ಸಂಪಾದಕರ ಮಾತು| ಕಾಲದ ಪ್ರಜ್ಞೆಗಾಗಿ ವಿಜ್ಞಾನ-ತಂತ್ರಜ್ಞಾನಗಳ ಜಾಡು ಹಿಡಿದು

ಕಲೆ, ಸಾಹಿತ್ಯ ಸಂಸ್ಕೃತಿ, ಸಂಗೀತ, ಸಿನಿಮಾ, ಇತಿಹಾಸಗಳು ಹೇಗೆ ಒಂದು ಕಾಲಘಟ್ಟದ ಅಥವಾ ಸಮಕಾಲೀನ ಪ್ರಜ್ಞೆಯನ್ನು ರೂಪಿಸುವಲ್ಲಿ ಮುಖ್ಯ ಪ್ರಭಾವಗಳಾಗಿರುತ್ತವೆಯೋ, ವಿಜ್ಞಾನ ಮತ್ತು ತಂತ್ರಜ್ಞಾನಗಳು ಅಷ್ಟೇ ಮುಖ್ಯವಾಗಿರುತ್ತವೆ. ತಂತ್ರಜ್ಞಾನವು ಸಾಮಾನ್ಯನ ಬದುಕಿನಲ್ಲೂ ಅಗಾಧವಾಗಿ ಚಾಚಿಕೊಂಡಿರುವ ಈ ಹೊತ್ತಿನಲ್ಲಿ ಇನ್ನಷ್ಟು ಮಹತ್ವ ಪಡೆದುಕೊಳ್ಳುತ್ತದೆ.

ಟೆಕ್‌ ಕನ್ನಡ ನಿಮ್ಮ ಮುಂದಿದೆ. ತಂತ್ರಜ್ಞಾನ ಮತ್ತು ವಿಜ್ಞಾನ ಕ್ಷೇತ್ರ ಆಗುಹೋಗುಗಳನ್ನು, ಹೊಸ ಸಂಶೋಧನೆ, ವೈಜ್ಞಾನಿಕ ಚರ್ಚೆಗಳನ್ನು ಕುರಿತು ನಿಮ್ಮೊಂದಿಗೆ ಸಂವಾದಿಸುವ ಪ್ರಯತ್ನವಾಗಿ ಟೆಕ್‌ಕನ್ನಡ ಮೊದಲ ಹೆಜ್ಜೆಯನ್ನು ಇರಿಸಿದೆ.

ಕೇವಲ ಮಾಹಿತಿಗಷ್ಟೇ ಅಲ್ಲದೆ, ವೈಜ್ಞಾನಿಕ ಮನೋವೃತ್ತಿಯನ್ನು ಬೆಳೆಸುವ ಸಾಧ್ಯತೆಗಳನ್ನು ಕಂಡುಕೊಳ್ಳಲು ಬೇಕಾದ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರಗಳಿಗೆ ಸಂಬಂಧಿಸಿದ ಕನ್ನಡದ್ದೇ ಆದ ಒಂದು ಜಾಲತಾಣಬೇಕೆಂಬ ಅಭಿಲಾಷೆಯೇ ಟೆಕ್‌ಕನ್ನಡವಾಗಿ ರೂಪುಗೊಂಡಿದೆ.

ಕಳೆದ ನಾಲ್ಕೈದು ವರ್ಷಗಳಲ್ಲಿ ಸುಳ್ಳುಸುದ್ದಿಗಳು ಹರಡುತ್ತಿರುವ ಬಗೆ, ಅವುಗಳು ಮಾಡಿದ ಅನಾಹುತವನ್ನು ಗಮನಿಸಿದ್ದೇವೆ. ಮೊಬೈಲ್‌, ಇಂಟರ್ನೆಟ್‌, ಸೋಷಿಯಲ್‌ ಮೀಡಿಯಾಗಳು ಹೊಸ ತಂತ್ರಜ್ಞಾನದ ಭಾಗವಾಗಿ, ಎಲ್ಲರಿಗೂ ಸುಲಭವಾಗಿ ಕೈಗೆಟುಕುವಂತಾದ ಮೇಲೆ ಅದು ರಚನಾತ್ಮಕವಾಗಿ ಎಷ್ಟು ಬಳಕೆಯಾಗಿದೆಯೋ, ಅದರಷ್ಟೇ ವಿಧ್ವಂಸಕವಾಗಿ ಬಳಕೆಯಾಗಿದೆ. ತಂತ್ರಜ್ಞಾನ ಅನ್ವಯಿಕ ವಿಜ್ಞಾನವಾದದ್ದರಿಂದ, ಅದನ್ನು ಯಾವ ರೀತಿ, ಯಾವ ಕಾರಣಕ್ಕೆ ಬಳಸುತ್ತೇವೊ, ಅದರ ಫಲವನ್ನೇ ನೀಡುತ್ತದೆ. ಅಂದರೆ ಅಲ್ಲಿ ಬಳಸುವವನ ವಿಚಾರವಂತಿಕೆ, ವಿವೇಚನೆ ಅಗತ್ಯವೇ ಹೊರತೊ, ಬಳಸಲ್ಪಡುತ್ತಿರುವ ತಂತ್ರಜ್ಞಾನಕ್ಕಲ್ಲ.

ಯಾಕೆಂದರೆ ತಂತ್ರಜ್ಞಾನ ಒಂದು ಸಾಧನವೇ ಹೊರತು, ಆಲೋಚನೆಯಲ್ಲ. ವಿಧಾನವೇ ಹೊರತು, ವಿವೇಕವಲ್ಲ. ಹಾಗೆಂದ ಮಾತ್ರಕ್ಕೆ ಒಂದು ತಂತ್ರಜ್ಞಾನದ ಅಭಿವೃದ್ಧಿಯ ಹಿಂದಿರುವ ಬೌದ್ಧಿಕತೆ ಮತ್ತು ಶ್ರಮವನ್ನು ಖಂಡಿತ ಅಲ್ಲಗಳೆಯುತ್ತಿಲ್ಲ. ಆದರೆ ತೊಡಗಿಸಿಕೊಂಡ ಶ್ರಮ ಮತ್ತು ಬೌದ್ಧಿಕತೆ ಜನ ಪ್ರಜ್ಞೆಯ ಭಾಗವಾಗದೇ ಹೋದಾಗ ಅಪಾಯಗಳು ಸಂಭವಿಸುತ್ತವೆ ಎಂಬುದನ್ನು ಅಲ್ಲಗಳೆಯಲಾಗುವುದಿಲ್ಲ ಎಂಬುದನ್ನೂ ಗಮನಿಸಬೇಕಾಗುತ್ತದೆ.

ವಿಜ್ಞಾನ ಮತ್ತು ತಂತ್ರಜ್ಞಾನ ಕುರಿತ ಈ ಎಚ್ಚರ ನಮ್ಮಲ್ಲಿ ಇಲ್ಲದಿರುವುದೇ ವಾಟ್ಸ್‌ಆಪ್‌ನಲ್ಲಿ ಸುಳ್ಳು ಸುದ್ದಿಗಳು ವ್ಯಾಪಕವಾಗಿ ಹರಡುತ್ತಿರುವುದಕ್ಕೆ, ಫೇಸ್‌ಬುಕ್‌ನ ಪೋಸ್ಟ್‌ಗಳು ವೈರಲ್‌ ಆಗುತ್ತಿರುವುದಕ್ಕೆ ಕಾರಣ. ಕಲೆ, ಸಾಹಿತ್ಯ ಸಂಸ್ಕೃತಿ, ಸಂಗೀತ, ಸಿನಿಮಾ, ಇತಿಹಾಸಗಳು ಹೇಗೆ ಒಂದು ಕಾಲಘಟ್ಟದ ಅಥವಾ ಸಮಕಾಲೀನ ಪ್ರಜ್ಞೆಯನ್ನು ರೂಪಿಸುವಲ್ಲಿ ಮುಖ್ಯ ಪ್ರಭಾವಗಳಾಗಿರುತ್ತವೆಯೋ, ವಿಜ್ಞಾನ ಮತ್ತು ತಂತ್ರಜ್ಞಾನಗಳು ಅಷ್ಟೇ ಮುಖ್ಯವಾಗಿರುತ್ತವೆ. ತಂತ್ರಜ್ಞಾನವು ಸಾಮಾನ್ಯನ ಬದುಕಿನಲ್ಲೂ ಅಗಾಧವಾಗಿ ಚಾಚಿಕೊಂಡಿರುವ ಈ ಹೊತ್ತಿನಲ್ಲಿ ಇನ್ನಷ್ಟು ಮಹತ್ವ ಪಡೆದುಕೊಳ್ಳುತ್ತದೆ.

ಆದರೆ ಈ ಬಗ್ಗೆ ಎಚ್ಚರಿಸುವ, ವಿವೇಕ ರೂಪಿಸುವ, ಸಮಾಲೋಚನೆಗಳನ್ನು ಸಾಧ್ಯವಾಗಿಸುವ ಪ್ರಯತ್ನ ಕಡಿಮೆ ಎಂಬುದು ಬೇಸರದ ಸಂಗತಿ. ತಂತ್ರಜ್ಞಾನವನ್ನು ವಿಸ್ಮಯದಿಂದ ನೋಡುವ, ಬಳಕೆಯನ್ನು ಕೇಂದ್ರವಾಗಿಟ್ಟುಕೊಂಡಷ್ಟೇ ನೋಡುವ ನಮ್ಮ ಸೀಮಿತ ದೃಷ್ಟಿಕೋನ, ತಂತ್ರಜ್ಞಾನದ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಪರಿಣಾಮಗಳ ಸುತ್ತಲೂ ನಡೆಸಬಹುದಾದ ಚರ್ಚೆಗಳನ್ನು ಉಪೇಕ್ಷಿಸುತ್ತದೆ. ಮುಖ್ಯವಾಹಿನಿ ಮಾಧ್ಯಮಗಳಂತು ಯಾವುದೇ ಅನಾಹುತ ಘಟಿಸಿದೇ ತಂತ್ರಜ್ಞಾನದ ಕೇಡಿನ ಮುಖವನ್ನು ತೆರೆದಿಡುವ ಪ್ರಯತ್ನ ಮಾಡುವುದೇ ಇಲ್ಲ. ಬೆರಗಿಲ್ಲದೇ ಹೋದರೆ ಸುದ್ದಿ ಮಾಡುವುದಿಲ್ಲ.

ಈ ಹಿನ್ನೆಲೆಯಲ್ಲಿ ತಂತ್ರಜ್ಞಾನಕ್ಕಿರುವ ಹಲವು ಆಯಾಮಗಳನ್ನು ಹುಡುಕಿ ತೆಗೆಯುವ ಮತ್ತು ಕನ್ನಡದ ಓದುಗರ ಮುಂದಿಡುವ ಪ್ರಯತ್ನವನ್ನು ಟೆಕ್‌ ಕನ್ನಡ ಮಾಡಲು ಮುಂದಾಗಿದೆ. ತಂತ್ರಜ್ಞಾನ ಕ್ಷೇತ್ರದ ಜಾಗತಿಕ ವಿದ್ಯಮಾನಗಳನ್ನು, ಚರ್ಚೆಗಳನ್ನು, ಕನ್ನಡದ ಓದುಗರಿಗೆ ನೀಡಲಿದೆ.

ಜತೆಗೆ ಸ್ಥಳೀಯವಾಗಿ ಆಗುವ ಅಭಿವೃದ್ಧಿ ಕೆಲಸಗಳನ್ನು ವರದಿ ಮಾಡಲಿದೆ. ವಿಜ್ಞಾನ-ತಂತ್ರಜ್ಞಾನ ಕುರಿತು ಸಂಶೋಧನೆ, ಸಾಧನೆಗಳನ್ನು ಕನ್ನಡದ ಆಸಕ್ತರಿಗೆ ಉಣಬಡಿಸುವ ಪ್ರಯತ್ನ ಮಾಡಲಿದೆ.

ವಿದ್ಯಾರ್ಥಿಗಳು, ಯುವಕರು, ಉದ್ಯೋಗಸ್ಥರು, ಗೃಹಿಣಿಯರು, ತಂತ್ರಜ್ಞಾನ ಕ್ಷೇತ್ರದಲ್ಲಿರುವವರು, ಜ್ಞಾನ ಕುತೂಹಲಿಗಳು ಎಲ್ಲರನ್ನೂ ಗಮನದಲ್ಲಿಟ್ಟುಕೊಂಡು ಜಗತ್ತಿನ ಎಲ್ಲ ಮೂಲೆಗಳಿಂದ ಮಾಹಿತಿಯನ್ನು ತಂದು ಹಂಚಿಕೊಳ್ಳಲಿದೆ. ನೀವು ಓದಿ, ಅಭಿಪ್ರಾಯಗಳನ್ನು ತಿಳಿಸಿ, ಆಸಕ್ತರೊಂದಿಗೆ ಹಂಚಿಕೊಳ್ಳುವ ಮೂಲಕ ಈ ಪುಟ್ಟ ಪ್ರಯತ್ನವನ್ನು ಬೆಂಬಲಿಸಿ

  • ಸಂಪಾದಕ
%d bloggers like this: