ಫೇಸ್‌ಬುಕ್‌ ಪರಿಚಯಿಸುತ್ತಿರುವ ಈ ಹೊಸ ಸಾಫ್ಟ್‌ವೇರ್‌ ಯಾವುದೇ 100 ಭಾಷೆಗಳನ್ನು ನೇರ ಅನುವಾದಿಸಬಲ್ಲದು!

ಲೋಕಲೈಸೇಷನ್‌ ಜಾಗತಿಕ ಟೆಕ್‌ ಕಂಪನಿಗಳ ಮಂತ್ರ. ಅದಕ್ಕಾಗಿ ಅನುವಾದ ಸೇವೆಯಂತಹ ಪ್ರಯೋಗಗಳನ್ನು ಮಾಡುತ್ತಿವೆ. ಗೂಗಲ್‌ ಈಗಾಗಲೇ ಹಲವು ವರ್ಷಗಳ ಈ ಕೆಲಸ ಮಾಡುತ್ತಿದೆ. ಈಗ ಸರದಿ ಫೇಸ್‌ಬುಕ್‌ನದ್ದು. ಇಂಗ್ಲಿಷ್‌ ನೆರವಿಲ್ಲದೆ 100 ಭಾಷೆಗಳನ್ನು ಅನುವಾದ ಮಾಡಬಲ್ಲ ಮಲ್ಟಿಲಿಂಗ್ವಲ್‌ ಮಷಿನ್‌ ಟ್ರಾನ್ಸಲೇಷನ್‌ ಮುಕ್ತ ಸಾಫ್ಟ್‌ವೇರ್‌ ಪರಿಚಯಿಸುತ್ತಿದೆ

ಲೋಕಲೈಸೇಷನ್‌ ಎಲ್ಲ ದೈತ್ಯ ಟೆಕ್‌ ಕಂಪನಿಗಳ ಮಂತ್ರ. ಇಂಗ್ಲಿಷ್ ಮಾತನಾಡುವ ಮಾರುಕಟ್ಟೆಯನ್ನು ಬಹುತೇಕ ನಿಯಂತ್ರಿಸಬಲ್ಲ ಮಟ್ಟಕ್ಕೆ ತಲುಪಿರುವ ಈ ಕಂಪನಿಗಳು ಇಂಗ್ಲಿಷೇತರ ಮಾರುಕಟ್ಟೆಯನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ಉದ್ದೇಶದಿಂದ ಹಲವು ಪ್ರಯೋಗಗಳಿಗೆ ಕೈಹಾಕಿವೆ. ಅದರಲ್ಲಿ ಒಂದು ಅನುವಾದ.

ಗೂಗಲ್‌ ಈ ನಿಟ್ಟಿನಲ್ಲಿ ಹಲವು ವರ್ಷಗಳಿಂದ ಸೇವೆ ನೀಡುತ್ತಿದೆ. ಈಗ ಸರದಿ ಫೇಸ್‌ಬುಕ್‌ನದ್ದು. ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಆಧರಿಸಿದ ಮಲ್ಟಿಲಿಂಗ್ವಲ್‌ ಮಷಿನ್‌ ಟ್ರಾನ್ಸಲೇಷನ್‌ ಎಂಬ ಉಚಿತ ತಂತ್ರಾಂಶವನ್ನು ಬಿಡುಗಡೆ ಮಾಡುತ್ತಿದೆ. ಇದು 100 ಭಾಷೆಗಳ ನಡುವೆ, ಇಂಗ್ಲಿಷ್‌ ಭಾಷೆಯ ನೆರವಿಲ್ಲದೆ ಅನುವಾದಿಸುವುದಕ್ಕೆ ನೆರವಾಗಲಿದೆ ಎಂದು ಫೇಸ್‌ಬುಕ್‌ ತಿಳಿಸಿದೆ.

7000 ಭಾಷೆಗಳಿಗೆ ಈ ಸೇವೆಯನ್ನು ವಿಸ್ತರಿಸುವ ಗುರಿ ಹೊಂದಿರುವ ಫೇಸ್‌ಬುಕ್‌ ಯಾವುದೇ ಹೊಸ ಪದ, ವಾಕ್ಯವನ್ನು ಗುರುತಿಸಿದರೆ, ಈ ತಂತ್ರಾಂಶ ಉಳಿದ 100 ಭಾಷೆಗಳಿಗೆ ಅನುವಾದಿಸಿ, ಲಭ್ಯವಾಗುವಂತೆ ರೂಪಿಸಲಾಗಿದೆ. ಆದರೆ ಅನುವಾದದ ನಿಖರತೆ, ಕರಾರುವಕ್ಕುತನವನ್ನು ಬಳಸುತ್ತಾ ಹೋದಂತೆ ತಿಳಿಯಬಹುದು.

ಇದುವರೆಗೆ ಡಿಜಿಟಲ್‌ ಲೋಕದಲ್ಲಿ ಭಾಷೆಗಳ ನಡುವೆ ಅನುವಾದ ಮಾಡಲು ಇಂಗ್ಲಿಷ್‌ ಆಧರಿಸಬೇಕಿತ್ತು. ಅಂದರೆ ಚೀನಿ ಭಾಷೆಯಿಂದ ಫ್ರೆಂಚ್‌ ಭಾಷೆಗೆ ಅನುವಾದಿಸಬೇಕೆಂದರೆ, ಮೊದಲು ಚೀನಿಯಿಂದ ಇಂಗ್ಲಿಷ್‌ಗೆ, ನಂತರ ಇಂಗ್ಲಿಷ್‌ನಿಂದ ಫ್ರೆಂಚ್‌ ಭಾಷೆಗೆ ಅನುವಾದಿಸಬೇಕಿತ್ತು. ಆದರೆ ಫೇಸ್‌ಬುಕ್‌ನ ಎಂಎಂಟಿ ಇಂಗ್ಲಿಷ್‌ ಮಧ್ಯಸ್ಥಿಕೆಯನ್ನು ಕಿತ್ತೊಗೆದಿದೆ.

ಫೇಸ್‌ಬುಕ್‌ ಪ್ರಕಟಣೆಯ ಪ್ರಕಾರ ಎಂಎಂಟಿಗೆ 2200 ಭಾಷೆಗಳ ತರಬೇತಿಯನ್ನು ನೀಡಲಾಗಿದೆ. ಆದರೆ ಹೆಚ್ಚು ಸಮರ್ಥವಾಗಿ ಕೆಲಸ ಮಾಡುವ 100 ಭಾಷೆಗಳಿಗೆ ಈ ತಂತ್ರಾಂಶ ಸೇವೆ ನೀಡಲಿದೆ. 100 ಭಾಷೆಗಳ 750 ಕೋಟಿ ವಾಕ್ಯಗಳನ್ನು ಈ ತಂತ್ರಾಂಶ ಹೊಂದಿದೆ ಎಂದು ಪ್ರಕಟಣೆ ತಿಳಿಸಿದೆ.

ಯಾವುದೇ ಭಾಷೆಯೊಂದು ದೀರ್ಘಕಾಲ ಬದುಕಬೇಕಾದರೆ, ಅದಕ್ಕೊಂದು ವ್ಯಾವಹಾರಿಕ ಇರಬೇಕು. ಇಂಗ್ಲಿಷ್‌ ಒಂದು ವ್ಯಾವಹಾರಿಕ ಭಾಷೆಯಾಗುವ ಮೂಲಕ ಜಗತ್ತಿನ ಮೇಲೆ ತನ್ನ ವ್ಯಾಪಕ ನಿಯಂತ್ರಣ ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಈ ಬೆಳವಣಿಗೆಯಿಂದ ಅನೇಕ ಸ್ಥಳೀಯ ಭಾಷೆಗಳು ನಶಿಸಿದವು. ಆದರೆ ಮಾರುಕಟ್ಟೆ ಉದ್ದೇಶದಿಂದಲೇ ಟೆಕ್‌ ಕಂಪನಿಗಳು ನಡೆಸುತ್ತಿರುವ ಈ ಪ್ರಯೋಗಗಳು ಸಾವಿರಾರು ಸ್ಥಳೀಯ ಭಾಷೆಗಳಿಗೆ ಜೀವ ತುಂಬಬಹುದು ಎಂಬ ನಿರೀಕ್ಷೆಯನ್ನು ಹುಟ್ಟಿಸುತ್ತಿವೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.