ಕನ್ನಡದ ವಿಭಿನ್ನ ಕತೆಗಾರ, ಕಾದಂಬರಿಕಾರ ಕೆ ಎನ್ ಗಣೇಶಯ್ಯ ತಮ್ಮ ನಾಲ್ಕು ದಶಕಗಳ ಸಸ್ಯಲೋಕದ ಅನುಭವವನ್ನು ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಬಿ ಜಿ ಎಲ್ ಸ್ವಾಮಿಯವರ ಹಸಿರು ಹೊನ್ನು ಕೃತಿಯನ್ನು ನೆನಪಿಸುವ ಈ ಪುಸ್ತಕ ಸಸ್ಯಜಗತ್ತಿನ ಸೋಜಿಗಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿಕೊಡುತ್ತದೆ. ಈ ಕೃತಿಯ ಆಯ್ದ ಭಾಗದ ಮೊದಲ ಕಂತು ಇಲ್ಲಿದೆ
ಲೇಖನದ ಆಡಿಯೋ ಆವೃತ್ತಿ ಕೆಳಗಿದೆ. ಕ್ಲಿಕ್ ಮಾಡಿ, ಕೇಳಿ

1972ರಲ್ಲಿ ನಾಲ್ಕು ವರ್ಷಗಳ ಕೃಷಿ ಪದವಿಗಾಗಿ ಸೇರಿಕೊಂಡ ಮೇಲೆ ಕೊನೆಯ ಎರಡು ವರ್ಷಗಳ ಕಾಲ ಬಹುಪಾಲು ನನ್ನ ಒಡನಾಟ ಬೆಳೆದದ್ದು ವಾಸುಕಿ ಬೆಳವಾಡಿಯ ಜೊತೆ. ಇದಕ್ಕೆ ಬಹುಶಃ ಎರಡು ಕಾರಣಗಳು: ಒಂದು, ಬಿಎಸ್ಸಿಯ ಎರಡನೆ ವರ್ಷಕ್ಕೇ ಅವನಿಗೆ ಕೀಟಗಳ ಬಗ್ಗೆ ಇದ್ದ ಅಪಾರ ಜ್ಞಾನ ನನ್ನನ್ನು ಅತಿಯಾಗಿ ಚಕಿತಗೊಳಿಸಿತ್ತು; ಆಕರ್ಷಿಸಿತ್ತು. ಆ ಕಾರಣದಿಂದ ಹೆಬ್ಬಾಳದ ಕಾಲೇಜಿನ ಅಳ್ಳ ಕೊಳ್ಳಗಳಲ್ಲೆಲ್ಲ ಅವನ ಹಿಂದೆಯೇ ಸುತ್ತಾಡುತ್ತಿದ್ದೆ- ಅವನು ತೋರಿಸಿದ್ದನ್ನೆಲ್ಲಾ ನೋಡುತ್ತ. ಇನ್ನು ಎರಡನೆಯ ಕಾರಣ ಕ್ಷುಲ್ಲಕ ಅನಿಸಿದರೂ ನನಗೆ ಆಗ ಮುಖ್ಯವಾಗಿತ್ತು. ಆಗಿನ ಕಾಲಕ್ಕೆ ಬೆಳವಾಡಿಯಂತೆ ನಾನು ಕೂಡ ಅತೀ ಮೌನಿ. ಯಾರ ಜೊತೆಯೂ ಅಷ್ಟಾಗಿ ಮಾತನಾಡಲು ಹೆದರುತ್ತಿದ್ದೆ. ಹಾಗಾಗಿ ಮತ್ತೊಬ್ಬ ಸಂಕೋಚದ ಸ್ವಭಾವಿಯ ಜೊತೆ ಸೇರುವುದು ನನಗೆ ಅಪ್ಯಾಯವೆನಿಸಿತ್ತು.
ನಮ್ಮ ನಡುವಿನ ಈ ಸಂಬಂಧ ಗಟ್ಟಿಯಾಗಿ, ಕೀಟಗಳ ಬಗ್ಗೆ ಸಂಶೋಧನೆಯತ್ತ ನಮಗರಿವಿಲ್ಲದೆಯೆ ನನ್ನನ್ನು ಸೆಳೆದದ್ದು 1975ರ ಆಗಷ್ಟ್ ತಿಂಗಳ ಒಂದು ಮುಂಜಾನೆ ನಡೆದ ಒಂದು ಅಫೂರ್ವ ಘಟನೆ: ಅಂದು ಮುಂಜಾನೆ, ಬಹುಶಃ ಯಾರದೋ ಮಾಸ್ತರು ಕ್ಲಾಸ್ ತೆಗೆದುಕೊಳ್ಳಲಿಲ್ಲವಾಗಿ ನಾವು ಯಥಾಪ್ರಕಾರ ಕ್ಯಾಂಪಸ್ ನ ಡೈರಿಯ ಮುಂದಿನ ಕೊರಕಲುಗಳಲ್ಲಿ ಅಡ್ಡಾಡುತ್ತಿದ್ದೆವು- ಕೀಟಗಳನ್ನು ಹುಡುಕುತ್ತ. ತಕ್ಷಣ ಬೆಳ್ಳಿ (ನಮ್ಮ ಗುಂಪಿನಲ್ಲಿ ಬೆಳವಾಡಿಯನ್ನುಸಂಭೋದಿಸುತ್ತಿದ್ದದ್ದು ಹಾಗೆ) ಒಂದು ಕ್ಯಾಸಿಯ ಗಿಡದ ಬಳಿ ಏನೋ ಕಂಡವನಂತೆ ತಟಕ್ಕನೆ ನಿಂತ. ನಂತರ ಆ ಗಿಡದ ಎಲೆಯ ಮೇಲಿಂದ ಬಾವಲಿಯ ರೆಕ್ಕೆಗಳನ್ನೇ ಹೋಲುವ ಕರ್ರಗಿನ ವಸ್ತುವೊಂದನ್ನು ಕೈಗೆತ್ತಿಕೊಂಡು ಅದನ್ನು ಬಿಡಿಸಿ ನೋಡ ಹತ್ತಿದ. ಅದನ್ನು ಮುಟ್ಟಲೂ ನನಗೆ ಅಸಹ್ಯ ಅನಿಸಿತ್ತು. ಅದು ಅಷ್ಟು ಹಸಿಹಸಿಯಾಗಿ, ಮೆತ್ತಗೆ, ಬೆಲ್ಲ ಹಾಕಿ ಮಾಡಿದ ಗಟ್ಟಿಯಾದ ಅಕ್ಕಿ ಪಾಯಸದಂತೆ ಮೃದುವಾಗಿತ್ತು. ಅದನ್ನು ಕೈಲಿ ಮುಟ್ಟಲು ನನಗೆ ಹೆದರಿಕೆ ಆಗುತ್ತಿದ್ದರೆ, ಅದನ್ನು ಕಂಡು ಅವನಲ್ಲಿ ಅದೇನೋ ಉತ್ಸಾಹವಿತ್ತು. ಅದು ಏನೆಂದು ಕೇಳುವಂತೆ ಅವನ ಮುಖವನ್ನೇ ದಿಟ್ಟಿಸುತ್ತಿದ್ದೆ. ಅವ, “I think this is a female of a Lamantridae moth” ಎಂದ. ಏನೂ ತಿಳಿಯದೆ ಅದರತ್ತಲೆ ನೋಡುತ್ತಿದ್ದಂತೆ, ಮತ್ತೆ ಹೇಳಿದ.
“ಇದು ಬಹುಶಃ ಗಂಡು ಚಿಟ್ಟೆಗಳನ್ನು ಆಕರ್ಷಿಸುವ ಫೆರಮೋನ್ ಸ್ಪುರಿಸುತ್ತದೆ ಎಂದು ಓದಿದ ನೆನಪು” ಎಂದು ಅದನ್ನು ಒಂದು ಬೆಂಕಿ ಪೊಟ್ಟಣದೊಳಗೆ ಹಾಕಿಕೊಂಡು, ‘ವಿಚಾರಿಸುವ ನಡೆ’ ಎಂದು ಕೀಟಶಾಸ್ತ್ರ ವಿಭಾಗದತ್ತ ನಡೆದ.
ಮುಂಜಾನೆ ನಡೆದ ಮ್ಯಾಜಿಕ್
ಹತ್ತೇ ನಿಮಿಷದಲ್ಲಿ ಆ ವಿಭಾಗದ ಪ್ರಾಧ್ಯಾಪಕರಾಗಿದ್ದ ಡಾ ವೀರೇಶ್ ಬಳಿ ಬಂದೆವು. ಅವರಿಗೆ ಅದನ್ನು ತೋರಿಸುತ್ತ ಅದರ ಬಗ್ಗೆ ಇನ್ನೂ ಬೆಳವಾಡಿ ಯಾವ ಪ್ರಶ್ನೆಯನ್ನೂ ಕೇಳಿರಲಿಲ್ಲ. ಅವರು ತಕ್ಷಣ ಉದ್ವೇಗದಿಂದ ಹೇಳಿದರು.
“ವಾವ್. ಈಗ ಟೈಮೆಷ್ಟು? 9.40 ಅಲ್ಲವೆ? ತಕ್ಷಣ ಇದನ್ನು ಕಾಲೇಜಿನ ಹೊರಗೆ ತೆಗೆದುಕೊಂಡು ಹೋಗಿ ನಿಂತುಕೊಳ್ಳಿ. 10 ಗಂಟೆಗೆ ಸರಿಯಾಗಿ ನೀವೊಂದು ಅದ್ಭುತ ನೋಡುತ್ತೀರಿ. ಹೊರಡಿ ಹೊರಡಿ” ಎಂದು ನಮ್ಮನ್ನು ಹುರುದುಂಬಿಸಿ ಕಳುಹಿಸಿಯೇ ಬಿಟ್ಟರು. ಅವರು ಯಾವುದರ ಬಗ್ಗೆ ಹೇಳುತ್ತಿದ್ದಾರೆ ಎಂದು ತಿಳಿಯಲಿಲ್ಲ. ಅವರು ನಮ್ಮನ್ನು ಸಾಗುಹಾಕಿದ್ದನ್ನು ಕಂಡು ನಡೆಯಲಿರುವ ಯಾವುದೋ ದುರಂತವನ್ನು ತಮ್ಮಿಂದ ದೂರ ತಳ್ಳುತ್ತಿದ್ದಾರೆಯೇ ಎಂಬ ಅನುಮಾನವೂ ಬಂತು, ಆ ಅನುಮಾನದಿಂದಲೆ ಹೊರಗೆ ಹೊರಟೆವು. ಅಂತಹ ಅದ್ಭುತ ಏನಿರಬಹುದೆಂದು ಯೋಚಿಸುತ್ತ, ಅದನ್ನು ಒಂದು ಮರದ ನೆರಳಲ್ಲಿ ಇಡಲೆಂದು ಬೆಂಕಿಪೆಟ್ಟಿಗೆಯಿಂದ ಬೆಳ್ಳಿ ಆ ಹಾರಲಾರದ ಚಿಟ್ಟೆಯನ್ನು ಹೊರಗೆ ತೆಗೆಯುತ್ತಿದ್ದಂತೆ ಅವನ ಕೈಗೆ ಯಾವುದೊ ವಸ್ತು ಒಂದು ಬಡಿದು ಮಾಯವಾದಂತಾಯಿತು. ತಕ್ಷಣ ಸುತ್ತಲೂ ಗಮನಿಸಿದೆವು. ಒಂದು ಸುಂದರವಾದ ಪತಂಗ ಸುತ್ತಲೂ ಹಾರಾಡುತ್ತಿತ್ತು. ಅದು ಅವನ ಕೈಗೆ ಬಡಿದದ್ದು ಆಕಸ್ಮಿಕ ಇರಬಹುದು ಎಂದು ಕೊಳ್ಳುತ್ತಿದ್ದಂತೆ, ಅದು ಮತ್ತೆ ಅವನ ಕೈ ಮೇಲೆ ಕೂತು ಬಿರಬಿರನೆ ಓಡಾಡತೊಡಗಿತು. ಅದು ಏಕೆ ಹಾಗೆ ವರ್ತಿಸುತ್ತಿದೆ ಎಂದು ಅರ್ಥವಾಗದೆ ನೋಡುತ್ತಿದ್ದೆ. ಮರುಕ್ಷಣದಲ್ಲಿಯೆ ಮತ್ತೊಂದು ಅಂತಹದೇ ಪತಂಗ! ಮತ್ತೆ ಕೆಲವು ಸೆಕೆಂಡುಗಳಲ್ಲಿ ಸುಮಾರು ನಾಲ್ಕೈದು ಅಂತಹವೆ ಪತಂಗಗಳು .. ಎಲ್ಲವೂ ಆ ಬೆಂಕಿ ಪೆಟ್ಟಿಗೆಯ ಮೇಲೆ ದಾಳಿ ಮಾಡಿದಂತಿದ್ದವು. ನನಗಂತೂ ಏನೂ ಅರ್ಥವಾಗದೆ ಪೆಚ್ಚಾಗಿ ನೋಡುತ್ತ ನಿಂತು ಬಿಟ್ಟೆ. ತಕ್ಷಣ ಬೆಳ್ಳಿ ಹೇಳಿದ,
“ಈಗ ಈ ಪೆಟ್ಟಿಗೆಗೆ ದಾಳಿ ಮಾಡುತ್ತಿರುವ ಇವು ಗಂಡು ಚಿಟ್ಟೆಗಳು. ಬೆಂಕಿ ಪೊಟ್ಟಣದಲ್ಲಿ ನಾವು ಹಿಡಿದಿರುವ ಹಾರಲಾಗದ ಕರ್ರಗಿನ ಚಿಟ್ಟೆ ಹೆಣ್ಣು. ಅದು ಬಹುಶಃ ಫೆರಮೋನ್ ಸ್ಪುರಿಸಿ ಇವನ್ನು ಆಕರ್ಷಿಸುತ್ತಿದೆ” ಎಂದ.
ನನಗೆ ಮೊದಲು ನಂಬಿಕೆ ಬರಲಿಲ್ಲ. ಕಾರಣ ಆ ಹೆಣ್ಣು ಚಿಟ್ಟೆಗೂ ಈ ಪತಂಗಳಿಗೂ ಹೋಲಿಕೆಯೇ ಇರಲಿಲ್ಲ. ಆದರೆ ಡಾ ವೀರೇಶ್ ಅವರು ಹೇಳಿದ ‘ಅದ್ಭುತ ನಡೆಯುತ್ತದೆ’ ಎನ್ನುವುದರ ಹಿನ್ನೆಲೆ ಈಗ ಅರ್ಥವಾಯಿತು. ಆ ಹೆಣ್ಣು ತನ್ನ ಫೆರಮೋನ್ ಅನ್ನು ಸ್ಪುರಿಸಿ ಗಂಡುಗಳನ್ನು ಆಕರ್ಷಿಸಿತ್ತು. ನೋಡ ನೋಡುತ್ತಿದ್ದಂತೆ ಸರಿಸುಮಾರು 10 ಗಂಡು ಪತಂಗಗಳು ಬೆಂಕಿಪೊಟ್ಟದಲ್ಲಿದ್ದ ಹೆಣ್ಣಿನ ಸುತ್ತ ಸುತ್ತಿಕೊಂಡಿದ್ದವು.
“ಆದರೆ ಕರಾರುವಕ್ಕಾಗಿ 10 ಘಂಟೆಗೆ ಏಕೆ ಈ ಅದ್ಭುತ ನಡೆಯಬೇಕು?” ಅರ್ಥವಾಗದೆ ಕೇಳಿದ್ದೆ.
“ಹಾಗೆ ಹಲವು ಗಂಡು ಕೀಟಗಳನ್ನು ಒಟ್ಟಿಗೆ, ಒಂದೆ ಸಮಯಕ್ಕೆ ಆಕರ್ಷಿಸುವುದರಿಂದ ಅವುಗಳಲ್ಲಿ ಉತ್ತಮವಾದದ್ದನ್ನು ಈ ಹೆಣ್ಣು ಆರಿಸಿಕೊಳ್ಳಲು ಸಹಾಯವಾಗುತ್ತದೆ. ಇದನ್ನು ಸೆ಼ಕ್ಶುಯಲ್ ಸೆಲೆಕ್ಶನ್ ಎನ್ನುತ್ತಾರೆ” ಎಂದಿದ್ದ ಬೆಳ್ಳಿ.
ಆ ವಯಸ್ಸಿನಲ್ಲಿ ನಡೆದ ಆ ಘಟನೆ ನನ್ನಲ್ಲಿ ಅಚ್ಚಳಿಯದೆ ಇಂದಿಗೂ ಉಳಿಯುವುದಷ್ಟೆ ಅಲ್ಲದೆ, ನಾನು ಕೀಟಗಳಲ್ಲಿ ನಡೆಯುವ ಸ್ವಯಂವರದ ಬಗ್ಗೆ ಮತ್ತಷ್ಟು ಅಧ್ಯಯನ ಮಾಡಲು, ಅದರ ಬಗ್ಗೆ ಹಲವು ವರ್ಶಗಳ ನಂತರ ಒಂದು ಲೇಖನ ಬರೆಯಲು ಹಾಗೂ ಮುಂದೆ ನಾನು ಉಮಾಶಂಕರ್ ಜೊತೆ ಸೇರಿ ಅದೆ ಕ್ರಿಯೆಯನ್ನು ಸಸ್ಯಗಳಲ್ಲಿ ಸಾಬೀತುಪಡಿಸಲು ನಾಂದಿ ಹಾಡಿತ್ತು. ಎಲ್ಲಕ್ಕೂ ಮಿಗಿಲಾಗಿ ಬೆಳವಾಡಿಯ ಮೇಲೆ ಮತ್ತಷ್ಟು ಅಭಿಮಾನ ಬೆಳೆಯಲು ಕಾರಣವಾಗಿತ್ತು ಕೂಡ.
ಬೆಳವಾಡಿಯ ಜೊತೆಗಿನ ನನ್ನ ಒಡನಾಟದಿಂದಲೆ ನನಗೆ ‘ಸಂಶೋಧನೆ’ ಹೇಗೆ ಮಾಡಬೇಕು ಹಾಗೂ ವಿಜ್ಞಾನದ ಚಿಂತನೆ ಹೇಗಿರಬೇಕು ಎಂಬ ಬಗ್ಗೆ ಒಂದು ಕರುಡು ಚಿತ್ರಣ ಕಾಣಲು ಪ್ರಾರಂಭವಾದದ್ದು ಕೂಡ. ಎಲ್ಲಕ್ಕೂಪ್ರಮುಖವಾಗಿ, ಸಂಕೀರ್‍ಣವಾದ ಪೊದೆಗಳ ನಡುವೆ, ನೆಲದೊಳಗೆ ಗೂಡು ಕಟ್ಟಿದ್ದ ಒಂದು ಕಣಜದ ಕೀಟಗಳು ಹೊರಗೆ ದೂರಕ್ಕೆ ಹಾರಿ ಹೋಗಿ, ಹಿಂದಿರುಗಿದಾಗ ತಮ್ಮ ಗೂಡನ್ನು ಹೇಗೆ ಗುರುತಿಸುತ್ತವೆ ಎಂಬ ಬಗ್ಗೆ ಅವನ ಜೊತೆ ಸೇರಿ ಕೈಗೊಂಡ ಸರಳ ಪ್ರಯೋಗಗಳ ಮೂಲಕ, ಹಾಗೂ ಹಂತಹಂತವಾಗಿ ಆ ಕಣಜಗಳ ವರ್ತನೆಯ ವೈಖರಿಯನ್ನು ನಾವು ಬಿಡಿಸಿಟ್ಟ ಮೂಲಕ ನನಗೆ ಅವನು ಸಂಶೋಧನೆಯ ಹೆಜ್ಜೆಗಳನ್ನು, ನಿಯಮಗಳನ್ನು ತೋರಿಸಿಕೊಟ್ಟಿದ್ದ. ಹಾಗಾಗಿ ನನ್ನ ವಿಜ್ಞಾನ ಜ್ಞಾನ ಮತ್ತು ಚಿಂತನೆ ಅವನು ತೋರಿದ ಹಾದಿ ಎಂದರೆ ಅದರಲ್ಲಿ ಅಚ್ಚರಿಯಿಲ್ಲ. ದಶಕಗಳ ನಂತರ ನಮ್ಮಿಬ್ಬರ ನಡುವಿನ ಈ ಬಂಧ, ಟೈಗರ್ ಬೀಟ್ಲ್ ಎಂಬ ಜಾತಿಯ ಕೀಟಗಳ ಬಗ್ಗೆ ಮತ್ತೊಂದು ಅತ್ಯಂತ ಕುತೂಹಲಕರ ಅಧ್ಯಯನಕ್ಕೆ ಕರೆದೊಯ್ದಿತ್ತು- ಕನಕಪುರದ ‘ಸಂಗಮ’ದಲ್ಲಿ.
ಹುಲಿ-ದುಂಬಿಗಳು ತಂದಿಟ್ಟ ಸಂಕಷ್ಟ
ಆ ಸಮಯದಲ್ಲಿ ಬೆಳ್ಳಿ, ಟೈಗರ್ ಬೀಟ್ಲ್ ಎಂಬ ಜಾತಿಯ ಕೀಟಗಳ ಬಗೆಗಿನ ಅಧ್ಯಯನಕ್ಕೆ ಸಂಬಂಧಪಟ್ಟಂತೆ ಒಂದು ಸೂಕ್ಷ್ಮವಾದ ಸಂಕಟದಲ್ಲಿ ಸಿಕ್ಕಿ ಹಾಕಿಕೊಂಡಿದ್ದ. ಪ್ರಪಂಚದಾದ್ಯಂತ ಈ ವಿಶಿಷ್ಟ ಜಾತಿಯ ಬೀಟ್ಲ್ ಗಳನ್ನು ಅಧ್ಯಯನ ಮಾಡುತ್ತಿದ್ದ ಪಿಯರ್ಸನ್ ಎಂಬ ಅಮೆರಿಕದ ಕೀಟ ಶಾಸ್ತ್ರಜ್ಞ ಭಾರತದಲ್ಲಿಯೂ ಅವುಗಳನ್ನು ಸಂಗ್ರಹಿಸಿ ಅಧ್ಯಯನ ಮಾಡಲೆಂದು ನಮ್ಮ ವಿಶ್ವವಿದ್ಯಾಲಯಕ್ಕೆ ಬಂದಿದ್ದ. ಅಂದು ನಮ್ಮ ಕೀಟ ಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದ ಪ್ರೊ .ವೀರೇಶ್ ಅವರು ಆತನನ್ನು ತಮ್ಮ ಪಿಹೆಚ್‌ಡಿ ವಿದ್ಯಾರ್ಥಿಯಾಗಿದ್ದ ಬೆಳವಾಡಿಯ ಜೊತೆ ಅದರ ಬಗ್ಗೆ ಚರ್ಚಿಸುವಂತೆ ಸೂಚಿಸಿದ್ದರು. ಹಾಗಾಗಿ, ಸುಮಾರು ಒಂದು ವಾರದ ಕಾಲ ಬೆಳವಾಡಿಯ ಜೊತೆ ಹಲವಾರು ಕಡೆ ಸುತ್ತಾಡಿ ಆ ಬೀಟ್ಲ್ ಗಳನ್ನು ಸಂಗ್ರಹಿಸಿದ ಪಿಯರ್ಸನ್, ಇಲ್ಲಿನ ವೈವಿಧ್ಯತೆಗೆ ಮಾರುಹೋಗಿ, ತನ್ನ ಅಧ್ಯಯನವನ್ನು ಮತ್ತಷ್ಟು ಮುಂದುವರಿಸಲು ಯೋಚಿಸಿದ್ದ. ಅಷ್ಟರಲ್ಲಿ ಬೆಳವಾಡಿಯ ಅಧ್ಯಯನಾಸಕ್ತಿ ಮತ್ತು ಕೀಟಗಳ ಬಗ್ಗೆ ಅವನಿಗಿದ್ದ ಜ್ಞಾನದ ವ್ಯಾಪ್ತಿ ಪಿಯರ್ಸನ್ ಗೆ ಪರಿಚಯವಾಗಿತ್ತು, ಹಾಗಾಗಿ ಬೆಳವಾಡಿಯನ್ನೆ ತನ್ನ ಅಧ್ಯಯನಕ್ಕೆ ಸಹಾಯ ಹಸ್ತ ನೀಡಲು ಕೋರಿದ್ದ. ಹಾಗೂ ಅದಕ್ಕಾಗಿ ಬೆಳವಾಡಿಗೆ ಹಾಗೂ ಇನ್ನೂ ಒಬ್ಬರಿಗೆ ಅನುದಾನ ಕೊಡುವುದಾಗಿಯೂ ಅದರಿಂದ ಬಂದ ಮಾಹಿತಿಯನ್ನು ಅವರಿಬ್ಬರೂ ತಮ್ಮ ಪಿಹೆಚ್ಡಿ ಗೆ ಉಪಯೋಗಿಸಬಹುದೆಂದೂ ಸೂಚಿಸಿದ್ದ.
ಆ ಅನುದಾನವನ್ನು ಪಿಯರ್ಸನ್, ಡಾಲರುಗಳ ಲೆಕ್ಕದಲ್ಲಿ ನೀಡಲು ಮುಂದಾಗಿದ್ದ. ಹಾಗಾಗಿ ಆ ಅನುದಾನ ಅಂದಿನ ಕಾಲಕ್ಕೆ ಬಹುಪಾಲು ಪ್ರಾಧ್ಯಾಪಕರಸಂಭಳಕ್ಕಿಂತಲೂಹೆಚ್ಚೆ ಇತ್ತು ಎನ್ನಬಹುದು. ಬೇಷರತ್ ಒಬ್ಬ ವಿದ್ಯಾರ್ಥಿ ಅಷ್ಟು ಅನುದಾನ ಪಡೆಯಲು ಹೇಗೆ ಸಾಧ್ಯ ಎಂಬ ಅಚ್ಚರಿ ಹಲವರ ಕಣ್ಣು ಕುಕ್ಕಿತ್ತು. ಹಲವಾರು ಕಡೆಯಿಂದ ಎದ್ದ ಅಂತಹ ಅನುಮಾನಗಳು, ಪ್ರಶ್ನೆಗಳು ಬೆಳವಾಡಿಯ ಬೆನ್ನೇರಿ ಅವನಲ್ಲಿ ಬೇಸರ ತುಂಬಿದ್ದವು. ಎಂದಿಗೂ ಹಣಕ್ಕೆ ಬೆಲೆ ಕೊಡದ ಅವ ಹೀಗೆ ಬೆನ್ನತ್ತಿದ್ದ ಬೇಸರವನ್ನು ನೀಗುವ ಒಂದೆ ಮಾರ್ಗ ಎಂದರೆ ಆ ಅನುದಾನವನ್ನೆ ತಿರಸ್ಕರಿಸುವುದು ಎಂದು ತೀರ್ಮಾನಿಸಿ ಬಿಟ್ಟ.
ಆದರೆ ಅತ್ತ ಪಿಯರ್ಸನ್ ಇದರಿಂದ ಬೇಸರಗೊಂಡಿದ್ದ. ಹೇಗಾದರೂ ಬೆಳವಾಡಿ ಈ ಅಧ್ಯಯನದ ಒಂದು ಭಾಗವಾಗಲೇ ಬೇಕು ಎಂದು ಮತ್ತೆ ಮತ್ತೆ ಒತ್ತಾಯಿಸುತ್ತಿದ್ದ. ಆಗ ಬೆಳವಾಡಿ ಒಂದು ತೀರ್ಮಾನಕ್ಕೆ ಬಂದ: ತಾನು ಬೀಟಲ್ಗಳ್ ಬಗ್ಗೆ ಸಂಶೋಧನೆ ಕೈಗೊಳ್ಳುವುದಾಗಿಯೂ, ಅದರ ಮೇಲ್ವಿಚಾರಿಕೆಯನ್ನು ನೋಡಿಕೊಳ್ಳಲು ಸಿದ್ಧವಿರುವುದಾಗಿಯೂ, ಆದರೆ ತನ್ನ ಪಿಹೆಚ್ಡಿ ಪ್ರಭಂದಕ್ಕಾಗಿ ಅದನ್ನು ಉಪಯೋಗಿಸಲಾರೆ ಎಂದೂ, ಹಾಗೂ ತಾನು ಆತನ ಅನುದಾನವನ್ನೂ ಸ್ವೀಕರಿಸಲಾರೆ ಎಂದೂ ತಿಳಿಸಿ ಬಿಟ್ಟ.
ತಿಳಿಸಿದ್ದೇನೋ ಆಯಿತು.
ತಾನು ಪಿಹೆಚ್ಡಿ ಗೆ ಮತ್ತೊಂದು ವಿಷಯವನ್ನು ಆಯ್ಕೆ ಮಾಡಿಕೊಂಡದ್ದೂ ಆಯಿತು.
ಆದರೆ ಅವನ ಸೆಳೆತವೆಲ್ಲ ಆ ಬೀಟ್ಲ್ ಗಳ ಮೇಲೆಯೇ ಇತ್ತು. ಅಲ್ಲದೆ ಪಿಯರ್ಸನ್ ಗೆ ಮಾತು ಕೊಟ್ಟಂತೆ ತಾನು ಆ ಕೀಟಗಳ ಮೇಲೆ ಅಧ್ಯಯನ ಮಾಡುವುದನ್ನೂ ಮುಂದುವರಿಸಬೇಕಿತ್ತು. ಹಾಗೆಂದೆ, ಎಲ್ಲಿ ಹೋದರೂ ತನ್ನ ಜೊತೆಗೆ ಸದಾ ಒಯ್ಯುತ್ತಿದ್ದ ಒಂದೆರಡು ಕೀಟನೆಟ್ ಗಳನ್ನು ಅಂದು ಸಂಗಮಕ್ಕೂ ತಂದಿದ್ದ- ಆ ಬೀಟ್ಲ್ ಗಳನ್ನು ಸಂಗ್ರಹಿಸುವ ಸಲುವಾಗಿ.
ಇದನ್ನೂ ಓದಿ | ಸಸ್ಯಲೋಕದ ಸೋಜಿಗಗಳನ್ನು ಅನಾವರಣ ಮಾಡುವ ಗಣೇಶಯ್ಯ ಅವರ ‘ಸಸ್ಯ ಸಗ್ಗ’ | ಭಾಗ 2
ಇದನ್ನೂ ಓದಿ | ಗಣೇಶಯ್ಯ ಅಗಾಧ ಸಂಶೋಧನಾ ಪ್ರತಿಭೆ, ಅದ್ಭುತ ಕತೆಗಾರ| ಒಡನಾಡಿಗಳ ಮೆಲುಕು
ಅಂದು ಸುಮಾರು ಎಂಟು ಗಂಟೆಗೆ ನೆಟ್ ಹಿಡಿದು ಕಾವೇರಿ ನದಿಯಗುಂಟ ಹೊರಟ ಬೆಳ್ಳಿ ಐದೆ ನಿಮಿಷದಲ್ಲಿ ಖುಷಿಯಾಗಿ ಟೆಂಟ್ ಗೆ ಹಿಂದುರಿಗಿದ್ದ- ವಿಷದ ಶೀಷೆಗಾಗಿ. ಅವನ ನೆಟ್ ನಲ್ಲಿ ಒಂದು ಹುಲಿ-ದುಂಬಿ ಸೆರೆಯಾಗಿತ್ತು. ಅದನ್ನು ನೆಟ್ ಬೀಸಿ ಹಿಡಿಯುವ ಮುನ್ನ ದೂರದಿಂದ ಗಮನಿಸಿದ್ದ ಬೆಳ್ಳಿಗೆ ಅದು ಈಗಾಗಲೆ ತನಗೆ ಬೇರೆಡೆ ದೊರಕಿರುವ ಪ್ರಭೇದಗಳಿಗಿಂತ ಭಿನ್ನವಾಗಿದೆ ಎನಿಸಿತ್ತು. ಅದನ್ನು ದೃಡಪಡಿಸಿಕೊಳ್ಳಲು ಸೂಕ್ಷ್ಮವಾಗಿ ಪರಿಶೀಲಿಸಬೇಕಿತ್ತು. ಹಾಗೆಂದು ಅದನ್ನು ನೆಟ್ ಒಳಗಿಂದ ಕೈಯಲ್ಲಿ ಹಿಡಿಯಲು ಪ್ರಯತ್ನಿಸಿದರೆ ಎಲ್ಲಿ ತಪ್ಪಿಸಿಕೊಳ್ಳುವುದೊ ಎಂದು ಹೆದರಿ ಅದನ್ನು ವಿಷದ ಶೀಷೆಗೆ ವರ್ಗಾಯಿಸಿ, ನಂತರ ಸಾವಕಾಶವಾಗಿ ಪರಿಶೀಲಿಸಲೆಂದು ಟೆಂಟ್ ಕಡೆಗೆ ಓಡಿ ಬಂದಿದ್ದ. ಶೀಷೆಗೆ ವರ್ಗಾಯಿಸಿದ ಕೆಲವೇ ಕ್ಷಣಗಳಲ್ಲಿ ಅವನಿಗೆ ತನ್ನ ನಂಬಿಕೆ ದೃಡವಾಗಿತ್ತು. ಅವನ ಸಂಗ್ರಹದಲ್ಲಿ ಈವರೆಗೆ ಕಾಣದ ಹುಲಿ-ದುಂಬಿಯ ಪ್ರಭೇದವೊಂದು ಸಿಕ್ಕಿತ್ತು. ಅದರ ಬಗ್ಗೆ ಸಂಪೂರ್ಣ ಅಧ್ಯಯನ ಕೈಗೊಳ್ಳಲು ಅವನಿಗೆ ಅದೇ ಪ್ರಭೇದದ ಇನ್ನೂ ಕೆಲವು ದುಂಬಿಗಳು ಬೇಕಿದ್ದವು. ಅಷ್ಟರಲ್ಲಿ 9.00 ಘಂಟೆಯಾಗಿತ್ತು. ಇನ್ನು ಒಂದು ಘಂಟೆಯಲ್ಲಿ ನಾವು ಕಾವೇರಿಯ ಆ ಮರಳ ದಂಡೆಗಳಿಂದ ಸುಮಾರು ಮೂರು ಕಿ.ಮೀ ದೂರದಲ್ಲಿರುವ ಸಂಗಮದತ್ತ ಹೊರಡಬೇಕಿತ್ತು-ನಮ್ಮಿಬ್ಬರ ಸಂಗಾತಿಗಳಾಗಿದ್ದ ವೀಣಾ ಮತ್ತು ಪಾರ್ವತಿಯರನ್ನು ಕರೆತರಲು. ಕಾರಣ, ಅಂದು ಅವರನ್ನು ಸಂಗಮಕ್ಕೆ ವಿಶೇಷವಾಗಿ ಆಹ್ವಾನಿಸಿದ್ದೆವು. ಹಾಗಾಗಿ ಆತುರದಲ್ಲಿ ಹೇಳಿದ:
“ನನಗೆ ಇನ್ನೂ ಒಂದಿಷ್ಟು ಈ ಪ್ರಭೇದದ ಕೀಟಗಳು ಬೇಕು.ನೀನೂ ಒಂದುನೆಟ್ ಎತ್ತಿಕೊಂಡು ನಡಿ- ಆ ಮರಳರಾಶಿಯತ್ತ” ಎಂದ. ಅಂತೆಯೇ ನಾನೂ ಅವನ ಜೊತೆಯಾದೆ. ಸುಮಾರು 10-15 ನಿಮಿಷಗಳ ಹುಡುಕಾಟದಲ್ಲಿ ನನಗೆ ಆ ವಿಭಿನ್ನ ಕೀಟ ಮರಳ ಮೇಲೆ ಕೂತಿರುವುದನ್ನು, ಅವು ಕ್ಷಿಪ್ರ ಗತಿಯಲ್ಲಿ ಹಾರುವುದನ್ನು ದೂರದಿಂದಲೆ ತೋರಿಸಿದ. ಇಬ್ಬರೂ ಅವನ್ನು ಹಿಡಿಯಲು ಮುಂದಾದೆವು. ಆದರೆ ಸುಮಾರು ಮುವತ್ತು ನಿಮಿಷ ಪ್ರಯತ್ನಿಸಿದರೂ ಇಬ್ಬರಿಗೂ ಒಂದೂ ಸಿಗಲಿಲ್ಲ! ಹತ್ತು ಗಂಟೆಯಾಗುತ್ತಿದ್ದಂತೆ ನಾವು ನಮ್ಮ ಹುಡುಕಾಟ ನಿಲ್ಲಿಸಬೇಕಾಗಿ ಬಂತು- ಅವರಿಬ್ಬರನ್ನು ಕರೆತರಲು.
Amazing and very interesting narration.Thanks to Dr Ganeshaiah for revealing and acknowledging the scientific temperament and Research mindset that Vasuki (Belavadi) was found to be possessing at the undergraduate level itself! Great and you have made me feel proud of him