ನಾನು ಸರ್ಕಾರಕ್ಕೆ ಕೆಲಸ ಮಾಡುತ್ತಿದ್ದೆ, ಈಗ ಜನರಿಗಾಗಿ ದುಡಿಯುತ್ತಿರುವೆ: ಸ್ನೋಡೆನ್‌

2013ರಲ್ಲಿ ಕೇವಲ ಅಮೆರಿಕವನ್ನಷ್ಟೇ ಅಲ್ಲ, ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿದ್ದು ಎಡ್ವರ್ಡ್‌ ಸ್ನೋಡೆನ್‌. ಅಮೆರಿಕ ಸಾಮೂಹಿಕ ಕಣ್ಗಾವಲಿಗೆ ತಯಾರಿ ನಡೆಸಿಕೊಳ್ಳುತ್ತಿದ್ದ ವಿಷಯವನ್ನು ಬಹಿರಂಗಗೊಳಿಸಿದ ದಿಟ್ಟ ಯುವಕ ಈತ. ಈಗ ತಮ್ಮ ಆತ್ಮಕಥನ ‘ಪರ್ಮನೆಂಟ್‌ ರೆಕಾರ್ಡ್‌’ ಮೂಲಕ ಸುದ್ದಿಯಲ್ಲಿದ್ದಾರೆ. ಈ ಕೃತಿಯಲ್ಲಿ ತಮ್ಮ ಈ ದಿನಗಳವರೆಗೆ ಬದುಕಿನ ಪಯಣವನ್ನು ಹಂಚಿಕೊಂಡಿದ್ದಾರೆ

“My name is Edward Joseph Snowden. I used to work for the government, but now I work for the public. It took nearly three decades to recognize that there was a distinction…”

ಆರು ವರ್ಷಗಳ ಹಿಂದೆ ಅಮೆರಿಕದ ಬಹುದೊಡ್ಡ ರಹಸ್ಯವನ್ನು ಹೊರಹಾಕಿದ ಸ್ನೋಡೆನ್‌ ಅವರ ಆತ್ಮಕಥನದ ಆರಂಭದ ಸಾಲುಗಳಿವು. ಅಮೆರಿಕದ ನಾರ್ಥ ಕ್ಯಾರೊಲಿನಾದಲ್ಲಿ 1983ರಲ್ಲಿ ಜನಿಸಿದ್ದು. ಅಜ್ಜ ಎಫ್‌ಬಿಐ, ತಂದೆ ಕೋಸ್ಟ್‌ ಗಾರ್ಡ್‌, ತಾಯಿ ಎನ್‌ಎಸ್‌ಎಯಲ್ಲಿ ಸೇವೆ ಸಲ್ಲಿಸಿದ ಕುಟುಂಬದಲ್ಲಿ ಹುಟ್ಟಿದ ಸ್ನೋಡೆನ್‌ ಸ್ವತಃ ಸೇನೆಯಲ್ಲಿ ಸೇವೆ ಆರಂಭಿಸಿದ್ದರು. ಅಪಘಾತವೊಂದರಲ್ಲಿ ಗಾಯಗೊಂಡು ಸೇನೆಯಿಂದ ಹೊರಬಂದ ಅವರು ಹೊಸ ಜವಾಬ್ದಾರಿಯನ್ನು ಹೊರುತ್ತಾರೆ. ಇಲ್ಲಿಂದ ಅವರ ಬದುಕು ಪಡೆಯುವ ತಿರುವು ಎಂಥದ್ದು ಎಂಬುದನ್ನು ಪುಸ್ತಕ ಕಟ್ಟಿಕೊಡುತ್ತದೆ.

