ಫೇಸ್‌ಬುಕ್‌ ಪುರಾಣ | ಫೇಸ್ಬುಕ್ ಬರುವ ಮೊದಲಿನ ಜಗತ್ತಿನಲ್ಲಿ ಸೋಷಿಯಲ್ ಮೀಡಿಯಾ ಎಂಬುದು ಇರಲಿಲ್ಲವೆ?

ಇಂದು ಫೇಸ್‌ಬುಕ್‌ ಕೇವಲ ಸೋಷಿಯಲ್‌ ನೆಟ್‌ವರ್ಕ್‌ ತಾಣವಾಗಿ ಉಳಿದಿಲ್ಲ. ಅದು ಬೆಳೆದಿರುವ ರಕ್ಕಸ ರೀತಿ ಬೆರಗು ಹುಟ್ಟಿಸುವ ಬದಲು ಬೆಚ್ಚಿ ಬೀಳಿಸುತ್ತದೆ. ಈ ತಾಣ ಹುಟ್ಟಿದ ರೀತಿ, ಬೆಳೆದು ವ್ಯಾಪಿಸಿಕೊಂಡ ಬಗೆ, ಅದು ಸೃಷ್ಟಿಸಿರುವ ಆತಂಕವನ್ನು ಈ ಹೊಸ ಅಂಕಣ ಚರ್ಚಿಸಲಿದೆ

ಫೇಸ್‌ಬುಕ್‌ ಬರುವ ಮೊದಲಿನ ಜಗತ್ತಿನಲ್ಲಿ ಸೋಷಿಯಲ್‌ ಮೀಡಿಯಾ ಎಂಬುದು ಇರಲಿಲ್ಲವೆ?

ಸೋಷಿಯಲ್‌ ಮೀಡಿಯಾ. ಇಂದು ಪರ್ಯಾಯ ಮಾಧ್ಯಮವಾಗಿ, ಜನರನ್ನು ಬೆಸೆಯುವ ವೇದಿಕೆಗಳಾಗಿ, ಪ್ರತಿಭಾವಂತರಿಗೆ ತಮ್ಮ ಕನಸುಗಳನ್ನು ಈಡೇರಿಸಿಕೊಳ್ಳುವ ತಾಣಗಳಾಗಿ ಬೆಳೆದು ನಿಂತಿದೆ. ರಾಜಕೀಯವಾಗಿ ಪ್ರಭಾವಿಸುವ ಶಕ್ತಿಯಾಗಿ, ಉದ್ಯಮ ಜಗತ್ತಿನ ಅಸ್ತ್ರವಾಗಿಯೂ ಅನೇಕರ ಕೈಯಲ್ಲಿದೆ.

ವರ್ಚ್ಯುವಲ್‌ ಆದ ಜಗತ್ತಾಗಿ ಅವತರಿಸಿರುವ ಈ ಸೋಷಿಯಲ್‌ ಮೀಡಿಯಾ ಈಗ ಕೆಲವು ಹೆಸರುಗಳಿಗೆ ಅನ್ವರ್ಥವಾಗಿ ಹೋಗಿದೆ. ಟ್ವಿಟರ್‌, ಫೇಸ್‌ಬುಕ್‌, ಯೂಟ್ಯೂಬ್‌ ಇನ್ನು ಕೆಲವು. ಮುಕ್ತ ಅಭಿವ್ಯಕ್ತಿಗೆ ಅವಕಾಶ ನೀಡಿದ ಈ ಮಾಧ್ಯಮ ಕಲ್ಪನೆ ಇಂದು ಅದು ಪಡೆದಿರುವ ರೂಪಾಂತರ ನೋಡಿ ಬೆಚ್ಚಿ ಬೀಳಲೇ ಬೇಕು. ಮಾಹಿತಿಯೇ ಅಮೂಲ್ಯವಾಗಿರುವ ಈ ಕಾಲದಲ್ಲಿ ಈ ತಾಣಗಳು ಅಕ್ಷಯ ಸ್ವರೂಪಿಗಳಾಗಿ ಗಣಿಗಳಾಗಿ ಹೋಗಿವೆ.

ಇಂಟರ್ನೆಟ್‌ ತೀವ್ರಗತಿಯಲ್ಲಿ ಹೊಸ ಅಯಾಮಗಳನ್ನು ಪಡೆದುಕೊಳ್ಳುತ್ತಿದ್ದ ಕಾಲದಲ್ಲಿ ಎಲ್ಲರನ್ನೂ ಒಳಗೊಳ್ಳುವ ಪ್ರಯತ್ನವಾಗಿ 90ರ ದಶಕದಲ್ಲಿ ನಡೆದ ಕೆಲವು ಪ್ರಯೋಗಗಳು ಸಾಮಾನ್ಯರನ್ನು ಇಂರ್ಟರ್ನೆಟ್‌ನತ್ತ ಕರೆದು ತಂದಿದೆ. ಗೇಮ್‌ಗಳು, ತರಹೇವಾರಿ ವೆಬ್‌ತಾಣಗಳು ಸದ್ದು ಮಾಡಲಾರಂಭಿಸಿದ್ದವು. ಇಂಟರ್ನೆಟ್‌ ಹೊಸತಾಗಿದ್ದರಿಂದ ಎಲ್ಲರ ಪಾಲ್ಗೊಳ್ಳೊವಿಕೆಗೆಯನ್ನು ಮುಕ್ತವಾಗಿ ಸ್ವಾಗತಿಸುತ್ತಿತ್ತು. ಪ್ರತಿಯೊಬ್ಬ ಬಳಕೆದಾರ ತನ್ನದೇ ಅವಕಾಶವನ್ನು (ಸ್ಪೇಸ್‌) ಹೊಂದುವುದಕ್ಕೆ ಅನೇಕ ಸಂಸ್ಥೆಗಳು ಆಹ್ವಾನಿಸಲಾರಂಭಿಸಿದವು.

ಈ ವಿದ್ಯಮಾನ ನಿಧಾನವಾಗಿ ಜನರನ್ನು ಬೆಸೆಯುವ ಪರಿಕಲ್ಪನೆಗಳು ಮೊಳಕೆ ಒಡೆಯುವುದಕ್ಕೆ ಪೂರಕವಾಯಿತು. ಅಂತಹ ಮೊದಲ ಮೊಳಕೆ ಜಿಯೋಸಿಟೀಸ್‌, ಬಹುಶಃ ಈಗಿನ ತಲೆಮಾರಿನ ಯಾರೂ ಕೇಳಿರದ ಹೆಸರು. 1995ರಲ್ಲಿ ಬ್ಲಾಗ್‌ ಬರುವುದಕ್ಕೂ ಮೊದಲು ತಮ್ಮದೇ ಆದ ವೆಬ್‌ಸೈಟ್‌ ಸೃಷ್ಟಿಸಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಟ್ಟಿತು. ಅಂದರೆ ನಿಮ್ಮದೇ ಆದ ಹೋಮ್‌ ಪೇಜ್‌ ಸೃಷ್ಟಿಸಿಕೊಳ್ಳುವುದಕ್ಕೆ ಅವಕಾಶ ನೀಡಿತು. ಎಚ್‌ಟಿಎಂಎಲ್‌ ಕೋಡ್‌ ಬರೆಯಲು ತಿಳಿದವರಿಗೆ ಇದೊಂದು ಹಬ್ಬ. ನನ್ನ ಗೆಳೆಯರೊಬ್ಬರು ಕಂಪ್ಯೂಟರ್‌ ಲಾಂಗ್ವೆಜ್‌ ಕೋರ್ಸ್‌ (ಜಾವಾ, ಸಿ+++)ಕಲಿಯುತ್ತಿದ್ದವರು, ಚಿತ್ರದುರ್ಗದ ಕೋಟೆಯ ಬಗ್ಗೆ ಅಪಾರ ಪ್ರೀತಿ ಇದ್ದ ಅವರು ಸ್ವತಃ ಸೆರೆ ಹಿಡಿದ ಚಿತ್ರಗಳನ್ನು ಬಳಸಿ, ಇಂಗ್ಲಿಷಿನಲ್ಲಿ ಸಣ್ಣ ಸಣ್ಣ ಟಿಪ್ಪಣಿಗಳನ್ನು ಬರೆದು ಜಿಯೋ ಸಿಟೀಸ್‌ನಲ್ಲಿ ಫೋರ್ಟ್‌ಸಿಟಿ ಚಿತ್ರದುರ್ಗ ಎಂಬ ಪೇಜ್‌ವೊಂದನ್ನು ಸಿದ್ಧಪಡಿಸಿದ್ದರು. ಆಗಿನ್ನೂ ಯೂನಿಕೋಡ್‌ ಬಂದಿರಲಿಲ್ಲ.

ನಂತರದ ದಿನಗಳಲ್ಲಿ ಇದೇ ಜಿಯೋಸಿಟೀಸ್‌ನಲ್ಲಿ ಸಾಹಿತ್ಯ, ಕಾವ್ಯ ಸೇರಿದಂತೆ ಹಲವು ಮಹತ್ವದ ವಿಚಾರಗಳನ್ನು ಹಂಚುವ ಪುಟಗಳನ್ನು ನಿರಂತರವಾಗಿ ಗಮನಿಸುತ್ತಾ ಬಂದೆ.  ಯಾಹೂ 1998ರಲ್ಲಿ ಈ ತಾಣವನ್ನು ಖರೀದಿಸಿತು. ನಂತರದ ಹತ್ತು ವರ್ಷಗಳ ಸಕ್ರಿಯವಾಗಿದ್ದ, ಜಿಯೋಸಿಟೀಸ್‌, ಹೊಸ ತಾಣಗಳ ಅಬ್ಬರದಲ್ಲಿ ನಿಂತು ಹೋಯಿತು.

ಇವತ್ತಿನ ಸೋಷಿಯಲ್‌ ಮೀಡಿಯಾಗಳಿಗೆ ಯಾವುದೇ ರೀತಿಯ ಹೋಲಿಕೆ ಇಲ್ಲದಿದ್ದರೂ, ಇಂಟರ್ನೆಟ್‌ನಲ್ಲಿ ಇದು ವ್ಯಕ್ತಿಗತವಾದ ಸ್ಥಳಾವಕಾಶವನ್ನು ಸೃಷ್ಟಿಸಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಟ್ಟಿತು.

ಆದರೆ ನಿಜವಾದ ಸೋಷಿಯಲ್‌ ಮೀಡಿಯಾ ಕಲ್ಪನೆಗೆ ನಾಂದಿ ಹಾಡಿದ್ದು ಸಿಕ್ಸ್‌ಡಿಗ್ರೀಸ್‌.ಕಾಂ. 1997ರಲ್ಲಿ ಆರಂಭವಾದ ಈ ತಾಣ ಮುಂದೆ ಫೇಸ್‌ಬುಕ್‌, ಮೈ ಸ್ಪೇಸ್‌ನಂತಹ ಸೋಷಿಯಲ್‌ ಮೀಡಿಯಾಗಳಿಗೆ ಸ್ಪಷ್ಟ ಚೌಕಟ್ಟು ನೀಡಿತು ಎಂದರೆ ತಪ್ಪಿಲ್ಲ. ಈ ತಾಣದಲ್ಲಿ ಬುಲೆಟಿನ್‌ಗಳನ್ನು ಪ್ರಕಟಿಸಬಹುದಿತ್ತು. ಇದನ್ನು ನಿಮ್ಮ ಸ್ನೇಹಿತರು, ಕುಟುಂಬದವರು, ಪರಿಚಿತರು ಓದಬಹುದಿತ್ತು.

ಜೊತೆಗೆ ಸ್ನೇಹಿತರಿಗೆ ಸಂದೇಶಗಳನ್ನು ಕಳಿಸುವುದಕ್ಕೆ ಅವಕಾಶ ನೀಡಿತ್ತು. ಕೇವಲ ನಾಲ್ಕು ವರ್ಷ ಸಕ್ರಿಯವಾಗಿದ್ದ ಈ ತಾಣ 35 ಲಕ್ಷ ಬಳಕೆದಾರರಿದ್ದರು. ಯೂತ್‌ ಸ್ಟ್ರೀಮ್‌ ಮೀಡಿಯಾ ನೆಟ್‌ವರ್ಕ್‌ ಖರೀದಿಸಿತು. ಕೆಲವೇ ದಿನಗಳಲ್ಲಿ ಸ್ಥಗಿತಗೊಳಿಸಿತು.

ನಾನು ಆಗಲೇ ಹೇಳಿದಂತೆ ಸಿಕ್ಸ್‌ಡಿಗ್ರೀಸ್‌.ಕಾಂ ಸೋಷಿಯಲ್‌ ಮೀಡಿಯಾದ ಕಲ್ಪನೆಗೆ ಒಂದು ಚೌಕಟ್ಟು ನೀಡಿತು.

2002ರ ಮಾರ್ಚ್‌ ತಿಂಗಳಲ್ಲಿ ಆರಂಭವಾದ ಫ್ರೆಂಡ್‌ಸ್ಟರ್‌.ಕಾಮ್‌ಗೂ ಸಿಕ್ಸ್‌ಡಿಗ್ರೀಸ್‌ ಸ್ಫೂರ್ತಿ.  ಗೇಮಿಂಗ್‌ ತಾಣವೂ ಆಗಿದ್ದರಿಂದ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿತು. ಮಲೇಷಿಯಾ ಮೂಲದ ಈ ತಾಣ ಎಂಟು ವರ್ಷಗಳಲ್ಲಿ 11.5 ಕೋಟಿ ಬಳಕೆದಾರರ ಗಡಿಯನ್ನು ತಲುಪಿತ್ತು. ಹೊಸ ತಾಣಗಳು ಹುಟ್ಟಿಕೊಳ್ಳುತ್ತಾ, ಫ್ರೆಂಡ್‌ಸ್ಟರ್‌ ಆಕರ್ಷಣೆಯನ್ನು ಕಳೆದುಕೊಂಡಿತು. ಬಹುತೇಕ ಏಷ್ಯಾ ಭಾಗದಲ್ಲಿ ಜನಪ್ರಿಯವಾಗಿದ್ದ ಈ ತಾಣ 2018ರಲ್ಲಿ ಅಧಿಕೃತವಾಗಿ ಸೇವೆ ನಿಲ್ಲಿಸಿತು.

ಇಷ್ಟು ಹೊತ್ತಿಗೆ ಸೋಷಿಯಲ್‌ ಮೆಸೇಜಿಂಗ್‌ ಸೈಟ್‌ಗಳು, ಚಾಟಿಂಗ್‌ ತಾಣಗಳ ಸಂಖ್ಯೆ ಹೆಚ್ಚಾಗಿತ್ತು. ಹಾಗೆಯೇ ಜನರನ್ನು ಬೆಸೆಯುವ ಹೊಸ ಹೊಸ ಪ್ರಯೋಗಗಳು ನಡೆಯುತ್ತಿದ್ದವು.

ಫ್ರೆಂಡ್‌ಸ್ಟರ್‌ ಎಲ್ಲಿ ಎಡವಿತು ಎಂಬುದನ್ನು ಚೆನ್ನಾಗಿ ಅಧ್ಯಯನ ಮಾಡಿದ ಟಾಮ್‌ ಆಂಡರ್ಸನ್‌ ಮತ್ತು ಕ್ರಿಸ್‌ ಡೆವೋಲ್ಫ್‌  2003ರಲ್ಲಿ ಮೈ ಸ್ಪೇಸ್‌ ಎಂಬ ಸೋಷಿಯಲ್‌ ಮೀಡಿಯಾ ತಾಣವನ್ನು ಪರಿಚಯಿಸಿದರು. ಜಗತ್ತಿನ ಅತಿ ಹೆಚ್ಚು ಜನರು ಭೇಟಿ ನೀಡುವ ತಾಣವಾಗಿ ಬೆಳೆದ ಮೈ ಸ್ಪೇಸ್‌ 75.9 ದಶ ಲಕ್ಷ ಬಳಕೆದಾರರನ್ನು ಗಳಿಸಿಕೊಂಡಿತು. ಇದರಲ್ಲಿ ನಿಮ್ಮಿಷ್ಟದ ಸಂಗೀತವನ್ನು ಹಂಚಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಈ ಹಿಂದೆ ಇದ್ದ ಯಾವುದೇ ತಾಣಗಳು ಅಂತಹ ಅವಕಾಶ ಇರಲಿಲ್ಲ.  ಬಳಕೆದಾರರಿಗೆ  ಅನುಕೂಲಕರವಾಗಿದ್ದ, ಮೈ ಸ್ಪೇಸ್‌ ಸಾಕಷ್ಟು ಪ್ರಸಿದ್ಧಿಗಳಿಸಿತು.

ಸಂಗೀತ, ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳುವ ಜೊತೆಗೆ, ನಿಮ್ಮದೇ ಗುಂಪುಗಳನ್ನು ಸೃಷ್ಟಿಸಿಕೊಳ್ಳುವ, ಬ್ಲಾಗ್‌ ಬರೆಯುವ ಅವಕಾಶಗಳು ಮೈ ಸ್ಪೇಸ್‌ ಜನಪ್ರಿಯತೆಗೆ ಕಾರಣವಾದವು.

ಇಂಟರ್‌ಮಿಕ್ಸ್‌ ಮೀಡಿಯಾ ಒಡೆತನದ ಮೈ ಸ್ಪೇಸ್‌, ಬೆಳವಣಿಗೆಯನ್ನು ಗುರುತಿಸಿದ ಮೀಡಿಯಾ ಮೊಘಲ್‌ ರೂಪರ್ಟ್‌ ಮುರ್ಡೋಕ್‌ 2005ರಲ್ಲಿ ಖರೀದಿಸಿದರು. ತಿಂಗಳಿಗೆ 16 ಲಕ್ಷ ಬಳಕೆದಾರರನ್ನು ಹೊಂದಿದ್ದ ಮೈ ಸ್ಪೇಸ್‌ 2007ರ ನಂತರ ಆಕರ್ಷಣೆಯನ್ನು ಕಳೆದುಕೊಂಡಿತು.

ಇದೇ ಸಮಯದಲ್ಲಿ ಜಗತ್ತಿನಲ್ಲಿ ಅತಿ ಹೆಚ್ಚು ಸದ್ದು ಮಾಡಿದ ಸೋಷಿಯಲ್‌ ನೆಟ್‌ವರ್ಕ್‌ ತಾಣ ಆರ್ಕುಟ್‌. ಇಂದು ಜಗತ್ತನ್ನು ಬೆಸೆದಿರುವ ಅತಿ ದೊಡ್ಡ ಜಾಲತಾಣ ಅವತರಿಸುವುದಕ್ಕೂ ಒಂದು ತಿಂಗಳು ಮೊದಲು ಬಿಡುಗಡೆಯಾದ ಆರ್ಕುಟ್‌ ಗೂಗಲ್‌ ಸಂಸ್ಥೆಯ ಕೂಸು. ಟರ್ಕಿ ಮೂಲದ ಸಾಫ್ಟ್‌ವೇರ್‌ ಇಂಜಿನಿಯರ್‌ ಆರ್ಕುಟ್‌ ಬುಯುಕ್ಕೋಟೆನ್‌ ಅಭಿವೃದ್ಧಿ ಪಡಿಸಿದ ಈ ತಾಣ ಆರೇ ತಿಂಗಳಲ್ಲಿ ಜಗತ್ತಿನಾದ್ಯಂತ ತನ್ನ ಬಳಕೆದಾರರನ್ನು ಹೊಂದಿತು. ಹತ್ತು ವರ್ಷಗಳಲ್ಲಿ ಬ್ರೆಜಿಲ್‌ ಮತ್ತು ಭಾರತದ ಅತಿ ಹೆಚ್ಚು ಬಳಕೆದಾರರನ್ನು ಗಳಿಸಿದ ಆರ್ಕುಟ್‌ ಹಲವು ವಿವಾದ, ನಿಷೇಧ ಹಾಗೂ ಪ್ರತಿಸ್ಪರ್ಧಿಯ ಹೊಡೆತಕ್ಕೆ ಸಿಕ್ಕು ದಶಕದ ಜನಪ್ರಿಯತೆಯನ್ನು ಕಳೆದುಕೊಂಡು ಕಣ್ಮರೆಯಾಯಿತು.

ಸೋಷಿಯಲ್‌ ನೆಟ್‌ವರ್ಕ್‌ನ ಕಲ್ಪನೆಯಿಂದ ವಿಸ್ಮಯಗೊಂಡಿದ್ದ ಅನೇಕರು ಈ ಪರಿಕಲ್ಪನೆಯ ತಮ್ಮದೇ ಆವೃತ್ತಿಗಳನ್ನು ಪರಿಚಯಿಸುವ ಪ್ರಯತ್ನ ಅಂದಿನಿಂದ ಇಂದಿನವರೆಗೂ ನಡೆಯುತ್ತಲೇ ಇದೆ. ಆದರೆ 2004ರಲ್ಲಿ ಹಾರ್ವರ್ಡ್‌ ವಿಶ್ವವಿದ್ಯಾಲಯದ ಹಾಸ್ಟೆಲ್‌ವೊಂದರಲ್ಲಿ ನಡೆಯುತ್ತಿದ್ದ ಚರ್ಚೆ, ತಯಾರಿ ಸೋಷಿಯಲ್‌ ನೆಟ್‌ವರ್ಕ್‌ನ ವ್ಯಾಖ್ಯಾನ ಬದಲಿಸುವುದಕ್ಕೆ ಸಿದ್ಧವಾಗುತ್ತಿತ್ತು.  ಕೇವಲ ಜನರನ್ನು ಬೆಸೆಯುವ, ಹರಟುವ ತಾಣದ ಕಲ್ಪನೆಯೊಂದಿಗೆ ರೂಪ ಪಡೆಯುತ್ತಿದ್ದ ಈ ತಾಣ ಜಗತ್ತಿನ ಅತ್ಯಂತ ಪ್ರಭಾವಿ ತಾಣವಾಗಿ ಬೆಳೆಯುವ ಊಹೆಯೂ ಇರಲಿಲ್ಲ. ಅದು ಫೇಸ್‌ಬುಕ್‌ ಎಂಬುದು ನಿಮಗೆ ಗೊತ್ತು. ಇದು ನಿಜವಾಗಿಯೂ ಯಾರ ಕೂಸು? ಝುಕರ್‌ಬರ್ಗ್‌ಗೂ ಅದಕ್ಕೂ ನಿಜಕ್ಕೂ ಸಂಬಂಧವಿತ್ತೆ?

ಮುಂದಿನ ಕಂತು : ಫೇಸ್‌ಬುಕ್‌ನ ಕಲ್ಪನೆ ಹೊಳೆದಿದ್ದು ಭಾರತೀಯ ಮೂಲದ ಅಮೆರಿಕನ್‌ ವಿದ್ಯಾರ್ಥಿಗೆ! ಅವರಾರು ಗೊತ್ತೆ?

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

%d bloggers like this: