ಕಳೆದೆರಡು ವರ್ಷಗಳಿಂದ ಒಂದಿಲ್ಲ ಒಂದು ವಿವಾದಲ್ಲಿ ಸಿಲುಕಿದ್ದ ಫೇಸ್‌ಬುಕ್ ಕಳೆದ ವಾರ ದಿಢೀರನೆ ರೀಬ್ರ್ಯಾಂಡ್ ಸುದ್ದಿಯನ್ನು ಹರಿಯಬಿಟ್ಟು ಅಚ್ಚರಿ ಮೂಡಿಸಿತ್ತು. ಅನೇಕರು ಈ ಬೆಳವಣಿಗೆಯನ್ನು ಫೇಸ್‌ಬುಕ್ ಮುಜುಗರದಿಂದ ಹೊರಬರುವ ನಡೆ ಎಂದೇ ವಿಶ್ಲೇಷಿಸಿದ್ದರು.
ಫ್ರಾನ್ಸೆಸ್ ಹಾಗೆನ್ ಬಯಲು ಮಾಡಿದ ಸತ್ಯಗಳು ಫೇಸ್‌ಬುಕ್ ಮತ್ತು ಅದರ ಮಾಲೀಕ ಝುಕರ್‌ಬರ್ಗ್‌ನನ್ನು ತೀವ್ರ ಮುಜುಗರಕ್ಕೆ ಈಡು ಮಾಡಿತ್ತು. ಆದರೆ ಇದು ಯಾವುದೂ ಕುಂದು ಉಂಟು ಮಾಡಿಲ್ಲ ಎಂಬುದಕ್ಕೆ ನಿನ್ನೆ ಪ್ರಕಟಣೆಯೇ ಸಾಕ್ಷಿ.
2015ರಲ್ಲಿ ಗೂಗಲ್ ತಾನೊಂದು ಕೇವಲ ಸರ್ಚ್ ಎಂಜಿನ್ ಸಂಸ್ಥೆಯಲ್ಲ, ಹಲವು ಸಂಶೋಧನೆ, ತಂತ್ರಜ್ಞಾನ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿರುವ ಸಂಸ್ಥೆ ಎಂದೂ ಎಲ್ಲ ಸೇವೆಗಳನ್ನು ಅಲ್ಫಾಬೆಟ್ ಹೆಸರಿನ ಸಂಸ್ಥೆಯಡಿ ತಂದಿತ್ತು. ಫೇಸ್‌ಬುಕ್ ಕೂಡ ಅದೇ ದಾರಿಯಲ್ಲಿ ನಡೆದು ತನ್ನ ಮೂರು ಸಾಮಾಜಿಕ ಜಾಲತಾಣಗಳ ಸೇವೆಯನ್ನು ‘ಮೆಟಾ’ ಎಂಬ ಕಾರ್ಪೋರೇಟ್ ಹೆಸರಿನಡಿ ತಂದಿರುವುದಾಗಿ ಘೋಷಿಸಿದೆ.
ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ಗುರುವಾರ ತಡರಾತ್ರಿ ( ಭಾರತೀಯ ಕಾಲಮಾನ) ನಡೆದ ವಾರ್ಷಿಕ ಡೆವೆಲಪರ್‌ಗಳ ಸಮಾವೇಶದಲ್ಲಿ ಹೊಸದಾಗಿ ನಾಮಕರಣಗೊಂಡಿರುವ ಮೆಟಾ ಸಂಸ್ಥೆಯ ಸಿಇಒ ಮಾರ್ಕ್ ಝುಕರ್ ಈ ಘೋಷಣೆ ಮಾಡಿದ್ದಾರೆ. ”ಸಾಮಾಜಿಕ ಸಮಸ್ಯೆಗಳೊಂದಿಗೆ ಸಂಘರ್ಷ ನಡೆಸುತ್ತಾ ಮತ್ತು ಮುಚ್ಚಿದ ವೇದಿಕೆಗಳಲ್ಲಿ ನಾವು ಹಲವು ವಿಷಯಗಳನ್ನು ಕಲಿತಿದ್ದೇವೆ. ನಾವು ಕಲಿತದ್ದನ್ನು ಆಧರಿಸಿ ಹೊಸ ಅಧ್ಯಾಯವನ್ನು ಬರೆಯುವ ಸಮಯ ಬಂದಿದೆ ಎಂದು ಹೇಳಿದ್ದಾರೆ.
ಇಂದಿನಿಂದ ನಮ್ಮ ಕಂಪನಿಯ ಹೆಸರು ಮೆಟಾ” ಎಂದು ಘೋಷಿಸಿದ ಝುಕರ್‌ಬರ್ಗ್, ‘ನಮ್ಮ ಮಿಷನ್ ಎಂದಿನಂತೆ ಇರುತ್ತದೆ. ಜನರನ್ನು ಬೆಸೆಯುವ ಕೆಲಸ ಮುಂದುವರೆಯುತ್ತದೆ. ನಮ್ಮೆಲ್ಲ ಅಪ್ಲಿಕೇಷನ್‌ಗಳು ಎಂದಿನಂತೆಯೇ ಇರುತ್ತವೆ ಎಂದು ಹೇಳಿದರು.
ಫ್ರಾನ್ಸೆಸ್ ಹಾಗೆನ್ ಹೊರಹಾಕಿದ ದಾಖಲೆಗಳಿಂದ ತೀವ್ರವಾದ ಟೀಕೆಯನ್ನು ಎದುರಿಸಿದ್ದ ಫೇಸ್‌ಬುಕ್, ವಿಶ್ವಾಸಾರ್ಹತೆ ಕುರಿತು ಎದ್ದ ಪ್ರಶ್ನೆಗಳನ್ನು ಇನ್ನಷ್ಟು ಗಂಭೀರವಾಗಿಸಿದ್ದವು. ಆದರೆ ಈ ಆರೋಪಗಳ ನಂತರವೂ ವಹಿವಾಟಿನಲ್ಲಿ ಯಾವುದೇ ಬದಲಾವಣೆಯನ್ನು ಕಂಡಿರದ ಫೇಸ್‌ಬುಕ್ 9 ಬಿಲಿಯನ್ ಡಾಲರ್ ಲಾಭ ಮಾಡಿದೆ ಎಂದು ಅಮೆರಿಕನ್ ಮಾಧ್ಯಮಗಳು ಬರೆದಿದ್ದವು. ಫೇಸ್‌ಬುಕ್ ಉದ್ಯಮ ದಿನದಿನಕ್ಕೂ ಪ್ರಬಲವಾಗುತ್ತಿದ್ದು, ಈಗ ಮೆಟಾವರ್ಸ್ ಎಂಬ ಮಹತ್ವಕಾಂಕ್ಷಿ ಯೋಜನೆಯನ್ನು ಜಾರಿಗೆ ತರುವುದಕ್ಕೆ ತಯಾರಿ ನಡೆಸುತ್ತಿದೆ.
ಒಂದು ಗಂಟೆಗೂ ಹೆಚ್ಚು ಕಾಲದ ವಿಡಿಯೋ ಸಂದೇಶವನ್ನು ಬಿತ್ತರಿಸಿದ ಝುಕರ್‌ಬರ್ಗ್ ಮುಂದಿನ ಒಂದು ದಶಕದ ಅವಧಿಯಲ್ಲಿ 100ಕೋಟಿ ಗೂ ಹೆಚ್ಚು ಜನರನ್ನು ಈ ವೇದಿಕೆಗೆ ತರುವುದಾಗಿ ಹೇಳಿದರು. ಈ ವೇದಿಕೆಯು ಡಿಜಿಟಲ್ ಕಾಮರ್ಸ್ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಸಲಿದ್ದು, ಲಕ್ಷಾಂತರ ಡೆವೆಲಪರ್‌ಗಳಿಗೆ ಹೊಸ ಅವಕಾಶಗಳನ್ನು ತೆರೆಯಲಿದೆ ಎಂಬ ಮಾಹಿತಿ ನೀಡಲಾಯಿತು.
ಈಗಾಗಲೇ ಮೆಟಾವರ್ಸ್ ಯೋಜನೆಗಾಗಿ ಯುರೋಪಿಯನ್ ಒಕ್ಕೂಟದಲ್ಲಿ 10000 ಜನರನ್ನು ನಿಯೋಜಿಸಲಾಗಿದ್ದು, ಈ ಅಪೂರ್ವ ಪರಿಕಲ್ಪನೆಯನ್ನು ಕಾರ್ಯರೂಪಕ್ಕೆ ತರುವುದಕ್ಕೆ ತೀವ್ರವಾಗಿ ಶ್ರಮಿಸಲಾಗುತ್ತಿದೆ ಎಂದು ಝುಕರ್‌ಬರ್ಗ್ ತಿಳಿಸಿದರು.
ಫ್ರಾನ್ಸೆಸ್ ಹಾಗೆನ್ ಬೆಳವಣಿಗೆ ಕುರಿತೂ ಪ್ರತಿಕ್ರಿಯಿಸಿದ ಝುಕರ್ ಬರ್ಗ್, ‘ ವಿಶ್ವಾಸದ ವಿಮರ್ಶೆ ನಾವು ಉತ್ತಮವಾಗಲು ನೆರವಾಗುತ್ತದೆ. ಆದರೆ ನಾವಿಂದು ನೋಡುತ್ತಿರುವುದು ನಮ್ಮ ಸಂಸ್ಥೆಯನ್ನು ತಪ್ಪಾಗಿ ಬಿಂಬಿಸಲು ವ್ಯವಸ್ಥಿತವಾಗಿ ದಾಖಲೆಗಳನ್ನು ಸೋರಿಕೆ ಮಾಡಲಾಗುತ್ತಿದೆ” ಎಂದು ಹೇಳಿದರು.
ಗುರುವಾರದ ಸಮಾವೇಶದಲ್ಲಿ ಝುಕರ್‌ಬರ್ಗ್ ತಮ್ಮ ಭವಿಷ್ಯದ ನಡೆಯ ಬಗ್ಗೆ ಸ್ಪಷ್ಟ, ವಿಶ್ವಾಸದ ನುಡಿಗಳನ್ನು ಆಡಿದ್ದು, ತನ್ನ ಮೇಲಿನ ಆರೋಪಗಳಿಂದ ಮುಕ್ತವಾಗಿ ಮತ್ತೆ ಬಳಕೆದಾರರ ವಿಶ್ವಾಸ ಗಳಿಸಲು ಯಾವ ಕ್ರಮಗಳನ್ನು ಅನುಸರಿಸಲಿದೆ ಎಂಬ ಕುತೂಹಲ ಉಳಿಸಿದೆ.