ಫೇಸ್‌ಬುಕ್‌ ಕ್ವಿಜ್‌ಗಳು ಬರೀ ಮನರಂಜನೆಯಲ್ಲ, ನಿಮ್ಮ ಮಾಹಿತಿ ಕದಿಯುವ ತಂತ್ರ!

ಫೇಸ್‌ಬುಕ್‌ನಲ್ಲಿ ಆಸಕ್ತಿ, ಇಷ್ಟಾನಿಷ್ಟಗಳು, ವ್ಯಕ್ತಿತ್ವ ಹೀಗೆ ಹಲವು ಪ್ರಶ್ನೆಗಳನ್ನು ಮುಂದಿಟ್ಟು, ಅದಕ್ಕೆ ಪುಳಕ ಹುಟ್ಟಿಸುವ ಉತ್ತರ ನೀಡಿ, ಅದನ್ನು ನಿಮ್ಮ ಫೇಸ್‌ಬುಕ್‌ ವಾಲ್‌ನಲ್ಲಿ ಶೇರ್‌ ಮಾಡಿಕೊಳ್ಳುವುದಕ್ಕೆ ಪ್ರೇರೇಪಿಸುವ ಕ್ವಿಜ್‌ಗಳು, ಆಟಗಳು ವಾಸ್ತವದಲ್ಲಿ ನಿಮ್ಮ ರಂಜಿಸುತ್ತಿರುವುದಿಲ್ಲ. ಬದಲಿಗೆ ನಿಮ್ಮನ್ನು ಅರ್ಥ ಮಾಡಿಕೊಳ್ಳುತ್ತಿರುವೆ!

  • ಟೆಕ್‌ ಕನ್ನಡ ಟೀಮ್‌

ನಿಮ್ಮ ಆತ್ಮೀಯ ಸ್ನೇಹಿತರು ಯಾರು ಗೊತ್ತಾ? ನಿಮ್ಮ ಹುಟ್ಟಿದ ದಿನಾಂಕ ನಿಮ್ಮ ವ್ಯಕ್ತಿತ್ವದ ಬಗ್ಗೆ ಏನು ಹೇಳುತ್ತದೆ? ನಿಮ್ಮ ಇಷ್ಟದ ಬಣ್ಣ ಯಾವುದು ಗೊತ್ತಾ? ಫೇಸ್‌ಬುಕ್‌ನಲ್ಲಿ ನೀವು ಅತಿ ಹೆಚ್ಚು ಬಳಸುವ ಪದ ಯಾವುದು? ನೀವು ಯಾವ ಸೂಪರ್‌ ಹೀರೋನನ್ನು ಹೋಲುತ್ತೀರಿ? ಹಿಂದಿನ ಜನ್ಮದಲ್ಲಿ ನಿಮ್ಮನ್ನು ಕೊಂದಿದ್ದು ಯಾರು? ಹೀಗೆ ಒಂದಾದ ಮೇಲೆ ಒಂದು ಪ್ರಶ್ನೆಗಳನ್ನು ಕೇಳುವ, ತಿಳಿದುಕೊಳ್ಳುವಂತೆ ಪ್ರೇರೇಪಿಸುವ ಫೇಸ್‌ಬುಕ್‌ ಕ್ವಿಜ್‌ಗಳನ್ನು ನೀವೂ ಬಳಸಿರಬಹುದು. ಉತ್ತರಿಸಿ, ನಿಮ್ಮನ್ನು ನೀವು ಅರಿಯುವ ಪ್ರಯತ್ನವನ್ನೂ ಮಾಡಿರಬಹುದು.


ಮೇಲ್ನೋಟಕ್ಕೆ ಕಾಲಾಹರಣಕ್ಕೆ, ಮನರಂಜನೆಗೆ ಎಂಬಂತೆ ಕಾಣುವ ಈ ಆಟಗಳು, ಒಮ್ಮೆಯಾದರೂ ಉತ್ತರಿಸಿ ನೋಡುವಂತೆ ಪ್ರಚೋದಿಸುವ ಹಾಗಿರುತ್ತವೆ. ಆದರೆ ವಾಸ್ತವದಲ್ಲಿ ಮಾಹಿತಿ ಸಂಗ್ರಹಿಸುವ, ಬಳಕೆದಾರರ ಮನಸ್ಥಿತಿ ಅರಿಯುವ ತಂತ್ರ! ಬಹಳಷ್ಟು ಜನರು ಈ ಪ್ರಶ್ನೆಗಳಿಗೆ ಯಾಕೆ ಉತ್ತರಿಸುತ್ತೀರಿ ಎಂಬ ಬಗ್ಗೆ ಸ್ಪಷ್ಟತೆ ಇರುವುದಿಲ್ಲ.


ಪ್ರತಿ ಕ್ವಿಜ್‌ ಆಯ್ಕೆ ಮಾಡುವಾಗ ಫೇಸ್‌ಬುಕ್‌ ಲಾಗಿನ್‌ ಕೇಳುತ್ತವೆ. ನೀವು ಒಮ್ಮೆ ಲಾಗಿನ್‌ ಆಗಿ ಅಲ್ಲಿರುವ ಪ್ರಶ್ನೆಗಳಿಗೆ ಉತ್ತರಿಸುತ್ತಾ ಪ್ರತಿಯೊಬ್ಬ ಬಳಕೆದಾರನ ಪ್ರೊಪೈಲ್‌, ಫೋಟೋಗಳು, ಈ ಮೇಲ್‌ ವಿಳಾಸ, ನಿಮ್ಮ ಸ್ನೇಹಿತರ ಪಟ್ಟಿ, ನಿಮ್ಮ ಪೋಸ್ಟ್‌ಗಳನ್ನು ನೋಡುವ, ಎಲ್ಲವನ್ನು ಸಂಗ್ರಹಿಸಿಕೊಳ್ಳುವ ಅವಕಾಶವನ್ನು ಪಡೆದುಕೊಳ್ಳುತ್ತವೆ. ಅಷ್ಟೇ ಅಲ್ಲ ನಿಮ್ಮ ಧರ್ಮ, ಭಾಷೆ, ಸಂಸ್ಕೃತಿ, ಆಸಕ್ತಿ, ರಾಜಕೀಯ ನಿಲುವು, ನೀವು ಹೆಚ್ಚು ಸ್ಪಂದಿಸುವ ವಿಚಾರಗಳು, ಹೆಚ್ಚು ಚರ್ಚಿಸುವ ಸಂಗತಿಗಳು, ಯಾರೊಂದಿಗೆ ಹೆಚ್ಚು ಹರಟುತ್ತೀರಿ? ಯಾರಿಗೆ ಹೆಚ್ಚು ಟ್ಯಾಗ್‌ ಮಾಡುತ್ತೀರಿ ಎಂಬೆಲ್ಲಾ ಸಂಗತಿಗಳನ್ನು ಈ ಕ್ವಿಜ್‌ಗಳು ಸಂಗ್ರಹಿಸುತ್ತವೆ. ನಿಮ್ಮ ಖಾಸಗಿಯಾದ ಮಾಹಿತಿ ಕೂಡ ನಿಗೂಢವಾಗಿ ಕುಳಿತಿರುವ ವ್ಯಕ್ತಿಯ ಪಾಲಾಗುತ್ತದೆ. ಮಾಹಿತಿ ಇವತ್ತು ಜಗತ್ತಿನ ಯಾವುದೇ ಬೆಳೆಬಾಳುವ ಪದಾರ್ಥಕ್ಕಿಂತ ಹೆಚ್ಚಿನ ಮೌಲ್ಯವುಳ್ಳದ್ದು.

ಅಯ್ಯೋ ನಮ್ಮದೇನು ಮಹಾ?!

ಬಹಳಷ್ಟು ಮಂದಿಯ ಉಪೇಕ್ಷೆ ಏನೆಂದರೆ, ಅಯ್ಯೋ ಫೇಸ್‌ಬುಕ್‌ನಲ್ಲಿ ನಮ್ಮದೇನು ಮಹಾ ಮಾಹಿತಿ ಇರುತ್ತದೆ. ಬಹಳಷ್ಟು ಬಾರಿ ಜನ್ಮ ದಿನವನ್ನು ಬೇಕೆಂದೇ ತಪ್ಪಾಗಿ ಕೊಟ್ಟಿರುತ್ತೇವೆ. ಎಲ್ಲ ಮಾಹಿತಿ ತುಂಬುವುದಿಲ್ಲ ಎಂದು ತಮ್ಮ ಜಾಣ್ಮೆಯನ್ನು ಪ್ರದರ್ಶಿಸುತ್ತಾರೆ. ಹಾಗಾಗಿ ಫೇಸ್‌ಬುಕ್‌ ನಿಂದ ಎಷ್ಟು ಮಹತ್ವದ ಮಾಹಿತಿ ನಮ್ಮ ಖಾತೆಯಿಂದ ಸಿಕ್ಕೀತು ಎಂಬುದು ಅವರ ಪ್ರಶ್ನೆ.


