ಕನ್ನ ಹಾಕುವವರಿಗೊಂದು ಕಳ್ಳಗಿಂಡಿ ಫೇಸ್‌ಬುಕ್‌; ನಿಮ್ಮ ಖಾತೆ ಮತ್ತು ಕಿಸೆ ಜೋಪಾನ

ಖದೀಮರು ನಿಮ್ಮನ್ನು ತಲುಪಲು ಹಲವು ದಾರಿಗಳಿವೆ, ಫೇಸ್ಬುಕ್, ಟ್ವಿಟರ್, ಇನ್ಸ್ಟಾಗ್ರಾಮ್, ಎಸ್ಎಂಎಸ್ ಸೇರಿದಂತೆ ನಿಮ್ಮ ಈಮೇಲ್‌ ಮುಖಾಂತರವೂ ನಿಮ್ಮನ್ನು ಸಂಪರ್ಕಿಸುತ್ತಾರೆ. ಇವುಗಳಲ್ಲಿ ಅತ್ಯಂತ ಸುಲಭ ವಿಧಾನವೆಂದರೆ, ಫೇಸ್ಬುಕ್.

‘ಸರ್ವಂ ಆನ್ಲೈನ್ ಮಯಂ’ ಆಗಿರುವ ಈ ಕೊರೋನಾ ಕಾಲದಲ್ಲಿ, ಆನ್ಲೈನ್ ಮೋಸದಾಟಗಳು ಕೂಡಾ ಎಗ್ಗಿಲ್ಲದೇ ನಡೆಯುತ್ತಿವೆ. ಶಾಲೆಗೆ ಹೋಗುವ ಮಕ್ಕಳಿಂದ ಹಿಡಿದು ಮನೆಯಲ್ಲಿರುವ ವೃದ್ದರು ಕೂಡಾ ಇಂದು ಆನ್ಲೈನ್ ಜಗತ್ತಿನೊಂದಿಗೆ ಕಡಿದುಕೊಳ್ಳಲಾಗದ ಸಂಬಂಧವನ್ನು ಬೆಳೆಸಿಕೊಂಡಿದ್ದಾರೆ. ಅಂತರ್ಜಾಲದಿಂದಾಗಿ ಸಂಪೂರ್ಣ ಜಗತ್ತೇ ನಮ್ಮ ಮುಷ್ಟಿಯಲ್ಲಿರುವಂತೆ ಭಾಸವಾದರೂ, ಅದೇ ಅಂತರ್ಜಾಲದ ಸಹಾಯದಿಂದ ನಿಮ್ಮ ಹಣಕ್ಕೆ ಕನ್ನ ಹಾಕುವ ಮಂದಿ ಕೂಡಾ ಆಗಾಗ್ಗೆ ತಮ್ಮ ಕೈಚಳಕವನ್ನು ತೋರಿಸುತ್ತಲೇ ಬಂದಿದ್ದಾರೆ.

ಇದೇ ವಾರದಲ್ಲಿ ದೆಹಲಿಯ ಸೈಬರ್ ಕ್ರೈಂ ಪೊಲೀಸರು, ಚೀನಾ ಮೂಲಕ ಸೈಬರ್ ಕ್ರೈಂ ಜಾಲವೊಂದನ್ನು ಭೇದಿಸಿದ್ದರು. ದೇಶದ ಅರ್ಧ ಮಿಲಿಯನ್ ಜನರನ್ನು ವಂಚಿಸಿ ಸುಮಾರು 300 ಕೋಟಿಯಷ್ಟು ಹಣವನ್ನು ಕೊಳ್ಳೆ ಹೊಡೆದಿದ್ದ ಹನ್ನೊಂದು ಜನರನ್ನು ಬಂಧಿಸಿದ್ದರು. ‘ಉಚಿತ’ವಾಗಿ ಸಿಗುವ ಹಣಕ್ಕೆ, ಶೀಘ್ರದಲ್ಲಿಯೇ ಹಣವನ್ನು ದ್ವಿಗುಣಗೊಳಿಸುವ ಆಸೆಗೆ ಬಲಿ ಬಿದ್ದು ಲಕ್ಷಾಂತರ ಜನರು ತಮ್ಮ ಹಣವನ್ನು ಕಳೆದುಕೊಂಡಿದ್ದರು.

