ಚಂದ್ರಯಾನ -2 | ವಿಕ್ರಮ್‌ ಲ್ಯಾಂಡರ್‌ ಕ್ರ್ಯಾಷ್‌ ಲ್ಯಾಂಡ್‌ ಆಯಿತೆ?

ಜಗತ್ತಿನ ಗಮನಸೆಳೆದಿದ್ದ ವಿಕ್ರಮ್‌ ಲ್ಯಾಂಡರ್‌ ಯಶಸ್ವಿಯಾಗಿ ಚಂದ್ರನತ್ತ ಇಳಿಯಲಾರಂಭಿಸಿತ್ತು. ಆದರೆ ಇನ್ನು ಎರಡು ಕಿ ಮೀ ದೂರದಲ್ಲಿರುವಾಗ ನಿಯಂತ್ರಣ ಕೇಂದ್ರದೊಂದಿಗೆ ಸಂಪರ್ಕ ಕಳೆದುಕೊಂಡಿತು. 15 ನಿಮಿಷಗಳಾದರೂ ಕೇಂದ್ರದಲ್ಲಿರುವ ವಿಜ್ಞಾನಿಗಳಿಗೆ ಏನಾಗುತ್ತಿದೆ ಎಂಬ ಸುಳಿವಿರಲಿಲ್ಲ. ಇದಕ್ಕೆ ನೆದರ್‌ ಲ್ಯಾಂಡಿನ ಈ ವಿಜ್ಞಾನಿ ಕೊಟ್ಟ ಕಾರಣವೇನು ಗೊತ್ತೆ?

ಭಾರತದ ಇಸ್ರೋ ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್‌ ಲ್ಯಾಂಡರ್‌ ಇಳಿಸಿ ಇತಿಹಾಸ ಬರೆಯುವ ಉತ್ಸಾಹದಲ್ಲಿದ್ದ ಕಡೆ ಕ್ಷಣಗಳಲ್ಲಿ ಲ್ಯಾಂಡರ್‌ ಜೊತೆಗಿನ ಸಂಪರ್ಕ ಕಡೆದು ಹೋಯಿತು. 2.1 ಕಿ.ಮೀ ದೂರದಲ್ಲಿದ್ದಾಗ ಇದ್ದಕಿಂತ ಸಿಗ್ನಲ್‌ಗಳು ಕಡಿತಗೊಂಡವು.

ಈ ನಡುವೆ ಆರ್ಬಿಟ್ರರ್‌ ಮತ್ತು ಲ್ಯಾಂಡರ್‌ ಸಂಪರ್ಕ ಇರುವುದಾಗಿ ವಿಜ್ಞಾನಿಗಳು ಆಶಾಭಾವನೆ ವ್ಯಕ್ತಪಡಿಸಿದರೂ, ಲ್ಯಾಂಡರ್‌ ಮತ್ತು ನಿಯಂತ್ರಣ ಕೇಂದ್ರದ ನಡುವೆ ಸಂಪರ್ಕ ಏರ್ಪಡಲಿಲ್ಲ.

ಇದಕ್ಕೆ ಇಸ್ರೋ ನಿಯಂತ್ರಣ ಕೇಂದ್ರದಲ್ಲಿ ವಿಜ್ಞಾನಿಗಳು ಕಾರಣಗಳು ಹುಡುಕುತ್ತಾ, ಸಿಗ್ನಲ್‌ಗಾಗಿ ನಿರೀಕ್ಷಿಸುತ್ತಿರುವಾಗ ನೆದರ್‌ಲ್ಯಾಂಡಿನ ಇನ್‌ಸ್ಟಿಟ್ಯೂಟ್‌ ಆಫ್‌ ರೇಡಿಯೋ ಆಸ್ಟ್ರೋನೋಮಿಯ ಸೀಸ್‌ ಬಸ್ಸಾ ಸಾಲು ಸಾಲು ಟ್ವೀಟ್‌ಗಳ ಮೂಲಕ ಕಾರಣಗಳನ್ನು ಅರಿಯುವ ಪ್ರಯತ್ನ ಮಾಡುವ ಮೂಲಕ ಸಾಧ್ಯತೆಗಳನ್ನು ಹಂಚಿಕೊಂಡರು.

ಲೋ ಫ್ರೀಕ್ವಿನ್ಸಿ ರೇಡಿಯೋ ಟೆಲಿಸ್ಕೋಪ್‌ ಬಳಸುವ ಖಗೋಳಶಾಸ್ತ್ರಜ್ಞರಾದ ಸೀಸ್‌ ಬಸ್ಸಾ, ತಮ್ಮ ಒಂದು ಟ್ವೀಟ್‌ನಲ್ಲಿ ಡ್ವಿಂಗೆಲೂ ಹೆಸರಿನ ರೇಡಿಯೋ ಟೆಲಿಸ್ಕೋಪ್‌ ಬಳಸಿ ಇಂದಿನ ಚಂದ್ರಯಾನ2 ರ ಲ್ಯಾಂಡಿಂಗ್‌ ವೀಕ್ಷಿಸುತ್ತಿರುವುದಾಗಿ ಹೇಳಿಕೊಂಡಿದ್ದರು.

ಚಿತ್ರಗಳ ಸಹಿತವಾಗಿ ಲ್ಯಾಂಡರ್‌ ಉತ್ತರ ಧ್ರುವ ಹಾದು ದಕ್ಷಿಣ ಧ್ರುವದತ್ತ ಸಾಗಿದ್ದನ್ನು ವಿವರಿಸಿದರು. ನಂತರ ಲ್ಯಾಂಡರ್‌ ಚಂದ್ರನ ಮೇಲ್ಮೈಗೆ ಇಳಿಯಲು ಆರಂಭಿಸಿದ ಕ್ಷಣ ಕ್ಷಣದ ಮಾಹಿತಿಯನ್ನು ನೀಡಲಾರಂಭಿಸಿದರು.

1ಗಂಟೆ 50ನೆಯ ನಿಮಿಷಕ್ಕೆ ಸಿಗ್ನಲ್‌ಗಳ ದೊರೆಯದೇ ಇರುವುದನ್ನು ಗುರುತಿಸಿದ ಸೀಸ್‌, ಲ್ಯಾಂಡರ್‌ ಚಂದ್ರನ ಮೇಲ್ಮೈಗೆ ಅಪ್ಪಳಿಸಿರಬಹುದು ಎಂದು ಟ್ವೀಟ್‌ ಮಾಡಿದ್ದಾರೆ. ಆದರೆ ಈ ಬಗ್ಗೆ ಯಾವುದೇ ಖಚಿತ ಮಾಹಿತಿ ಇಲ್ಲ.

ಈ ಸುದ್ದಿ ಬರೆಯುವ ಹೊತ್ತಿಗೆ ಇಸ್ರೋ ವಿಜ್ಞಾನಿಗಳು ಮಾಹಿತಿಯ ವಿಶ್ಲೇಷಣೆಯಲ್ಲಿ ಕಾರ್ಯ ನಡೆಯುತ್ತಿತ್ತು.

”ವಿಕ್ರಮ್‌ ಲ್ಯಾಂಡರ್‌ ಯೋಜನೆಯಂತೆ ಸಾಗಿದ್ದು, ಕಾರ್ಯಾಚರಣೆ 2.1 ಕಿ.ಮೀ.ವರೆಗೆ ಸಹಜವಾಗಿ ನಡೆದಿದೆ. ನಂತರದಲ್ಲಿ ನಿಯಂತ್ರಣ ಕೇಂದ್ರದೊಂದಿಗೆ ಲ್ಯಾಂಡರ್‌ ಸಂಪರ್ಕ ಕಡಿತವಾಗಿದೆ. ಮಾಹಿತಿಯನ್ನು ವಿಶ್ಲೇಷಿಸಲಾಗುತ್ತಿದೆ” ಇಸ್ರೋ ಅಧ್ಯಕ್ಷ ಕೆ ಸಿವನ್‌ ಅವರ ಪರವಾಗಿ ಹೇಳಿಕೆ ನೀಡಿದ ಹಿರಿಯ ವಿಜ್ಞಾನಿಯೊಬ್ಬರು ಅಧಿಕೃತ ಪತ್ರಿಕಾ ಗೋಷ್ಠಿ ರದ್ದು ಗೊಳಿಸಿದಾಗಿ ತಿಳಿಸಿದರು.

ಚಂದ್ರಯಾನ-2ರ ಯಶಸ್ಸು, ವಿಫಲ ಚರ್ಚೆಗಳು ಆರಂಭವಾಗಿದ್ದು, ಲ್ಯಾಂಡರ್‌ ಕುರಿತು ಖಚಿತ ಹೇಳಿಕೆಗಳು ಇನ್ನಷ್ಟೇ ಹೊರಬೇಕಿದ್ದು, ಚಂದ್ರನ ಕಕ್ಷೆಯಲ್ಲಿ ಆರ್ಬಿಟರ್‌ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಚಂದ್ರಯಾನವನ್ನು ಸಂಪೂರ್ಣ ವೈಫಲ್ಯವೆನ್ನಲಾಗದು ಎಂಬ ಹೇಳಿಕೆಗಳು ಇಸ್ರೋ ವಿಜ್ಞಾನಿಗಳಿಗೆ ಬೆನ್ನುತಟ್ಟುತ್ತಿವೆ.