ಫೇಸ್‌ಬುಕ್‌ ಹಲವು ದೇಶಗಳ ಪ್ರಜಾಪ್ರಭುತ್ವವನ್ನು ಒಡೆದು ಹಾಕಿದೆ: ಮಾರಿಯಾ ರೆಸ್ಸಾ

ರಾಪ್ಲರ್‌ ಸುದ್ದಿ ತಾಣದ ಸಂಸ್ಥಾಪಕಿ, ಪ್ರಶಸ್ತಿ ವಿಜೇತ ತನಿಖಾ ವರದಿಗಾರ್ತಿ ಮಾರಿಯಾ ರೆಸ್ಸಾ ಸಿಐಜಿಐಆನ್‌ಲೈನ್‌ ತಾಣಕ್ಕೆ ನೀಡಿರುವ ಸಂದರ್ಶನದಲ್ಲಿ ಸ್ಫೋಟಕವಾದ ಸಂಗತಿಗಳನ್ನು ಹೊರಹಾಕಿದ್ದಾರೆ. ಫೇಸ್‌ಬುಕ್‌ ಹೇಗೆ ಜಗತ್ತಿನ ಹಲವು ಪ್ರಜಾಸತ್ತೆಗಳಿಗೆ ದೊಡ್ಡ ಹೊಡೆತ ನೀಡಿದೆ ಎಂಬುದನ್ನು ವಿವರಿಸಿದ್ದಾರೆ. ಸಂದರ್ಶನದ ಆಯ್ದ ಭಾಗಗಳು ಇಲ್ಲಿವೆ

ಪ್ರತಿಷ್ಠಿತ ಟೈಮ್‌ ಮ್ಯಾಗಜೀನ್‌ ಗುರುತಿಸಿದ ವರ್ಷದ ವ್ಯಕ್ತಿ ಪಟ್ಟಿಯಲ್ಲಿದ್ದ ಪತ್ರಕರ್ತೆ ಮಾರಿಯಾ ರೆಸ್ಸಾ. ಫಿಲಿಪೈನ್ಸ್‌ನಲ್ಲಿ ರಾಪ್ಲರ್‌ ಹೆಸರಿನ ಸುದ್ದಿ ಸಂಸ್ಥೆಯನ್ನು ಕಟ್ಟಿ ಬೆಳೆಸುತ್ತಿರುವ ಇವರು ಅಭಿವ್ಯಕ್ತಿ ಸ್ವಾತಂತ್ರ್ಯದ ಪರವಾಗಿ ದನಿ ಎತ್ತುತ್ತಲೇ ಬಂದಿದ್ದಾರೆ.

ಈ ವರ್ಷದ ಆರಂಭದಲ್ಲಿ ಫೆಬ್ರವರಿ ಮತ್ತು ಮಾರ್ಚ್‌ ತಿಂಗಳ ಅವಧಿಯಲ್ಲಿ ತೆರಿಗೆ ವಂಚನೆ ಮತ್ತು ಆನ್‌ಲೈನ್‌ನಲ್ಲಿ ಸುಳ್ಳು ಸುದ್ದಿ ಪ್ರಕಟಿಸಿದರು ಎಂಬ ಆರೋಪದ ಮೇಲೆ ಎರಡು ಬಾರಿ ಬಂಧನಕ್ಕೆ ಒಳಗಾಗಿದ್ದರು. ಇದಕ್ಕೆ ಕಾರಣ ಫಿಲಿಪೈನ್‌ ಅಧ್ಯಕ್ಷ ರೋಡ್ರಿಗೊ ಡ್ಯುಟೆಟ್‌ ಮತ್ತು ಅವರ ಆಡಳಿತದಲ್ಲಿ ನಡೆಯುತ್ತಿದ್ದ ಮಾದಕ ವಸ್ತುಗಳ ಹಗರಣ ಕುರಿತು ವರದಿ ಮಾಡಿದ್ದೇ ಪ್ರತಿಯಾಗಿ ಈಕೆಯನ್ನು ಬಂಧಿಸಲಾಯಿತು.

“ಸರ್ಕಾರ ಹೇಳಿರುವ ಕಾರಣಕ್ಕೆ ಫಿಲಿಪೈನ್‌ನ ಬಹಳ ಜನ ನಾನು ಅಪರಾಧಿ ಎಂದೇ ಭಾವಿಸುತ್ತಾರೆ” ಎಂದು ಸೆಂಟರ್‌ ಫಾರ್ ಇಂಟರ್‌ನ್ಯಾಷನಲ್‌ ಗವರ್ನೆನ್ಸ್‌ ಇನ್ನೋವೇಷನ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
“ನಿಮ್ಮ ಬಳಿ ವಾಸ್ತವಾಂಶಗಳಿಲ್ಲದೇ ಇದ್ದರೆ, ನಿಮಗೆ ಸತ್ಯ ಸಿಗುವುದಿಲ್ಲ. ನಿಮ್ಮ ಬಳಿ ಸತ್ಯವಿಲ್ಲವೆಂದರೆ, ನಂಬಿಕೆ ಇರುವುದಿಲ್ಲ. ಇವೆರಡೂ ಇಲ್ಲವಾದರೆ ಪ್ರಜಾಸತ್ತೇ ಇರುವುದಿಲ್ಲ. ನಾಗರಿಕರನ್ನು ಯಾವುದೇ ರೀತಿಯಲ್ಲು ಸಕ್ರಿಯವಾಗಿ ತೊಡಗಿಸಿಕೊಳ್ಳಲು ಆಗುವುದಿಲ್ಲ. ಆಗ ಸಮಾಜಕ್ಕೆ, ಅಧಿಕಾರದಲ್ಲಿರುವವರನ್ನು ಹೊಣೆಗಾರರನ್ನಾಗಿ ಮಾಡಲು ಆಗುವುದಿಲ್ಲ. ಆಗ ದೊಡ್ಡ ಮೆಗಾಫೋನ್‌ ಹಿಡಿದವರ ದನಿ ಗೆಲ್ಲುತ್ತದೆ. ನಮ್ಮ ದೇಶದ ವಿಷಯದಲ್ಲಿ ಅಧ್ಯಕ್ಷ ಡ್ಯುಟೆಟ್‌.” ಎಂದಿದ್ದಾರೆ.

ರಾಪ್ಲರ್‌ ಆರಂಭಿಸಿದೊಂದಿಗೆ ಸಮಾಜದಲ್ಲಿ ಬದಲಾವಣೆ ತರುವಲ್ಲಿ ಡಿಜಿಟಲ್‌ ಟೆಕ್ನಾಲಜಿಯ ಶಕ್ತಿಯ ನೀವು ಕಂಡುಕೊಂಡ ವಿಶ್ವಾಸ ಎಂಥದ್ದು?

ನಾನು ಬರೆದ ಎರಡನೆಯ ಪುಸ್ತಕ ಬಿನ್‌ ಲಾಡೆನ್‌ ಟು ಫೇಸ್‌ಬುಕ್‌ನಲ್ಲಿ ಹೇಗೆ ಉಗ್ರವಾದವು ಭೌತಿಕ ಜಗತ್ತಿನಿಂದ ವರ್ಚ್ಯುವಲ್‌ ಜಗತ್ತಿಗೆ ವರ್ಗವಾಯಿತು ಎಂಬುದನ್ನು ನೋಡಬಹುದು. ಈ ಎಲ್ಲ ವಿಷಯಗಳನ್ನು ಗಮನಿಸುತ್ತಾ ನನಗೆ ಅನ್ನಿಸಿದ್ದು, ಭೌತಿಕ ಜಗತ್ತಿನಲ್ಲಿ ಒಬ್ಬ ವ್ಯಕ್ತಿ ಇದ್ದು, ನೀವು ವರ್ಚ್ಯುವಲ್‌ ಜಗತ್ತಿಗೆ ಕಾಲಿಟ್ಟರೆ, ಆ ಒಬ್ಬ ವ್ಯಕ್ತಿಯನ್ನು ನಾಲ್ಕಜ ಜನರನ್ನಾಗಿ ಮಾಡಬಹುದು. ಇದು ಸಾಮಾಜಿಕ ಮಾಧ್ಯಮದ ದಿನೇ ದಿನೇ ಹೆಚ್ಚುತ್ತಿರುವ ಶಕ್ತಿ ಮತ್ತು ಜಾಲದ ಪರಿಣಾಮವನ್ನು ಹೇಳುತ್ತದೆ.
ಆಮೇಲೆ ನನಗೆ ಈ ಶಕ್ತಿಯನ್ನು ಒಳಿತಿಗೆ ಯಾಕೆ ಬಳಸಬಾರದು ಅನಿಸಿತು. ಸ್ಪಂದನಶೀಲ ಸಮಾಜದ ಸಂಸ್ಥೆಗಳನ್ನು ನಾವು ಕಟ್ಟಬಹುದು ಎನಿಸಿತು. ಇದಕ್ಕೆ ಪತ್ರಿಕೋದ್ಯೋಗವನ್ನು ಕ್ರಿಯಾಶೀಲ ಸಮುದಾಯಗಳನ್ನು ಕಟ್ಟುವುದಕ್ಕೆ ಬಳಸಬಹುದು ಎನಿಸಿತು. ಇದೇ ರಾಪ್ಲರ್‌ ಆರಂಭದ ಹಿಂದೆ ಇದ್ದ ಆಲೋಚನೆ. ಇದು ನಾಲ್ಕು ವರ್ಷಗಳಲ್ಲಿ ಯಶಸ್ವಿಯಾಗಿ ಬೆಳೆದಿದೆ.