ಈ ರೀತಿಯ ಮೋಸಗಾರರು, ಇಂದು ನಿಮ್ಮನ್ನು ತಲುಪುವ ದಾರಿ ಸುಲಭ. ಆಧರೆ ಇವರನ್ನು ಪತ್ತೆ ಹಚ್ಚುವುದು ನೀರಿನಲ್ಲಿ ಮೀನಿನ ಹೆಜ್ಜೆಯನ್ನು ಹುಡುಕಿದಷ್ಟು ಕಷ್ಟ. ನೀವು ಮೋಸ ಹೋಗಲು ಕೇವಲ ಒಂದು ಕ್ಷಣದ ಅಜಾಗರೂಕತೆ ಸಾಕು. ಈ ಖದೀಮರು ನಿಮ್ಮನ್ನು ತಲುಪಲು ಹಲವು ದಾರಿಗಳಿವೆ, ಫೇಸ್ಬುಕ್, ಟ್ವಿಟರ್, ಇನ್ಸ್ಟಾಗ್ರಾಮ್, ಎಸ್ಎಂಎಸ್ ಸೇರಿದಂತೆ ನಿಮ್ಮ ಈಮೇಲ್‌ ಮುಖಾಂತರವೂ ನಿಮ್ಮನ್ನು ಸಂಪರ್ಕಿಸುತ್ತಾರೆ. ಇವುಗಳಲ್ಲಿ ಅತ್ಯಂತ ಸುಲಭ ವಿಧಾನವೆಂದರೆ, ಫೇಸ್ಬುಕ್.

ಜಾಗತಿಕವಾಗಿ ಫೇಸ್ಬುಕ್ 2.8 ಬಿಲಿಯನ್ ಬಳಕೆದಾರರನ್ನು ಹೊಂದಿದೆ. 2021ರ ಅಂಕಿಅಂಶಗಳ ಪ್ರಕಾರ ಭಾರತದ 378.9ನ ಮಿಲಿಯನ್ ಜನರು ಅತ್ಯಂತ ಜನಪ್ರಿಯ ಸಾಮಾಜಿಕ ಜಾಲತಾಣವಾದ ಫೇಸ್ಬುಕ್ ಅನ್ನು ಬಳಸುತ್ತಿದ್ದಾರೆ. ಈ ಫೇಸ್ಬುಕ್ ಮುಖಾಂತರ ಲಕ್ಷಾಂತರ ಜನರನ್ನು ಒಂದೇ ಬಾರಿಗೆ ತಲುಪಬಹುದು. ಅದು ಕೂಡಾ ಯಾರಿಗೂ ಸಂದೇಹಬಾರದ ರೀತಿಯಲ್ಲಿ. ಕೆಳಗಿನ ಈ ಮೂರು ಘಟನೆಗಳನ್ನು ಗಮನಿಸೋಣ

ಘಟನೆ 1:

‘ನಾನು ಡಿಜಿಪಿ, ನನಗೆ ನಿಮ್ಮ ಸಹಾಯದ ಅವಶ್ಯಕತೆಯಿದೆ’

ದೇಶದ ಯಾವುದೋ ಮೂಲೆಯಲ್ಲಿ ಸಾಮಾನ್ಯವಾದ ಕೆಲಸ ಮಾಡಿಕೊಂಡು ಹೋಗುತ್ತಿರುವವರಿಗೆ ಐಪಿಎಸ್ ಅಧಿಕಾರಿಗಳ ಫ್ರೆಂಡ್ ರಿಕ್ವೆಸ್ಟ್ ಬಂದರೆ, ಅವರ ಖುಶಿ ಎಲ್ಲೆ ಮೀರುತ್ತದೆ. ಭುಜದ ಮೇಲಿನ ಸ್ಟಾರ್, ಸೋಂಟದಲ್ಲಿ ನೇತಾಡುವ ಪಿಸ್ಟಲ್, ಕೂಲಿಂಗ್ ಗ್ಲಾಸ್ ಹಾಕಿರುವ ಖಡಕ್ ಅಧಿಕಾರಿಯ ಫೋಟೋ ಇಟ್ಟುಕೊಂಡಿರುವ ವ್ಯಕ್ತಿ ನಿಮಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿದಾಗ, ಹಿಂದೆ ಮುಂದೆ ಆಲೋಚಿಸುವ ಗೋಜಿಗೆ ಹೋಗದೆ ನಾವು ಅಕ್ಸೆಪ್ಟ್ ಮಾಡುತ್ತೇವೆ. ನೆನಪಿರಲಿ ಇಲ್ಲಿ ನೀವು ಕೇವಲ ಗೆಳೆತನ ಆಹ್ವಾನವನ್ನು ಸ್ವೀಕರಿಸಲಿಲ್ಲ. ಅದರೊಂದಿಗೆ ಅಪಾಯದ ಆಹ್ವಾನವನ್ನು ಕುಡಾ ಸ್ವೀಕರಿಸಿದ್ದೀರಾ.

ಇದೇ ರೀತಿಯ ಘಟನೆ ಭಾರತದಲ್ಲಿ ನಡೆದಿದೆ. ಇಲ್ಲಿ ಡಿಜಿಪಿಯ ಸೋಗಿನಲ್ಲಿ ಅಮಾಯಕರನ್ನು ಪರಿಚಯ ಮಾಡಿಸಿಕೊಂಡು, ನನಗೆ ನಿಮ್ಮ ಸಹಾಯದ ಅವಶ್ಯಕತೆಯಿದೆ ಎಂದು ಹೇಳಿ, ಕೆಲವರಿಂದ ರೂ. 1,000ದಿಂದ ರೂ. 15,000ದ ವರೆಗೂ ಮೋಸ ಮಾಡಿರುವ ಘಟನೆ ನಡೆದಿದೆ.

ಕೊರೋನಾ ಕಾರಣದಿಂದ ಸರ್ಕರ ಸಂಬಳ ಬಿಡುಗಡೆ ಮಾಡುತ್ತಿಲ್ಲ, ನನ್ನ ಮಗ/ಹೆಂಡತಿ ಐಸಿಯುನಲ್ಲಿ ಇದ್ದಾರೆ, ನನ್ನ ಡಿಪಾರ್ಟ್ಮೆಂಟ್ ನ ಸಿಬ್ಬಂದಿಗಳಿಗೆ ದೇಣಿಗೆಯ ಅವಶ್ಯಕತೆಯಿದೆ ಎಂಬೆಲ್ಲಾ ಕತೆಗಳನ್ನು ಕಟ್ಟಿ, ಜನರ ಭಾವನೆಗಳೊಂದಿಗೆ ಆಟವಾಡಿ ಹಣ ದೋಚಿದ್ದಾರೆ.

ಇದು ಎಷ್ಟರ ಮಟ್ಟಿಗೆ ಅತಿರೇಕಕ್ಕೆ ಹೋಯಿತೆಂದರೆ, ನಿಜವಾದ ಅಧಿಕಾರಿಗಳು ತಮ್ಮ ಫೇಸ್ಬುಕ್ ಖಾತೆಯಲ್ಲಿ ‘ನಾವು ನಿಮ್ಮಲ್ಲಿ ಹಣ ಕೇಳಿಲ್ಲ’ ಎಂದು ಸ್ಪಷ್ಟನೆ ಕೊಡಬೇಕಾದ ಅಗತ್ಯತೆ ಎದುರಾಯಿತು.

ಜಾರ್ಖಂಡ್ ನ ರಿಷಿರಾಜ್ ಸಿಂಗ್ ಎಂಬ ಪೊಲೀಸ್ ಅಧಿಕಾರಿಯ ಹೆಸರಿನಲ್ಲಿ ಲಕ್ಷಾಂತರ ಹಣ ದೋಚಲಾಗಿತ್ತು. ಆ ನಕಲಿ ಖಾತೆಗೆ ಸಂಬಂಧಪಟ್ಟಂತಹ ಫೋನ್ ನಂಬರ್ ಅಸ್ಸಾಂ ಕಡೆಗೆ ಬೆಟ್ಟು ಮಾಡಿ ತೋರಿಸಿತು. ಮೊಬೈಲ್ ನಂಬರಿನ ಜಾಡು ಹಿಡಿದು ಹೋದ ಪೊಲೀಸರಿಗೆ ಸಿಕ್ಕಿದ್ದು ಅಮಾಯಕ ಕಾರ್ಮಿಕ. ಅಸಲಿಗೆ ಆತನಿಗೆ ತನ್ನ ಹೆಸರಿನಲ್ಲಿ ಲಕ್ಷಾಂತರ ರೂ. ದೋಚಿರುವ ಕುರಿತು ಮಾಹಿತಿಯೇ ಇರಲಿಲ್ಲ. ಈ ಪ್ರಕರಣ ಯಾವುದೇ ಅಂತ್ಯ ಕಾಣದೇ ತಣ್ಣಗಾಯಿತು.

ಘಟನೆ 2:

‘ಐಸಿಯು ಚಿಕಿತ್ಸೆಗಾಗಿ 10,000 ಅಗತ್ಯ ಇದೆ’

ಈ ಘಟನೆಯ ಪಾತ್ರದಾರಿಗಳು ಅಲ್ಪಮಟ್ಟಿಗೆ ಬುದ್ದವಂತರು. ಇಲ್ಲಿ ಯಾರೂ ಹಣ ಕಳೆದುಕೊಳ್ಳಲಿಲ್ಲ. ಆದರೆ, ಈ ಬುದ್ದಿವಂತರಲ್ಲಿ ಹಣ ಕಳೆದುಕೊಳ್ಳುವ ಹಂತಕ್ಕೆ ತಲುಪಿದವರು ಕೊನೆಯ ಘಳಿಗೆಯಲ್ಲಿ ಪಾರಾಗಿದ್ದಾರೆ.

ಲೇಖಕರಾಗಿರುವ ಮದನ್ ಬಾಬು ಎಂಬವರಿಗೆ ಕಳೆದ ವರ್ಷ ಸೆಪ್ಟೆಂಬರ್ 22ರಂದು ರಾತ್ರಿ ಸುಮಾರು ಹನ್ನೊಂದು ಗಂಟೆಯ ನಂತರ ಒಂದು ಕರೆ ಬರುತ್ತದೆ. ಅವರ ಆತ್ಮೀಯ ಮಿತ್ರರೊಬ್ಬರು ಕರೆ ಮಾಡಿ, ಫೇಸ್ಬುಕ್ ಐಡಿ ಬದಲಾಯಿಸಿದ್ದೀಯಾ ಎಂದು ಕೇಳುತ್ತಾರೆ. ನಾನು ಯಾವುದೇ ಹೊಸ ಫೇಸ್ಬುಕ್ ಖಾತೆ ತೆರೆದಿಲ್ಲ ಎಂದು ಮದನ್ ಬಾಬು ಉತ್ತರಿಸುತ್ತಾರೆ.

ಇದಾದ ನಂತರ ಸತತ ಎರಡು ದಿನಗಳ ಕಾಲ ಮದನ್ ಬಾಬು ಅವರಿಗೆ ಕರೆಗಳು ಬರಲು ಆರಂಭವಾಗುತ್ತವೆ. ಕರೆ ಮಾಡಿದ ಪ್ರತಿಯೊಬ್ಬರು ಮದನ್ ಅವರ ಆರೋಗ್ಯ ವಿಚಾರಿಸಿದ್ದಾರೆ. ಇದರಿಂದ ಸಂದೇಹಗೊಂಡ ಮದನ್ ತಮ್ಮ ಸ್ನೇಹಿತರನ್ನು ವಿಚಾರಿಸಿದಾಗ, ಅವರ ಹೆಸರಿನಲ್ಲಿ ನಕಲಿ ಖಾತೆ ತೆರೆದಿರುವುದು ತಿಳಿದುಬರುತ್ತದೆ. ಈ ನಕಲಿ ಖಾತೆಯಿಂದ, “ನಾನು ಐಸಿಯುನಲ್ಲಿ ದಾಖಲಾಗಿದ್ದೇನೆ. ತುರ್ತಾಗಿ 10,000ದ ಅವಶ್ಯಕತೆಯಿದೆ. ನಾಳೆಯೇ ಹಣ ಹಿಂತಿರುಗಿಸುತ್ತೇನೆ. ದಯವಿಟ್ಟು ಹಣ ನೀಡಿ,” ಎಂದು ಸಂದೇಶ ಬಂದಿರುತ್ತದೆ.

