ಸೈಫೈ ದಿನ | ಹೆಚ್ಚು ಕ್ರಿಯಾಶೀಲತೆಯ ಹರವು ಇರುವ ಪ್ರಕಾರ, ಸೈಫೈ

ಜ. 2 ಪ್ರಖ್ಯಾತ ವಿಜ್ಞಾನ ಲೇಖಕ ಐಸಾಕ್‌ ಅಸಿಮೋವ್‌ ಜನ್ಮ ದಿನ. ಐದುನೂರಕ್ಕೂ ಹೆಚ್ಚು ವಿಜ್ಞಾನಾಧಾರಿತ ಸೃಜನಶೀಲ ಬರಹಗಳನ್ನು ನೀಡಿದ ಅಸಿಮೋವ್‌ ಸೈಫೈ ಪ್ರಕಾರವನ್ನು ಅತ್ಯಂತ ಜನಪ್ರಿಯಗೊಳಿಸಿದವರು. ಅವರ ನೆನಪಿನಲ್ಲಿ ಪ್ರತಿ ವರ್ಷ ಜ. 2ಅನ್ನು ಅಂತಾರಾಷ್ಟ್ರೀಯ ಸೈಫೈ ದಿನವಾಗಿ ಆಚರಿಸಲಾಗುತ್ತದೆ. ಈ ನೆಪದಲ್ಲಿ ಕನ್ನಡದಲ್ಲಿ ಸೈಫೈ ಬರವಣಿಗೆಯಲ್ಲಿ ಸಕ್ರಿಯರಾಗಿರುವ ಲೇಖಕಿಯೊಬ್ಬರು ತಮ್ಮ ಅನುಭವಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ

ಹಲವು ಜಾನರ್‌ಗಳಲ್ಲಿ ನಾನು ಬರೆದಿದ್ದೇನಾದರೂ; ಪ್ರಾಂತ್ಯಗಳ, ಕಾಲಮಾನದ ಚೌಕಟ್ಟಿರದ ; ಕುತೂಹಲ-ನ್ಯೂನತೆ-ನವರಸಗಳನ್ನೂ ಕ್ರೋಡೀಕರಿಸಬಲ್ಲ,  ಕ್ರಿಯಾಶೀಲತೆಗೆ ಅತಿ ಹೆಚ್ಚು ಹರವು ಇರುವ ಜಾನ್ರೆ ಅಂದರೆ ಸೈನ್ಸ್ ಫಿಕ್ಷನ್ ಎಂದೇ ನನ್ನ ಅನಿಸಿಕೆ. ಸೈ-ಫೈಗಳ ಪರಿಮಿತಿಯೂ ಆಗಾಧ. ಸಮಾಜಿಕ ಕಥೆಗಳಲ್ಲಿರುವಂತಹ ಸಮಯ-ಪ್ರಾಂತ್ಯಗಳ ಚೌಕಟ್ಟಾಗಲೀ, ನಿಗೂಡ ಕಥೆಗಳಲ್ಲಿನ ಸೀಮಿತವಾದ ಪ್ರಶ್ನೆ-ಸಂಘರ್ಷಣೆಗಳಾಗಲಿ ಇಲ್ಲಿರುವುದಿಲ್ಲ.   

 “ ಇದು ಹಾಗೆ ಏಕಿದೆ? ಏಕಿರಬೇಕು? ಈ ರೀತಿಯಾಗಿ-ಹೀಗೂ ಇರಬಹುದಲ್ಲವೆ?” ಎಂಬ ಪ್ರಚೋದಕ ಪ್ರಶ್ನೆಗಳ ಜಾಡನ್ನು ಹಿಡಿದರೆ ಅದ್ಭುತವಾದ ಸೈ ಫೈ ನಿರಾಯಾಸವಾಗಿ ಬರೆಸಿಕೊಂಡು ಹೋಗುತ್ತದೆ! ಆದರೆ ಇದಕ್ಕೆ ಒಂದು ಮುಖ್ಯವಾದ ತಡೆ ಇದೆ. ಅದೇನೆಂದರೆ ಸೈ ಫೈ ಕಥೆಗಳಲ್ಲಿ ಎಲ್ಲಾ ಪರಿಕಲ್ಪನೆಗಳೂ ವೈಜ್ಞಾನಿಕ ಬುನಾದಿ ಇರಲೇ ಬೇಕು, ವೈಜ್ಞಾನಿಕವಾಗಿ ಸಮರ್ಥಿಸಿಕೊಳ್ಳುವಂತಿರಬೇಕು. ಇಲ್ಲವಾದಲ್ಲಿ ಅದು ಕೇವಲ ಕಟ್ಟುಕಥೆ, ಮಾಯಾಲೋಕದ ಕಾಲ್ಪನಿಕ ಕಥೆ ಎಂಬ ಹುತ್ತಕ್ಕೆ ಜಾರುತ್ತದೆ. ಉದಾಹರಣೆಗೆ ಕಟ್ಟು ಕಥೆಗಳಲ್ಲಿ ‘ಮಾಯ’ವಾಗುವಂತೆ ಸೈ ಫೈ ಯಲ್ಲಿ ಕೂಡ ಅಳವಡಿಸಿಕೊಳ್ಳಬಹುದು. ಆದರೆ ಕ್ವಾಂಟಮ್ ಫಿಸಿಕ್ಸ್ ನೆಲೆಯೆಲ್ಲಿ ಇದನ್ನು ವೈಜ್ಞಾನಿಕವಾಗಿ ಸಮರ್ಥಿಸಿಕೊಂಡು, ಪ್ರಸ್ತುತ ಸಾಧ್ಯವಿಲ್ಲದಿದ್ದರೂ ಸೈದ್ಧಾಂತಿಕವಾಗಿ ಸಾಧ್ಯವೆಂದು ನಿದರ್ಶಿಸಬೇಕಾಗುತ್ತದೆ!!

ಕಾಲ, ವ್ಯೋಮ, ತಳಿಗಳು, ತರಂಗ-ಸೂಸಿಕೆಗಳೇ (Time-Space-Genes-waves-radiation) ನನ್ನ ಸೈ-ಫೈ ಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಪರಿಕಲ್ಪನೆಗಳು. ಎಲ್ಲವೂ ಈ ಹಿಂದೆ ತರಂಗ, ಸುಧಾ, ವಾರಪತ್ರಿಕೆಗಳಲ್ಲಿ ಪ್ರಕಟವಾಗಿವೆ. “ಸೈಬಾರ್ಗ ಶ್ರೀನಿವಾಸ” ಶರೀರವನ್ನು ಕಂಪ್ಯೂಟರ್ರಿಗೆ ಹೊಂದಿಸಿಕೊಂಡ ವಿಕಲಾಂಗ ಶ್ರೀನಿವಾಸನ ಕಥೆಯಾದರೆ, “ಕ್ರೋಮೋಸೋಮ್ 4” ಎಂಬ ಕಥೆಯಲ್ಲಿ ಜೀವಮಾನವನ್ನು ಹೆಚ್ಚಿಸುವ ಡಾ||ಸಮೀಕ್ಷಾ ಕಥಾನಾಯಕಿಯಾಗುತ್ತಾರೆ. “ದೇವರಾಗಲು ಮೂರೇ ಗೇಣು” ಎಂಬ ಕಾದಂಬರಿ ‘ತರಂಗ’ ವಾರಪತ್ರಿಕೆಯಲ್ಲಿ 2015ರಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿತ್ತು. ಡಿಸೈನರ ಬೇಬೀಸ್ ಮತ್ತು ಮೇಧಾವಿ ಮಕ್ಕಳ ಬಗ್ಗೆ (Designer babies and child prodigies)ಇದಾಗಿತ್ತು. “ಚೇತನ” ಎಂಬ ಕಥೆಯಲ್ಲಿ ಅಂಗವಿಕಲ ಹಾಗು ಕುರೂಪವಾಗಿ ಹುಟ್ಟಿತು ಎಂದು ಮಗುವನ್ನು ಆಸ್ಪತ್ರೆಯಲ್ಲಿಯೇ ತ್ಯಜಿಸಿಹೋದಾಗ, ಅದರ ಹೊಣೆಯನ್ನು ಆಸ್ಪತ್ರೆಯ ನಿರ್ವಾಹಕ ವೈದ್ಯೆ ಹೊರಬೇಕಾಗುತ್ತದೆ. ಆದರೆ ಆ ಮಗುವಿಗೆ ತನ್ನ ಅನಿಸಿಕೆ/ಭಾವನೆಗಳನ್ನು ತರಂಗಗಳ ಮೂಲಕ ಸಂಪರ್ಕಿಸುವ ವಿಶೇಷ ಸಾಮರ್ಥ್ಯವಿರುತ್ತದೆ. ತನ್ನನ್ನು ರಕ್ಷಿಸಿದ ವೈದ್ಯೆಗೆ ತನ್ನ ಶಕ್ತಿಯನ್ನು ಕಾಣಿಕೆಯಾಗಿ ನೀಡಿ ಸತ್ತು ಹೋಗುತ್ತದೆ. ಈ ಕಥೆಯು ವಾರಪತ್ರಿಕೆಗಳಲ್ಲಿ ಪ್ರಕಟವಾಗಿ, ನಂತರ “ಕನ್ನಡ ಲೇಖಕಿಯರ ಕಥೆಗಳು” ಎಂಬ ಸಂಕಲನದಲ್ಲಿಯೂ ಪ್ರಕಟವಾಯಿತು.

ಸೈ ಫೈ ಬರೆಯಲು ಸಂಗತಿಗಳಿಗೆ ಕೊರತೆಯಿಲ್ಲ. ಜೀವ-ರಸಾಯನ-ಭೌತಶಾಸ್ತ್ರಗಳಲ್ಲದೆ ಖಗೋಳ, ಇತಿಹಾಸ, ಪಳಿಮೆಯರಿಮೆ (archeology) ಮತ್ತು ಇನ್ನೂ ಅನೇಕಾನೇಕ ವಿಷಯಗಳಲ್ಲಿನ known knowns ( ಗೊತ್ತಿದೆ ಎಂದು ಗೊತ್ತಿರುವ (ಸಂಗತಿಗಳು)) ಹಾಗು known unknowns ( ಗೊತ್ತಿಲ್ಲ ಎಂದು ಗೊತ್ತಿರುವ (ಸಂಗತಿಗಳು)) ಗಳನ್ನು ಉಪಯೋಗಿಸಿ ರೋಚಕ ಕಥೆಗಳನ್ನು ಸೃಷ್ಟಿಸಬಹುದು.

ನಾನು ಯಾವ ಕಥೆ-ಕಾದಂಬರಿಯನ್ನೂ ಕೈಬರಹದಲ್ಲಿ ಬರೆದವಳಲ್ಲ. ಎಲ್ಲವೂ ಮೆದುಳಿನಿಂದ ನೇರವಾಗಿ ಕಂಪ್ಯೂಟರ್ರಿನ MS Word ಗೆ ವರ್ಗಾವಣೆಯಾಗಿಬಿಡುತ್ತವೆ. ಅಂದರೆ ಕಥೆ ಸಂಪೂರ್ಣವಾಗಿ ಒಮ್ಮೆ ಮೆದುಳಿನ ಜೀವಕೋಶಗಳಲ್ಲಿ ದಿನ-ವಾರ-ತಿಂಗಳುಗಟ್ಟಲೆ ಗಸ್ತುಹೊಡೆದು, ಬದಲಾಯಿಸಿ-ತಿರುಚಿಸಿಕೊಂಡು ಕೊನೆಗೆ ನಯಗೊಳಿಸಿದ ಆವೃತ್ತಿಯು ಕಂಪ್ಯೂಟರ್ರಿನ ಕೀಲೆಮಣೆಗೆ ಭಟ್ಟಿ ಇಳಿಯುತ್ತದೆ. ನಂತರ ಆಗುವುದು ಸಣ್ಣ -ಪುಟ್ಟ ಬದಲಾವಣೆಗಷ್ಟೆ.

          ಒಮ್ಮೆಮ್ಮೆ ಟೈಪಿಸುತ್ತಾ ಹೋದಂತೆ ಹೊಸ ಕಲ್ಪನೆಗಳು, ಸಾಧ್ಯತೆಗಳು ನನಗೆ ಗೋಚರವಾದಾಗ, ಆ ಪರಿಕಲ್ಪನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಗೂಗಲಪ್ಪನ ಸಹಾಯ ಪಡೆಯುತ್ತೇನೆ. ನನ್ನ ಅನಿಸಿಕೆಯನ್ನು  ವೈಜ್ಞಾನಿಕವಾಗಿ ಸಮರ್ಥಿಸಿಕೊಳ್ಳಬಹುದೆ ಎಂದು ಹೆಚ್ಚು ಹೆಚ್ಚು ವೈಜ್ಞಾನಿಕ ಬರಹಗಳನ್ನೂ ಓದಬೇಕಾಗುತ್ತದೆ. ಹೀಗೆ ಸೈ ಫೈ ಬರೆಯುವಾಗ ಅನೇಕ ಹೊಸ ಮಾಹಿತಿಗಳನ್ನು ತಿಳಿದುಕೊಳ್ಳಬಹುದಾದ್ದರಿಂದ, ಇದು ನನಗೆ ಬಹಳ ಪ್ರಿಯವಾದ ಕಸರತ್ತು.

ಸೈ ಫೈಯೊಂದಕ್ಕೆ ಕಥಾ ವಸ್ತುವನ್ನು ಯೋಚಿಸಿ, ಪಾತ್ರ-ಸನ್ನಿವೇಶಗಳನ್ನು ಸೃಷ್ಟಿಸಿ ಕಥೆಯನ್ನು ಹಣೆಯುವುದು ಎಲ್ಲಕ್ಕಿಂತ ಸುಲಭವಾದ ಕಸರತ್ತು. ಆದರೆ ನನ್ನ ಮೆದುಳಿನಲ್ಲಿ ಹಣೆದ ಆ ಕಥೆಯನ್ನು ವೈಜ್ಞಾನಿಕ ಪರಿಕಲ್ಪನೆಗಳನ್ನು, ಹೆಚ್ಚು ವೈಜ್ಞಾನಿಕ ಪದಗಳಿರದೆ, ಸರಳವಾಗಿ, ವಿಜ್ಞಾನದ ಹುರುಳನ್ನೂ ಉಳಿಸಿಕೊಂಡು ಜನರಿಗೆ, ಅದೂ ಕನ್ನಡದಲ್ಲಿ ತಲುಪಿಸುವುದು ನನ್ನ ಮಟ್ಟಿಗೆ ಒಂದು ಮುಖ್ಯವಾದ ಸವಾಲು. ಕೆಲವು ಆಂಗ್ಲ ಪದಗಳಿಗೆ ಕನ್ನಡದಲ್ಲಿ ಕರಾರುವಕ್ಕಾದ ಪದವಿರುವುದಿಲ್ಲ. ಇದ್ದರೂ, ಅದು ಸಾಮಾನ್ಯ ಬಳಕೆಯಲ್ಲಿ ಇರದೆ, ಅನೇಕ ಜನರಿಗೆ ತಿಳಿದಿರುವುದಿಲ್ಲ . ಉದಾಹರಣೆಗೆ-Galaxy ಎಂಬ ಪದ. ಇದಕ್ಕೆ ವೈಜ್ಞಾನಿಕವಾಗಿ ನಿರ್ದಿಷ್ಟ ಅರ್ಥವಿದೆ. ಆದರೆ ಕನ್ನಡದಲ್ಲಿ ಬರೆಯುವಾಗ ನಕ್ಷತ್ರ ಸಮೂಹ  ಅಥವ ತಾರಾಪುಂಜ ಎಂದಷ್ಟೇ ಬರೆದರೆ ಸಲೀಸಾಗಿ ಅರ್ಥವಾಗುತ್ತದೆ. Galaxy ಎಂಬುದಕ್ಕೆ ಅರಿಲ್ವಳಿ ಎಂಬುದು ಅತ್ಯಂತ ಸಮೀಪದ ಭಾಷಾಂತರವಾದರೂ ಅನೇಕರಿಗೆ ಅದು ತಿಳಿಯದ ಶಬ್ಧ. ಹೀಗೆ ನನ್ನ ಕಲ್ಪನೆಯಲ್ಲಿನ ಗೆಲಾಕ್ಸಿಯನ್ನು ನಿದರ್ಶಿಸಬೇಕಾದರೆ ಓದುಗರ ಮಟ್ಟಿಗೆ ಅದು ಕೇವಲ ತಾರಾ ಸಮೂಹವಾಗಿ ಇಂಗಿತವನ್ನು ಕಳೆದುಕೊಂಡಿರುತ್ತದೆ.

ಕನ್ನಡದಲ್ಲಿ ವೈಜ್ಞಾನಿಕ ಪದಗಳಿಗೆ ಪ್ರತ್ಯೇಕ ಶಬ್ದಕೋಶಗಳಿವೆಯಾದರೂ, ಹೊಸ ಪದಗಳನ್ನು ಹುಟ್ಟಿಹಾಕಿ ಬಳಸುವ ಪ್ರಕ್ರಿಯೆಯ ಅಗತ್ಯವಿದೆ ಎನಿಸುತ್ತದೆ.

ಕೆಲವು ಸೈ ಫೈ ಪುಸ್ತಕಗಳನ್ನು ಓದಿದ್ದೇನೆ, ಅದಕ್ಕೂ ಕಮ್ಮಿ ಸೈ ಫೈ ಚಿತ್ರಗಳನ್ನು ನೋಡಿದ್ದೇನೆ. ವೈದ್ಯಕೀಯ ವ್ಯಾಸಂಗ ಹಾಗು ಪ್ರಸೂತಿ-ಸ್ತ್ರೀ ರೊಗ ತಜ್ನೆಯಾಗಿ ನಾನು ನಿರ್ವಹಿಸಬೇಕಾದ ಕೆಲಸಗಳಲ್ಲಿ ಇತರೆ ಹವ್ಯಾಸ-ಚಟುವಟಿಕೆಗಳಲ್ಲಿ ಹೆಚ್ಚು ಸಮಯವಿರುವುದಿಲ್ಲ. ಅಮೇರಿಕಾದವರಾದ ಐಸಾಕ್ ಅಸಿಮೊವ್ ನನ್ನ ನೆಚ್ಚಿನ ಸೈ ಫೈ ಬರಹಗಾರರು. ಅವರ ರೋಬೋಟ್ ಕಥೆಗಳ ಸರಣಿಗಳು ಅದರಲ್ಲೂ ಅವರ  “I, Robot” ಮತ್ತು  “ The Bicentennial Man” (ಇದು ಚಲನ ಚಿತ್ರವೂ ಆಯಿತು) ನನಗೆ ಅಚ್ಚುಮೆಚ್ಚಾದ ಕೃತಿಗಳು.

‘ಸ್ಟಾರ್ ಟ್ರೆಕ್’ ಎಂಬ ಟಿ.ವಿ ಸೀರಿಯಲ್ಲಿನ ಕ್ಯಾಪ್ಟೆನ್ ಕರ್ಕ್ ( ಕೆನಾಡಾದವರಾದ ವಿಲಿಯಮ್ ಶೇಟ್ನರ್) ಹಾಗು “ಸ್ಟಾರ್ ವಾರ್” ಸರಣಿಯ ಜೇಡಿ ಮಾಸ್ಟರ್ ಯೋಡ (ಕಾಲ್ಪನಿಕ ಪಾತ್ರ) ನನ್ನ ನೆಚ್ಚಿನ ಸೈ ಫೈ ಹೀರೋಗಳು.

ಡಾ. ಶಾಂತಲಾ ಮೂತಲಃ ಪ್ರಸೂತಿ ತಜ್ಞರಾಗಿದ್ದು, ದಶಕಗಳಿಂದ ಸೃಜನಶೀಲ ಬರವಣಿಗೆಯಲ್ಲಿ ಸಕ್ರಿಯರಾಗಿದ್ದಾರೆ. ಇವರ ಹಲವು ಕತೆಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಕಾದಂಬರಿಗಳು ಹೊರಬಂದಿವೆ. ಸದ್ಯದಲ್ಲೇ ಸೈಫೈ ಕಾದಂಬರಿಯೊಂದು ಬಿಡುಗಡೆಯಾಗುತ್ತಿದ್ದು, ಮೈಲ್ಯಾಂಗ್‌ ಬುಕ್ಸ್‌ ಈ ಕೃತಿಯನ್ನು ಪ್ರಕಟಿಸುತ್ತಿದೆ

3 thoughts on “ಸೈಫೈ ದಿನ | ಹೆಚ್ಚು ಕ್ರಿಯಾಶೀಲತೆಯ ಹರವು ಇರುವ ಪ್ರಕಾರ, ಸೈಫೈ

  1. A neat and interesting article by Dr. Shanthala. Am an avid reader of Sci-fi thrillers, detective novels, history-based mysteries.. Felt highly elated to know that Dr. Shanthala has written Sci-fi in Kannada !! This is something astounding n v. Commendable 🥰🤩 three cheers to Dr. Shantala 🙏

  2. Explains the logic of writing science fiction .Science fiction is very scarce in regional languages and requires lot of expertise in language and technical knowledge.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

%d bloggers like this: