ಫ್ರೀಬೇಸಿಕ್ಸ್‌ ವಿರೋಧಿಸಿದ ಸುನೀಲ್‌ ಅಬ್ರಹಂ ಈಗ ಭಾರತದ ಫೇಸ್‌ಬುಕ್‌ ಸಾರ್ವಜನಿಕ ನೀತಿ ನಿರೂಪಣೆಯ ನಿರ್ದೇಶಕ

ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಇಂಟರ್ನೆಟ್‌, ಖಾಸಗಿತನ, ತಂತ್ರಜ್ಞಾನ, ಮುಕ್ತ ತಂತ್ರಾಂಶಗಳ ಪರ ಹೋರಾಡುತ್ತಿರುವ, ಫ್ರೀ ಬೇಸಿಕ್ಸ್‌ ಹೆಸರಿನಲ್ಲಿ ಉಚಿತ ಇಂಟರ್ನೆಟ್‌ ಪರಿಚಯಿಸಲು ಹೊರಟಾಗ ಕಟುವಾಗಿ ಟೀಕಿಸಿದ, ವಕೀಲರೂ ಆದ ಸುನೀಲ್‌ ಅಬ್ರಹಂ ಅವರನ್ನು ಫೇಸ್‌ಬುಕ್‌ ಆಯ್ಕೆ ಮಾಡಿರುವುದು ಗಮನಿಸಬೇಕಾದ ಬೆಳವಣಿಗೆ

ಚಿತ್ರ ಕೃಪೆ: ಬ್ಯುಸಿನೆಸ್‌ ಸ್ಟ್ಯಾಂಡರ್ಡ್‌

ಫೇಸ್‌ಬುಕ್‌ ಆಳುವ ಪಕ್ಷದ ಪರ ಕೆಲಸ ಮಾಡುತ್ತಿದೆ ಎಂಬ ದೂರು ಕೇಳಿ ಬರುತ್ತಿರುವ ಹಾಗೂ ದೆಹಲಿ ಸರ್ಕಾರ ಫೇಸ್‌ಬುಕ್‌ನ ಭಾರತದ ಮುಖ್ಯಸ್ಥರನ್ನು ವಿಚಾರಣೆಗೆ ಒಳಪಡಿಸಿರುವ ಹೊತ್ತಲ್ಲಿ, ಬೆಂಗಳೂರಿನ ಸುನೀಲ್‌ ಅಬ್ರಹಂ ಅವರನ್ನು ಫೇಸ್‌ಬುಕ್‌ನ ಮುಖ್ಯ ಜವಾಬ್ದಾರಿಯೊಂದನ್ನು ನಿರ್ವಹಿಸಲು ನೇಮಿಸಿದೆ.

ಮಂಗಳವಾರ ಹೇಳಿಕೆ ನೀಡಿರುವ ಫೇಸ್‌ಬುಕ್‌ನ ಭಾರತ, ದಕ್ಷಿಣ ಮತ್ತು ಮಧ್ಯೆ ಏಷ್ಯಾದ ಸಾರ್ವಜನಿಕ ನೀತಿ ನಿರೂಪಣೆ ನಿರ್ದೇಶಕಿಯಾದ ಆಂಖಿ ದಾಸ್‌, ‘ ತಂತ್ರಜ್ಞಾನ ನೀತಿ ರೂಪಿಸುವ ಕ್ಷೇತ್ರದಲ್ಲಿ ಸುನೀಲ್‌ ಅವರಿಗೆ ಇರುವ ಅನುಭವ ಮತ್ತು ಡಾಟಾ ಸುಧಾರಣಾ ನೀತಿಯಲ್ಲಿರುವ ಅಗಾಧವಾದ ಸಂಶೋಧನಾ ಹಿನ್ನೆಲೆ ಫೇಸ್‌ಬುಕ್‌ಗೆ ಹೊಂದುವಂತಿದೆ. ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಸಮುದಾಯಗಳ ಸಬಲೀಕರಣ ಕಾರ್ಯದಲ್ಲಿ ಇವರ ಅನುಭವ ಮತ್ತು ಪರಿಣತಿ ನೆರವಾಗುತ್ತಿದೆ” ಎಂದಿದ್ದಾರೆ.

ಸುನೀಲ್‌ ಅವರು ಹೊಸ ಜವಾಬ್ದಾರಿಯ ಭಾಗವಾಗಿ ತಂಡವೊಂದರ ನೇತೃತ್ವವಹಿಸಲಿದ್ದು, ಮಾಹಿತಿ ಸುರಕ್ಷತೆ, ಖಾಸಗಿತನ, ಗ್ರಾಹಕರ ರಕ್ಷಣೆ ಮತ್ತು ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಒಳಗೊಂಡ ಹೊಸ ಉತ್ಪನ್ನ ಸೇವೆಗಳ ಕ್ಷೇತ್ರದಲ್ಲಿ ಸಕ್ರಿಯರಾಗಿರುವವರೊಂದಿಗೆ ಸಹಬಾಗಿತ್ವ ಏರ್ಪಡಿಸುವ ನಿಟ್ಟಿನಲ್ಲಿ ಶ್ರಮಿಸಲಿದ್ದಾರೆ.

ಸುನೀಲ್‌ ಕಳೆದ ಒಂದು ದಶಕದಿಂದ ಮುಕ್ತ ತಂತ್ರಾಂಶಗಳ ಪರ ಹೋರಾಡುತ್ತಾ ಬಂದವರು. ಆನ್‌ಲೈನ್‌ನಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ, ಡಿಜಿಟಲ್‌ ಖಾಸಗಿತನ, ನೆಟ್‌ನ್ಯೂಟ್ರಾಲಿಟಿಗಳ ಪರವಾಗಿ ದನಿ ಎತ್ತಿದ್ದ ಸುನೀಲ್‌ ಅವರು ಅಭಿಮತ ರೂಪಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದರು. ಅಷ್ಟೇ ಅಲ್ಲ ಪ್ರಸ್ತುತ ಸರ್ಕಾರ ಆಧಾರ್‌ ಅನ್ನು ಕಡ್ಡಾಯಗೊಳಿಸಿದಾಗ, ಆಧಾರ್‌ ವ್ಯವಸ್ಥೆ ಹೇಗೆ ಸರ್ಕಾರದ ಕಣ್ಗಾವಲು ಸಾಧನವಾಗಿ ಬಳಕೆಯಾಗುತ್ತಿದೆ ಎಂದು ಟೀಕಿಸಿದ್ದರು.

ಅಷ್ಟೇ ಅಲ್ಲ, ಫ್ರೀ ಬೇಸಿಕ್ಸ್‌ ಹೆಸರಿನಲ್ಲಿ ಜಿಯೋ ಕಂಪನಿಯೊಂದಿಗೆ ಕೈಜೋಡಿಸಿ ಉಚಿತ ಇಂರ್ಟನೆಟ್‌ ಕೊಡಲು ಹೊರಟ ಫೇಸ್‌ಬುಕ್‌ ವಿರುದ್ಧ ಸುನೀಲ್‌ ಟೀಕೆ ಮಾಡಿದ್ದರು. ಫ್ರೀ ಬೇಸಿಕ್ಸ್‌ ಮೂಲಕ ಡಿಜಿಟಲ್‌ ಸಮಾನತೆಯನ್ನು ತರುವುದಾಗಿ ಫೇಸ್‌ಬುಕ್‌ ಪ್ರಚಾರ ಮಾಡಿದಾಗ, ಸುನೀಲ್‌ , ಇದು ಕಣ್ಗಾವಲಿನ ಕ್ರಮ ಎಂದು ಎಚ್ಚರಿಸಿದ್ದರು.

ಸ್ವಯಂ ವಲಯಕ್ಕೆ ಅಗ್ಗದ ದರದಲ್ಲಿ ಸಾಫ್ಟ್‌ವೇರ್‌ ಸೇವೆ ನೀಡುವುದಕ್ಕಾಗಿ 1998ರಲ್ಲಿ ಮಾಹಿತಿ ಎಂಬ ಸಂಸ್ಥೆ ಕಟ್ಟಿದ ಇವರು, ನಂತರದಲ್ಲಿ ವಿಶ್ವ ಸಂಸ್ಥೆಯ ಮುಕ್ತ ಸಂಪನ್ಮೂಲ ಜಾಲದಲ್ಲಿ ಮುಖ್ಯ ಜವಾಬ್ದಾರಿಯನ್ನು ನಿರ್ವಹಿಸಿದ್ದರು. ಇದಾದ ಬಳಿಕ ಬೆಂಗಳೂರಿನಲ್ಲಿ ಸೆಂಟರ್‌ ಫಾರ್‌ ಇಂಟರ್‌ನೆಟ್‌ ಅಂಡ್‌ ಸೊಸೈಟಿ ಎಂಬ ಸರ್ಕಾರೇತರ ಸಂಸ್ಥೆ ಸ್ಥಾಪಿಸಿ, ಸಮಾಜ ಮತ್ತು ತಂತ್ರಜ್ಞಾನದ ನಡುವೆ ಸೇತುವೆಯಾಗಿ ಕೆಲಸ ಮಾಡುವ, ನೀತಿ ನಿರೂಪಿಸುವ ನಿಟ್ಟಿನಲ್ಲಿ ಮಹತ್ವ ಪಾತ್ರ ನಿರ್ವಹಿಸಿದರು.

ಫೇಸ್‌ಬುಕ್‌ ಜಾಗತಿಕವಾಗಿ ರಾಜಕೀಯ ಉದ್ದೇಶಗಳಿಗೆ ಬಳಕೆಯಾಗುತ್ತಿರುವ ಹೊತ್ತಲ್ಲಿ, ಜನಾಂಗೀಯ ದ್ವೇಷ, ರಾಜಕೀಯ ದುರುದ್ದೇಶ, ಸುಳ್ಳು ಸುದ್ದಿಗಳನ್ನು ಹರಡುವ ವಿಷಯದಲ್ಲಿ ಸಾಕಷ್ಟು ಟೀಕೆಗೆ ಗುರಿಯಾಗುತ್ತಿದೆ. ಭಾರತದಲ್ಲೂ ಆಡಳಿತಾರೂಢ ಸರ್ಕಾರದ ಪಕ್ಷಪಾತಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂಬ ಆರೋಪ ಕೇಳಿ ಬರುತ್ತಿರುವ ಹೊತ್ತಲ್ಲಿ ಸುನೀಲ್‌ ಅವರ ನೇಮಕ ಕುತೂಹಲ ಹುಟ್ಟಿಸಿದೆ.

2 thoughts on “ಫ್ರೀಬೇಸಿಕ್ಸ್‌ ವಿರೋಧಿಸಿದ ಸುನೀಲ್‌ ಅಬ್ರಹಂ ಈಗ ಭಾರತದ ಫೇಸ್‌ಬುಕ್‌ ಸಾರ್ವಜನಿಕ ನೀತಿ ನಿರೂಪಣೆಯ ನಿರ್ದೇಶಕ

  1. ಘೋರ ಕಲಿಯುಗ
    ಆಪ್ತರಾದ ಸುನೀಲ್ ಅಬ್ರಹಾಂರನ್ನೇ ಫೇಸ್ ಬುಕ್ ತನ್ನತ್ತ ಸೆಳೆದಿದೆ ಎಂದರೆ,. . . ಇನ್ನು ಕಷ್ಟ. ಎಷ್ಟು ದಿನ ಅಲ್ಲಿ ಸುನೀಲ್ ಇರುತ್ತಾರೆ ಎಂಬುದು ಕುತೂಹಲ…।

  2. ದಕ್ಷಿಣ ಮತ್ತು ಕೇಂದ್ರ ಏಷ್ಯಾದ

    South & Central Asia….???

    ಮಧ್ಯ ಏಷ್ಯಾ….

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

%d bloggers like this: