ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ನಿಂದ ಲೈಕ್‌ ಬಟನ್‌ ಮಾಯವಾಗಲಿದೆಯೇ?!

ಜಗತ್ತಿನ ಅತಿ ದೊಡ್ಡ, ಅತ್ಯಂತ ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ ಅತ್ಯಂತ ಕ್ರಿಯಾಶೀಲವಾದ ಒಂದು ಅಂಶವನ್ನು ಕಿತ್ತೊಗೆಯಲು ಸಿದ್ಧವಾಗುತ್ತಿದೆ ಎಂಬ ಸುದ್ದಿ ಬಂದಿದೆ. ಅದೇ ಲೈಕ್‌ ಬಟನ್‌. ಯಾವುದಾದರೂ ಒಂದು ಪೋಸ್ಟ್‌ಗೆ ಕಮೆಂಟ್‌ ಮಾಡಲು ವ್ಯವಧಾನ ಇಲ್ಲದವರು ಕ್ಷಣದಲ್ಲಿ ತಮ್ಮ ಅಭಿಪ್ರಾಯವನ್ನು ದಾಖಲಿಸುವುದಕ್ಕೆಂದು ಮಾಡಿದ ಈ ತಂತ್ರ, ಕೆಲ ದಿನಗಳಲ್ಲಿ ಬದಲಾಗಲಿದೆಯಂತೆ!

ಇದು ನಿಜಕ್ಕೂ ಅನೇಕರಿಗೆ ಆಘಾತಕಾರಿ ಸುದ್ದಿ. ತಾವು ಹೇಳಿರುವ ಅಭಿಪ್ರಾಯ, ತಾವು ಹಂಚಿಕೊಂಡ ನೆನಪು, ತಮ್ಮದೊಂದು ಸೆಲ್ಫಿ.. ಏನಾದರೂ ಇರಲಿ. ಪೋಸ್ಟ್‌ ಮಾಡಿದ ಮೇಲೆ ಅದು ಎಷ್ಟು ಲೈಕ್‌ಗಳನ್ನು ಪಡೆಯಿತು ಎಂಬುದರ ಮೇಲೆ ಅದರ ಜನಪ್ರಿಯತೆಯನ್ನು ಅಳೆಯಲಾಗುತ್ತಿತ್ತು. ಹಾಗೇ ಪೋಸ್ಟ್‌ ಮಾಡಿದವರ ಜನಪ್ರಿಯತೆಯನ್ನು ಅಳೆಯಲಾಗುತ್ತಿತ್ತು.

ಹೆಚ್ಚು ಹೆಚ್ಚು ಲೈಕ್‌ ಪಡೆದವರು ಹೆಚ್ಚು ಜನರನ್ನು ತಲುಪಿದ, ಹೆಚ್ಚು ಹೆಚ್ಚು ಜನಪ್ರಿಯರಾದ ಗುಂಗಿನಲ್ಲಿ ಬೀಗುತ್ತಿದ್ದರು. ಇದೊಂದು ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸಿತ್ತು. ಲೈಕ್‌ ಮಾಡಿದ್ದು ಅವಾಂತರಗಳಿಗೂ ಕಾರಣವಾಗಿದ್ದು, ದುರಂತವನ್ನು ಕಂಡ ಉದಾಹರಣೆಗಳಿಗೇನು ಕಡಿಮೆ ಏನಿಲ್ಲ. ಒಂದು ಕ್ಲಿಕ್, ಮೋಡಿ ಮಾಡಿದಷ್ಟೇ ಅವಘಡಗಳಿಗೂ ಕಾರಣವಾಯಿತು.

ಇದನ್ನು ನೋಡಿದ ಫೇಸ್‌ಬುಕ್‌ ಸಂಸ್ಥೆ ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಮ್‌ನ ಲೈಕ್‌ ಬಟನ್ನೇ ಕಿತ್ತೊಗೆಯಬೇಕೊ? ಲೈಕ್‌ಗಳ ಸಂಖ್ಯೆಯನ್ನು ಮುಚ್ಚಿಡಬೇಕೊ ಎಂಬ ಚಿಂತನೆಯನ್ನು ನಡೆಸುತ್ತಿದೆಯಂತೆ. ಈಗಾಗಲೇ ಈ ನಿಟ್ಟಿನಲ್ಲಿ ಕೆನಡಾ, ಬ್ರೆಜಿಲ್‌ ಸೇರಿದಂತೆ ಏಳು ದೇಶಗಳಲ್ಲಿ ಈ ಪ್ರಯೋಗ ನಡೆದಿದೆ.

ಹತ್ತು ವರ್ಷಗಳ ಹಿಂದೆ, 2009ರ ಫೆಬ್ರವರಿ ತಿಂಗಳಲ್ಲಿ ಫೇಸ್‌ಬುಕ್‌ ಈ ಲೈಕ್‌ ಬಟನ್‌ ಪರಿಚಯಿಸಿತು. ಈ ಒಂದು ದಶಕದ ಅವಧಿಯಲ್ಲಿ ಮಾನಸಿಕ ಆರೋಗ್ಯದ ಮೇಲೆ ಬೀರಿದ ಪ್ರಭಾವ ಅನಾಹುತಕಾರಿ. ಅನೇಕ ಆತ್ಮಹತ್ಯೆಗೂ ಕಾರಣವಾಗಿದೆ ಎಂಬ ಉದಾಹರಣೆಗಳು ನಮ್ಮ ನಡುವೆ ಇದೆ. ಇನ್ನೊಬ್ಬರ ಲೈಕ್‌ಗಳೊಂದಿಗೆ ಹೋಲಿಕೆ ಮಾಡಿಕೊಂಡು ತಮ್ಮ ವ್ಯಕ್ತಿತ್ವವನ್ನು ಅಳೆಯುವ ಹುಂಬುತನ ಖಿನ್ನತೆ ಮುಂತಾದ ಮಾನಸಿಕ ಅರೋಗ್ಯ ಸಮಸ್ಯೆಗಳನ್ನು ಹುಟ್ಟುಹಾಕಿತ್ತು.

ಯಾವುದೇ ವಿಚಾರವನ್ನು ವಿವೇಚಿಸದೆ, ಲೈಕ್‌ ಮಾಡುವ ಮೂಲಕ ಅಭಿಮತ ರೂಪಿಸುವ ಅಥವಾ ಅಭಿಪ್ರಾಯವನ್ನು ಬಲಪಡಿಸುವ ತಾರ್ಕಿಕವಾದ ತಂತ್ರಗಾರಿಕೆ ಸಾಮಾಜಿಕ ಕೆಡುಕಿಗೇ ಹೆಚ್ಚು ಕೊಡುಗೆಯನ್ನು ಕೊಟ್ಟಿತು ಎಂಬ ಟೀಕೆ ಕಳೆದ ಕೆಲವು ವರ್ಷಗಳಿಂದ ತೀವ್ರವಾಗಿಯೇ ಕೇಳಿ ಬರಲಾರಂಭಿಸಿತ್ತು. ಹದಿಹರೆಯದವರು, ಈ ಲೈಕ್‌ನ ಕಾರಣದಿಂದಾಗಿ ಸಾಮಾಜಿಕ ಜಾಲತಾಣಗಳ ವ್ಯಸನಕ್ಕೆ ಬಿದ್ದಿದ್ದು ಆತಂಕ ಹುಟ್ಟಿಸಿತ್ತು.

ಸ್ವತಃ ಫೇಸ್‌ಬುಕ್‌ ಕೆಲವು ಅಧ್ಯಯನಗಳನ್ನು ನಡೆಸಿ, ಲೈಕ್‌ ಮಾಡುವುದು ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬ ವರದಿಗಳನ್ನು ಪ್ರಕಟಿಸಿತು. ಒಂದೆಡೆ ಸಂಸ್ಥೆಗಳು ಲೈಕ್‌ಗಳನ್ನು ಬಳಸಿ ಅಥವಾ ಆಧರಿಸಿ ವಾಣಿಜ್ಯ ಉದ್ದೇಶಗಳನ್ನು ಈಡೇರಿಸಿಕೊಳ್ಳುವ ಉದ್ದೇಶದಿಂದಾಗಿ ಕೃತಕವಾಗಿ ಲೈಕ್‌ಗಳನ್ನು ಸೃಷ್ಟಿಸುವ ಪ್ರಯತ್ನಗಳು ಹೆಚ್ಚಾದವು.

ಈ ನಡುವೆ ಮಾಹಿತಿ ಸೋರಿಕೆಯಿಂದಾಗಿ, ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿದ್ದ ಫೇಸ್‌ಬುಕ್‌, ಸಾಮಾಜಿಕವಾಗಿ ಉಂಟು ಮಾಡುತ್ತಿದ್ದ ದುಷ್ಪರಿಣಾಮ ಕೂಡ ಟೀಕೆಗೆ ಕಾರಣವಾಯಿತು. ಈ ಹಿನ್ನೆಲೆಯಲ್ಲಿ ತಮ್ಮ ಮುಖ ಉಳಿಸಿಕೊಳ್ಳುವ, ಬಳಕೆದಾರರಲ್ಲಿ ನಂಬಿಕೆಯನ್ನು ಉಳಿಸಿಕೊಳ್ಳುವ ಪ್ರಯತ್ನವಾಗಿ, ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಲೈಕ್‌ ಬಟನ್‌ ಅನ್ನು ಸೂಕ್ತ ರೀತಿಯಲ್ಲಿ ಬದಲಾವಣೆ ತರುವುದಕ್ಕೆ ಸಿದ್ಧವಾಗಿದೆ.

ಲೈಕ್‌ ಬಟನ್‌ ಇರುವುದಿಲ್ಲವೆ? ಲೈಕ್‌ ಗಳು ಕಾಣುವುದಿಲ್ಲವೆ?

ಸಾಮಾಜಿಕ ಒಳಿತಿನ ಹಿನ್ನೆಲೆಯಲ್ಲಿ ಫೇಸ್‌ಬುಕ್‌ ಲೈಕ್‌ ಬಟನ್‌ ಅನ್ನು ಕೈಬಿಡಬೇಕು ಎಂಬ ಚರ್ಚೆ ಕಳೆದ ಎರಡು ಮೂರು ವರ್ಷಗಳ ನಡೆಯುತ್ತಿದೆ. ಇಂಥದ್ದೇ ಚರ್ಚೆಯ ಸಂದರ್ಭದಲ್ಲಿ ಡಿಸ್‌ಲೈಕ್‌ ಬಟನ್‌ ಅನ್ನು ಪರಿಚಯಿಸುವ ಸುದ್ದಿಯೂ ಓಡಾಡಿತ್ತು. ಆದರೆ ಅದು ಕಾರ್ಯಗತವಾಗಲಿಲ್ಲ. ಈಗ ಲೈಕ್‌ ಬಟನ್‌ ಕೈಬಿಡಬೇಕು ಎಂಬ ಬಗ್ಗೆ ಚಿಂತನೆಯನ್ನು ನಡೆಸುತ್ತಿದೆ. ಫೇಸ್‌ಬುಕ್‌ ಈ ಬಗ್ಗೆ ಇನ್ನು ಸ್ಪಷ್ಟ ನಿಲುವು ತಳೆದಿಲ್ಲ.

ಫೇಸ್‌ಬುಕ್‌ಅನ್ನು ವೈಯಕ್ತಿಕವಾಗಿ ಬಳಸುತ್ತಿರುವಂತೇ ಅನೇಕ ಸಂಘ ಸಂಸ್ಥೆಗಳು ಬಳಸುತ್ತಿವೆ. ಇವುಗಳು ತಮ್ಮ ಜನಪ್ರಿಯತೆ, ಜನರನ್ನು ತಲುಪುತ್ತಿರುವ ಪ್ರಮಾಣವನ್ನು ಅಳೆಯಲು ಲೈಕ್‌ಗಳನ್ನೇ ಅವಲಂಬಿಸಿದೆ. ಹಾಗಾಗಿ ಏಕಾಏಕಿ ಲೈಕ್‌ ಬಟನ್ನೇ ಕಿತ್ತೊಗೆಯುವುದೆ? ಇಲ್ಲ ಎಂಬ ಅಭಿಪ್ರಾಯವೂ ಕೇಳಿಬರುತ್ತಿದೆ. ಬದಲಿಗೆ ಲೈಕ್‌ಗಳನ್ನು ಸಂಖ್ಯೆಯನ್ನು ಕಾಣದಂತೆ ಮಾಡಬಹುದು ಎಂಬ ಸಂಗತಿಯೂ ಕೇಳಿಬಂದಿದೆ.

ಅಂದರೆ ನೀವು ಹಾಕಿದ ಪೋಸ್ಟ್‌ಗೆ ನಿಮ್ಮ ಸ್ನೇಹಿತರು ಲೈಕ್‌ ಮಾಡಿದಾಗ, ಕೆಲವರು ಹೆಸರುಗಳನ್ನು ತೋರಿಸುತ್ತದೆ. ಆದರೆ ಎಷ್ಟು ಜನರು ಎಂಬುದನ್ನಲ್ಲ ಮತ್ತು ಈ ಮಾಹಿತಿ ನಿಮಗೆ ಮಾತ್ರ ಕಾಣಿಸುತ್ತದೆ. ಉಳಿದವರಿಗೆ ಕಾಣಿಸುವುದಿಲ್ಲ! ಇಂಥ ಬದಲಾವಣೆಯ ಸಾಧ್ಯತೆಯನ್ನು ಫೇಸ್‌ಬುಕ್‌ ಪರಿಶೀಲಿಸುತ್ತಿದೆ ಎನ್ನಲಾಗಿದೆ.

ಈ ಕುರಿತು ಸ್ಪಷ್ಟನೆಗಾಗಿ ಟೆಕ್‌ಕನ್ನಡ ಫೇಸ್‌ಬುಕ್‌ ಅನ್ನು ಸಂಪರ್ಕಿಸಿದಾಗ ಪ್ರಯೋಗ ನಡೆಸುತ್ತಿರುವ ಸಂಗತಿ ಖಚಿತವಾಗಿದೆ. ಫೇಸ್‌ಬುಕ್‌ ವಕ್ತಾರರು ನೀಡಿರುವ ಹೇಳಿಕೆ ಹೀಗಿದೆ:

“ನಾವು ಲೈಕ್‌, ರಿಯಾಕ್ಷನ್‌ ಮತ್ತು ವಿಡಿಯೋ ವ್ಯೂಗಳ ಸಂಖ್ಯೆಗಳನ್ನು ಖಾಸಗಿಗೊಳಿಸುವ ಪ್ರಯೋಗವನ್ನು ನಡೆಸುತ್ತಿದ್ದೇವೆ. ಈ ಬದಲಾವಣೆಯಿಂದ ಜನರ ಅನುಭವ ಉತ್ತಮಗೊಳ್ಳುವುದೇ ಎಂಬುದನ್ನು ಅರಿಯಲು ಅಭಿಪ್ರಾಯ ಸಂಗ್ರಹಿಸುತ್ತಿದ್ದೇವೆ”.

ಯುವ ಸಮೂಹ ಏನನ್ನುತ್ತೆ?

ಸೆಲ್ಫಿಗಳನ್ನು ಪೋಸ್ಟ್‌ ಮಾಡಿ ಲೈಕ್‌ಗಳಿಗೆ ಎದುರು ನೋಡುವ ಯುವ ಸಮೂಹ ಫೇಸ್‌ಬುಕ್‌ ತೊರೆದು ಇನ್‌ಸ್ಟಾಗ್ರಾಮ್‌ಗೆ ಜಿಗಿದು ಕೆಲಕಾಲವಾಗಿದೆ. ಆದರೆ ಲೈಕ್‌ ಮೇಲಿನ ವ್ಯಾಮೋಹವೇನು ಕಡಿಮೆಯಾಗಿಲ್ಲ. ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಲೈಕ್‌ ಫೀಚರ್‌ನಲ್ಲಿ ಬದಲಾವಣೆ ತರುವ ಕುರಿತು ಟೆಕ್‌ ಕನ್ನಡ ಅಭಿಪ್ರಾಯ ಸಂಗ್ರಹಿಸಿದಾಗ ಯುವ ಬಳಕೆದಾರರು ಹೇಳಿದ್ದು ಇದು

” ಲೈಕ್‌ ಬಟನ್‌ ರಿಮೋವ್‌ ಮಾಡಬೇಕು. ಯಾಕೆಂದರೆ, ಕೆಲವರಿಗೆ ಅದೇ ಕ್ರೇಜ್‌ ಆಗಿ ಬಿಟ್ಟಿರುತ್ತೆ. ಎಷ್ಟು ಲೈಕ್ಸ್‌ ಬರುತ್ತೆ, ಎಷ್ಟು ಫ್ಯಾನ್ಸ್‌ ಇದ್ದಾರೆ, ಎಷ್ಟು ಫಾಲೋವರ್ಸ್ ಇದ್ದಾರೆ ಎಂದು ಬೀಗುವ ಮನೋಭಾವ ಬೆಳೆಸಿಕೊಂಡಿರುತ್ತಾರೆ. ಭ್ರಮೆಯಲ್ಲಿರುತ್ತಾರೆ. ಈ ದೃಷ್ಟಿಯಲ್ಲಿ ಒಂದು ವೇಳೆ ಲೈಕ್‌ ಬಟನ್‌ ತೆಗೆದರೆ ಒಂದು ರೀತಿಯಲ್ಲಿ ಒಳ್ಳೆಯದೇ.”

ಜಯಂತ್‌ರಾಜು, ಪದವಿ ವಿದ್ಯಾರ್ಥಿ

” ಲೈಕ್‌ ಬಟನ್‌ ಇರಬಾರದು. ಯುವ ಜನರು ಅದನ್ನು ತಪ್ಪಾಗಿ ಬಳಸುತ್ತಿದ್ದಾರೆ. ಲೈಕ್ಸ್‌, ಕಮೆಂಟ್ಸ್‌ ಬರಲಿ ಎಂದೇ ಪೋಸ್ಟ್‌ಗಳನ್ನು ಮಾಡುತ್ತಾರೆ. ಇದು ಒಳ್ಳೆಯದಲ್ಲ.

ದೀಪಿಕಾ ಜೈನ್‌, ಪದವಿ ವಿದ್ಯಾರ್ಥಿನಿ

ಬದಲಾವಣೆ ಆಗಬೇಕಿರುವುದು ಬಹಳಷ್ಟಿದೆ

ಫೇಸ್‌ಬುಕ್‌ ಲೈಕ್‌ ಬಟನ್‌ ವಿಷಯದಲ್ಲಿ ತಳೆದಿರುವ ನಿಲುವು ಸರಿಯಾಗಿದೆ. ಆದರೆ ಫೇಸ್‌ಬುಕ್‌ನಲ್ಲಿ ಸರಿಪಡಿಸಬೇಕಾದ, ಬದಲಿಸಬೇಕಾದ ಹಲವು ಸಂಗತಿಗಳಿವೆ ಎಂಬುದು ಸಾರ್ವತ್ರಿಕ ಅಭಿಪ್ರಾಯ. ಮಾಹಿತಿ ಸುರಕ್ಷತೆಯ ವಿಷಯದಲ್ಲಿ ಫೇಸ್‌ಬುಕ್‌ ಇನ್ನಷ್ಟು ಬಿಗಿ ನಿಲುವು ತಳೆಯಬೇಕು. ರಾಜಕೀಯ ಜಾಹೀರಾತುಗಳ ನಿಯಂತ್ರಣಕ್ಕೆ ಸೂಕ್ತ ನಿಯಮಗಳನ್ನು ರೂಪಿಸಬೇಕು. ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಹಾನಿಯುಂಟು ಮಾಡುವ ಯಾವುದೇ ಚಟುವಟಿಕೆಯನ್ನು ತಡೆಯಬೇಕು. ಈ ನಿಟ್ಟಿನಲ್ಲಿ ಫೇಸ್‌ಬುಕ್‌ ಕ್ರಮಕೈಗೊಳ್ಳುವಂತಾಗಲಿ ಎಂಬ ನಿರೀಕ್ಷೆಗಳಿವೆ. ಈಗ ಅಮೆರಿಕದಲ್ಲಿ ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲಿ, ಈ ಸಾಮಾಜಿಕ ಜಾಲತಾಣ ಹೆಚ್ಚು ಪಾರದರ್ಶಕವಾಗಿ, ಬಳಕೆದಾರರ ಮಾಹಿತಿಯನ್ನು ಗೌಪ್ಯವಾಗಿಡುವಲ್ಲಿ ಪ್ರಾಮಾಣಿಕವಾಗಿ ನಡೆದುಕೊಳ್ಳಲಿ ಎಂಬ ಒತ್ತಡ ಸೃಷ್ಟಿಯಾಗುತ್ತಿದೆ. ಲೈಕ್‌ ಬಟನ್‌ನಲ್ಲಿ ತರಲಿರುವ ಬದಲಾವಣೆ, ಇಂಥ ಗಂಭೀರ ಚರ್ಚೆ ಹಾದಿ ತಪ್ಪಿಸುವ ನಡೆಯೂ ಆಗದಿರಲಿ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಮ್‌ ಅನ್ನು ಜೀವಂತವಾಗಿರಿಸಿದ ಲೈಕ್‌ ಬಟನ್‌ನಲ್ಲಿ ಬದಲಾವಣೆಯಾದರೆ, ಬಳಕೆದಾರರ ಆಸಕ್ತಿ ಕುಂದುವುದರಲ್ಲಿ ಅನುಮಾನವಿಲ್ಲ. ಲೈಕುಗಳೇ ಇಲ್ಲದ ಮೇಲೆ ಫೇಸ್‌ಬುಕ್‌ ಯಾತಕೆ, ಇನ್‌ಸ್ಟಾಗ್ರಾಮ್‌ ಬೇಕೆ?