ಫೇಸ್‌ಬುಕ್‌ ಗೇಮ್‌ ಅಥವಾ ಕ್ವಿಜ್‌ಗಳ ಮೂಲಕ ವಿವಿಧ ರೀತಿಯ ಮಾಹಿತಿ ಸಂಗ್ರಹ ನಡೆಯುತ್ತದೆ. ಒಂದು, ಸಾಮಾನ್ಯವಾಗಿ ಲಭ್ಯವಾಗುವ ಮಾಹಿತಿ, ಹೆಸರು, ಉದ್ಯೋಗ, ಆಸಕ್ತಿ, ಸ್ನೇಹಿತರು, ಜನ್ಮದಿನ, ಈ ಮೇಲ್‌ ಐಡಿ, ಸ್ಥಳ, ಬಳಸುವ ಪ್ರಮಾಣ, ಇತ್ಯಾದಿ. ಇನ್ನೊಂದು ಬಳಕೆಯ ವಿನ್ಯಾಸವನ್ನೂ ಗಮನಿಸಲಾಗುತ್ತದೆ. ನಿಮ್ಮ ವ್ಯಕ್ತಿತ್ವವನ್ನು ಅರಿಯುವ ಮತ್ತು ಅದನ್ನು ದಾಖಲಿಸಿಕೊಳ್ಳುವ ಪ್ರಯತ್ನವಾಗಿರುತ್ತದೆ. ಯಾವ ರೀತಿಯ ಭಾವನೆಗಳನ್ನು ನೀವು ಹೆಚ್ಚು ಅಭಿವ್ಯಕ್ತಿಪಡಿಸುತ್ತೀರಿ? ನಿಮ್ಮ ಸುತ್ತಮುತ್ತಲ ವಿದ್ಯಮಾನಗಳಿಗೆ ಹೇಗೆ ಪ್ರತಿಕ್ರಿಯಿಸುತ್ತೀರಿ? ಸಿನಿಮಾ, ರಾಜಕೀಯ ಇತ್ಯಾದಿ ವಿಷಯಗಳಲ್ಲಿ ನಿಮ್ಮ ನಿಲುವು ಹೇಗಿರುತ್ತದೆ? ಭಾವನಾತ್ಮಕ ಸಂಗತಿಗಳನ್ನು ಯಾವ ರೀತಿಯಲ್ಲಿ ಅಭಿವ್ಯಕ್ತಿಸುತ್ತೀರಿ ಎಂಬ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಕೆಲವು ನಿಮ್ಮ ಕ್ರಿಡಿಟ್‌ ಕಾರ್ಡ್‌ ಮಾಹಿತಿಯನ್ನು ಸಂಗ್ರಹಿಸುತ್ತವೆ.


ಮೊದಲ ರೀತಿಯಲ್ಲಿ ಸಂಗ್ರಹವಾಗುವ ಮಾಹಿತಿಯಿಂದ ಹಣದೋಚುವ, ಇಲ್ಲವೇ ದೊಡ್ಡ ದೊಡ್ಡ ಕಂಪನಿಗಳಿಗೆ ಮಾರುವ ಉದ್ದೇಶದಿಂದ ಸಂಗ್ರಹಿಸಬಹುದು. ಎರಡನೆಯ ರೀತಿಯಲ್ಲಿ ಸಂಗ್ರಹವಾಗುವ ಮಾಹಿತಿ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಅಭಿವೃದ್ಧಿಪಡಿಸುವಲ್ಲಿ ನೆರವಾಗುತ್ತದೆ.

ಇದನ್ನೂ ಓದಿ | ಸ್ಟೇಟಸ್‌ನಲ್ಲಿ ನೀವು ಸಿಂಗಲ್ಲೇ, ಆದರೆ ಫೇಸ್‌ಬುಕ್‌ಗೆ ನಿಮ್ ಗರ್ಲ್‌ಫ್ರೆಂಡ್‌ ಗೊತ್ತು!


ರಿಯಲ್‌ ಏಜ್‌ ಹೆಸರಿನ ಕ್ವಿಜ್‌, ನಿಮ್ಮ ಜೈವಿಕ ವಯಸ್ಸನ್ನು ವಿಶ್ಲೇಷಿಸುತ್ತದೆ. ನಿಮ್ಮ ಕುಟುಂಬದ ಇತಿಹಾಸ ಮತ್ತು ಆರೋಗ್ಯ ಹವ್ಯಾಸಗಳನ್ನು ಆಧರಿಸಿ ವಿಶ್ಲೇಷಿಸುತ್ತದೆ. ತನ್ನ ಪ್ರಶ್ನೆಗಳಿಂದ ಈ ಕ್ವಿಜ್‌, ಲೈಂಗಿಕ ಸಮಸ್ಯೆಗಳು, ಖಿನ್ನತೆಯ ಸಾಧ್ಯತೆಗಳನ್ನು ತಿಳಿದುಕೊಳ್ಳುತ್ತದೆ. ಹೆಚ್ಚಿನ ಮಾಹಿತಿ ಅಥವಾ ಪೂರ್ಣ ಫಲಿತಾಂಶದ ನೆಪವೊಡ್ಡಿ ಈ ಮೇಲ್‌ ವಿಳಾಸವನ್ನು ತೆಗೆದುಕೊಳ್ಳುತ್ತದೆ. ಈ ಮೇಲ್‌ ವಿಳಾಸ ಯಾವುದಾದರೂ ಔಷಧಿ ಮಾರಾಟದ ಕಂಪನಿ ಪಾಲಾಗುತ್ತದೆ!

ಒಮ್ಮೆ ಪ್ರಶ್ನಿಸಿಕೊಳ್ಳಿ, ಎಚ್ಚರವಹಿಸಿ

ಕೆಲವು ಪ್ರಶ್ನೆಗಳನ್ನು ಕೇಳಿ ನಿಮ್ಮನ್ನು ಮೇಧಾವಿ ಎಂದು ಘೋಷಿಸುವ ಕ್ವಿಜ್‌ ಎಷ್ಟರ ಮಟ್ಟಿಗೆ ಅನುಭವಿಯಾಗಿರಲು ಸಾಧ್ಯ? ಒಬ್ಬ ತಜ್ಞರ ಮುಂದೆ ಕೂತಾಗ ಇದೇ ಉತ್ತರ ಸಿಕ್ಕಲು ಸಾಧ್ಯವೇ? ತರ್ಕವಿಲ್ಲದ, ನಿಮ್ಮ ಹಿಂದಿನ ಜನ್ಮದ ಕತೆಯನ್ನು ಹೇಳಲು ಹೇಗೆ ಸಾಧ್ಯ? ಎಂದು ಕೇಳಿಕೊಂಡರೆ ಈ ಕ್ವಿಜ್‌ಗಳ ಉದ್ದೇಶವೇ ಬೇರೆ ಎಂದು ಅರ್ಥ ಮಾಡಿಕೊಳ್ಳಬಹುದು. ಹಾಗಾದರೆ ನಮ್ಮ ಮಾಹಿತಿ ರಕ್ಷಣೆ ಮಾಡಿಕೊಳ್ಳುವುದು ಹೇಗೆ?


ಫೇಸ್ಬುಕ್‌ನ ಪ್ರೈವೆಸಿ ಸೆಟಿಂಗ್ಸ್‌ ಪರಿಶೀಲಿಸಿ. ಯಾರು ನಿಮ್ಮ ಪೋಸ್ಟ್‌ ನೋಡಬಹುದು, ಟ್ಯಾಗ್‌ ಮಾಡಬಹುದು ಎಂಬುದನ್ನು ಸೂಕ್ತ ರೀತಿಯಲ್ಲಿ ಆಯ್ಕೆ ಮಾಡಿಕೊಳ್ಳಿ. ನಿಮ್ಮ ಪ್ರೊಫೈಲ್‌ನಲ್ಲಿ ನಿಮ್ಮ ಫೋನ್‌ ನಂಬರ್‌, ವಿಳಾಸ, ವೃತ್ತಿಗೆ ಸಂಬಂಧಿಸಿದ ಮಾಹಿತಿ, ನಿಮ್ಮ ರಿಲೇಷನ್‌ಶಿಪ್‌ ಸ್ಟೇಟಸ್‌, ನಿಮ್ಮ ಜನ್ಮದಿನ ಮಾಹಿತಿಯನ್ನು ದಾಖಲಿಸಬೇಡಿ.