ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ ಡೌನ್‌; ಟ್ವಿಟರ್‌ನಲ್ಲಿ ಸಕ್ರಿಯರಾಗಿರುವ ಬಳಕೆದಾರರು

ಅಮೆರಿಕ, ಇಂಗ್ಲೆಂಡ್‌ ಸೇರಿದಂತೆ ಜಗತ್ತಿನ ಹಲವು ದೇಶಗಳಲ್ಲಿ ಫೇಸ್‌ಬುಕ್‌ ನಿಷ್ಕ್ರಿಯವಾಗಿದೆ. ಅಷ್ಟೇ ಅಲ್ಲ, ಫೇಸ್‌ಬುಕ್‌ ಸಮೂಹದ ಇನ್‌ಸ್ಟಾಗ್ರಾಂ ಮತ್ತು ವಾಟ್ಸ್‌ಆಪ್‌ ಕೂಡ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಬಳಕೆದಾರರು ಟ್ವಿಟರ್‌ನಲ್ಲಿ ದೂರುತ್ತಿದ್ದಾರೆ, ಗೇಲಿ ಮಾಡುತ್ತಿದ್ದಾರೆ

ಫೇಸ್‌ಬುಕ್‌ ಸರಿಯಾಗಿ ಕೆಲಸ ಮಾಡುತ್ತಿಲ್ಲವೆ? ಇಂರ್ಟನೆಟ್‌ ಸಮಸ್ಯೆ ಎಂದುಕೊಂಡಿದ್ದೀರಾ? ಇಲ್ಲ. ಫೇಸ್‌ಬುಕ್ಕೇ ಸಮಸ್ಯೆಯಲ್ಲಿದೆ.

ಇಂದು ಸಂಜೆ ಏಳು ಗಂಟೆಯ ಹೊತ್ತಿಗೆ ಫೇಸ್‌ಬುಕ್‌ ಬಳಕೆದಾರರು ಕಿರಿಕಿರಿ ಅನುಭವಿಸಲಾರಂಭಿಸಿದ್ದರು. ವಾಲ್‌ನಲ್ಲಿ ಫೀಡ್‌ ಹೊಸ ಪೋಸ್ಟ್‌ಗಳು ಕಾಣಿಸುತ್ತಿಲ್ಲ. ಫೋಟೋಗಳು ಅಪ್‌ಲೋಡ್‌ ಆಗುತ್ತಿಲ್ಲ. ರಿಫ್ರೇಶ್‌ ಆಗುತ್ತಿಲ್ಲ… ಫೇಸ್‌ಬುಕ್‌ನ ಈ ಇನ್‌ಸ್ಟಾಗ್ರಾಮ್‌ನಲ್ಲೂ ಕಾಣಿಸಿಕೊಂಡಿತು. ವಾಟ್ಸ್‌ಆಪ್‌ನಲ್ಲೂ ಕಾಣಿಸಿಕೊಂಡಿದೆ.

ಫೇಸ್‌ಬುಕ್‌ ಸರ್ವರ್‌ ಕಾನ್ಫಿಗರೇಷನ್‌ನಲ್ಲಿ ಮಾಡಲಾದ ಬದಲಾವಣೆಯ ಪರಿಣಾಮ ಫೇಸ್‌ಬುಕ್‌ ಸಮೂಹಾದ ಮುಖ್ಯ ಸಾಮಾಜಿಕ ಮಾಧ್ಯಮಗಳ ಆಪ್‌ ಮತ್ತು ವೆಬ್‌ಸೈಟ್‌ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ.

ಮೊದಲು ಅಮೆರಿಕ, ಇಂಗ್ಲೆಂಡಿನಲ್ಲಿ ಕಾಣಿಸಿಕೊಂಡ ಈ ಸಮಸ್ಯೆ ನಿಧಾನವಾಗಿ ಜಗತ್ತಿನ ಎಲ್ಲ ಕಡೆಗೂ ಕಾಣಿಸಿಕೊಂಡಿದೆ. ಸಾಮಾಜಿಕ ಜಾಲತಾಣಗಳ ಕಾರ್ಯವೈಫಲ್ಯದ ಮೇಲೆ ಕಣ್ಣಿಡುವ ಡೌನ್‌ಡಿಟೆಕ್ಟರ್‌ ತಾಣದಲ್ಲಿ ಬಳಕೆದಾರರು ಒಬ್ಬರು ಬರೆದಿರುವಂತೆ, ”ಖಾಲಿ ವೆಬ್‌ಪುಟದ ಹೊರತು ಬೇರೇನೂ ಕಾಣಿಸುತ್ತಿಲ್ಲ”!

ಈ ಕುರಿತು ಅಧಿಕೃತ ಹೇಳಿಕೆ ನೀಡಿರುವ ಫೇಸ್‌ಬುಕ್‌, ಎಲ್ಲ ಆಪ್‌ ಮತ್ತು ವೆಬ್‌ಸೈಟನ್ನು ಸಹಜ ಸ್ಥಿತಿಗೆ ತರುವ ಪ್ರಯತ್ನ ಮಾಡುತ್ತಿರುವುದಾಗಿ ತಿಳಿಸಿದೆ.

ಈ ನಡುವೆ ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಬಳಕೆದಾರರು ಟ್ವಿಟರ್‌ನಲ್ಲಿ ಸಕ್ರಿಯರಾಗಿದ್ದು, #ಫೇಸ್‌ಬುಕ್‌ಡೌನ್‌, #ಇನ್‌ಸ್ಟಾಗ್ರಾಂಡೌನ್‌ ಎಂಬ ಹ್ಯಾಶ್‌ ಟ್ಯಾಗ್‌ ಬಳಸಿ ಮೀಮ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ.