ಒಬ್ಬರ ಸಂಕಷ್ಟದ ಕಾಲ ಇನ್ನೊಬ್ಬರಿಗೆ ಅನುಕೂಲದ್ದೇ ಆಗಿರುತ್ತದೆ. ಕೋವಿಡ್ 19 ಇಡೀ ಜಗತ್ತನ್ನು ಕಟ್ಟಿ ಹಾಕಿದ್ದರೆ, ಈಗ ಇದರ ಲಾಭ ಪಡೆದುಕೊಳ್ಳಲು ಟೆಕ್ ಕಂಪನಿಗಳು ನಾ ಮುಂದು, ತಾ ಮುಂದೆ ಎಂದು ಸ್ಪರ್ಧೆಗೆ ಬಿದ್ದಿದ್ದಾರೆ. ಝೂಮ್ ಗಳಿಕೆ, ಜನಪ್ರಿಯತೆ ಅದಕ್ಕೆ ಉದಾಹರಣೆ. ಈಗ ಫೇಸ್‌ಬುಕ್ ಸ್ಪರ್ಧೆಗೆ ಇಳಿದಿದೆ

ಕ್ವಾರಂಟೈನ್‌ನಿಂದಾಗಿ ಎಲ್ಲರೂ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಅವರ ಕೆಲಸವನ್ನು ಸಲೀಸು ಮಾಡಿದ್ದು ಝೂಮ್ ವಿಡಿಯೋ ಕಾನ್ಫರೆನ್ಸಿಂಗ್ ಆಪ್. ಆದರೆ ಕೆಲವು ದಿನಗಳಿಂದ ಮಾಹಿತಿ ಸುರಕ್ಷತೆ ವಿಷಯದಲ್ಲಿ ಎದ್ದ ವಿವಾದ, ಅದರ ಬಳಕೆಯ ಬಗ್ಗೆ ಆತಂಕ ಹುಟ್ಟಿಸಿದ್ದು, ಜನಪ್ರಿಯತೆಗೆ ಪೆಟ್ಟು ಬಿದ್ದಿದೆ.
ಈ ಅವಕಾಶವನ್ನು ಬಳಸಿಕೊಳ್ಳಲು ಮುಂದಾಗಿರುವ ಫೇಸ್‌ಬುಕ್, ತನ್ನ ಸೋಷಿಯಲ್ ಮೆಸೇಜಿಂಗ್ ಆಪ್, ಮೆಸೆಂಜರ್ ಅನ್ನು ವಿಡಿಯೋ ಚಾಟ್ ರೂಮ್‌ಗಳನ್ನು ಸೃಷ್ಟಿಸಿದೆ. ಏಕ ಕಾಲಕ್ಕೆ 50 ಮಂದಿ ಈ ಚಾಟ್‌ನಲ್ಲಿ ಬಾಗವಹಿಸಬಹುದು.
ಕಾನ್ಫ್‌ರೆನ್ಸ್ ರೂಪಿಸುವವರಿಗೆ ಫೇಸ್‌ಬುಕ್ ಖಾತೆ ಇರಬೇಕು. ಇಲ್ಲದವರು ಕೂಡ ಚಾಟ್‌ಗೆ ಜೊತೆಯಾಗಬಹುದು, ಝೂಮ್‌ನಲ್ಲಿರುವಂತೆ. ಬಹಳ ಮುಖ್ಯವಾಗಿ ಇತರೆ ಆಪ್‌ಗಳಂತೆ ಫೇಸ್‌ಬುಕ್ ಸಮಯದ ನಿರ್ಬಂಧವನ್ನು ಹೇರಿಲ್ಲ.
ಕಾಲ್ ಹೋಸ್ಟ್ ಮಾಡುವವರು, ಯಾರು ಚಾಟ್‌ನಲ್ಲಿ ಪಾಲ್ಗೊಳ್ಳಬೇಕು, ಯಾರನ್ನು ಹೊರಗೆ ಕಳಿಸಬೇಕು ಎಂಬುದನ್ನು ನಿರ್ಧರಿಸುವ ಅವಕಾಶವನ್ನು ಹೊಂದಿರುತ್ತಾರೆ. ಇತರರ ಪ್ರವೇಶವನ್ನು ನಿರ್ಬಂಧಿಸುವುದಕ್ಕೂ ಸಾಧ್ಯವಿದೆ.
ಆದರೆ ಈ ಸೇವೆಯಲ್ಲಿ ಒಂದು ಸಮಸ್ಯೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇಂದು ಎಂಡ್-ಟು-ಎಂಡ್ ಎನ್‌ಕ್ಷಿಪ್ಷನ್ ಇಲ್ಲ. ಹಾಗಾಗಿ ಖಾಸಗಿತನದ ಸಮಸ್ಯೆ ಇದೆ ಎನ್ನಲಾಗಿದೆ. ಫೇಸ್‌ಬುಕ್ ಏಕ ಕಾಲಕ್ಕೆ 50 ಜನರಿಗೆ ಎನ್‌ಕ್ರಿಪ್ಷನ್ ಒದಗಿಸುವುದು ಸವಾಲಿನ ಕೆಲಸ ಎಂದಿದೆ. ಹಾಗಾಗಿ ಈ ವಿಡಿಯೋ ಮೀಟಿಂಗ್‌ಗಳನ್ನು ನೋಡುವುದು, ಅಲ್ಲಿನ ಚರ್ಚೆಯನ್ನು ಕೇಳಿಸಿಕೊಳ್ಳುವುದಿಲ್ಲ ಎಂದಿದೆ. ಈ ವಾರದಲ್ಲಿ ಆಯ್ದ ದೇಶಗಳಲ್ಲಿ ಈ ಸೇವೆ ಲಭ್ಯವಾಗಲಿದೆ ಎಂದು ಫೇಸ್‌ಬುಕ್ ಪ್ರಕಟಣೆ ತಿಳಿಸಿದೆ.