ಫೇಸ್‌ಬುಕ್‌ 13 ವರ್ಷದ ಮಕ್ಕಳಿಗೆ ಇನ್‌ಸ್ಟಾಗ್ರಾಮ್‌ ಕೊಡಲು ಸಿದ್ಧ, ನೀವು ನಿಮ್ಮ ಮಕ್ಕಳಿಗೆ ಕೊಡಲು ಸಿದ್ಧರಿದ್ದೀರಾ?

ಇನ್‌ಸ್ಟಾಗ್ರಾಮ್‌ ಹದಿಹರೆಯದವರಲ್ಲಿ ಅತ್ಯಂತ ಜನಪ್ರಿಯ ಸೋಷಿಯಲ್‌ ಮೀಡಿಯಾ. ಈಗ 13 ವರ್ಷದ ಮಕ್ಕಳಿಗೂ ಪ್ರತ್ಯೇಕ ಇನ್‌ಸ್ಟಾಗ್ರಾಮ್‌ ಅಭಿವೃದ್ಧಿಪಡಿಸಿದೆ. ಇನ್ನು ಕೆಲವೇ ದಿನಗಳಲ್ಲಿ ಲಭ್ಯವಾಗಲಿದ್ದು, ಈಗ ವಿವಾದ ಹುಟ್ಟುಹಾಕಿದೆ

ಫೋಟೋ ಮತ್ತು ಶಾರ್ಟ್‌ ವಿಡಿಯೋಗಳನ್ನು ಹಂಚಿಕೊಳ್ಳುವ ವೇದಿಕೆಯಾಗಿ ಇನ್‌ಸ್ಟಾಗ್ರಾಮ್‌ ಅತ್ಯಂತ ಜನಪ್ರಿಯ ತಾಣ. 100 ಕೋಟಿ ಬಳಕೆದಾರರನ್ನು ಹೊಂದಿರುವ ಇನ್‌ಸ್ಟಾಗ್ರಾಮ್‌ ಈಗ ಫೇಸ್‌ಬುಕ್‌ ಸಮೂಹದ ಭಾಗ.

ಫೇಸ್‌ಬುಕ್‌ ಜನಪ್ರಿಯತೆ ಹಿಗ್ಗುತ್ತಾ, ಎಲ್ಲ ವಯಸ್ಸಿನವರು ಖಾತೆ ತೆರೆಯಲಾರಂಭಿಸಿದ ಮೇಲೆ ಹದಿಹರೆಯದವರು ಇನ್‌ಸ್ಟಾಗ್ರಾಮ್‌ನತ್ತ ವಾಲಿದರು. 18ರಿಂದ 29 ವಯಸ್ಸಿ ಶೇ. 95 ಮಂದಿ ಈ ಆಪ್‌ ಬಳಸುತ್ತಿದ್ದು ಪ್ರತಿ ದಿನ 50 ಕೋಟಿ ಬಳಕೆದಾರರು ಇನ್‌ಸ್ಟಾಗ್ರಾಮ್‌ ಸ್ಟೋರೀಸ್‌.

ಹಲವು ಕಾರಣಗಳಿಗೆ ಟೀಕೆಗೆಗಳಿಗೆ ಗುರಿಯಾಗುತ್ತಾ, ಹಿನ್ನಡೆ ಅನುಭವಿಸುತ್ತಿರುವ ಫೇಸ್‌ಬುಕ್‌ ಆದಾಯದ ವಿಷಯದಲ್ಲಿ ಪೆಟ್ಟು ತಿನ್ನುತ್ತಿದೆ. ಆದರೆ ಇನ್‌ಸ್ಟಾಗ್ರಾಮ್‌ ಆದಾಯ 900 ಕೋಟಿ ಡಾಲರ್‌ಗಳನ್ನು ದಾಟಿದೆ. ಆದರೆ ಬಹಳ ಮುಖ್ಯವಾಗಿ ಇದು 13 ವರ್ಷ ಮೇಲ್ಪಟ್ಟವರಿಗೆ ಮಾತ್ರ ಸೀಮಿತವಾಗಿದೆ.

ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮಾರುಕಟ್ಟೆ ವಿಸ್ತರಿಸುವ ಹಪಾಹಪಿಯಲ್ಲಿ ಫೇಸ್‌ಬುಕ್‌ ಈಗ 13 ವರ್ಷದೊಳಗಿನ ಮಕ್ಕಳಿಗೆ ಪ್ರತ್ಯೇಕವಾಗಿ ಇನ್‌ಸ್ಟಾಗ್ರಾಮ್‌ ಸೇವೆ ಕಲ್ಪಿಸುವುದಕ್ಕೆ ಮುಂದಾಗಿದೆ.

ಕಳೆದ ತಿಂಗಳು ಈ ವಿಷಯವಾಗಿ ಇನ್‌ಸ್ಟಾಗ್ರಾಮ್‌ನ ಉತ್ಪನ್ನಗಳ ವಿಭಾಗದ ಉಪಾಧ್ಯಕ್ಷ ವಿಶಾಲ್‌ ಶಾ, ‘ 13 ವರ್ಷದೊಳಗಿನ ಮಕ್ಕಳು ಬಳಸುವ ಇನ್‌ಸ್ಟಾಗ್ರಾಮ್‌ ಆವೃತ್ತಿಯನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ಮಕ್ಕಳ ಖಾಸಗಿತನವನ್ನು ಗಮನದಲ್ಲಿರಿಸಿಕೊಂಡು ಸುರಕ್ಷಿತ ಅನುಭವ ನೀಡುವುದಕ್ಕೆ ಶ್ರಮಿಸಲಿದ್ದೇವೆ ಎಂಬ ಸಂದೇಶವನ್ನು ಉದ್ಯೋಗಿಗಳ ಮೆಸೇಜ್‌ ಬೋರ್ಡ್‌ನಲ್ಲಿ ಹಂಚಿಕೊಂಡಿರುವುದಾಗಿ ಬಝ್‌ಫೀಡ್‌ ವರದಿ ಮಾಡಿದೆ.

ಆಡಾಮ್‌ ಮೊಸ್ಸೇರಿ ಎಂಬುವವರು ಯೋಜನೆಯ ಮುಂದಾಳತ್ವ ವಹಿಸಿಕೊಂಡಿದ್ದು ಪಾವ್ನಿ ದಿವಾಂಜಿ ತಂಡದ ಜವಾಬ್ದಾರಿ ಹೊತ್ತಿದ್ದಾರೆ. ಬರಲಿರುವ ಹೊಸ ಆಪ್‌ನಲ್ಲಿ ಪೋಷಕರಿಗೆ ನಿಯಂತ್ರಿಸುವ ಅವಕಾಶವಿರುತ್ತದೆ. ಪಾರದರ್ಶಕತೆಯನ್ನು ಕಾಯ್ದುಕೊಳ್ಳಲಾಗುವುದು ಎಂದು ಹೇಳಿದೆ.

ಅಮೆರಿಕದಲ್ಲಿ ತೀವ್ರ ವಿರೋಧ
ಸಾಮಾಜಿಕ ಜಾಲತಾಣಗಳು ವ್ಯಕ್ತಿ ಮತ್ತು ಕುಟುಂಬಗಳ ಮೇಲೆ ಎಂತಹ ಪ್ರಭಾವ ಬೀರುತ್ತಿವೆ ಎಂಬ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಗಳಿವೆ. ಈ ಅಂಶಗಳನ್ನು ಪ್ರಸ್ತಾಪಿಸಿ ಅಮೆರಿಕದ 55 ರಾಜ್ಯಗಳ ಅಟರ್ನಿ ಜನರಲ್‌ಗಳು ಫೇಸ್‌ಬುಕ್‌ ಈ ಯೋಜನೆಯನ್ನು ಕೈಬಿಡಬೇಕೆಂದು ಆಗ್ರಹಿಸಿವೆ.

ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮಗಳನ್ನು ಕುರಿತ ಅಧ್ಯಯನಗಳನ್ನು ಮತ್ತು ವರದಿಗಳ್ನು ಪ್ರಸ್ತಾಪಿಸಿ ಫೇಸ್‌ಬುಕ್‌ ಸಿಇಒ ಮಾರ್ಕ್‌ ಝುಕರ್‌ಬರ್ಗ್‌ಗೆ ಪತ್ರ ಬರೆದಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಹೊಂದು ಮೂಲಕ ಎದುರಾಗುವ ಸವಾಲುಗಳನ್ನು ಎದುರಿಸುವುದಕ್ಕೆ ಮಕ್ಕಳು ಸಮರ್ಥರಾಗಿರುವುದಿಲ್ಲ. ಖಾಸಗಿತನವಿರಬಹುದು, ಆನ್‌ಲೈನ್‌ ಬುಲ್ಲಿಯಿಂಗ್‌, ಮಕ್ಕಳ ಚಿತ್ರಗಳ ದುರ್ಬಳಕೆ ಇಂತಹ ಹಲವು ಸಮಸ್ಯೆಗಳು ಇವೆ. 2020ರಲ್ಲಿ 20 ಕೋಟಿ ಮಕ್ಕಳ ಚಿತ್ರಗಳು ದುರ್ಬಳಕೆಯಾಗಿರುವ ವರದಿಯಾಗಿರುವುದನ್ನು ಈ ಪತ್ರ ಪ್ರಸ್ತಾಪಿಸಿದೆ.

ಫೇಸ್‌ಬುಕ್‌ ಈ ಸಂಬಂಧ ಸ್ಪಷ್ಟನೆ ಕೊಡುವ ಪ್ರಯತ್ನವನ್ನು ಮಾಡಿದೆ. ಆದರೆ ಬಳಕೆದಾರರನ್ನು ಗ್ರಾಹಕನನ್ನಾಗಿಯೂ, ಮಾರುಕಟ್ಟೆಯನ್ನಾಗಿಯೂ ನೋಡುವ ಈ ದೈತ್ಯ ಟೆಕ್‌ ಕಂಪನಿಗಳು ಒಂದಲ್ಲ ರೀತಿಯಲ್ಲಿ ಮಾಹಿತಿಯನ್ನು ಬಳಸಿಕೊಳ್ಳುವುದನ್ನು ತಳ್ಳಿಹಾಕುವಂತಿಲ್ಲ.

ಮಕ್ಕಳು ತಮಗೆಂದು ರೂಪಿಸಿದ ವೇದಿಕೆಯನ್ನು ಬಳಸಲಾರಂಭಿಸಿದ ಕೆಲ ದಿನಗಳ ಬಳಿಕ, ಹದಿಯರೆದವರಿಗೆಂದು ಇರುವ ಇನ್‌ಸ್ಟಾಗ್ರಾಮ್‌ ಬಳಸದೇ ಇರುವುದಿಲ್ಲ ಎಂಬುದನ್ನು ಖಾತ್ರಿ ಪಡಿಸುವವರು ಯಾರು? ಯೂಟ್ಯೂಬ್‌ ವಿಷಯದಲ್ಲಿ ಈ ಬೆಳವಣಿಗೆಗಳನ್ನು ಗಮನಿಸಿದರು ಅನೇಕರು ಫೇಸ್‌ಬುಕ್‌ನ ಬದ್ಧತೆಯನ್ನು ಪ್ರಶ್ನಿಸುತ್ತಿದ್ದಾರೆ.

ಕೋವಿಡ್‌ ಕಾಲದಲ್ಲಿ, ಆನ್‌ಲೈನ್‌ ತರಗತಿಗಳ ಕಾರಣಕ್ಕೆ ಇಂದು ಪ್ರತಿಯೊಬ್ಬ ಮಗುವಿನ ಕೈಯಲ್ಲಿ ಸ್ಮಾರ್ಟ್‌ಫೋನಿದೆ. ಇದು ಎಲ್ಲ ಪೋಷಕರಲ್ಲಿ ಆತಂಕವನ್ನು ಹುಟ್ಟಿಸಿದೆ. ಮಕ್ಕಳು, ಆನ್‌ಲೈನ್‌ನಲ್ಲಿ ಏನು ನೋಡಬೇಕಾದ, ನೋಡಬಾರದ ವಿಷಯಗಳನ್ನು ನಿರ್ಧರಿಸುವ ವಿವೇಚನಾಶಕ್ತಿ ಹೊಂದಿರುವುದಿಲ್ಲ.

ಯಾವುದೇ ಫೇಸ್‌ಬುಕ್‌, ಸ್ನ್ಯಾಪ್‌ಚಾಟ್‌, ಇನ್‌ಸ್ಟಾಗ್ರಾಮ್‌, ಯೂಟ್ಯೂಬ್‌ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಹರೆಯದ ಬಳಕೆದಾರರೇ ಸೈಬರ್‌ ಬುಲ್ಲಿಯಿಂಗ್‌ಗೆ ಗುರಿಯಾಗುತ್ತಿದ್ದಾರೆ.

ಫಸ್ಟ್‌ಸೈಟ್‌ಗೈಡ್‌ ತಾಣದ ಪ್ರಕಾರ 2021ರಲ್ಲಿ ಶೇ. 42ರಷ್ಟು ಹರೆಯದ ಮಕ್ಕಳು ಬುಲ್ಲಿಯಿಂಗ್‌ಗೆ ಗುರಿಯಾಗುತ್ತಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಹೊರಬಂದಿರುವ ಬಿಬಿಸಿ, ಪ್ಯೂ ಸಂಸ್ಥೆಯ ಅಧ್ಯಯನಗಳು ಹದಿನೆಂಟು ವರ್ಷದೊಳಗಿನ ಹರೆಯದ ಮಕ್ಕಳು ಬುಲ್ಲಿಯಿಂಗ್‌ಗೆ ಗುರಿಯಾಗಿರುವುದನ್ನು ಹೇಳುತ್ತವೆ. ಇಂತಹ ಹೊತ್ತಲ್ಲಿ 13ವರ್ಷದೊಳಗಿನ ಮಕ್ಕಳಿಗೆ ಇನ್‌ಸ್ಟಾಗ್ರಾಮ್‌ನಂತಹ ವೇದಿಕೆ ರೂಪಿಸುವಂತಹದ್ದು ಆತಂಕ ಹುಟ್ಟಿಸುವ ಬೆಳವಣಿಗೆಯೇ ಕಾಣುತ್ತಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.