ನಕಲಿ ಅಕೌಂಟ್‌ ಎಂದು ಫೇಸ್‌ಬುಕ್‌ಗೆ ರಿಪೋರ್ಟ್‌ ಮಾಡಿದ್ರೆ, ನಿಮ್ಮ ಖಾತೆಯೇ ಬ್ಲಾಕ್‌!

ಫೇಸ್‌ಬುಕ್‌ನಲ್ಲಿ ಸುಳ್ಳುಸುದ್ದಿಗಳು, ನಕಲಿ ಖಾತೆಗಳಿಗೇನು ಕೊರತೆ, ಅಹಿತಕರವಾದ, ಸಮಾಜಕ್ಕೆ ಮಾರಕ ಎನಿಸುವ ಪೋಸ್ಟ್‌ಗಳನ್ನು ರಿಪೋರ್ಟ್‌ ಮಾಡುವುದಕ್ಕೆ ಅವಕಾಶವಿದೆ. ದುರುದ್ದೇಶದ ಇಂತಹ ಬರಹಗಳನ್ನು ತಡೆಯುವುದಕ್ಕೆಂದೇ ಇರುವ ಈ ಅವಕಾಶ ಈಗ ವ್ಯತಿರಿಕ್ತವಾಗಿ ಕೆಲಸ ಮಾಡುತ್ತಿದೆ. ರಿಪೋರ್ಟ್‌ ಮಾಡಿದವರ ಖಾತೆಗೆ ಬೀಗ ಜಡಿಯುತ್ತಿದೆ!!

Pic Courtesy: Irish Times

ಇದು ವಿಚಿತ್ರ. ಇವರು ತಪ್ಪು ಮಾಡಿರುವ ಅನುಮಾನವಿದೆ, ವಿಚಾರಿಸಿ ಎಂದು ದೂರು ಕೊಟ್ಟರೆ, ದೂರು ಕೊಟ್ಟವರನ್ನೇ ತಪ್ಪಿತಸ್ಥರಂತೆ ನೋಡಿದರೆ ಹೇಗಿರುತ್ತೆ!?

ಫೇಸ್‌ಬುಕ್‌ ಇತ್ತೀಚನ ಬೆಳವಣಿಗೆಯೊಂದು ಅಂಥದ್ದೇ ಅನುಭವಕ್ಕೆ ಕಾರಣವಾಗಿದೆ. ಸ್ಕ್ಯಾಮರ್‌ಗಳು, ನಕಲಿಖಾತೆಗಳು, ಖ್ಯಾತನಾಮರ ಹೆಸರಿನಲ್ಲಿ ಸೃಷ್ಟಿಸಲಾದ ಸುಳ್ಳು ಖಾತೆಗಳನ್ನು ರಿಪೋರ್ಟ್‌ ಮಾಡಿದರೆ ಫೇಸ್‌ಬುಕ್‌ ರಿಪೋರ್ಟ್‌ ಮಾಡಿದವರ ಖಾತೆಯನ್ನು ಕೆಲ ದಿನಗಳ ನಿಷ್ಕ್ರಿಯಗೊಳಿಸುತ್ತಿದೆ.

ಸಾಮಾನ್ಯವಾಗಿ ಹೀಗೆ ದೂರುಗಳು ನಿರ್ದಿಷ್ಟ ಸಂಖ್ಯೆಯಲ್ಲಿ ಬಂದಾಗ ಅಂತಹ ಖಾತೆಗಳನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗುತ್ತದೆ. ಖಾತೆಯನ್ನು ಹೊಂದಿರುವ ವ್ಯಕ್ತಿ ತನ್ನ ಗುರುತನ್ನು ಸಾಬೀತು ಮಾಡುವ ಮೂಲಕ ಮತ್ತೆ ತನ್ನ ಖಾತೆಯನ್ನು ಸಕ್ರಿಯಗೊಳಿಸಿಕೊಳ್ಳುವುದಕ್ಕೆ ಅವಕಾಶವಿರುತ್ತದೆ.

ಆದರೆ ಫೇಸ್‌ಬುಕ್‌ ದೂರು ಕೊಟ್ಟವರ ಖಾತೆಗಳಿಗೆ ಬೀಗ ಜಡಿಯುತ್ತಿದ್ದು, ತಮ್ಮ ಗುರುತನ್ನು ಸಾಬೀತು ಮಾಡುವುದಂತೆ ಸೂಚಿಸುತ್ತದೆ. ಅದನ್ನೂ ಮಾಡಿದ ಖಾತೆದಾರರಿಗೆ ಆಘಾತವೇ ಕಾದಿದೆ. ಸೂಕ್ತ ಗುರುತಿನ ಚೀಟಿಯನ್ನು ಸ್ಕ್ಯಾನ್‌ ಮಾಡಿದ ಮೇಲೂ ಫೇಸ್‌ಬುಕ್‌ ಖಾತೆ ಲಾಗಿನ್‌ ಆಗುವುದಕ್ಕೆ ಅವಕಾಶ ನೀಡುತ್ತಿಲ್ಲ.
ಕಳೆದ ಎರಡು ಮೂರುದಿನಗಳಿಂದ ಈ ಪ್ರಕರಣಗಳು ಹೆಚ್ಚು ಕೇಳಿಬರಲಾಂಭಿಸಿದ್ದು, ಸಿಟ್ಟಿಗೆದ್ದಿರುವ ಬಳಕೆದಾರರು ಟ್ವಿಟರ್‌ನಲ್ಲಿ #FacebookLockout ಹ್ಯಾಶ್‌ ಟ್ಯಾಗ್‌ ಟ್ರೆಂಡ್‌ ಆಗುವಂತೆ ಮಾಡಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಫೇಸ್‌ಬುಕ್‌ ಬಳಕೆದಾರರು ಟ್ವಿಟರ್‌ನಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಇದು ಕೇವಲ ವ್ಯಕ್ತಿಗತ ಖಾತೆಗಳಿಗಷ್ಟೇ ಅಲ್ಲ, ಫೇಸ್‌ಬುಕ್‌ ಪೇಜ್‌ಗಳು, ಇನ್‌ಸ್ಟಗ್ರಾಂ ಖಾತೆಗೂ ತೊಂದರೆಯಾಗಿದೆ ಎಂದು ಕೋರಿ ಕೋಮರ್‌ ಎಂಬುವರು ತಮ್ಮ ಟ್ವಿಟರ್‌ ಟೈಮ್‌ನಲ್ಲಿ ಬರೆದಿದ್ದಾರೆ. ದಶಕದಿಂದ ಬಳಸುತ್ತಿರುವ ಪಾಲಿಸಿ ಮೇಕರ್‌ ಎಂಬ ಖಾತೆದಾರರದ್ದು ಇದೇ ಸಮಸ್ಯೆ. ಇವರ ಖಾತೆ ರದ್ದಾಗಿ ವಾರವಾಗಿದೆಯಂತೆ.

ಇನ್ನೊಬ್ಬ ಟ್ವಿಟರ್‌ ಖಾತೆ ದಾರ ಸಯೀದ್‌ ಜಾಯ್‌ ತಮ್ಮ ಇನ್ನೊಂದು ವಿಚಿತ್ರ, ಅನುಭವವನ್ನು ಹಂಚಿಕೊಂಡಿದ್ದಾರೆ. ಇದು ಕೇವಲ ಖಾತೆಯ ಬಳಕೆಗೆ ಸಂಬಂಧಿಸಿದಷ್ಟೇ ಅಲ್ಲ. ಭದ್ರತೆಯ ಲೋಪವೂ ಇದೆ ಎಂಬ ಅನುಮಾನವನ್ನು ಇದು ಹುಟ್ಟುಹಾಕಿದೆ. ಸಯೀದ್‌ ಜಾಯ್‌ ಇಂಟರ್ನೆಟ್‌ನಲ್ಲಿ ಮಾಹಿತಿ ಸುರಕ್ಷತೆ, ಭದ್ರತೆ ಕುರಿತು ಸಂಶೋಧನೆ ನಡೆಸುತ್ತಿರುವವರು. ಇವರು ಕಳೆದ ತಿಂಗಳು ನಕಲಿ ಖಾತೆಯೊಂದನ್ನು ಸೃಷ್ಟಿಸಿ, ರಿಪೋರ್ಟ್‌ ಮಾಡುವುದರ ಮೂಲಕ ತಮ್ಮದೇ ನಿಜವಾದ ಫೇಸ್‌ಬುಕ್‌ ಖಾತೆಯೊಂದು ರದ್ದು ಮಾಡಿಸುವಲ್ಲಿ ಯಶಸ್ವಿಯಾಗಿದ್ದರಂತೆ. ನಂತರ ಫೇಸ್‌ಬುಕ್‌ ಅವರನ್ನೇ ಸಂಪರ್ಕಿಸಿ ತಮ್ಮ ನಿಜವಾದ ಖಾತೆಯ ಮೇಲಿದ್ದ ರದ್ದತಿಯನ್ನು ತೆರವುಗೊಳಿಸಿದ್ದರು. ಆದರೆ ಕಳೆದ ರಾತ್ರಿ ಮತ್ತೆ ಅವರ ಖಾತೆ ರದ್ದಾಗಿದೆ.

ಫೇಸ್‌ಬುಕ್‌ ಈ ಕುರಿತು ಇನ್ನೂ ಯಾವುದೇ ಸ್ಪಷ್ಟನೆಯನ್ನು ನೀಡಿಲ್ಲ. ಆದರೆ ಈ ಬೆಳವಣಿಗೆ ತಾಂತ್ರಿಕ ಸಮಸ್ಯೆಯೊ, ಫೇಸ್‌ಬುಕ್‌ ಪ್ರಯೋಗವೋ ತಿಳಿಯದೇ ಬಳಕೆದಾರರು ಆತಂಕಗೊಂಡಿದ್ದಾರೆ.