ಫೇಸ್‌ಬುಕ್‌- ಜಿಯೋ ಹೊಸ ನಂಟು; ಆರ್ಥಿಕ ಸಂಕಷ್ಟದ ಕಾಲದಲ್ಲೊಂದು ಸಂಚಲನದ ಬೆಳವಣಿಗೆ

ಫೇಸ್‌ಬುಕ್‌ ಮತ್ತು ಭಾರತದ ಅತಿದೊಡ್ಡ ಉದ್ಯಮ ಸಂಸ್ಥೆ ರಿಲಯೆನ್ಸ್‌ ಕೈಜೋಡಿಸಿವೆ. ಮಾರ್ಕ್‌ ಝುಕರ್‌ಬರ್ಗ್‌ನ ರಿಲೆಯನ್ಸ್‌ ಜಿಯೋದಲ್ಲಿ 9.9%ರಷ್ಟು ಶೇರು ಖರೀದಿ ಮಾಡಿದ್ದು, ಟೆಲಿಕಾಂ ಉದ್ಯಮದಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ. ಇದರಿಂದ ಯಾರಿಗೆ ಲಾಭ? ಪರಿಣಾಮಗಳೇನು?

ಮುಖೇಶ್‌ ಅಂಬಾನಿ ಒಡೆತನದ ಜಿಯೋ ಪ್ಲಾಟ್ಫಾರ್ಮ್ಸ್‌ ಲಿಮಿಟೆಡ್‌ನಲ್ಲಿ ಫೇಸ್‌ಬುಕ್‌ ರೂ.43,574 ಕೋಟಿ ಹೂಡಿಕೆ ಮಾಡಿದೆ. ಪರಿಣಾಮವಾಗಿ ಜಿಯೋ ಪ್ಲಾಟ್ಫಾರ್ಮ್ಸ್‌ನಲ್ಲಿ ಫೇಸ್‌ಬುಕ್‌ ಶೇ.9.99 ಪಾಲು ಹೊಂದಿದಂತಾಗಿದೆ.

ಅಲ್ಪ ಪ್ರಮಾಣದ ಶೇರು ಖರೀದಿಗಾಗಿ ಜಾಗತಿಕ ಮಟ್ಟದ ಟೆಕ್‌ ಕಂಪನಿಗಳಲ್ಲೇ ಇದುವರೆಗಿನ ಅತಿದೊಡ್ಡ ವಿದೇಶಿ ನೇರ ಬಂಡವಾಳ ಹೂಡಿಕೆ (ಎಪ್‌ಡಿಐ) ಎಂದು ಪರಿಗಣಿತವಾಗುವ ಈ ಹೂಡಿಕೆ ಜಿಯೋ ಪ್ಲಾಟ್ಫಾರ್ಮ್ಸ್‌ನ ಒಟ್ಟು ಮೌಲ್ಯವನ್ನು 4.67 ಲಕ್ಷ ಕೋಟಿ ರೂ. ಎಂದು ಅಂದಾಜಿಸಿದೆ. (ಅಂದರೆ ಡಾಲರ್‌ ವಿರುದ್ಧ ರೂಪಾಯಿಯನ್ನು ರೂ.70ರ ಸ್ಥಿರ ದರದಲ್ಲಿ 659.5 ಕೋಟಿ ಡಾಲರ್) ಪ್ರಸ್ತುತ ಹೂಡಿಕೆ ಅಂತಿಮವಾಗಲು ಸರಕಾರಿ ನಿಯಂತ್ರಣ ಸಂಸ್ಥೆಗಳ ಒಪ್ಪಿಗೆ ಮಾತ್ರ ಬಾಕಿಯಿದೆ.

ಜಿಯೋ ಪ್ಲಾಟ್ಫಾರ್ಮ್ಸ್‌ ಲಿ. ಹೆಸರಿನ ಕಂಪನಿಯು ರಿಲಯನ್ಸ್‌ ಇಂಡಸ್ಟ್ರೀಸ್‌ ಲಿ. ಒಡೆತನದಲ್ಲಿದೆ. ಜಿಯೋ ಬ್ರ್ಯಾಂಡ್‌ ಅಡಿಯಲ್ಲಿ 38.8 ಕೋಟಿ ಚಂದಾದಾರರಿಗೆ 4ಜಿ ಇಂಟರ್ನೆಟ್‌ ಸೇವೆ ನೀಡುತ್ತಿರುವ ರಿಲಯನ್ಸ್‌ ಜಿಯೋ ಇನ್ಫೋಕಾಂ ಲಿ. ಕಂಪನಿಯು ತಾಂತ್ರಿಕವಾಗಿ ಜಿಯೋ ಪ್ಲಾಟ್ಫಾರ್ಮ್ಸ್‌ ಲಿ. ಒಡೆತನದಲ್ಲಿದೆ.

ಪದರ ಪದರವಾಗಿರುವ ಈ ಒಡೆತನ ವ್ಯವಸ್ಥೆಯಲ್ಲಿ ಫೇಸ್ಬುಕಿನ ಹೂಡಿಕೆ ವಾಸ್ತವದಲ್ಲಿ ಜಿಯೋ ಪ್ಲಾಟ್ಫಾರ್ಮ್ಸ್‌ನಲ್ಲಿ ಮಾತ್ರವೇ ಹೊರತು ಇಡಿಯಾಗಿ ರಿಲಯನ್ಸ್‌ ಇಂಡಸ್ಟ್ರೀಸ್‌ನಲ್ಲಿ ಅಲ್ಲ ಎಂಬುದು ಇಲ್ಲಿ ಉಲ್ಲೇಖಾರ್ಹ.

ಜಿಯೋ ಪ್ಲಾಟ್ಫಾರ್ಮ್ಸ್‌ ಅಂದರೆ…

4ಜಿ ಮೊಬೈಲ್‌ ಇಂಟರ್ನೆಟ್‌ ಸೇವೆಯೂ. ಸೇರಿದಂತೆ ಬ್ರಾಡ್‌ಬ್ಯಾಂಡ್‌ ಸೇವೆಗಳು, ಸ್ಮಾರ್ಟ್ಫೋನೂ ಒಳಗೊಂಡಂತೆ ಇತರೆ ಸ್ಮಾರ್ಟ್‌ ಉಪಕರಣಗಳು, ಕ್ಲೌಡ್‌ ಸೇವೆಗಳು, ಬಿಗ್‌ ಡಾಟಾ ಅನಾಲಿಸಿಸ್‌, ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌,‌ ಆಗ್ಮೆಂಟೆಡ್‌ ರಿಯಾಲಿಟಿ, ಐಒಟಿ (ಇಂಟರ್ನೆಟ್‌ ಆಫ್‌ ಥಿಂಗ್ಸ್) ಹಾಗೂ ಬ್ಲಾಕ್‌ಚೇನ್‌ ತಂತ್ರಜ್ಞಾನ – ಹೀಗೆ ವಿವಿಧ ಸೇವೆಗಳ ಬೃಹತ್‌ ಗುಚ್ಛ ಜಿಯೋ ಪ್ಲಾಟ್ಫಾರ್ಮ್ಸ್‌ ಅಡಿಯಲ್ಲಿ ಬರುತ್ತದೆ. ಈ ಎಲ್ಲಾ ವಿಭಾಗಳಲ್ಲೂ ದಾಪುಗಾಲಿಡುವುದು ಜಿಯೋದ ಗುರಿ. ಫೇಸ್ಬುಕ್‌ ಕೂಡ ಬಿಗ್‌ ಡಾಟಾ, ಕ್ಲೌಡ್‌, ಬ್ಲಾಕ್‌ಚೇನ್‌ ತಂತ್ರಜ್ಞಾನ ವಿಭಾಗಗಳ ಮೇಲೆ ಆಶಾಭಾವನೆ ಹೊಂದಿರುವುದು ಈಗಾಗಲೇ ತಿಳಿದ ವಿಚಾರ. ಹಾಗಾಗಿ ಫೇಸ್ಬುಕ್-ಜಿಯೋದ ಈ ವಹಿವಾಟು ಜಾಗತಿಕ ಮಟ್ಟದಲ್ಲಿ ಹಲವು ವಿಶ್ಲೇಷಕರನ್ನು ತುದಿಗಾಲ ಮೇಲೆ ನಿಲ್ಲಿಸಿದೆ.

ಫೇಸ್ಬುಕ್‌ ಹೇಳಿಕೆ

ಜಿಯೋದಲ್ಲಿ ಫೇಸ್ಬುಕ್‌ನ ಹೂಡಿಕೆ ಹಲವು ಕೋನಗಳಿಂದಲೂ ಹೊಸ ಮಜಲು. ಇದು ದೇಶೀಯವಾಗಿ ಟೆಕ್‌ ಕಂಪನಿಯೊಂದಕ್ಕೆ ಹರಿದುಬಂದ ಬೃಹತ್‌ ಪ್ರಮಾಣದ ವಿದೇಶಿ ನೇರ ಬಂಡವಾಳ ಹೂಡಿಕೆ ಮಾತ್ರವಲ್ಲದೆ ಜಾಗತಿಕವಾಗಿಯೂ ಯಾವುದೇ ಟೆಕ್‌ ಕಂಪನಿಗಳ ಪೈಕಿ ಅಲ್ಪ ಪ್ರಮಾಣದ ಶೇರು ಖರೀದಿಗಾಗಿ ಮಾಡಲಾದ ಅತಿದೊಡ್ಡ ಹೂಡಿಕೆ ಇದಾಗಿದೆ ಎಂದು ಫೇಸ್ಬುಕ್‌ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಭಾರತೀಯ ಉದ್ಯಮಗಳು, ಭಾರತೀಯ ಔದ್ಯಮಿಕ ಮನಸ್ಸುಗಳು ಹಾಗೂ ಮುಂದಿನ ಅವಕಾಶಗಳ ಮೇಲೆ ಫೇಸ್ಬುಕ್‌ ಭಾರಿ ನಂಬಿಕೆ ಇರಿಸಿದೆ ಎಂದು ಕಂಪನಿ ಇದೇ ವೇಳೆ ತಿಳಿಸಿದೆ.

ರಿಲಯನ್ಸ್‌ ಹೇಳಿಕೆ

ನಮ್ಮ ಮುಖ್ಯ ಗಮನ ಭಾರತದಲ್ಲಿರುವ 12 ಕೋಟಿ ರೈತರು, 6 ಕೋಟಿಯಷ್ಟು ಕಿರು, ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ಯಮಗಳು, 3 ಕೋಟಿ ಸಣ್ಣ ವ್ಯಾಪಾರಿಗಳು, ಮತ್ತು ಡಿಜಿಟಲ್‌ ಸೇವೆ ಬಯಸುವ ಅಸಂಖ್ಯ ಜನರ ಮೇಲಿದೆ ಎಂದು ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ನ ಚೇರ್ಮನ್‌ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸ್ಥಾನದಲ್ಲಿರುವ ಮುಖೇಶ್‌ ಅಂಬಾನಿ ತಿಳಿಸಿದ್ದಾರೆ.

ಮೋದಿ ಪ್ರೇಮವನ್ನು ಹಲವು ಬಾರಿ ಪ್ರದರ್ಶಿಸಿರುವ ಅಂಬಾನಿ, ‘ಫೇಸ್ಬುಕ್‌ ಮತ್ತು ಜಿಯೋದ ಈ ಪಾಲುದಾರಿಕೆಯು ಪ್ರಧಾನಿ ನರೇಂದ್ರ ಮೋದಿಯ ಡಿಜಿಟಲ್‌ ಇಂಡಿಯಾ ಕನಸುಗಳಲ್ಲಿ ಮುಖ್ಯವಾದ ಸರ್ವರಿಗೂ ಸುಲಭ ಬದುಕು ಮತ್ತು ಸರಳ ವ್ಯವಹಾರದ ಪರಿಕಲ್ಪನೆಯನ್ನು ಪ್ರತಿಯೊಬ್ಬ ನಾಗರಿಕನಿಗೂ ತಲುಪಿಸಲು ಸಹಾಯ ಮಾಡಲಿದೆ’ ಎಂದು ಹೇಳಿದ್ದಾರೆ. ಅಲ್ಲದೆ ಕರೋನಾ ನಂತರದ ದಿನಗಳಲ್ಲಿ ಭಾರತದ ಆರ್ಥಿಕತೆ ಕನಿಷ್ಠ ಅವಧಿಯಲ್ಲಿ ಮೇಲೆ ಬರಲಿದೆ. ಈ ಪರಿವರ್ತನೆಯಲ್ಲಿ ನಮ್ಮ ಪಾಲುದಾರಿಕೆ (ಫೇಸ್ಬುಕ್-ಜಿಯೋ ಪಾಲುದಾರಿಕೆ) ಬಹುಮುಖ್ಯ ಕೊಡುಗೆ ನೀಡಲಿದೆ ಎಂದೂ ಅಭಿಪ್ರಾಯಪಟ್ಟಿದ್ದಾರೆ

ಬಳಕೆದಾರರ ಮಾಹಿತಿಯೇ ಬಂಡವಾಳ, ಖಾಸಗಿತನದ ಕಳವಳ

ಈ ಹೂಡಿಕೆ ಜತೆಗೇ ಜಿಯೋ, ರಿಲಯನ್ಸ್‌ ರೀಟೇಲ್‌ ಹಾಗೂ ಫೇಸ್ಬುಕ್‌ ಒಡೆತನದ ವಾಟ್ಸಾಪ್‌ ನಡುವೆ ವ್ಯಾವಹಾರಿಕ ಒಪ್ಪಂದ ಶುರುವಾಗಿದೆ. ವಾಟ್ಸಾಪ್‌ ಈಗಾಗಲೇ ವ್ಯಕ್ತಿಗಳ ನಡುವಿನ ಸಂವಹನ ಹಾಗೂ ವಾಟ್ಸಾಪ್‌ ಬಿಸ್ನೆಸ್‌ ಮೂಲಕ ವ್ಯಕ್ತಿ-ಉದ್ಯಮ ಜತೆಗಿನ ಸಂವಹನದ ಮೇಲೆ ಹಿಡಿತ ಸಾಧಿಸಿದೆ. ಜಿಯೋ ಮಾರ್ಟ್‌ ಹೆಸರಿನ ಹೊಸ ಸೇವೆಯನ್ನು ರಿಲಯನ್ಸ್‌ ಅಭಿವೃದ್ಧಿ ಪಡಿಸುತ್ತಿದ್ದು ತನ್ನದೇ ಉತ್ಪನ್ನಗಳ ಮಾರಾಟದ ಜತೆಗೆ ಕಿರಾಣಿ ಅಂಗಡಿಗಳಂಥ ಸಣ್ಣ ಸಣ್ಣ ವ್ಯಾಪಾರಿಗಳನ್ನೂ ಗ್ರಾಹಕರ ಜತೆ ಜೋಡಿಸುವ ಕೊಂಡಿಯಾಗಲಿದೆ ಎಂದು ಕಂಪನಿ ಹೇಳಿದೆ.

ಫೇಸ್ಬುಕ್‌ ವತಿಯಿಂದ ಬಳಕೆದಾರರ ಮಾಹಿತಿ ಹಂಚಿಕೆ ಮತ್ತು ಖಾಸಗಿತನ ಒಡಂಬಡಿಕೆಯು ಈ ಹಿಂದೆಯೇ ಹಲವು ಬಾರಿ ಟೀಕೆಗೆ ಗುರಿಯಾಗಿದೆ. ರಾಜಕೀಯ ಪಕ್ಷಗಳಿಗೆ ವಿವಿಧ ಸೇವೆಗಳನ್ನು ನೀಡುವ ಬ್ರಿಟನ್‌ ಮೂಲದ ಕೇಂಬ್ರಿಜ್‌ ಅನಾಲಿಟಿಕಾ ಸಂಸ್ಥೆಯು ಚುನಾವಣಾ ರಾಜಕೀಯದಲ್ಲಿ ಪ್ರಭಾವಿ ಜಾಹೀರಾತುಗಳನ್ನು ವಿನ್ಯಾಸ ಮಾಡಲು ಫೇಸ್ಬುಕ್‌ ಬಳಕೆದಾರರ ಖಾಸಗಿ ಮಾಹಿತಿಯನ್ನು ಅವರ ಅರಿವಿಗೆ ಬರದಂತೆ ಪಡೆದು ಬಳಸಿತ್ತು ಎಂಬ ಆರೋಪ 2018ರಲ್ಲಿ ಖಾಸಗೀತನ ವಿಚಾರದಲ್ಲಿ ದೊಡ್ಡ ಗದ್ದಲವೆಬ್ಬಿಸಿತ್ತು.

2014ರಲ್ಲಿ ಫೇಸ್ಬುಕ್ 160 ಕೋಟಿ ಡಾಲರ್‌ಗೆ ವಾಟ್ಸಾಪನ್ನು ಖರೀದಿಸಿದ್ದು ಮಾಧ್ಯಮಗಳಲ್ಲಿ ಶತಮಾನದ ಅತಿದೊಡ್ಡ ಖರೀದಿ ಎಂದು ಬಣ್ಣಿತವಾಗಿತ್ತು. ಬಳಕೆದಾರರ ಮಾಹಿತಿ ಬಳಕೆ ಮತ್ತು ಜಾಹೀರಾತುಗಳಿಂದ ಹೊರತಾಗಿ ಇರಬೇಕು ಎಂದಿದ್ದ ವಾಟ್ಸಾಪ್‌ನ ನೀತಿಯನ್ನು ಖರೀದಿ ನಂತರದಲ್ಲಿ ಫೇಸ್ಬುಕ್‌ ಬದಲಿಸಿತ್ತು. ಪರಿಣಾಮವಾಗಿ 2018ರಲ್ಲಿ ವಾಟ್ಸಾಪಿನ ಸಹ ಸಂಸ್ಥಾಪಕ ಬ್ರಿಯಾನ್‌ ಆಕ್ಟನ್‌ ಫೇಸ್‌ಬುಕ್‌ ತೊರೆದಿದ್ದರು. ವಾಟ್ಸಾಪಿನಲ್ಲಿ ಬಳಕೆದಾರರ ಮಾಹಿತಿ ಆಧರಿತ ಜಾಹೀರಾತುಗಳ ಪ್ರದರ್ಶನಕ್ಕೆ ಫೇಸ್‌ಬುಕ್‌ ನಿರ್ಧಸಿದ್ದೇ ತಾನು ಹೊರಬರಲು ಕಾರಣ ಎಂದು ಬ್ರಿಯಾನ್‌ ಆಕ್ಟನ್‌ ಫೋರ್ಬ್ಸ್‌ ಪತ್ರಿಕೆಗೆ ನೀಡಿದ ಸಂದರ್ಶನವೊಂದರಲ್ಲಿ ತಿಳಿಸಿದ್ದರು. ನನ್ನ ಕಂಪನಿಯನ್ನು ಮಾರಾಟ ಮಾಡಿದ್ದು ನನ್ನದೇ ಆಯ್ಕೆ. ದೊಡ್ಡ ಲಾಭಕ್ಕಾಗಿ ಬಳಕೆದಾರರ ಮಾಹಿತಿಯನ್ನು ಮಾರಾಟ ಮಾಡುವ ಮೂಲಕ ನನಗೇ ನಾನೇ ರಿಯಾಯಿತಿ ಮಾಡಿಕೊಂಡೆ ಎಂಬ ವಾಸ್ತವ ನಿತ್ಯವೂ ನನ್ನಲ್ಲಿ ಸುಳಿಯುತ್ತದೆ ಎಂಬರ್ಥದ ಮಾತನ್ನು ಆಕ್ಟನ್‌ ಹೇಳಿದ್ದರು. ಫೇಸ್‌ಬುಕ್‌ ನೆರಳಿನಿಂದ ಹೊರಬಂದ ಆಕ್ಟನ್‌ ಕೇಂಬ್ರಿಜ್‌ ಅನಾಲಿಟಿಕಾ ಹಗರಣ ಸಂದರ್ಭ It is time. #deletefacebook ಎಂದು ಟ್ವೀಟಿಸಿದ್ದು ಸುದ್ದಿ ಮಾಡಿತ್ತು.

ಜಿಯೋದ ಇತ್ತೀಚಿನ ಪ್ರಮುಖ ಹೂಡಿಕೆಗಳು

2016ರಲ್ಲಿ 400 ಕೋಟಿ ಡಾಲರ್‌ ಹೂಡಿಕೆಯೊಂದಿಗೆ ಅಂಬಾನಿ ಆರಂಭಿಸಿದ ಜಿಯೋ ಪ್ರಮುಖ ಟೆಲಿಕಾಂ ಕಂಪನಿ ಮಾತ್ರವಲ್ಲದೆ ಅದರ ಆಚೆಗೂ ವಿಸ್ತರಿಸಿದೆ. ಇದುವರೆಗೆ ಹಲವು ಕಂಪನಿಗಳನ್ನೂ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. 2021ರ ಮಾರ್ಚ್‌ ವೇಳೆಗೆ ಸಾಲದಿಂದ (ಹೌದು, ದೊಡ್ಡ ವ್ಯವಹಾರಗಳೆಲ್ಲ ಸಾಲದಲ್ಲೇ ನಡೆಯುವುದಲ್ವೇ..) ಸಂಪೂರ್ಣ ವಿಮುಖವಾಗುವಲ್ಲಿ ಫೇಸ್ಬುಕ್‌-ಜಿಯೋ ಒಪ್ಪಂದ ಸಹಕಾರಿಯಾಗಲಿದೆ ಎನ್ನಲಾಗಿದೆ.

ರಿಲಾಯನ್ಸ್‌ ಈಗಾಗಲೇ ತನ್ನ ಕಚ್ಚಾತೈಲ ವಹಿವಾಟಿನ ಶೇ. 20ರಷ್ಟು ಪಾಲನ್ನು ಸೌದಿ ಅರಾಮ್ಕೋಗೆ ಮಾರಾಟ ಮಾಡುವ ವಿಚಾರ ಮಾತುಕತೆಯ ಹಂತದಲ್ಲಿದೆ, ಜತೆಗೆ ತನ್ನ ಟವರ್‌ ನಿರ್ವಹಣೆ ವಹಿವಾಟಿನಲ್ಲಿ ಅಲ್ಪ ಪ್ರಮಾಣದ ಪಾಲು ಮಾರಾಟಕ್ಕೆ ಕೆನಡಾ ಮೂಲದ ಬ್ರೂಕ್‌ಫೀಲ್ಡ್‌ ಅಸ್ಸೆಟ್‌ ಮ್ಯಾನೇಜ್ಮೆಂಟ್‌ ಜತೆಗೂ ಮಾತುಕತೆ ಪ್ರಗತಿಯಲ್ಲಿದೆ. ಈ ನಡುವೆ ಜಿಯೋ ಮೂಲಕ ನಡೆಸಲಾದ ಕೆಲವು ಪ್ರಮುಖ ಹೂಡಿಕೆಗಳು ಈ ಕೆಳಗಿನಂತಿವೆ.

ಹಾಪ್ಟಿಕ್

ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಬಳಸಿ ವೆಬ್‌, ಮೊಬೈಲ್‌, ಸಾಮಾಜಿಕ ಜಾಲತಾಣಗಳಲ್ಲಿ ಮಾಣವ ಹಸ್ತಕ್ಷೇಪವಿಲ್ಲದೆ ಧ್ವನಿ ಆಧಾರಿತ ಮತ್ತು ಚಾಟ್‌ ಮೂಲಕ ಸಂವಹನ ನಡೆಸುವ ಸೇವೆಗಳನ್ನು ನೀಡುವ ಕಂಪನಿ ಹಾಪ್ಟಿಕ್‌. 2013ರಲ್ಲಿ ಮುಂಬೈನಲ್ಲಿ ಸ್ಥಾಪನೆಯಾದ ಈ ಕಂಪನಿಯಲ್ಲಿ ಕಳೆದ ವರ್ಷ ಜಿಯೋ ರೂ. 700 ಕೋಟಿಗಳಿಗೆ ಶೇ. 87ರಷ್ಟು ಪಾಲು ಖರೀದಿಸುವ ಮೂಲಕ ಒಡೆತನ ಸಾಧಿಸಿದೆ.

ಸಾವನ್

ಆಪ್‌ ಮೂಲಕ ಆನ್‌ಲೈನ್‌ನಲ್ಲಿ ಹಾಡು ಕೇಳಬಹುದಾದ ಗಾನ, ಸ್ಪಾಟಿಫೈ, ಅಮೆಝಾನ್‌ ಮ್ಯೂಸಿಕ್‌, ಆಪಲ್‌ ಮ್ಯೂಸಿಕ್‌ಗೆ ಪ್ರತಿಸ್ಫರ್ಧಿಯಾದ ಸಾವನ್‌ 2018ರಲ್ಲಿ ಜೋಯೋ ಪಾಲಾಯಿತು. ಅದಕ್ಕಾಗಿ ರಿಲಾಯನ್ಸ್‌ ವ್ಯಯಿಸಿದ್ದು ಸುಮಾರು 720 ಕೋಟಿ ರೂ.

ಡೆನ್‌ ನೆಟ್ವರ್ಕ್‌, ಹಾಥ್‌ವೇ ಕೇಬಲ್‌ ಮತ್ತು ಡಾಟಾಕಾಮ್

ರಿಲಾಯನ್ಸ್‌ ರೂ. 2,045 ಕೋಟಿಗೆ ಶೇ.66 ಪಾಲು ಪಡೆಯುವ ಮೂಲಕ ಡೆನ್‌ ನೆಟ್ವರ್ಕನ್ನು ಖರೀದಿಸಿತು, ಜತೆಗೆ ರೂ.2,940 ಕೋಟಿಗೆ ಶೇ.51.3ರಷ್ಟು ಪಾಲು ಖರೀದಿ ಮೂಲಕ ಹಾಥ್‌ವೇ ಕೇಬಲ್‌ ಮತ್ತು ಡಾಟಾಕಾಂ ವಶಪಡಿಸಿಕೊಂಡಿತು. ಜಿಯೋ ಫೈಬಲ್‌ ಸೇವೆ ಆರಂಭಿಸುವಲ್ಲಿ ಈ ಖರೀದಿ ಪ್ರಮುಖ ಪಾತ್ರ ವಹಿಸಿದೆ.

ಕೊಳ್ಳುವ ಮಾರುವ ಮಾರಿ ಹಬ್ಬ

ಸದ್ಯ ಫೇಸ್ಬುಕ್‌-ಜಿಯೋ ಮಾಡಿಕೊಂಡಿರುವ ಹಸ್ತಲಾಘವ ಕಾರ್ಪೋರೇಟ್‌ ಜಗತ್ತಿನ ಇಬ್ಬರು ದೈತ್ಯರನ್ನು ಒಂದೇ ಸೂರಿನ ಅಡಿ ತಂದಿದೆ. ವಾಟ್ಸಾಪ್-ಫೇಸ್ಬುಕ್-ಜಿಯೋ ಮೂಲಕ ಕೋಟ್ಯಂತರ ಜನರ ಖಾಸಗಿ ಮಾಹಿತಿಯನ್ನು ತನ್ನ ಮುಷ್ಠಿಯಲ್ಲಿ ಇರಿಸಿಕೊಂಡಿರುವ ಈ ಕಂಪನಿಗಳು ಮುಂದಿನ ದಿನಗಳಲ್ಲಿ ಸಣ್ಣ ಉದ್ದಿಮೆಗಳು, ವ್ಯಾಪಾರಿಗಳು ಮಾತ್ರವಲ್ಲ, ಚುನಾವಣೆಗಳ ಮೇಲೆಯೂ ಎಂತಹ ಪ್ರಭಾವ ಬೀರಲಿದೆ ಕುತೂಹಲಕ್ಕೆ ಕಾರಣವಾಗಿದೆ.

ಈ ಹಿಂದೆ ಫೇಸ್‌ಬುಕ್‌- ಜಿಯೋ ಮೂಲಕ ಫ್ರೀಬೇಸಿಕ್‌ ಹೆಸರಿನಲ್ಲಿ ಉಚಿತ ಇಂಟರ್ನೆಟ್‌ ಸೇವೆ ಕೊಡಲು ಮುಂದಾಗಿದ್ದು ನೆನಪಿರಬಹುದು. ಆಯ್ದ ಸೇವೆಗಳನ್ನು ಉಚಿತವಾಗಿ ನೀಡುವ ಈ ತಂತ್ರ ನವೋದ್ಯಮಗಳಿಗೆ ಕೊಡಲಿಪೆಟ್ಟಾಗುವುದು, ಗ್ರಾಹಕರು ಮುಕ್ತವಾಗಿ ಇಂರ್ಟನೆಟ್‌ ಬಳಸುವ ಪ್ರಜಾಸತ್ತಾತ್ಮಕ ಹಕ್ಕುಗಳಿಂದ ವಂಚಿಸುವುದು ಎಂಬ ಟೀಕೆ ವ್ಯಾಪಕವಾದ ಹಿನ್ನೆಲೆಯಲ್ಲಿ ಈ ಎರಡೂ ಸಂಸ್ಥೆಗಳು ಉಚಿತ ಇಂಟರ್ನೆಟ್‌ ನೀಡುವ ಆಲೋಚನೆಯನ್ನು ಕೈಬಿಟ್ಟಿದ್ದವು.

ಆದರೆ ಈಗ ಈ ಸಂಸ್ಥೆಗಳು ಮತ್ತೆ ಒಂದಾಗಿರುವುದು ಯಾವೆಲ್ಲ ಉದ್ಯಮಗಳ ತಳ ಅಲುಗಾಡಿಸಬಹುದು ಎಂಬುದನ್ನು ಎಲ್ಲರೂ ಕುತೂಹಲದಿಂದ ಕಾಯುವಂತೆ ಮಾಡಿದೆ. ಆರ್ಥಿಕ ಹಿಂಜರಿತ, ಕರೋನಾದಿಂದ ಆದ ನಷ್ಟಗಳ ನಡುವೆ ಎಲ್ಲ ಉದ್ಯಮಗಳು ಏದುಸಿರುವ ಬಿಡುವ ಸಂದರ್ಭದಲ್ಲಿ ಜಿಯೋ -ಫೇಸ್‌ಬುಕ್‌ ಜೊತೆಯಾಗಿರುವುದನ್ನು ಸ್ವಾಗತಿಸಬೇಕು, ವಿರೋಧಿಸಬೇಕು ಎಂಬುದನ್ನು ಲೆಕ್ಕಹಾಕುವಂತೆ ಮಾಡಿದೆ.

ಆದರೆ ಜಪಾನ್‌ ಮೂಲದ ಬೃಹತ್‌ ಹೂಡಿಕಾ ಸಂಸ್ಥೆ ಸಾಫ್ಟ್‌ಬ್ಯಾಂಕ್‌ ವಿ ವರ್ಕ್‌ನಲ್ಲಿ ಮಾಡಿದ ಹೂಡಿಕೆ ಸಾಫ್ಟ್‌ಬ್ಯಾಂಕ್‌ ಪಾಲಿಗೆ ಪಂಗನಾಮವಾಗಿ ಪರಿಣಮಿಸಿತು. ಅದೇ ಸಂಸ್ಥೆ ಹೋಟೆಲ್‌ ಉದ್ಯಮ ಓಯೋದಲ್ಲಿ ಮಾಡಿರುವ ಬೃಹತ್‌ ಹೂಡಿಕೆ ಕರೋನಾ ಹೊಡೆತಕ್ಕೆ ಭೀಕರ ಅಲುಗಾಟದಲ್ಲಿದೆ. ದೊಡ್ಡವರೆಲ್ಲ ಜಾಣರಲ್ಲ ಎಂಬುದನ್ನು ಈ ಉದಾಹರಣೆ ತೋರಿಸುತ್ತದೆ. ಎಲ್ಲರ ಕಾಲೆಯುತ್ತೆ ಕಾಲ ಎಂಬಲ್ಲಿಗೆ ನಾವು ನೀವು ಕಾದು ನೋಡೋಣ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.