ಹ್ಯಾಕಿಂಗ್‌ ಅನ್ನು ಬಾಲ್ಯದಲ್ಲೇ ಆರಂಭಿಸಿದ್ದ ಸ್ನೋಡೆನ್‌ ಮೊದಲು ಹ್ಯಾಕ್‌ ಮಾಡಿದ್ದು ಮಲಗುವ ಸಮಯವನ್ನಂತೆ. ಎಲ್ಲರೂ ಚಿಕ್ಕಂದಿನಲ್ಲಿ ಮಾಡುವಂತೆ ಗಡಿಯಾರದ ಸಮಯವನ್ನು ಬದಲಿಸಿ ಹೆಚ್ಚು ಕಾಲ ನಿದ್ರಿಸುವುದಕ್ಕೆ ಉಪಾಯ ಮಾಡಿದ್ದರಂತೆ. ಹರೆಯಕ್ಕೆ ಕಾಲಿಡುವ ಹೊತ್ತಿಗೆ ಶಾಲೆಯ ಪರೀಕ್ಷೆಯ ಸಿಲಬಸ್‌ ಅನ್ನು ಹ್ಯಾಕ್‌ ಮಾಡಿದ್ದರೆ, ಪರೀಕ್ಷೆಯಲ್ಲಿ ಫೇಲಾಗುವುದನ್ನು ತಪ್ಪಿಸಿಕೊಳ್ಳುವುದಕ್ಕೆ!

ಜೋಷುವಾ ಕೊಹೆನ್‌ ಅವರ ನೆರವಿನೊಂದಿಗೆ ಸಿದ್ಧವಾಗಿರುವ ಈ ಆತ್ಮಕಥನ ಮೂರು ಭಾಗಗಳನ್ನು ಹೊಂದಿದೆ. ಮೊದಲ ಭಾಗದಲ್ಲಿ ತಮ್ಮ ಬಾಲ್ಯವನ್ನು, ಇಂಟರ್ನೆಟ್‌, ಟೆಕ್‌ಲೋಕಕ್ಕೆ ತೆರೆದುಕೊಂಡ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಎರಡನೆಯ ಭಾಗವಂತು ಅಕ್ಷರಶಃ ಥ್ರಿಲ್ಲರ್‌ನಂತೆ ಓದಿಸಿಕೊಳ್ಳುತ್ತದೆ. 2013ರಲ್ಲಿ ಅಮೆರಿಕದ ರಹಸ್ಯವನ್ನು ಬಯಲು ಮಾಡಿದ ಮೇಲೆ ಹಾಂಕಾಂಗ್‌ ಹೊಟೆಲ್‌ ರೂಮಿನಲ್ಲಿ ನೆಲೆ ಕಂಡುಕೊಂಡ ಬಗೆಯನ್ನು ವಿವರಿಸಿದ್ದಾರೆ.

ಪ್ರಕಾಶನ: ಮ್ಯಾಕ್‌ಮಿಲನ್‌ ಬೆಲೆ: 699/-

ಜೂಲಿಯನ್‌ ಅಸ್ಸಾಂಜ್‌ ಅವರು ಈ ಮಾಹಿತಿಯನ್ನು ವಿಕಿಲೀಕ್ಸ್‌ ಮೂಲಕ ಬಿಡುಗಡೆ ಮಾಡಬೇಕು ಎಂಬ ಇಂಗಿತವನ್ನು ವ್ಯಕ್ತಪಡಿಸಿದ್ದರಂತೆ. ಸ್ನೋಡೆನ್‌ ಅವರ ಪ್ರಕಾರ,”ತಾವು ಹೊರಹಾಕಬಯಸಿದ್ದ ಮಾಹಿತಿಯನ್ನು ವಿಕಿಲೀಕ್ಸ್‌ ತಾಣದ ಸಂಪೂರ್ಣ ಪಾರದರ್ಶಕತೆ ಸೂಕ್ತ ಪ್ರಮಾಣೀಕರಣ ಮತ್ತು ವ್ಯವಸ್ಥೆಯನ್ನೇ ಅಲುಗಾಡಿಸುವ ದಾಖಲೆಗಳ ಪರಿಪಾಲನೆಗೆ ಅವಕಾಶ ಮಾಡಿಕೊಡುತ್ತಿರಲಿಲ್ಲ”.

ಸೆಂಟ್ರಲ್‌ ಇಂಟೆಲಿಜೆನ್ಸ್‌ ಏಜೆನ್ಸಿಗೆ ಕಾಲಿಟ್ಟ ಸಂದರ್ಭ, ಸಾಮೂಹಿಕ ಕಣ್ಗಾವಲು ಟೂಲ್‌ ಅನ್ನು ಸ್ವತಃ ಸಿದ್ಧಪಡಿಸಿದ್ದು, ಆದರೆ ಅದು ಅನಾಹುತವನ್ನೇ ಸೃಷ್ಟಿಸಲಿದೆ ಎಂದಾಗ ರಹಸ್ಯವನ್ನು ಹೊರಹಾಕಿದ್ದು, ದೇಶದ್ರೋಹದ ಆರೋಪ ಹೊತ್ತು ಈಗ ರಹಸ್ಯ ತಾಣದಲ್ಲಿರುವುದು, ಜನವಿರೋಧಿಯಾದ ಯಾವುದೇ ಸರ್ಕಾರಿ ನಿಲುವು, ನೀತಿ, ಕಾನೂನುಗಳನ್ನು ಬಯಲು ಮಾಡುತ್ತಾ ಇರುವ ಸ್ನೋಡೆನ್‌ ಬದುಕಿನ ರೋಚಕ ಸಂಗತಿಗಳನ್ನು ಈ ಕೃತಿ ಬಿಚ್ಚುಡುತ್ತದೆ.

ಬಿಡುಗಡೆಯಾದ ಹತ್ತು ದಿನಗಳಲ್ಲಿ ಅಪಾರ ಮೆಚ್ಚುಗೆ, ಟೀಕೆ ಮತ್ತು ವಿವಾದಗಳಿಗೆ ಗುರಿಯಾಗಿರುವ ಈ ಕೃತಿ, ಸ್ನೋಡೆನ್‌ ಅವರ ಬದುಕಿನ ಕಥೆಯನ್ನು ಹೇಳುವ ಜೊತೆಗೆ, ಈ ಕಾಲದ ತಂತ್ರಜ್ಞಾನ, ಸರ್ಕಾರಗಳು ಅದನ್ನು ದುಡಿಸಿಕೊಳ್ಳುವ ಬಗೆ, ಜನರ ಬದುಕಿನ ಖಾಸಗಿತನ ಹೇಗೆ ಕಸಿಯಲಾಗಿದೆ ಎಂಬ ಸಂಗತಿಯನ್ನು ಅನಾವರಣ ಮಾಡುತ್ತದೆ.

ಗೂಢಚಾರಿ, ವಿಷಲ್‌ ಬ್ಲೋವರ್‌ ಆಗಿ, ಬಹಿಷ್ಕೃತನಾಗಿ, ಇಂಟರ್‌ನೆಟ್‌ ಆತ್ಮಸಾಕ್ಷಿಯಾಗಿ ಸ್ನೋಡೆನ್‌ ಹಲವು ಅನುಭವಗಳನ್ನು ಮತ್ತು ಡಿಜಿಟಲ್‌ ಲೋಕಕ್ಕೆ ಸಂಬಂಧಿಸಿದ ಚಿಂತನೆಗಳನ್ನು ಹಂಚಿಕೊಂಡಿದ್ದಾರೆ. ಈ ಡಿಜಿಟಲ್‌ ಕಾಲದಲ್ಲಿ ಓದಲೇಬೇಕಾದ ಅತ್ಯುತ್ತಮ ಕೃತಿ ಎಂದು ಮೆಚ್ಚುಗೆ ಗಳಿಸಿಕೊಂಡಿದೆ.