ಒಬ್ಬ ಗೆಳೆಯ ಹಣ ನೀಡಲು ಒಪ್ಪಿದ ಕಾರಣಕ್ಕೆ ಅವನಿಗೆ ಹರಿಯಾಣ ಮೂಲದ ವ್ಯಕ್ತಿಯ ಪೇಟಿಎಂ ನಂಬರ್ ಅನ್ನು ಖದೀಮರು ಕಳುಹಿಸಿದ್ದಾರೆ. ಆದರೆ, ಹಣ ನೀಡುವ ಮೊದಲು ಕರೆ ಮಾಡಿ ಖಚಿತಪಡಿಸಿಕೊಳ್ಳಲು ಆ ವ್ಕ್ತಿ ಮದನ್ ಅವರಿಗೆ ಕರೆ ಮಾಡಿದಾಗ ಈ ಷಡ್ಯಂತ್ರ ಬಯಲಾಗಿದೆ.

ಈ ಕುರಿತಾಗಿ ಮದನ್ ಅವರು ಫೇಸ್ಬುಕ್’ಗೆ ಮಾಹಿತಿ ತಿಳಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ತಕ್ಷಣವೇ ಆ ನಕಲಿ ಖಾತೆ ಡಿಲೀಟ್ ಆಗಿದೆ. ಅಂದರೆ, ಮೋಸಗಾರರು ನಿಮ್ಮನ್ನು ಎಷ್ಟು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂಬ ಕುರಿತು ನೀವೇ ಯೋಚಿಸಿ.

ಘಟನೆ 3:

17.5 ಲಕ್ಷ ರೂ. ಕೊಳ್ಳೆ ಹೊಡೆದ ಫೇಸ್ಬುಕ್ ‘ಸ್ನೇಹಿತ’

ಮುಂಬೈನ ಮಲಾಡ್ ಪ್ರದೇಶದಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದ ಮಹಿಳೆಯೊಬ್ಬಳಿಗೆ ಅವರ ಫೇಸ್ಬುಕ್ ‘ಸ್ನೇಹಿತ’ನೇ ಪಂಗನಾಮ ಹಾಕಿರುವ ಘಟನೆ 2020ರ ಸೆಪ್ಟೆಂಬರ್’ನಲ್ಲಿ ನಡೆದಿದೆ. ಇದು ಫ್ರೀ ಗಿಫ್ಟ್ ನೀಡುವ ಆಮೀಷವೊಡ್ಡಿದ ಪ್ರಕರಣ.

2020ರ ಮಾರ್ಚ್’ನಲ್ಲಿ ಸಂತ್ರಸ್ಥೆಗೆ ಅಲೆಕ್ಸ್ ವಿಲ್ಫ್ರೆಡ್ ಎಂಬ ಫೇಸ್ಬುಕ್ ಐಡಿಯಿಂದ ಫ್ರೆಂಡ್ ರಿಕ್ವೆಸ್ಟ್ ಬರುತ್ತದೆ. ಲಂಡನ್ ನಲ್ಲಿ ವೈದ್ಯನಾಗಿ ಸೇವೆ ಸಲ್ಲಿಸುತ್ತಿರುವುದಕ್ಕೆ ಪೂರಕವಾದ ಎಲ್ಲಾ ಸಾಕ್ಷ್ಯಗಳು ಸಿಗುವಂತೆ ಆ ಫೇಸ್ಬುಕ್ ಪ್ರೊಫೈಲ್ ಸಿದ್ದವಾಗಿರುತ್ತದೆ.

2020ರ ಆಗಸ್ಟ್ 15 ನಂತರ ಇಬ್ಬರೂ ಮೆಸೆಂಜರ್ ಮೂಲಕ ಚಾಟಿಂಗ್ ಪ್ರಾರಂಭಿಸುತ್ತಾರೆ.

ಆಗಸ್ಟ್ 17ರಂದು ವಿಲ್ಫ್ರೆಡ್ ಸಂತ್ರಸ್ಥೆಗೆ ಫೇಸ್ಬುಕ್ ಮೂಲಕ ಕರೆ ಮಾಡಿ, ಒಂದು ಸರ್ಪ್ರೈಸ್ ಗಿಫ್ಟ್ ಕಳುಹಿಸಿದ್ದೇನೆ ಎಂದು ಹೇಳುತ್ತಾನೆ. ಈ ಕರೆಯ ಒಂದು ಗಂಟೆಯ ನಂತರ ಅಂಜಲಿ ಶರ್ಮಾ ಎಂಬ ಮಹಿಳೆ, ಸಂತ್ರಸ್ಥೆಗೆ ಕರೆ ಮಾಡಿ, ತಾನು ಕಾರ್ಗೊ ಕಂಪೆನಿಯಲ್ಲಿ ಕೆಲಸ ನಿರ್ವಹಿಸುವಾಕೆ ಎಂದು ಪರಿಚಯಿಸಿಕೊಳ್ಳುತ್ತಾಳೆ. 

ನಂತರ, ನಿಮಗೊಂದು ಪಾರ್ಸೆಲ್ ಬಂದಿದೆ ಅದರಲ್ಲಿ 35 ಲಕ್ಷ ನಗದು ಹಾಗೂ 14 ಲಕ್ಷ ಮೌಲ್ಯದ ಚಿನ್ನಭಾರಣಗಳಿವೆ ಎಂದು ಹೇಳುತ್ತಾಳೆ. ಆದರೆ, ಅದನ್ನು ಪಡೆಯಲು ನೀವು ಕಸ್ಟಮ್ಸ್ ಡ್ಯೂಟಿ ರೂ. 30,000 ಪಾವತಿಸಬೇಕು ಎಂದು ಹೇಳುತ್ತಾಳೆ. ಹಣ ಪಾವತಿಸಲು ಒಂದು ಬ್ಯಾಂಕ್ ಖಾತೆಯ ವಿವರ ನೀಡುತ್ತಾಳೆ. 

ಇದಾದ ಬಳಿಕ ಪಾರ್ಸೆಲ್’ನಲ್ಲಿ ಅನುಮತಿ ನೀಡಿರುವುದಕ್ಕಿಂತ ಹೆಚ್ಚಿನ ಮೊತ್ತದ ನಗದು ಇರುವುದರಿಂದ ರೂ. ೧.೧೦ ಲಕ್ಷ ದಂಡದ ಮೊತ್ತ ಪಾವತಿಸಬೇಕು ಎಂದು ಹೇಳುತ್ತಾಳೆ. ಇದಾದ ಬಳಿಕ, Anti-Money laundering certificate, GST certificate and Income tax certificate ಸೇರಿದಂತೆ ಇತರ ಪ್ರಮಾಣಪತ್ರಗಳಿಗಾಗಿ ಹಲವು ಬಾರಿ ಕರೆ ಮಾಡಿ ಹಣವನ್ನು ಪಡೆಯಲಾಗುತ್ತದೆ. 

ಅಚ್ಚರಿಯ ವಿಚಾರವೇನೆಂದರೆ, RBIನ ಹೆಸರಿನಲ್ಲಿ ಮತ್ತೆ ಹಣ ಕೇಳಿದಾಗಲೂ ಸಂತ್ರಸ್ತೆಗೆ ಸಂದೇಹ ಬರಲಿಲ್ಲ. ಕಣ್ಣು ಮುಚ್ಚಿ ಹಣ ಪಾವತಿಸಿದ ಬಳಿಕ, ಮತ್ತೆ RBIನಿಂದ ಕಡ್ಡಾಯ ಟ್ಯಾಕ್ಸ್ ಪಾವತಿ ಎಂಬ ಶೀರ್ಷಿಕೆಯಡಿ ಮತ್ತೊಂದು ಈ-ಮೈಲ್ ಬರುತ್ತದೆ. ಆದರೆ, ಈ ಹೊತ್ತಿಗೆ ಸಂತ್ರಸ್ಥೆಯ ಸಂಪೂರ್ಣ ಉಳಿತಾಯ ಖಾಲಿಯಾಗಿದ್ದರಿಂದ ಹಣ ಪಾವತಿಸಲು ಸಾಧ್ಯವಾಗುವುದಿಲ್ಲ. ಇದಕ್ಕೂ ಮಿಗಿಲಾಗಿ, ಸ್ನೇಹಿತರು ಮತ್ತು ಕುಟುಂಬಸ್ಥರಿಂದ ಲಕ್ಷಾಂತರ ಸಾಲವನ್ನೂ ಮಾಡಿದ್ದರು. ತಾನು ತಾನು ಮೋಸ ಹೋಗಿದ್ದೇನೆ ಎಂದು ತಿಳಿಯುವಷ್ಟರಲ್ಲಿ ಸಂತ್ರಸ್ಥೆ ಕಳೆದುಕೊಂಡಿದ್ದು ಬರೋಬ್ಬರಿ 17.5 ಲಕ್ಷ ರೂ., ತನ್ನ  ಜೀವನದ ಸಂಪೂರ್ಣ ಉಳಿತಾಯದ ಹಣ, ಸ್ನೇಹಿತರ ಮತ್ತು ಕುಟುಂಬಸ್ಥರ ವಿಶ್ವಾಸ. 

ಭಾವನಾತ್ಮಕಸಂದೇಶಗಳಿಗೆಮೋಸಹೋಗದಿರಿ:

ನಿಮಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ ಅನಾಮಿಕ ವ್ಯಕ್ತಿಯೊಂದಿಗೆ ನೀವು ವರ್ಷಾನುಗಟ್ಟಲೆ ಚಾಟ್ ಮಾಡಿದರೂ, ಅವರು ನಿಮ್ಮ ನಿಜವಾದ ಸ್ನೇಹಿತರಾಗಿರುವುದಿಲ್ಲ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ. ನಿಮಗೆ ವ್ಯಕ್ತಿಗತವಾಗಿ ಪರಿಚಯ ಇಲ್ಲದೇ ಇರುವಂತಹ , ಅಥವಾ ಸಂಪೂರ್ಣವಾಗಿ ನಂಬಿಕೆ ಇಲ್ಲದಂತಹ ವ್ಯಕ್ತಿಗಳೊಂದಿಗೆ ಹಣದ ವ್ಯವಹರವನ್ನು ಇಟ್ಟುಕೊಳ್ಳಬೇಡಿ. 

ಪ್ರಮುಖವಾಗಿ, ಕೊರೋನಾದಂತಹ ಕಾಲದಲ್ಲಿ ತನ್ನ ಮಗ, ಹೆಂಡತಿ, ತಂದೆ, ತಾಯಿ ಹೀಗೆ ಯಾರು ಯಾರಿಗೋ ಚಿಕಿತ್ಸೆಗಾಗಿ ಹಣದ ಅವಶ್ಯಕತೆಯಿದೆ ಎಂದು ನಿಮ್ಮನ್ನು ಭಾವನಾತ್ಮಕವಾಗಿ ಸಂಪರ್ಕಿಸುವವರಿಂದ ದೂರವಿರಿ. ಏಕೆಂದರೆ, ನಾವು ಭಾವನೆಗಳಿಗೆ ತುಂಬಾ ಸುಲಭದಲ್ಲಿ ಮಾರುಹೋಗುತ್ತೇವೆ. ಇನ್ನೊಂದು ಬಾರಿ ಯೊಚಿಸುವ ಮೊದಲೇ ಹಣವನ್ನು ನೀಡಿ ನಂತರ ಪೆಚ್ಚು ಮೋರೆ ಹಾಕಬೇಡಿ. ನೀವು ಮೊಸಹೋಗಿದ್ದೀರಿ ಎಮದು ನಿಮಗೇ ತಿಳಿಯದ ರೀತಿಯಲ್ಲಿ ನಿಮ್ಮಿಂದ ಹಣವನ್ನು ಪಡೆಯುವ ಚಾಲಾಕಿ ಕಳ್ಳರಿದ್ದಾರೆ. 

ನಿಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು, ನಿಮ್ಮ ಬ್ಯಾಂಕಿನ ಸಿಬ್ಬಂದಿ ಫೇಸ್ಬುಕ್ ಅಥವಾ ಕರೆಯ ಮೂಲಕ ಎಂದೂ ಕೇಳುವುದಿಲ್ಲವೆಂಬುದು ನಿಮಗೆ ನೆನಪಿರಲಿ. ಸಮಾಜದ ಗಣ್ಯವ್ಯಕ್ತಿಗಳು ನಿಮಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸದರೆ, ಅವರ ಬೇರೆ ಫೇಸ್ಬುಕ್ ಖಾತೆ ಇದೆಯೇ ಎಂಬುದು ಪರೀಕ್ಷಿಸಿಕೊಳ್ಳಿ. ಇದಕ್ಕೂ ಮಿಗಿಲಾಗಿ ಅವರು ನಿಮಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುವ ಅಗತ್ಯವಾದರೂ ಏನಿದೆ ಎಂಬುದನ್ನು ಪರಾಮರ್ಶಿಸಿ. 

ನೀವು ಮಾಡಿದ ತಪ್ಪಿಗೆ ಯಾರನ್ನೂ ದೂಷಿಸಲು ಸಾಧ್ಯವಿಲ್ಲ. ಲೇಖನದ ಮೊದಲ ಭಾಗದಲ್ಲಿ ಹೇಳಿದಂತೆ, ಈ ಸೈಬರ್ ಫ್ರಾಡ್’ಗಳು ನೀರಿನಲ್ಲಿನ ಮೀನಿನಂತೆ ಅವರ ಜಾಡು ಪತ್ತೆ ಹಚ್ಚುವುದು ಸುಲಭವಲ್ಲ. ಸಾಮಾಜಿಕ ಜಾಲತಾಣಗಳ ಸುರಕ್ಷಿತ ಬಳಕೆಯೆಡೆಗೆ ನಿಮ್ಮ ಗಮನವಿರಲಿ. 

ಏನು ಮಾಡಬೇಕು?

ಫೇಸ್‌ಬುಕ್‌ ಈಗಾಗಲೇ ಫ್ರೆಂಡ್‌ ಆಗಿರುವ ವ್ಯಕ್ತಿಗಳ ಹೆಸರಿನಲ್ಲೇ ಮತ್ತೊಮ್ಮೆ ಫ್ರೆಂಡ್‌ ರಿಕ್ವೆಸ್ಟ್‌ ಬರುತ್ತದೆ. ಆಗ ಅವರ ಫ್ರೆಂಡ್‌ಲಿಸ್ಟ್‌ ಅನ್ನು ಚೆಕ್‌ ಮಾಡಿ. ನಂತರ ಇದಕ್ಕೂ ಮೊದಲು ಅದೇ ವ್ಯಕ್ತಿಯ ಹೆಸರಿನ ಫ್ರೆಂಡ್‌ಲಿಸ್ಟ್‌ ನೋಡಿ. ಮ್ಯುಚ್ಯುವಲ್‌ ಫ್ರೆಂಡ್‌ಗಳ ಹೆಸರುಗಳಲ್ಲಿ ವ್ಯತ್ಯಾಸ ಕಂಡರೆ, ಅದು ನಕಲಿ ಖಾತೆ ಎಂದರ್ಥ. ಕೂಡಲೇ ಅದನ್ನು ರಿಪೋರ್ಟ್‌ ಮಾಡಿ.

ಇದಕ್ಕೂ ಮೊದಲು ನಿಮ್ಮ ಫೇಸ್‌ಬುಕ್‌ ಖಾತೆ ಸುರಕ್ಷತೆಯ ಆಯ್ಕೆಗಳನ್ನು ಸಕ್ರಿಯಗೊಳಿಸಿ. ನಿಮ್ಮ ಪ್ರೊಫೈಲ್‌ಗಳನ್ನು ಪೂರ್ಣ ಸಾರ್ವಜನಿಕಗೊಳಿಸದೆ, ಸ್ನೇಹಿತರು ಮಾತ್ರ ನೋಡುವಂತೆ ನಿರ್ಬಂಧಿಸಿ. ಅಪರಿಚಿತ ಮೂಲಗಳಿಂದ ಬರುವ ಲಿಂಕ್‌ಗಳನ್ನು ಕ್ಲಿಕ್‌ ಮಾಡಬೇಡಿ. ಅಷ್ಟೇ ಅಲ್ಲ, ಫೋಟೋ, ಡಾಕ್ಯುಮೆಂಟ್‌ಗಳನ್ನು ಡೌನ್‌ಲೋಡ್‌ ಮಾಡಬೇಡಿ.

ಕನಿಷ್ಠ 3 ತಿಂಗಳಿಗೊಮ್ಮೆ ಪಾಸ್‌ವರ್ಡ್‌ ಬದಲಿಸಿ. ಎರಡು ಹಂತದ ವೆರಿಫಿಕೇಷನ್‌ ವ್ಯವಸ್ಥೆಯನ್ನು ಸಕ್ರಿಯಗೊಳಿಸಿ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

%d bloggers like this: