ಬಿದಿರು ಬಳಸಿ ಪರಿಸರ ಸ್ನೇಹಿ ಮನೆ, ಮೈಸೂರಿನ ವಿದ್ಯಾರ್ಥಿಗಳ ಸಾಧನೆ

ಮನೆ ಕಟ್ಟಬೇಕು ಎಂಬ ಕನಸು ಯಾರಿಗಿಲ್ಲ ಹೇಳಿ? ಪ್ರತಿಯೊಬ್ಬರಿಗೂ ತಾನಿರಲು ಇದೇ ರೀತಿಯ ಮನೆ ಇರಬೇಕು ಎಂಬ ಆಸೆ ಇರುತ್ತದೆ. ಮನೆ ಕಟ್ಟಲು ಬಳಸುವ ಪ್ರತಿಯೊಂದು ವಸ್ತುವಿನ ಬೆಲೆಯೂ ಗಗನಕ್ಕೇರಿರುವಾಗ ಮನೆ ಕಟ್ಟುವುದು ಕನಸಾಗಿಯೇ ಉಳಿದಿರುತ್ತದೆ. ಇಂತಹ ಸಮಸ್ಯೆಗಳಿಗೆ ಪರಿಹಾರವಾಗಿ ಹಾಗೂ ಕಡಿಮೆ ಖರ್ಚಿನಲ್ಲಿ ಪರಿಸರ ಸ್ನೇಹಿ ಮನೆಯೊಂದನ್ನು ನಿರ್ಮಿಸುವ ಮೂಲಕ ಹೊಸ ಆವಿಷ್ಕಾರ ನಡೆಸಿದ್ದಾರೆ ಮೈಸೂರಿನ ಇಂಜಿನಿಯಂರಿಂಗ್ ವಿದ್ಯಾರ್ಥಿಗಳು.

ಮನೆಗಳನ್ನು ನಿರ್ಮಿಸಲು ಉಕ್ಕಿನ ಬದಲಿಗೆ ಬಿದಿರನ್ನು ಬಳಸಬಹುದು ಎಂಬುದನ್ನು ಆವಿಷ್ಕರಿಸಿರುವ ಮೈಸೂರಿನ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಅದನ್ನು ಪ್ರಾಯೋಗಿಕವಾಗಿ ಪ್ರದರ್ಶಿಸುವ ಮೂಲಕ ಪರಿಸರ ಸ್ನೇಹಿ ಮನೆ ನಿರ್ಮಾಣದ ಕನಸನ್ನು ಸಾಕಾರಗೊಳಿಸುವತ್ತ ಹೆಜ್ಜೆ ಹಾಕಿದ್ದಾರೆ.

ಬಿದಿರನ್ನು ಜಾಲರಿಯಾಗಿ ಪರಿವರ್ತಿಸಿ, ಕಟ್ಟದ ನಿರ್ಮಾಣದಲ್ಲಿ ಬಳಸುವ ಸ್ಲ್ಯಾಬ್‌ಗಳನ್ನು ತಯಾರಿಸಲು ಬಳಸಲಾಗುವ ಗೋಲಾಕಾರದ ಶೆಲ್ ಅನ್ನು ವಿದ್ಯಾರ್ಥಿಗಳೇ ಅಭಿವೃದ್ಧಿಪಡಿಸಿದ್ದಾರೆ. ಈ ಸ್ಲ್ಯಾಬ್‌ಗಳು 700 ಕೆ.ಜಿ ತೂಕವನ್ನು ತಡೆದುಕೊಳ್ಳಬಲ್ಲವು ಎಂದು ಪ್ರಯೋಗಾಲಯದ ಪರೀಕ್ಷೆಗಳಲ್ಲಿ ಕಂಡುಬಂದಿದೆ.

ನಿಶಾಂತ್, ಕಾರ್ತಿಕ್ ಎಂಪಿ ಮತ್ತು ಮಹೇಂದ್ರ ಹಳಮಂಡೆ ಈ ಆವಿಷ್ಕಾರವನ್ನು ಅಭಿವೃದ್ಧಿ ಪಡಿಸಿದ ವಿದ್ಯಾರ್ಥಿಗಳು.

‘ಪರಿಸರ ಸ್ನೇಹಿ ಮನೆ ನಿರ್ಮಾಣಕ್ಕಾಗಿ ಬಳಸಿದ ಶೆಲ್ ಹಗುರವಾಗಿದ್ದು, ಕಡಿಮೆ ವೆಚ್ಚ ಮಾತ್ರವಲ್ಲದೆ, ಹವಾಮಾನ ಹಾಗೂ ತುಕ್ಕು ನಿರೋಧಕವಾಗಿದೆ’ ಎಂದು ಮಾರ್ಗದರ್ಶಕರಾದ ಪ್ರಾಧ್ಯಾಪಕ ಡಾ.ಪಿ.ಕೆ. ಉಮೇಶ್ ಹೇಳಿದ್ದಾರೆ.

ಈ ಪರಿಸರ ಸ್ನೇಹಿ ಮನೆ ನಿರ್ಮಾಣಕ್ಕೆ ಬಳಸಿರುವ ಶೆಲ್ ಭೂಕಂಪ ನಿರೋಧಕವಾಗಿದೆ. ಈ ಆವಿಷ್ಕಾರವು ಬಿದಿರು ಕೃಷಿಯನ್ನು ಉತ್ತೇಜಿಸುತ್ತದೆ. ಜತೆಗೆ ಕಡಿಮೆ ಇಂಗಾಲ ಹೊರಸೂಸುವ ನಿರ್ಮಾಣ ವ್ಯವಸ್ಥೆ ಸುಸ್ಥಿರ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಪರಿಸರ ಸ್ನೇಹಿ ಅನ್ವೇಷಣೆಯ ಕುರಿತು ವಿವರಿಸಿದ ವಿದ್ಯಾರ್ಥಿ ನಿಶಾಂತ್, ‘ಒಂದು ಟನ್‌ ಉಕ್ಕು ಉತ್ಪಾದಿಸುವ ಸಲುವಾಗಿ, 2.4 ಟನ್‌ರಷ್ಟು ಇಂಗಾಲದ ಡೈ ಆಕ್ಸೈಡ್‌ ಅನ್ನು ವಾತಾವರಣಕ್ಕೆ ಹೊರಸೂಸಲಾಗುತ್ತದೆ. ಈ ಸಮಸ್ಯೆಗೆ ಪರಿಹಾರವಾಗಿ ನಾವು ಬಿದಿರು ಬಳಸಲು ಪ್ರಯತ್ನಿಸಲಾಗಿದೆ’ ಎಂದರು.

ಈ ಸ್ಲ್ಯಾಬ್‌ಗಳನ್ನು ನೀರಿನ ಟ್ಯಾಂಕ್‌ಗಳನ್ನು ಮುಚ್ಚಲು ಮತ್ತು ಕಡಿಮೆ ವೆಚ್ಚದ ಶೌಚಾಲಯಗಳಿಗೆ ಛಾವಣಿಯಾಗಿ ಬಳಸಬಹುದು ಎಂದು ವಿದ್ಯಾರ್ಥಿಗಳು ಹೇಳಿದರು.

ಇದು ಈಗಾಗಲೇ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯಿಂದ 2021 ರ ಅತ್ಯುತ್ತಮ ಯೋಜನೆ ಎಂದು ಗುರುತಿಸಲ್ಪಟ್ಟಿದ್ದು, ಈ ಆವಿಷ್ಕಾರಕ್ಕಾಗಿ ಕಾಲೇಜು ಪೇಟೆಂಟ್‌ಗಾಗಿ ಅರ್ಜಿ ಸಲ್ಲಿಸಿದೆ.

ಜನಪರ ಹಾಗೂ ಪರಿಸರ ಸ್ನೇಹಿಯಾದಂತ ಇಂತಹ ಆವಿಷ್ಕಾರಗಳು ಎಲ್ಲಾ ಕ್ಷೇತ್ರದಲ್ಲಿಯೂ ನಡೆಯಬೇಕಿದ್ದು, ಸರ್ಕಾರಗಳು ಈಂತಹ ಆವಿಷ್ಕಾರಗಳಿಗೆ ಹೆಚ್ಚು ಪ್ರೋತ್ಸಾಹ ನೀಡಲಿ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.