ಕನ್ನಡದ ವಿಭಿನ್ನ ಕತೆಗಾರ, ಕಾದಂಬರಿಕಾರ ಕೆ ಎನ್ ಗಣೇಶಯ್ಯ ತಮ್ಮ ನಾಲ್ಕು ದಶಕಗಳ ಸಸ್ಯಲೋಕದ ಅನುಭವವನ್ನು ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಬಿ ಜಿ ಎಲ್ ಸ್ವಾಮಿಯವರ ಹಸಿರು ಹೊನ್ನು ಕೃತಿಯನ್ನು ನೆನಪಿಸುವ ಈ ಪುಸ್ತಕ ಸಸ್ಯಜಗತ್ತಿನ ಸೋಜಿಗಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿಕೊಡುತ್ತದೆ. ಈ ಕೃತಿಯ ಆಯ್ದ ಭಾಗದ ಎರಡನೆಯ ಕಂತು ಇಲ್ಲಿದೆ

ವೀಣಾ ಮತ್ತು ಪಾರ್ವತಿಯರನ್ನು ನಮ್ಮ ಟೆಂಟ್ ಗಳ ಬಳಿ ಕರೆತಂದು, ಅವರನ್ನು ಅಡುಗೆ ಒಲೆಯ ಬಳಿಬಿಟ್ಟು ನಾವು ಮತ್ತೆ ಆ ಕೀಟದ ಬೇಟೆಯಲ್ಲಿ ತೊಡಗಿಕೊಂಡೆವು. ಸುಮಾರು 10 ನಿಮಿಷದ ನಂತರ ನೀರಿಗಾಗಿ ಪಾತ್ರೆ ಹಿಡಿದು ನದಿಯತ್ತ ಹೊರಟಿದ್ದ ಪಾರ್ವತಿ ಮತ್ತು ವೀಣಾ ನಮ್ಮ‘ ಬೀಟ್ಲ್ ಬೇಟೆಯ ಸಾಹಸ’ವನ್ನು ಸೂಕ್ಷ್ಮವಾಗಿ ಗಮನಿಸತೊಡಗಿದರು. ಎರಡೇ ಕ್ಷಣದಲ್ಲಿ ವೀಣಾ ನಗತೊಡಗಿದ್ದಳು. ಕಾರಣ ಸರಳವಾಗಿತ್ತು: ಬೆಳ್ಳಿ ಒಂದು ಕೀಟವನ್ನು ಕಂಡು ಅದನ್ನು ತೋರಿಸಿ ಹಿಡಿಯಲೆಂದು ಮುಂದಾಗಿ ನೆಟ್ ಬೀಸುತ್ತಿದ್ದಂತೆ ಅಷ್ಟೇ ಉತ್ಸುಕತೆಯಿಂದ ನಾನೂ ಅದರತ್ತ ನೆಟ್ ಬೀಸುತ್ತಿದ್ದೆ. ಈ ಜುಗಲ್ಬಂದಿಯಲ್ಲಿ ಅದು ಇಬ್ಬರಿಗೂ ಸಿಗದೆ ತಪ್ಪಿಸಿಕೊಳ್ಳುತ್ತಿತ್ತು. ಅದನ್ನು ಕಂಡ ವೀಣಾ,
“ಹೇ ಬೆಳವಾಡಿ ನೀವು ಸುಮ್ಮನೇ ಒಬ್ಬರೆ ಪ್ರಯತ್ನಿಸಿ, ಈ ತಿರುಪಳ್ಳಿಯ (ಇದು ನಮ್ಮ ತಂದೆ ನನಗೆ ಕೊಟ್ಟಿದ್ದ ಅಡ್ದ ಹೆಸರು. ‘ಕೂತಕಡೆ ಕೂಡದವ’ ‘ಎಲ್ಲರಿಗೂ ಗಾಬರಿ ಪಡಿಸುವವ’ ‘ಕೈಗೆ ಸಿಗದಂತೆ ಯಡ್ಡಾದಿಡ್ಡಿ ಓಡಾಡುವವ’.. ಹೀಗೆ ಹಲವು ಗುಣಾವಶೇಷಗಳನ್ನು ಹೊಂದಿರುವ ಈ ನಾಮಧೇಯದ ಮೂಲ ನನಗೆ ತಿಳಿಯದು. ) ಜೊತೆ ಅವನ್ನು ಹಿಡಿಯಲು ಹೋದರೆ ನಿಮಗೆ ಒಂದೂ ಸಿಗುವುದಿಲ್ಲ; ಎಲ್ಲ ಕೀಟಗಳನ್ನೂ ಓಡಿಸಿ ಬಿಡುತ್ತಾರೆ” ಎಂದಳು. ಬಹುಶಃ ಬೆಳ್ಳಿಗೂ ಅಷ್ಟರಲ್ಲಿ ಅದರ ಜ್ಞಾನೋದಯವಾಗಿತ್ತು ಅನಿಸುತ್ತೆ. ಹಿಂಜರಿಯುತ್ತಲೆ,“ಹೌದು. ನೀನು ಸುಮ್ಮನಿರು ನಾನು ಹಿಡಿಯುತ್ತೇನೆ. ನೀನು ಅವರ ಜೊತೆ ಹೋಗಿ ನೀರು ತರಲು ಸಹಾಯ ಮಾಡು” ಎಂದು ನನ್ನನ್ನು ಅವರೊಂದಿಗೆ ಕಳುಹಿಸಿದ.
ನನಗೋ ಖುಷಿ; ನಾವು ಅವರನ್ನು ಅಲ್ಲಿಗೆ ಕರೆದಿರುವುದೇ ಜೊತೆಯಲ್ಲಿರಲು ಅಲ್ಲವೆ? ಆದ್ದರಿಂದ ಸಂತೋಷದಿಂದಲೆ ನಾನು ಅವರ ಜೊತೆಯಾದೆ- ನದಿಯ ದಡದಲ್ಲಿ ನನಗೊಂದು ಗೋಲ್ಡ್ ರಷ್ ಕಾದಿದೆ ಎಂಬುವುದರ ಅರಿವಿಲ್ಲದೆ!
ಕಾವೇರಿಯ ಮಡಿಲಲ್ಲಿ ಕಂಡ ಅದ್ಭುತ
ನದಿಯ ಬಳಿ ಪಾತ್ರೆಗಳಲ್ಲಿ ಸ್ವಚ್ಚವಾದ ನೀರು ತುಂಬಿಸಿಕೊಳ್ಳಲು ಅವರು ಹರಿಯುವ ನೀರಿನಲ್ಲಿ ಕೆಲವು ಹೆಜ್ಜೆಗಳಷ್ಟು ಒಳಗೆ ಹೋಗಲೇಬೇಕಿತ್ತು. ಆ ಸಾಹಸಕ್ಕೆ ವೀಣಾ ಮುಂದಾದಂತೆ ರಕ್ಷಣೆಗೆಂದು ನಾನು ಅವಳ ಜೊತೆಯಾಗಿದ್ದೆ. ಆಗ ದಡದಲ್ಲಿ, ನೀರಿನ ಅಂಚಿನಲ್ಲಿ ಕುಳಿತಿದ್ದ ಪಾರ್ವತಿ ಇದ್ದಕ್ಕಿದ್ದಂತೆ, “ಗಣೇಶಯ್ಯ ಎಲ್ಲಿ ನಿಮ್ಮ ಕೀಟ ಹಿಡಿಯುವ ನೆಟ್ ಕೊಡಿ” ಎಂದಳು. ಏಕಿರಬಹುದೆಂದು ತಿಳಿಯದೆ ದೂರದಿಂದಲೆ ನನ್ನ ಕೈಲಿದ್ದ ನೆಟ್ ಅನ್ನು ಆಕೆಯತ್ತ ಎಸೆದೆ. ಆದರೆ ಅದು ಆಕೆಗೆ ಸರಿಯಾಗಿ ಸಿಗದೆ ನೀರಿಗೆ ಬಿದ್ದು ಸಂಪೂರ್ಣವಾಗಿ ನೆನೆದು ಹೋಯಿತು. ತಕ್ಷಣ ಅದನ್ನು ಎತ್ತಿ, ಹೊರಗೆ ಒಣಗಲು ಬಿಟ್ಟು, ಪಾರ್ವತಿಯ ಬಳಿ ಹೋಗಿ ‘ನೆಟ್ ಏಕೆ ಬೇಕಿತ್ತು?’ ಎಂದು ಪ್ರಶ್ನಿಸುವಂತೆ ನೋಡಿದೆ. ಅಕೆ ನೀರಿನ ದಡದತ್ತ ತನ್ನ ಕೈ ತೋರಿಸಿದಳು. ಅಲ್ಲಿ ಕಂಡದ್ದನ್ನು ನಂಬಲಾಗಲಿಲ್ಲ. ಅಲ್ಲಿ ಹಲವಾರು ಹುಲಿದುಂಬಿಗಳು, ಬಹುಶಃ ಎರಡೇ ಮೀಟರುಗಳ ಅಂತರದಲ್ಲಿ ಹತ್ತಿಪ್ಪತ್ತು ಹುಲಿದುಂಬಿಗಳು, ಎಲ್ಲ ಕಡೆಯೂ ಹಾರಾಡುತ್ತಿದ್ದವು. ತಕ್ಷಣ ಬೆಳ್ಳಿಯತ್ತ ನೋಡಿದೆ. ಅವ ದೂರದಲ್ಲಿ, ಬಿಸಿಲಿಗೆ ಬೆಂದಿದ್ದ ಮರಳ ರಾಶಿಗಳಮೇಲೆ ಎಲ್ಲೋ ಒಮ್ಮೊಮ್ಮೆ ಕಾಣುತ್ತಿದ್ದ ದುಂಬಿಗಳನ್ನು ಹುಡುಕಾಡುತ್ತ, ಅಕಸ್ಮಾತ್ ಕಂಡಾಗ ನೆಟ್ ಬೀಸುತ್ತ ಹಿಡಿಯಲೆಂದು ಹಾರಿ, ಅವುಗಳ ಬೇಟೆಯಲ್ಲಿ ನಿರತನಾಗಿದ್ದ.ಇಲ್ಲಿ ನೀರಿನ ತಂಪು ಮರಳ ಮೇಲೆ ಎತ್ತ ನೋಡಿದರೂ ಹತ್ತಾರು ದುಂಬಿಗಳು.
ತಕ್ಷಣ ನನ್ನ ತುಟಿಯ ಮೇಲೆ ಬೆರಳಿಟ್ಟು ಪಾರ್ವತಿಗೆ ಸುಮ್ಮನಿರುವಂತೆ ಸೂಚಿಸಿ ನಾನು ನನ್ನ ಬೇಟೆಯಲ್ಲಿ ತೊಡಗಿದೆ. ಆದರೆ ಕೈಯಲ್ಲಿ ನೆಟ್ ಇಲ್ಲ. ಆದರೇನಂತೆ ಎಂದು ಅವು ಕಂಡಕಡೆಗೆ ಡೈವ್ ಮಾಡಿದಂತೆ ಹಾರಿ ಮರಳ ಮೇಲೆ ದೊಪ್ಪನೆ ಬಿದ್ದು ಮರಳ ಸಹಿತ ಹಿಡಿಯಲು ಪ್ರಯತ್ನಿಸಿದೆ. ನನ್ನ ಅದೃಷ್ಟಕ್ಕೆ ಮೊದಲ ಪ್ರಯತ್ನದಲ್ಲಿಯೆ ಒಂದು ದುಂಬಿ ನನ್ನ ಮುಷ್ಟಿಯ ಕೆಳಗೆ ಮರಳಲ್ಲಿ ಸಿಕ್ಕಿ ಹಾಕಿಕೊಂಡು ಬಹುಪಾಲು ಸತ್ತು ಒದ್ದಾಡುತ್ತಿತ್ತು. ಸೂಕ್ಷ್ಮವಾಗಿ ಪಾರ್ವತಿ ಮತ್ತು ನಾನು ಗಮನಿಸಿದೆವು. ಹೌದು ಅದು ಹುಲಿ-ದುಂಬಿಯೆ ಸರಿ. ಹಾಗೆಯೆ ಸುಮಾರು ಎಂಟತ್ತು ಬಾರಿ ದೊಪ್ಪನೆ ಬಿದ್ದು ಸುಮಾರು ನಾಲ್ಕೈದು ಕೀಟಗಳನ್ನು ಹಿಡಿದೆ. ನಂತರ ಅವರಿಬ್ಬರ ಜೊತೆ ಹೆಮ್ಮೆಯಿಂದ ಬೀಗುತ್ತ ಬೆಳ್ಳಿಯತ್ತ ನಡೆದೆ. ಏನನ್ನೋ ಸಾಧಿಸಿದವನಂತೆ ಅವನ ಮುಂದೆ ನಿಂತು ನನ್ನ ಮುಷ್ಟಿಯಲ್ಲಿದ್ದ ದುಂಬಿಗಳನ್ನು ತೋರಿಸಿದೆ. ಅವನ್ನು ನೋಡುತ್ತಿದ್ದಂತೆಯೆ ಅವನ ಮುಖದಲ್ಲಿ ಏನೋ ಗೊಂದಲ ಕಂಡಿತು. ಒಂದೇ ಕ್ಷಣದಲ್ಲಿ ಹೇಳಿದ.
“ಇವು ಎಲ್ಲಿಯವು? ಇವು ನಾನು ಹುಡುಕುತ್ತಿರುವ ಹುಲಿ ದುಂಬಿಯ ಪ್ರಭೇದಗಳಲ್ಲ. ಬೇರೆ ಪ್ರಭೇದಗಳು” ಎಂದ!
“ಅಂದರೆ?”
ಅಷ್ಟರಲ್ಲಿ ಅವನು ಅಲ್ಲಿ ತಾನು ಹಿಡಿಯ ಬೇಕಿದ್ದ ಪ್ರಭೇದದ ನಾಲ್ಕೈದು ದುಂಬಿಗಳನ್ನು ಹಿಡಿದು ತನ್ನ ಬಳಿಯಿದ್ದ ವಿಷದ ಶೀಶೆಗೆ ಸೇರಿಸಿದ್ದ ಕೂಡ. ಅವನ್ನೂ ತೋರಿಸುತ್ತ ಅವೆರಡರ ನಡುವೆ ಇದ್ದ ವ್ಯತ್ಯಾಸದ ಬಗ್ಗೆ ನಮ್ಮ ಗಮನ ಸೆಳೆದ. ನಾನು ನಡೆದದ್ದನ್ನೆಲ್ಲ ವಿವರಿಸಿದೆ.
“ಅಂದರೆ ಇವು, ನೀನು ತಂದಿರುವ ಹುಲಿದುಂಬಿಗಳು ನದಿಯ ದಡದಲ್ಲಿವೆ. ಆದರೆ ಇಲ್ಲಿ ಮರಳರಾಶಿಗಳ ಮೇಲೆ ಇಲ್ಲ?” ಎಂದ ಪ್ರಶ್ನಿಸುವಂತೆ.
“ಅಷ್ಟೆ ಅಲ್ಲ. ನೀನು ಹುಡುಕುತ್ತಿರುವ ಪ್ರಭೇದದ ದುಂಬಿಗಳು ಅಲ್ಲಿ ನೀರಿನ ಅಂಚಿನಲ್ಲಿ ಇಲ್ಲ ಅನಿಸುತ್ತೆ” ಎಂದೆ. ಅದನ್ನು ಖಚಿತಪಡಿಸಿಕೊಳ್ಳಲು ಇಬ್ಬರೂ ನೀರಿನತ್ತ ಓಡಿದೆವು.
ನೀರಿನ ಅಂಚಿಗೆ ಬಂದುಸುಮಾರು 10-15 ನಿಮಿಷಗಳವರೆಗೆ ಎಷ್ಟೆ ಹುಡುಕಿದರೂ ಬಿಸಿಮರಳ ಮೇಲಿದ್ದ ಪ್ರಭೇದ ಅಲ್ಲಿ ಸಿಗಲಿಲ್ಲ. ಆದರೆ ನಾವು ಕಂಡ ಪ್ರಭೇದದ ಸಾಕಷ್ಟು ದುಂಬಿಗಳು ಸುಲಭವಾಗಿ ಕಂಡವು. ಅಂದರೆ ಕೆಲವೇ ಮೀಟರುಗಳ ದೂರದಲ್ಲಿ, ಬಿಸಿಯಾದ ಮರಳಮೇಲಿದ್ದ ಹುಲಿದುಂಬಿಯ ಪ್ರಭೇದವು ನದಿಯ ನೀರಿನಿಂದ ತಂಪಾಗಿದ್ದ ಮರಳ ಎಳೆಯ ಮೇಲೆ ಇರಲಿಲ್ಲ. ಹಾಗೆಯೇ ಈ ತಂಪಾದ ಮರಳ ಮೇಲಿದ್ದ ಪ್ರಭೇದ ಅಲ್ಲಿ ಬಿಸಿ ಮರಳ ಮೇಲಿರಲಿಲ್ಲ. ಇಬ್ಬರೂ ಒಬ್ಬರನ್ನೊಬ್ಬರು ದಿಟ್ಟಿಸಿ ನೋಡಿಕೊಂಡೆವು. ನಾವು ಬಹುಶಃ ಆ ಕೀಟಗಳಲ್ಲಿನ ಒಂದು ಅದ್ಭುತ ವ್ಯವಸ್ಥೆಯನ್ನು ಕಂಡುಕೊಂಡಿದ್ದೆವು. ಪರಿಸರ ವಿಜ್ಞಾನದ ಒಂದು ಪ್ರಮುಖ ಸಿದ್ದಾಂತಕ್ಕೆ ಈ ದುಂಬಿಗಳು ಪುರಾವೆಯನ್ನು ನಮ್ಮ ಮುಂದೆ ತೆರೆದಿಟ್ಟಿದ್ದವು. ಇನ್ನೂ ವಿಚಿತ್ರವೆಂದರೆ, ನದಿಯ ನೀರಿನ ತೇವಾಂಶವನ್ನು ಹೊತ್ತ ಆ ಮರಳ ಎಳೆ ನದಿಯ ಹರಿತದ ಉದ್ದಕ್ಕೂ ಇದ್ದರೂ ಅದರ ಅಗಲ ಕೇವಲ ಎರಡು ಅಡಿಯಷ್ಟು ಮಾತ್ರವೆ. ಅಂದರೆ ಆ ಪ್ರಭೇದ ಆ ಎರಡೇ ಎರಡು ಅಡಿಯ ಅಗಲದ ತೇವಾಂಶದ ವ್ಯಾಪ್ತಿಯಲ್ಲಿ ಮಾತ್ರವೆ ಜೀವಿಸುವಂತೆ ವಿಕಾಸಗೊಂಡಿವೆ ಎಂದರ್ಥ.
ಹಾಗೆಯೆ, ಬಿಸಿ ಮರಳ ಮೇಲೆ ಕಾಣಸಿಗುವ ಪ್ರಭೇದ ಎಲ್ಲಿ ಪ್ರಾರಂಭವಾಗಿ ಎಲ್ಲಿ ಕೊನೆಯಾಗುತ್ತದೆ ಎಂದು ತಿಳಿಯಲು ಅಂದೆ, ನಮ್ಮ ಪ್ರೇಯಸಿಯರ ಸಹಾಯ ಪಡೆದು ಒಂದು ಕ್ಷಿಪ್ರ ಸಮೀಕ್ಷೆ ನಡೆಸಿದೆವು. ಆ ಪ್ರಭೇದದ ವ್ಯಾಪ್ತಿ ಬಹುಪಾಲು ತೇವಾಂಶದ ಮರಳಿನ ಹೊರ ಅಂಚಿನಿಂದಲೇ ಪ್ರಾರಂಭವಾದರೂ ಬಿಸಿ ಮರಳ ರಾಶಿಗಳ ಮೇಲೆ ಹೋದಂತೆ ಅವುಗಳ ಸಂಕ್ಯೆ ಹೆಚ್ಚಾಗುತ್ತಿರುವುದು ಕಂಡಿತು. ಹಾಗೂ, ಆ ನದಿಯ ಅಂಚಿನಿಂದ ಸುಮಾರು 20 ರಿಂದ 30 ಮೀಟರುಗಳಷ್ಟು ದೂರದಲ್ಲಿ ಮರಳು ಮರೆಯಾಗಿ ಕಾಡು ಪ್ರಾರಂಭವಾಗುತ್ತಿದ್ದಂತೆ, ಆ ಪ್ರಭೇದ ಮಾಯವಾಗುತ್ತಿತ್ತು! ಹಾಗಿದ್ದರೆ ಕಾಡಿನ ಮರಗಳ ನೆರಳಲ್ಲಿ ಮತ್ತೊಂದು ಪ್ರಭೇದ ಇರಬಹುದೆ? ಅದೆಲ್ಲವನ್ನೂ ತಿಳಿಯಲು ಒಂದು ವಿಶದವಾದ ಅಧ್ಯಯನದ ಅವಶ್ಯಕತೆ ಇತ್ತು. ಅಂಥ ಒಂದು ಅಧ್ಯಯನದ ಬಗ್ಗೆ ಯೋಚಿಸಿಕೊಂಡು ಅಂದಿಗೆ ನಮ್ಮ ಹುಡುಕಾಟಕ್ಕೆ ಅಂತ್ಯ ಹಾಡಿದೆವು.
ಹುಲಿದುಂಬಿಗಳ ‘ಮಾರೀಚ’ ವೇಷ
ಅಲ್ಲಿಂದ ಹಿಂದಿರುಗುತ್ತಿದ್ದಾಗ ನಮ್ಮಎಕ್ಜೈಟ್ ಮೆಂಟ್ ಮೇರೆ ಮೀರಿತ್ತು. ಒಂದು ಅದ್ಭುತ ವ್ಯವಸ್ಥೆಯನ್ನು ಅನಾವರಣ ಮಾಡುತ್ತಿರುವ ಸಂತೋಷದ ಜೊತೆಗೆ, ನಮ್ಮ ಪ್ರೇಯಸಿಯರೂ ಅದಕ್ಕೆ ಸಾಕ್ಷಿಯಾಗಿದ್ದು ನಮ್ಮ ಸಂತೋಷವನ್ನು ನೂರ್ಮಡಿಗೊಳಿಸಿತ್ತು. ಮುಂದೆ ಮಾಡಬೇಕಿದ್ದ ಅಧ್ಯಯನದ ವಿವರಗಳನ್ನು ಚರ್ಚಿಸುತ್ತಲೆ ನಮ್ಮ ಪ್ರಯಾಣ ಬೆಳೆಸಿದ್ದೆವು-ಬೆಂಗಳೂರಿಗೆ. ಬಸ್ಸಿನಲ್ಲಿ ಕೂತು ಚರ್ಚಿಸುತ್ತಿದ್ದಾಗ ಪಾರ್ವತಿ ನಮ್ಮ ಮುಂದೆಯೇ ಇದ್ದ, ಯಾರೂ ಗಮನಿಸದ ಮತ್ತೊಂದು ಅಚ್ಚರಿಯನ್ನು ತೆರೆದಿಟ್ಟಳು. ಅದರ ಅನಾವರಣವಾದದ್ದೇ ವಿಚಿತ್ರವಾಗಿ.
ಬಸ್ಸಿನಲ್ಲಿ ನಡೆದ ನಮ್ಮ ಚರ್ಚೆಯ ನಡುವೆ ಒಂದು ಪ್ರಶ್ನೆ ಎದುರಾಗಿತ್ತು: ಬೆಳವಾಡಿ ಕೀಟಶಾಸ್ತ್ರಜ್ಞನಾದರೂ, ನೂರಾರು ಪ್ರಭೇದಗಳನ್ನು ಈಗಾಗಾಲೆ ಹಿಡಿಯುವಲ್ಲಿ ಪರಿಣಿತಿ ಪಡೆದವನಾದರೂ, ಆತನೇಕೆ ತನ್ನ ಕೀಟಗಳನ್ನು ಹಿಡಿಯಲು ಅಷ್ಟು ಶ್ರಮಪಡುತ್ತಿದ್ದ. ಬದಲಿಗೆ ಕೀಟಗಳ ಬಗ್ಗೆ ಅಷ್ಟಾಗಿ ಅರಿಯದ ನಾನು ಸ್ವಲ್ಪ ಸಮಯದಲ್ಲಿಯೇ ಹೇಗೆ ಐದಾರು ಕೀಟಗಳನ್ನು, ಅದೂ ಸಹ ಯಾವುದೆ ನೆಟ್ ಸಹಾಯವೂ ಇಲ್ಲದೆ ಕೇವಲ ಕೈಗಳಲ್ಲಿ ಹಿಡಿಯಲು ಸಾಧ್ಯವಾಯಿತು? ಈ ಪ್ರಶ್ನೆಗೆ ಉತ್ತರವಾಗಿ ನನಗೆ ಹೊಳೆದದ್ದನ್ನು ಹೇಳಿದೆ.
“ನದಿಗೆ ಅಂಟಿಕೊಂಡೇ ಇರುವ ಆ ಕೀಟ ಪ್ರಭೇದವು ಕೇವಲ ಎರಡು ಅಡಿಗಳ ಅಗಲದ ವ್ಯಾಪ್ತಿಯಲ್ಲಿಯೇ ಇರುವುದರಿಂದ, ಅವು ಅಲ್ಲಿ ಹೆಚ್ಚು ಕೇಂದ್ರೀಕೃತವಾಗಿ ಅವುಗಳ ಸಾಂದ್ರತೆ ಹೆಚ್ಚಿದೆ, ಹಾಗಾಗಿ ಯಾರೆ ಡೈವ್ ಮಾಡಿದರೂ ಸಹ ಒಂದಿಲ್ಲ ಒಂದು ಕೀಟ ಅವರ ಕೈಗೆ ಸಿಕ್ಕಿಹಾಕಿಕೊಳ್ಳುವುದು ಸಹಜ” ಅದು ಎಲ್ಲರಿಗೂ ಸರಿ ಅನಿಸಿತ್ತು. ಕಾರಣ ಬಿಸಿ ಮರಳ ಮೇಲೆ ಕಂಡ ಕೀಟದ ಸಾಂದ್ರತೆ ಅತ್ಯಂತ ಕಡಿಮೆ ಇತ್ತು ಕೂಡ. ಆದರೆ ಪಾರ್ವತಿ ತಕ್ಷಣ ಬೆಳವಾಡಿಯ ಶರ್ಟಿನ ಜೇಬಿಗೆ ಕೈಹಾಕಿದಳು. ಬೆಳವಾಡಿ ಈಗಾಗಲೆ ಆ ಎರಡೂ ಪ್ರಭೇದಗಳ ಕೀಟಗಳನ್ನು ಒಂದು ವಯಲ್ ಗೆ ವರ್ಗಾಯಿಸಿಕೊಂಡು ತನ್ನ ಜೇಬಿನಲ್ಲಿಯೇ ಇಟ್ಟಿದ್ದ. ಪಾರ್ವತಿ ಅವನ ಜೇಬಿನಿಂದ ಆ ವಯಲ್ ಅನ್ನು ಕೈಗೆತ್ತಿಕೊಂಡು ಏನನ್ನೋ ಗಮನಿಸತೊಡಗಿದಳು. ಆಕೆಯ ಮುಖದಲ್ಲಿ ನಗೆ ಮೂಡಿತ್ತು. ಕೊನೆಗೆ ನನ್ನ ಮುಖ ನೋಡುತ್ತ ಹೇಳಿದಳು.
ಇದನ್ನೂ ಓದಿ | ಸಸ್ಯಲೋಕದ ಸೋಜಿಗಗಳನ್ನು ಅನಾವರಣ ಮಾಡುವ ಗಣೇಶಯ್ಯ ಅವರ ‘ಸಸ್ಯ ಸಗ್ಗ’ | ಭಾಗ 1
ಇದನ್ನೂ ಓದಿ |ಗಣೇಶಯ್ಯ ಅಗಾಧ ಸಂಶೋಧನಾ ಪ್ರತಿಭೆ, ಅದ್ಭುತ ಕತೆಗಾರ| ಒಡನಾಡಿಗಳ ಮೆಲುಕು
“ನಿಮ್ಮ ವಾದಸರಿ ಅನಿಸುತ್ತೆ. ನಾನು ಒಣಗಿದ ಮರಳ ಮೇಲಿನ ಪ್ರಭೇದವನ್ನು ನೋಡಿದಾಗ ಅವುಗಳ ಕವಚದ ರೆಕ್ಕೆಗಳು ಅಲ್ಲಿನ ಮರಳಿನ ಬಂಗಾರದ ಬಣ್ಣದಂತೆಯೇ ಇದ್ದುದನ್ನು ಗಮನಿಸಿದ್ದೆ. ಅಂದರೆ ಅವು ತಾವು ಜೀವಿಸುವ ಮರಳ ಬಣ್ಣದೊಂದಿಗೆ ಕಾಮೋಫ಼್ಲಾಜ್ ಆಗಿರುವುದರಿಂದ ಬಹುಶಃ ಅವು ಬೆಳವಾಡಿಗೆ ಸುಲಭವಾಗಿ ಕಾಣದೆ ಕಣ್ಣಾಮುಚ್ಚಾಲೆ ಆಡಿರಬೇಕು ಅಂದುಕೊಂಡೆ. ಆದರೆ ಇಲ್ಲಿ ನೋಡಿ. ನದಿಯ ಅಂಚಿನಲ್ಲಿರುವ ದುಂಬಿಗಳು ಕೂಡ ಅಷ್ಟೆ ಕಾಮಾಫ಼್ಲಾಜ್ ಆಗಿವೆ-ತಾವು ಬದುಕುವ ತಂಪು ಮರಳಿನ ಮಬ್ಬು ಬಣ್ಣದ ಜೊತೆ ಬೆರೆತು ಹೋಗುವಂತೆ ಅವುಗಳ ಹೊರರೆಕ್ಕೆಯ ಬಣ್ಣವೂ ಕಾಮಾಫ಼್ಲಾಜ್ ಆಗಿವೆ. ಅಂದರೆ ಅವುಗಳನ್ನು ಗುರುತಿಸುವಲ್ಲಿ, ನಮಗೆ ಎರಡೂ ಕಡೆ ಅಷ್ಟೆ ಸಂಕೀರ್ಣತೆ ಇದೆ. ಆದರೆ ಅವುಗಳನ್ನು ಹಿಡಿಯುವಲ್ಲಿ ಮಾತ್ರವೇ ವ್ಯತ್ಯಾಸವಿದೆ. ಬಹುಶಃ ಅವುಗಳ ಸಾಂಧ್ರತೆಯಿಂದಾಗಿ ನಿಮಗೆ ಸುಲಬವಾಗಿ ಸಿಕ್ಕಿರಲಿಕ್ಕೆ ಸಾಧ್ಯ” ಎಂದಳು.
ಆ ಭಿನ್ನತೆಯನ್ನು ಕಂಡು ನಾವೆಲ್ಲರೂ ದಂಗಾದೆವು. ಕೆಲವೆ ಮೀಟರುಗಳ ಅಂತರದಲ್ಲಿ ತಮ್ಮ ತಮ್ಮ ಮನೆಯ ಗಡಿಗಳನ್ನು ವಿಂಗಡಿಸಿಕೊಂಡಿರುವ ಈ ಪ್ರಭೇದಗಳು ಅದು ಸಾಲದೆಂಬಂತೆ ತಮ್ಮ ಸೂಕ್ಷ್ಮ ಪರಿಸರಕ್ಕೆ ಹೊಂದುವಂತೆ ಸೂಕ್ತವಾದ, ತಮ್ಮದೆ ‘ಮಾರೀಚ’ ವರ್ಣಗಳನ್ನೂ ಪಡೆದಿದ್ದವು. ಅಂದರೆ ಪ್ರಾಣಿಗಳ ವರ್ತನೆಗಳ ವಿಕಾಸದ ಮತ್ತೊಂದು ಅಚ್ಚರಿಯನ್ನೂ ಪಾರ್ವತಿ ಅವುಗಳಲ್ಲಿ ಅನಾವರಣಗೊಳಿಸಿ ತೋರಿಸಿದ್ದಳು. ಅದರ ಬಗ್ಗೆ ಅಚ್ಚರಿ ವ್ಯಕ್ತಪಡಿಸುತ್ತ ನಾನು,
“ತಮ್ಮ ಆಹಾರವನ್ನು ಹುಡುಕುವಲ್ಲಿ ಹುಲಿಯಂತೆ ಹೊಂಚು ಹಾಕಿ ಕೂರುವ ಈ ದುಂಬಿಗಳು ತಾವು ಬೇಟೆಯಾಡುವ ಕೀಟಗಳಿಗೆ ಕಾಣದಂತೆ ಮಾಯವಾಗಿರಲು ಇಷ್ಟೊಂದು ಕಾಮಾಫ಼್ಲಾಜ್ ಆಗಿ ವಿಕಾಸಗೊಂಡಿವೆಯೆ?” ಎಂದಿದ್ದೆ. ಆದರೆ ನಾವು ವಿಶದವಾಗಿ ಅಧ್ಯಯನ ನಡೆಸಿದಾಗ ತಿಳಿದದ್ದು ಆ ನನ್ನ ಅವಲೋಕನೆ ಅಷ್ಟು ಸರಿಯಲ್ಲ, ಅವುಗಳ ಕಾಮೋಫ಼್ಲಾಜ್ ಬೇರೆಯದೆ ಕಾರಣಕ್ಕೆ ಎಂದು!
ಒಟ್ಟಿನಲ್ಲಿ ಅಂದು ಹಲವು ಬಾರಿ ಪಾರ್ವತಿ ತೋರಿದ ಸಮಯೋಚಿತ ಒಳ-ನೋಟಗಳಿಂದಾಗಿ ನಮಗೆ ಆ ದುಂಬಿಗಳಲ್ಲಿ ಪರಿಸರದ ಹಲವು ಕುತೂಹಲಕರ ಪಾಠಗಳ ಪರಿಚಯವಾಗಿತ್ತು. ಒಂದು ಪ್ರಮುಖ ಅಧ್ಯಯನಕ್ಕೆ ಅಡಿಪಾಯವೂ ಸಿದ್ದವಾಗಿತ್ತು. ಎಲ್ಲಕ್ಕೂ ಮಿಗಿಲಾಗಿ ನಮ್ಮ ಎದೆಯ ತುಂಬ ಹೊಸ ಹೊಸ ವಿಚಾರಗಳನ್ನು ಹೊತ್ತು ಹಿಂದಿರುಗಿದ್ದೆವು .