ಫಿಲಿಪೈನ್‌ ಅಧ್ಯಕ್ಷೀಯ ಚುನಾವಣೆಯ ವೇಳೆ ಡಿಜಿಟಲ್‌ ಮೀಡಿಯಾ ಕಂಪನಿಗಳು-ವಿಶೇಷವಾಗಿ ಫೇಸ್‌ಬುಕ್‌ನ ಕರಾಳಮುಖವನ್ನು ಬಯಲು ಮಾಡಿದಿರಿ?

ಡ್ಯುಟೆಟ್‌ ಪ್ರಚಾರ, ಮೊದಲ ಬಾರಿಗೆ ಸಾಮಾಜಿಕ ಮಾಧ್ಯಮ ಶಕ್ತಿಯನ್ನು ಅರ್ಥ ಮಾಡಿಕೊಂಡಿತ್ತು. ಆತನ ಗೆಲುವು ನಮಗೆ ಅಚ್ಚರಿಯನ್ನೇನು ಮೂಡಿಸಲಿಲ್ಲ. ಜಗತ್ತಿನ ಹಲವು ದೇಶಗಳಲ್ಲಿ ಸಾಮಾಜಿಕ ಮಾಧ್ಯಮಗಳ ಪ್ರಚಾರದ ಗುಂಪುಗಳು ಮತ್ತು ಖಾತೆಗಳು ಡ್ಯುಟೆಟ್‌ ಅಧ್ಯಕ್ಷರಾಗಿ ಗೆಲ್ಲುವುದಕ್ಕೆ ನೆರವಾದವು. ಸುಳ್ಳು ಮಾಹಿತಿಯನ್ನು ಹರಡುವುದಕ್ಕೆ ಈ ಮಾಧ್ಯಮವನ್ನು ಬಳಸಿಕೊಳ್ಳಲಾಯಿತು. 2016ರಲ್ಲಿ ಮಾದಕ ವಸ್ತುಗಳ ಸಮರ ನಡೆದಾಗ, ಸೇಡಿನ ಬೆಳವಣಿಗೆಗಳು ಆರಂಭವಾದವು. ಈ ಸಮರದಲ್ಲಿ ಆದ ಸಾವಿನ ಬಗ್ಗೆ ಪ್ರಶ್ನೆ ಎತ್ತರಿದವರೆಲ್ಲಾ ಮೊದಲ ಗುರಿಯಾದರು. ಹೀಗೆ ಗುರಿಯಾದವರೆಲ್ಲಾ, ಸಾಮಾನ್ಯ ಜನ, ಇವರು ಮೌನಕ್ಕೆ ಶರಣಾದರು. ಎರಡನೆಯ ಗುರಿ, ಪತ್ರಕರ್ತರು, ಸುದ್ದಿ ಗುಂಪುಗಳು ಮತ್ತು ನಾಲ್ಕನೆಯ ಗುರಿ ಪ್ರತಿ ಪಕ್ಷದ ರಾಜಕಾರಣಿಗಳು.

ಜೊತೆ ಜೊತೆಗೇ ನಾವು ನಮ್ಮ ಫೇಸ್‌ಬುಕ್‌ ಪುಟಗಳ ಮಾಹಿತಿಯನ್ನು ಕಲೆ ಹಾಕಲು ಆರಂಭಿಸಿದೆವು. ನಕಲಿ ಖಾತೆಗಳು ಒಟ್ಟಾಗಿ ಕಾರ್ಯನಿರ್ವಹಿಸುತ್ತಿರುವುದು ಗಮನಕ್ಕೆ ಬಂತು. ಆಗ ಇವುಗಳ ಕಾರ್ಯವಿಧಾನವನ್ನು ಸೂಕ್ಷ್ಮವಾಗಿ ಗ್ರಹಿಸಿದೆವು. ಎಲ್ಲ ಸುದ್ದಿ ಗುಂಪುಗಳನ್ನು ಟ್ರಾಲ್‌ ಮಾಡುತ್ತಿದ್ದ ಫೇಸ್‌ಬುಕ್‌ ಖಾತೆಯೊಂದನ್ನು ಗುರುತಿಸಿದೆವು. ಅದೇ ಆರಂಭ. ನಂತರ ಮೂರು ತಿಂಗಳ ಕಾಲ, ಪ್ರಭಾವ ಬೀರುವ ಕೆಲಸ ಮಾಡುತ್ತಿದ್ದ ಖಾತೆಗಳನ್ನು ಎಣಿಸಿದೆವು. ಇಂಥ 26ನಕಲಿ ಖಾಎತೆಗಳನ್ನು ಗುರುತಿಸಿದೆವು. ಇವು 30 ಲಕ್ಷ ಜನರನ್ನು ಪ್ರಭಾವಿಸಬಲ್ಲವಾಗಿದ್ದವು.

ಆಗಲೇ ನನಗೆ ಕಾನ್ರಾಡ್‌ ಉದ್ಗರಿಸುವ ‘ದಿ ಹಾರ್‌’ನ ಅನುಭವವಾಗಿದ್ದು. ಆಗಸ್ಟ್‌ 2016ರಲ್ಲಿ ನಾನು ಕಲೆ ಹಾಕಿದ ಮಾಹಿತಿಯೊಂದಿಗೆ ಫೇಸ್‌ಬುಕ್‌ ಕಚೇರಿಗೆ ಭೇಟಿ ನೀಡಿ, ಇದು ಅಪಾಯಕಾರಿ ಎಂದು ಅಂಕಿ-ಅಂಶಗಳನ್ನು ಅವರ ಮುಂದಿಟ್ಟೆ. ನಾನು ಭೇಟಿಯಾದ ವ್ಯಕ್ತಿಗಳು ಆಘಾತಗೊಂಡರು, ಅವರಿಗೆ ಏನು ಮಾಡಬೇಕು ತಿಳಿಯಲಿಲ್ಲ. ಭೇಟಿಯಾಗ ಕೊನೆಗೆ, “ನೀವೇನಾದರೂ ಮಾಡಲೇಬೇಕು. ಇಲ್ಲವಾದರೆ ಟ್ರಂಪ್‌ ಗೆಲ್ಲುತ್ತಾರೆ ಎಂದೆ. ಅದು ಆಗುವುದಿಲ್ಲ ಎಂದು ಎಲ್ಲರೂ ನಕ್ಕರು. ಆದರೆ ನವೆಂಬರ್‌ ಬಂತು. ಆತ ಗೆದ್ದ.
ಇನ್‌ಸ್ಟಂಟ್‌ ಆರ್ಟಿಕಲ್‌ಗಳ ಮೂಲಕ ಫೇಸ್‌ಬುಕ್‌ ಜಾಗತಿಕವಾಗಿ ಅತಿದೊಡ್ಡ ಸುದ್ದಿವಿತರಕನಾಯ್ತು. ಆದರೆ ನಿಯಂತ್ರಕನ ಜವಾಬ್ದಾರಿಯನ್ನೇ ಮರೆತು ಬಿಟ್ಟಿತು. ಇದು ಬಹಳ ಮುಖ್ಯವಾದ ಕೆಲಸ. ಪತ್ರಕರ್ತರಾದ ನಾವು ಮಾಡುವುದೇ ಅದನ್ನು, ಅಂದರೆ ವಾಸ್ತವಾಂಶ ಮತ್ತು ಕಲ್ಪನೆಗಳನ್ನು ಪರಾಮರ್ಶಿಸಿ ದೃಢಪಡಿಸುವುದು. ಆದರೆ ಫೇಸ್‌ಬುಕ್‌ ಸುದ್ದಿ ವಿತರಣೆಗೆ, ಮನುಷ್ಯನಿಗೆ ಅತ್ಯಂತ ನಿಕೃಷ್ಟವಾದಂತಹ ವಿಚಾರಗಳನ್ನು ವಿನ್ಯಾಸ ಮಾಡಲು ಬಳಸಿದ ಆಲ್ಗರಿದಮ್‌ಗಳನ್ನೇ ಬಳಸಿತು. ಈ ಆಲ್ಗರಿದಮ್‌ಗಳು ನಿಮ್ಮನ್ನು ಸೈಟ್‌ಗೆ ಹೆಚ್ಚು ಕಾಲ ಕಣ್ಣು ನೆಟ್ಟಿರುವಂತೆ ಮಾಡಬಲ್ಲವಾಗಿದ್ದವು. ಫೇಸ್‌ಬುಕ್‌ನಲ್ಲಿ ದ್ವೇಷ ಕೋಪಗಳೊಂದಿಗೆ ಬೆರೆತ ಸುಳ್ಳುಗಳು ವಾಸ್ತವಾಂಶಗಳಿಗಿಂತ ವೇಗವಾಗಿ ಹರಡಿದವು.

ಈ ನಡುವೆ ಫಿಲಿಪೈನ್ಸ್‌ನಲ್ಲಿ ಸಾಂಪ್ರದಾಯಿಕ ಸುದ್ದಿಸಂಸ್ಥೆಗಳು ಒಂದು ಸವಾಲು ಎದುರಿಸಬೇಕಾಯಿತು. ನಾವು ಪ್ರತಿಸ್ಪರ್ಧಿಗಳೆಂದು ಭಾವಿಸಿ ಪರಸ್ಪರ ಕೈಜೋಡಿಸಿ ಕೆಲಸ ಮಾಡುವುದಿಲ್ಲ. ಹಾಗಾಗಿ ನಮ್ಮನ್ನು ಅಂಚಿಗೆ ಸರಿಸಲಾಯಿತು. ಇದು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವುದಕ್ಕೆ ನೆರವಾಯಿತು. ಒಂದು ಸುಳ್ಳನ್ನು ಲಕ್ಷ ಸಾರಿ ಹೇಳಿದರೆ, ಸತ್ಯವಾಗುತ್ತದೆ. ಇದೇ ಸಾಮಾಜಿಕ ಮಾಧ್ಯಮದ ವಾಸ್ತವ. ಇದನ್ನೇ ಸರ್ವಾಧಿಕಾರಿ ಶೈಲಿಯ ಆಡಳಿತಗಾರರನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಿದ್ದಾರೆ.

ರಾಪ್ಲರ್‌ ಪ್ರಕರಣದಲ್ಲಿ ಜರ್ನಲಿಸ್ಟ್‌ ಜಾಗದಲ್ಲಿ ಕ್ರಿಮಿನಲ್‌, ವಿದೇಶಿ ಮಾಲಿಕತ್ವದ ಜಾಗದಲ್ಲಿ ವಿದೇಶಿ ಪ್ರಭಾವವುಳ್ಳ ಎಂಬ ಪದಗಳು ಕಾಣಿಸಿಕೊಂಡವು. ಇದು ಪುಟಿನ್‌ ಮಾದರಿಯ ಕಾರ್ಯತಂತ್ರ.

ನೀವು ಫಿಲಿಪೈನ್ಸ್‌ಅನ್ನು ಪ್ರಜಾಪ್ರಭುತ್ವ ಎಷ್ಟು ಬೇಗ ಕುಸಿಯಬಹುದು ಎಂಬುದಕ್ಕೆ ಉದಾಹರಣೆ ಎಂದು ಹೇಳಿದ್ದೀರಿ. ಪಶ್ಚಿಮ ದೇಶಗಳಿಗೆ ಹೋಲಿಸಿದರೆ, ಜಗತ್ತಿನ ದಕ್ಷಿಣ ಭಾಗದ ದೇಶಗಳು ಈ ಸುಳ್ಳು ಮಾಹಿತಿಯಿಂದ ಯಾವ ರೀತಿಯ ತೊಂದರೆಗಳನ್ನು ಎದುರಿಸುತ್ತಿವೆ?

ಇವೆಲ್ಲವೂ ಪ್ರಜಾಪ್ರಭುತ್ವ ರಾಷ್ಟ್ರಗಳಾಗಿ ತಲೆ ಎತ್ತುತ್ತಿವೆ. ನಮಗೆ ಅಂಥ ಸಂಸ್ಥೆಗಳಿಲ್ಲ. ಇದ್ದರೂ ಅವು ದುರ್ಬಲವಾಗಿವೆ. ಅಂದರೆ ಯಾವುದೇ ರೀತಿಯ ದಾಳಿಗೆ ಸುಲಭವಾಗಿ ತುತ್ತಾಗಬಲ್ಲಷ್ಟು ದುರ್ಬಲವಾಗಿವೆ. ಹಾಗಾಗಿ ಈ ಭಾಗದಲ್ಲಿ ಮಾಹಿತಿ ಯುದ್ಧ ಅಥವಾ ಸುಳ್ಳು ಸುದ್ದಿ ಹರಡುವುದರಿಂದ ಕ್ಷಿಪ್ತವಾಗಿ ಹಿಂಸೆಗೆ ಕಾರಣವಾಗುತ್ತದೆ. ಮಾರ್ಕ್‌ ಝುಕರ್‌ಬರ್ಗ್‌ ಅಮೆರಿಕ ಕಾಂಗ್ರೆಸ್‌ ಎದುರು ವಿಚಾರಣೆ ಎದುರಿಸುವಾಗ ಇದೆಲ್ಲವನ್ನೂ ಸರಿ ಮಾಡಲು ಐದು ವರ್ಷ ಬೇಕಾಗುತ್ತದೆ ಎಂದು ಹೇಳಿದ್ದರು. ಪ್ರತಿ ದಿನ ಇದನ್ನು ನಾವು ಸರಿಪಡಿಸದೇ ಹೋದರೆ, ಒಂದು ದಿನ ದಿನ ವಿಳಂಬ ಕೆಲವರ ಜೀವಕ್ಕೆ ಎರವಾಗುತ್ತದೆ. ಇದೇ ಕಾರಣಕ್ಕೆ ನಾನು ಜೈಲು ಪಾಲಾಗಬಹುದು.

ಪಶ್ಚಿಮದ ಜಗತ್ತಿಗೆ ಆನ್‌ಲೈನ್‌ ದ್ವೇಷ ಮತ್ತು ಹಿಂಸೆ, ನಿಜ ಜಗತ್ತಿಗೆ ವರ್ಗವಾಗುತ್ತದೆ ಎಂಬುದು ಗೊತ್ತು. ಆದರೆ ಇದು ವಾಸ್ತವದ ಅಲ್ಪ ಅಂಶವಷ್ಟೇ. ನಾನು ನಾನು ಭಾವುಕಳಾಗುತ್ತಿದ್ದೇನೆ. ಬೇಸರವಾಗಿದೆ. ಹೌದು, ಪ್ರಯೋಗಗಳಲ್ಲಿ ಬೆಂದ ನೋವುಗಳನ್ನು ಸಹಿಸಿಕೊಳ್ಳುತ್ತಿದ್ದೇವೆ. ಹಾಗಾಗಿ ಇದನ್ನು ಕಡಿಮೆ ಅವಧಿಯಲ್ಲಿ ಸರಿಪಡಿಸಲು ಸಾಧ್ಯವಿರುವುದು ಸಾಮಾಜಿಕ ಮಾಧ್ಯಮಗಳ ಟೆಕ್ನಾಲಜಿ ಪ್ಲಾಟ್‌ಫಾರ್ಮ್‌ಗಳು. ಸುದ್ದಿ ಸಂಸ್ತೆಗಳು ಹೇಗೆ ನಿಯಂತ್ರಕರಾಗಬಲ್ಲರೊ, ಹಾಗೇ ಫೇಸ್‌ಬುಕ್‌, ಯೂ ಟ್ಯೂಬ್‌, ಟ್ವಿಟರ್‌ಗಳು ಮಾಡಬಹುದು.
ಫೇಸ್‌ಬುಕ್‌ ನನ್ನ ದೇಶವು ಸೇರಿದಂತೆ ಜಗತ್ತಿನ ಹಲವು ದೇಶಗಳ ಪ್ರಜಾಪ್ರಭುತ್ವವನ್ನು ಒಡೆದು ಹಾಕಿದೆ. ನಾವು ಸಂಪೂರ್ಣವಾಗಿ ಬದಲಾಗಿದ್ದೇವೆ, ಯಾಕೆಂದರೆ ನಮ್ಮ ನಿರ್ಧಾರಗಳನ್ನು ಸಿಲಿಕಾನ್‌ ವ್ಯಾಲಿ ತೆಗೆದುಕೊಳ್ಳುತ್ತದೆ.

ನಮ್ಮನ್ನು ಇಂತಹ ಸ್ಥಿತಿಗೆ ತಂದು ನಿಲ್ಲಿಸಿದ್ದು ಬಹುತೇಕ ಅಮೆರಿಕದ ಕಂಪನಿಗಳು ಎಂದು ನೀವು ಹೇಳುತ್ತಿದ್ದೀರಿ. ಹಾಗಾದರೆ ಪರಿಹಾರಕ್ಕಾಗಿ ಅವರು ಏನು ಮಾಡಬೇಕೆಂದು ಹೇಳುತ್ತೀರಿ? ಅಥವಾ ಇದನ್ನು ಅಂತಾರಾಷ್ಟ್ರೀಯ ಸಮುದಾಯದ ಕೆಲಸವೇ-ನೀವು ಗ್ಲೋಬಲ್‌ ಇಂಟರ್‌ಪೋಲ್‌ ಎಂಬ ಕಲ್ಪನೆಯ ಬಗ್ಗೆ ಹೇಳಿದಿರಿ.

ಎರಡನೆಯ ಮಹಾಯುದ್ಧ ವೇಳೆ ಮಾನವೀಯತೆಯ ಮೇಲೆ ದುಷ್ಟತನ ಎರಗಿದಾಗ, ಇಡೀ ಜಗತ್ತು ಒಟ್ಟಾಗಿ, ಒಪ್ಪಂದ ಮೂಲಕ ಸಮಾಜದ ಮೇಲಿನ ದಾಳಿಯನ್ನು ತಪ್ಪಿಸಲು ಜೊತೆಯಾದವು. ಬ್ರೆಟನ್‌ ವುಡ್ಸ್‌, ನ್ಯಾಟೊ, ಯೂನಿವರ್ಸಲ್‌ ಡಿಕ್ಲೇರಷನ್‌ ಆಫ್‌ ಹ್ಯೂಮನ್‌ ರೈಟ್ಸ್‌ ಕೆಲವು. ಇದೂ ಅಂತಹದ್ದೇ ಸಂದರ್ಭ. ನಾವು ಇಷ್ಟು ದಿನ ಟೆಕ್‌ ಕಂಪನಿಗಳ ಮೇಲೆ ವಿಶ್ವಾಸವಿಟ್ಟಿದ್ದೆವು. ಒಳಗಿರುವ ಒಳ್ಳೆಯ ಜನರೊಂದಿಗೆ ನಾನು ಕೆಲಸ ಮಾಡಿದ್ದೇನೆ, ಹಾಗೆಯೇ ಉದ್ಯಮವನ್ನು ವಿರುದ್ಧ ದಿಕ್ಕಿನಲ್ಲಿ ಮುನ್ನಡೆಸಲು ಇನ್‌ಸೆಂಟಿವ್‌ ಕೊಡುವುದೂ ಗೊತ್ತು. ಇದು ಕಾನೂನು ರೂಪಿಸಿ ನಿಯಂತ್ರಿಸುವಷ್ಟು ಸರಳವಾಗಿಲ್ಲ.

ನಾವು ಈ ಇಂರ್ಟನೆಟ್‌ ಕಾರ್ಯ ನಿರ್ವಹಿಸುವ ಮೌಲ್ಯ ಮತ್ತು ನೀತಿಗಳೇನು ಎಂಬುದನ್ನು ಅರಿಯುವ ಮೂಲಕ ಆರಂಭಿಸಬೇಕು. ನಂತರ ಮಾರ್ಗಸೂಚಿಗಳನ್ನ ರೂಪಿಸಬೇಕು, ನಂತರ ಸಂಸ್ಥೆಗಳನ್ನು ಸ್ಥಾಪಿಸಿ, ಈ ಮಾರ್ಗಸೂಚಿಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳಬೇಕು. ಇದೇ ವೇಳೆ ನನಗೆ ಅನ್ನಿಸಿದ್ದು ಅಪರಾಧಿಗಳನ್ನು ಬೆನ್ನುಹತ್ತುವ ಇಂಟರ್‌ಪೋಲ್‌ ಮಾದರಿಯಲ್ಲಿ, ಕೆಲಸ ಮಾಡುವ ಸಂಸ್ಥೆಯನ್ನು ಕಂಡುಕೊಳ್ಳಬಾರದು? ಮಾಹಿತಿ ಕಾರ್ಯಾಚರಣೆಗಳನ್ನು ದತ್ತಾಂಶಗಳನ್ನು ಪಾರದರ್ಶಕವಾಗಿರಿಸಿ, ಯಾವುದೇ ಭೀತಿ ಇಲ್ಲದೆ ಸಾರ್ವಜನಿಕ ವಲಯದಲ್ಲಿ ದುರ್ಬಳಕೆ ಮಾಡುವುದನ್ನು ನಿಯಂತ್ರಿಸಬಹುದು. ಇದು ಅಗತ್ಯವಾಗಿ ಆಗಬೇಕಾದ ಪರಿಹಾರ ಕ್ರಮ. ಇದು ನಿಧಾನಗತಿಯಲ್ಲಿ ಆಗುತ್ತಿದ್ದು, ನಾನು ವ್ಯಕ್ತಿಗತವಾಗಿ ಪ್ರತ್ಯೇಕ ಟೆಕ್‌ ಕಂಪನಿಗಳೊಂದಿಗೆ ಕೆಲಸ ಮಾಡುವುದನ್ನು ಮುಂದುವರೆಸಿದ್ದೇನೆ.

ನಂತರದಲ್ಲಿ ಪತ್ರಕರ್ತರು ಮತ್ತು ಸುದ್ದಿ ಸಂಸ್ಥೆಗಳು ಕೈ ಜೋಡಿಸಿ ಕೆಲಸ ಮಾಡುವಂತೆ ಪ್ರೇರೇಪಿಸುತ್ತಿದ್ದೇವೆ. ಜನವರಲ್ಲಿ ನ್ಯೂಯಾರ್ಕ್‌ ನಗರದ ಟೈಮ್ಸ್‌ ಸ್ಕ್ವೇರ್‌ನಲ್ಲಿ ಇದೇ ಕಾರಣಕ್ಕೆ ಸೇರಿದ್ದೆವು. ಸತ್ಯವನ್ನು ರಕ್ಷಿಸಲು, ಸುದ್ದಿ ಸಂಸ್ಥೆಗಳು ಬದುಕುಳಿಯಲು ಕೂಡಿ ದುಡಿಯಲು ಆರಂಭಿಸಬೇಕು. ಸುಳ್ಳು ಸುದ್ದಿಗಳನ್ನು ಹರಡುವ ಜಾಲವು ನಮ್ಮ ಊಹೆಗೂ ನಿಲುಕದಷ್ಟು ವ್ಯವಸ್ಥಿತವಾಗಿ ಕೆಲಸ ಮಾಡುತ್ತದೆ. ಅವರು ನಮ್ಮನ್ನು ತುಳಿಯುತ್ತಿದ್ದಾರೆ.
ಸಾಮಾಜಿಕ ಜಾಲತಾಣಗಳು ಈಗ ಮಾಡಬೇಕಾದ್ದೇನೆಂದರೆ ಈಗಾಗಲೇ ತಮ್ಮ ಜಾಲದ ಮೂಲಕ ರಾಜಕೀಯ ವ್ಯವಸ್ಥೆಯೊಳಗೆ ಹರಡಿರುವ ವಿಷಯವನ್ನು ಹೇಗೆ ನಿಯಂತ್ರಿಸುವುದು ಎಂಬುದನ್ನು ಕಂಡುಕೊಳ್ಳುವುದು. ನನಗೆ ಇದು ಹೀಗೆ ಕಾಣಿಸುತ್ತದೆ- ಪ್ರಜಾಪ್ರಭುತ್ವ ದೇಹ ಎಂದಾದರೆ, ಸಾಮಾಜಿಕ ಮಾಧ್ಯಮ ಒಂದು ವೈರಸ್‌. ಇದು ಅತಿ ವೇಗದಲ್ಲಿ ದ್ವಿಗುಣವಾಗುತ್ತಿದ್ದು, ರಾಜಕೀಯ ವ್ಯವಸ್ಥೆಯನ್ನು ಕೊಲ್ಲುತ್ತದೆ.

ಈ ಹೋರಾಟದಲ್ಲಿ ರಾಜಕಾರಣಿಗಳ ಪಾತ್ರವೇನು?

9/11ರ ಬಳಿಕ ಜಗತ್ತಿನ ಸೇನೆ ಮತ್ತು ಕಾನೂನು ವ್ಯವಸ್ಥೆ ಶೀತಲ ಸಮರಗಳ ಸಿದ್ಧ ಮಾದರಿಯನ್ನು ಬದಲಿಸಿದೆ. ನಾವೀಗ ಹೊಸ ಜಗತ್ತಿನಲ್ಲಿದ್ದೇವೆ, ಇಲ್ಲಿ ಅತಿ ದೊಡ್ಡ ಸಮಸ್ಯೆ ಎಂದರೆ ನಾಯಕತ್ವದ್ದು.
ಹಿಂದೆಂದಿಗಿಂತಲೂ ರಾಜಕಾರಣಿಗಳು ಯಾವ ಮೌಲ್ಯಗಳ ಪರವಾಗಿ ನಿಲ್ಲುತ್ತಾರೆ ಎಂಬುದು ಪ್ರಶ್ನೆ. ಇಂದಿನ ಮೈತ್ರಿಗಳ ಕಹಿ ಅನುಭವ ಮತ್ತು ಶತ್ರುತ್ವವನ್ನು ಮರೆತು ಒಟ್ಟಾಗಬೇಕಿದೆ. ಪ್ರತಿ ಪಕ್ಷದ ರಾಜಕಾರಣಿಗಳು ಪ್ರಜಾಪ್ರಭುತ್ವದ ಪಾತ್ರವನ್ನು ಅರಿತಿದ್ದರೆ, ಇನ್ನು ಉತ್ತಮ ಕೆಲಸಗಳನ್ನು ಮಾಡಬಹುದಿತ್ತು ಎಂದು ನನಗನಿಸುತ್ತದೆ. ನನಗೆ ಅಮೆರಿಕದ ಡೆಮೊಕ್ರಟಿಕ್‌ ಪಕ್ಷವನ್ನು ನೋಡಿದಾಗ ಚುನಾವಣೆ ಎದುರಿಸುವ ಮುನ್ನವೇ ತನ್ನೊಳಗೆ ಒಡೆದು ಛಿದ್ರವಾಗುತ್ತದೆ ಎನ್ನುತ್ತದೆ.

ಜನರು ನಂಬುವಂತಹ ನಾಯಕರತ್ತ ಜಗತ್ತು ನೋಡುತ್ತಿದೆ. ನಾವು ಹರಿದು ಒಗೆಯಬೇಕಾದ್ದಲ್ಲ ಮುಖ್ಯವಾದ ವಿಷಯ. ಆದರೆ ಸುಳ್ಳು ಮಾಹಿತಿಯನ್ನು ಹರಡುತ್ತಿರುವ ಜಾಲಗಳನ್ನು ಇದನ್ನೇ ಗಮನಿಸಬೇಕೆಂದು ಬಯಸುತ್ತವೆ. ನಾವು ರಾಪ್ಲರ್‌ ಮೂಡ್‌ ಮೀಟರ್‌ ಅನ್ನು ಆರಂಭಿಸಿದಾಗ ಸಿಟ್ಟು ಅತಿ ವೇಗವಾಗಿ, ಭಾವುಕತೆ ಎರಡನೆಯ ಅತಿವೇಗವಾಗಿ ಹರಡುವ ಪ್ರೇರಣೆ ಎಂಬುದು ತಿಳಿಯಿತು. ಆದರೆ ಯಾರು ಪ್ರೇರಣೆ, ಯಾವ ಮೌಲ್ಯಗಳಿಗಾಗಿ ಈ ಪ್ರೇರಣೆ? ಪತ್ರಕರ್ತೆಯಾಗಿ ನನಗೆ ಹಿತಕರವೆನಿಸಿದ ವಿಷಯಗಳ ಬಗ್ಗೆ ನಿಲುವು ತಳೆಯುವಂತಹ ಒತ್ತಡ ನಿರ್ಮಾಣವಾಯಿತು. ಯಾಕೆಂದರೆ ನಾನು ರಾಜಕಾರಣಿಯಲ್ಲವಲ್ಲ.ಲ ಹಾಗಾಗಿ ನಾನು ರಾಜಕೀಯ ನಾಯಕರಲ್ಲಿ ನಾಯಕತ್ವವನ್ನು ನೋಡಲು ಬಯಸುತ್ತೇನೆ. ಸುಳ್ಳು ಮಾಹಿತಿಯ ಈ ಕಾಲದಲ್ಲಿ ಪ್ರಜಾಪ್ರಭುತ್ವಗಳ ಆಗ್ರಹವೂ ಇದೇ ಆಗಿದೆ.