ಇದೋ ನೋಡಿ ಫೇಸ್‌ಬುಕ್‌ ಹೊಸ ಅವತಾರ ; ಒಪ್ಪ ಮತ್ತು ಕಣ್ಣಿಗೆ ಹಿತ ಕೊಡುವ ವಿನ್ಯಾಸ

ಫೇಸ್‌ಬುಕ್‌ ತನ್ನ ವರ್ಚಸ್ಸು ಮತ್ತು ವಿಶ್ವಾಸಾರ್ಹತೆ ಹೆಚ್ಚಿಸಿಕೊಳ್ಳುವುದಕ್ಕೆ ಹಲವು ಪ್ರಯತ್ನಗಳನ್ನು ಮಾಡುತ್ತಿದೆ. ಮಾಹಿತಿ ಸೋರಿಕೆ, ಯುವಜನರು ವಿಮುಖರಾಗಿರುವುದು ಎಲ್ಲವೂ ಫೇಸ್‌ಬುಕ್‌ ಮಾರುಕಟ್ಟೆ ಮೌಲ್ಯವನ್ನು ಕುಸಿಯುವಂತೆ ಮಾಡುತ್ತಿದೆ. ಇದನ್ನು ನಿಭಾಯಿಸುವ ಪ್ರಯತ್ನವಾಗಿ ಹೊಸ ವಿನ್ಯಾಸವನ್ನು ತರುತ್ತಿದೆ

ಎಫ್‌ ಬಿ 5

ಕೆಲವೇ ದಿನಗಳಲ್ಲಿ ಪರಿಚಯಿಸುತ್ತಿರುವ ಹೊಸ ವಿನ್ಯಾಸಕ್ಕೆ ಮಾರ್ಕ್‌ ಝುಕರ್‌ ಬರ್ಗ್‌ ಇಟ್ಟೆ ಹೆಸರು. ಹೌದು, ಫೇಸ್‌ಬುಕ್‌ ಹೊಸ ವಿನ್ಯಾಸದಲ್ಲಿ ಇನ್ನಷ್ಟು ಸುಲಭವಾಗಿ, ಒಪ್ಪವಾಗಿ, ವೇಗವಾಗಿ ಸ್ಪಂದಿಸುವ ವಿನ್ಯಾಸದಲ್ಲಿ ಹೊರಬರುತ್ತಿದೆ. ಪೂರ್ಣ ಬಿಳುಪು ಮತ್ತು ಕಪ್ಪು ಬಣ್ಣಗಳಲ್ಲಿ ಇದು ಲಭ್ಯವಾಗುತ್ತಿದ್ದು, ಬಳಕೆದಾರರನ್ನು ಆಕರ್ಷಿಸಲಿದೆ ಎಂದು ಫೇಸ್‌ಬುಕ್‌ ಹೇಳಿದೆ.

ಕಳೆದ ಏಪ್ರಿಲ್‌ ಹೊಸ ವಿನ್ಯಾಸದ ಕುರಿತು ಮಾತನಾಡಿದ್ದ ಝುಕರ್‌ಬರ್ಗ್‌, ಖಾಸಗಿತನ, ಮಾಹಿತಿ ಸುರಕ್ಷತೆಗೆ ಆದ್ಯತೆ ನೀಡುವುದಾಗಿ ಭರವಸೆ ನೀಡಿದ್ದರು. ಕಳೆದ ಆರು ತಿಂಗಳಲ್ಲಿ ಹಲವು ಆಯ್ದ ಬಳಕೆದಾರರಿಗೆ ಹೊಸ ವಿನ್ಯಾಸವನ್ನು ಬಳಸಲು ಅನುವು ಮಾಡಿಕೊಟ್ಟಿದ್ದು, ಅಭಿಪ್ರಾಯ ಸಂಗ್ರಹಿಸಿದೆ.

ಟ್ವಿಟರ್‌ನ ವಿನ್ಯಾಸವನ್ನು ಹೋಲುವ ಈ ವಿನ್ಯಾಸ, ಟಾಪ್‌ ಬ್ಯಾನರ್‌, ಹೋಮ್‌ ಫೀಡ್‌, ರೌಂಡ್‌ ಕಾರ್ನರ್‌ ಇರುವ ವಿನ್ಯಾಸಗಳೇ ಹೆಚ್ಚಿದ್ದು, ಮಿನಿಮಲಿಸ್ಟ್‌ ವಿನ್ಯಾಸಕ್ಕೆ ಮೊರೆ ಹೋಗಿದೆ. ಜಾಹೀರಾತು, ಇತರೆ ಫೀಡ್‌ಗಳಿಂದ ಕಿಕ್ಕಿರದಂತೆ ಇದ್ದ ಫೇಸ್‌ಬುಕ್‌ ಪುಟ ಸರಳ ಹಾಗೂ ಸುಂದರ ವಿನ್ಯಾಸದೊಂದಿಗೆ ಒಪ್ಪವಾಗಿ ಕಾಣಿಸಲಿದೆ ಎಂಬುದು ಸಮಾಧಾನದ ವಿಷಯ.

ಎಫ್‌8 ಸಮಾವೇಶದಲ್ಲಿ ಹೊಸ ವಿನ್ಯಾಸ ಕುರಿತು ಮಾತನಾಡುತ್ತಿರುವ ಮಾರ್ಕ್‌ ಝುಕರ್‌ಬರ್ಗ್‌

ಪೂರ್ಣ ಬಿಳುಪಿನ ಬ್ಯಾಕ್‌ಗ್ರೌಂಡ್‌ ಇದ್ದು ಡಾರ್ಕ್‌ ಮೋಡ್‌ ಕೂಡ ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಸೃಷ್ಟಿಲಾಗಿದೆ. ತಡರಾತ್ರಿ ಹೆಚ್ಚು ಕಾಲ ಫೇಸ್‌ಬುಕ್‌ ಬಳಸುವವರ ಕಣ್ಣು ನಿರಾಯಾಸ ಬಳಸುವುದಕ್ಕೆ ಈ ಬದಲಾವಣೆ ಅನುಕೂಲ ಮಾಡಿಕೊಡುತ್ತದೆ.

ಫೇಸ್‌ಬುಕ್‌ ಬಳಕೆದಾರರ ಪುಟ ಡಾರ್ಕ್‌ ಮೋಡ್‌ನಲ್ಲಿ ಹೀಗೆ ಕಾಣಿಸಲಿದೆ

ಇಷ್ಟೇ ಅಲ್ಲದೆ, ನ್ಯಾವಿಗೇಷನ್‌ ಸರಳವಾಗಿಸಿದ್ದು, ನ್ಯೂಸ್‌ಫೀಡ್‌ನಲ್ಲಿ ‘ಸೇವ್‌ ಯುವರ್‌ ಸ್ಪಾಟ್‌’ ಎಂಬ ಫೀಚರ್‌ ಪರಿಚಯಿಸಲಾಗುತ್ತಿದೆ. ಇದು ನೀವು ಯಾವ ಪೋಸ್ಟ್‌ ನೋಡುವಾಗ ಫೇಸ್‌ಬುಕ್‌ ತೊರೆದಿದ್ದರೊ, ಮರಳಿದಾಗ ಸಾಮಾನ್ಯವಾಗಿ ಪೇಜ್‌ ರಿಫ್ರೆಶ್‌ ಆಗಿ ಹೊಸ ಪೋಸ್ಟ್‌ಗಳು ನಿಮ್ಮ ಟೈಮ್‌ಲೈನ್‌ಗೆ ಬಂದಿರುತ್ತದೆ. ಆದರೆ ಹೊಸ ಫೀಚರ್‌ನಿಂದಾಗಿ, ನೀವು ಎಲ್ಲಿಗೆ ನಿಲ್ಲಿಸಿರುತ್ತೀರೋ, ಅಲ್ಲಿಂದಲೇ ನೋಡಲು ಮೊದಲಿಡಬಹುದು.

ಮೂರೇ ಕಾಲಂಗಳಿರುವ ಈ ವೆಬ್‌ಸೈಟ್‌ ವಿನ್ಯಾಸದಲ್ಲಿ ಸ್ಪೇಸ್‌ಗೆ ಹೆಚ್ಚು ಒತ್ತು ನೀಡಲಾಗಿದೆ. ಈಗಾಗಲೇ ವೆಬ್‌ಡೆವೆಲಪರ್‌ಗಳು, ಯುಐ ವಿನ್ಯಾಸ ಮಾಡುವವರಿಂದ ಅಭಿಪ್ರಾಯ ಸಂಗ್ರಹಿಸಿರುವ ಫೇಸ್‌ಬುಕ್‌ ಸೂಕ್ತ ಬದಲಾವಣೆಗಳೊಂದಿಗೆ ಸದ್ಯದಲ್ಲೇ ಅಧಿಕೃತವಾಗಿ ಬಿಡುಗಡೆ ಮಾಡಲಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.