ಉತ್ತರ ಗೊತ್ತಿರಲಿಕ್ಕಿಲ್ಲ. ವಿವಿಧ ಮಾಹಿತಿಗಳನ್ನು ಒಟ್ಟು ಮಾಡಿ, ಒಂದಿಷ್ಟು ತರ್ಕಬದ್ಧವಾಗಿ ಊಹಿಸಬಹುದು ಅಷ್ಟೆ. ಒಂದು ವಾರವೋ, ಹದಿನೈದು ದಿನವೋ, ಒಂದು ತಿಂಗಳೋ, ಸೋಂಕು ಹರಡಿದ ಮೇಲಷ್ಟೆ ನಮಗೆ ವೇದ್ಯವಾಗಬೇಕು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.