ಕೊರೊನಾ ಎಂಬ ಮಾಹಿತಿಮಾರಿ!| ಭಾಗ 1

ಕೊರೊನಾ ಇಡೀ ಜಗತ್ತನ್ನು ಅಲ್ಲಾಡಿಸಿದೆ. ಆದರೆ ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಹಲವು ರೀತಿಯ ಮಾಹಿತಿಗಳು ಜನರನ್ನು ಇನ್ನಷ್ಟು ಕಂಗೆಡಿಸಿವೆ. ಈ ಸುಳ್ಳು ಸುದ್ದಿಗಳು ಹಾದಿ ತಪ್ಪಿಸುವ ಮಾಹಿತಿಗಳು ಅಸಂಖ್ಯ ಪ್ರಮಾಣದಲ್ಲಿ ಹಂಚಿಕೊಳ್ಳಲಾಗುತ್ತಿದ್ದು ಕೊರೊನಾ ಕುರಿತ ಜಾಗೃತಿ ಮೂಡಿಸುವುದೂ ಒಂದು ಸವಾಲಾಗಿದೆ. ಈ ಕುರಿತು ಸಂಶೋಧನಾ ವಿದ್ಯಾರ್ಥಿ ಜಿ ಪಿ ವಿನಯ್‌ ಅವರ ಲೇಖನ ಸರಣಿ ಇಲ್ಲಿದೆ

ಮಾಹಿತಿ ತಂತ್ರಜ್ಞಾನಗಳ ನಾಗಾಲೋಟದ ಈ ದಿನಮಾನಗಳಲ್ಲಿ ಅವಶ್ಯ ಮಾಹಿತಿಯು ಬೆರಳಂಚಿನಲ್ಲಿ ದೊರೆಯುತ್ತಿರುವುದು ನಮ್ಮ ಅದೃಷ್ಟವೇ ಸರಿ. ಇಂಟರ್‌ನೆಟ್ ಸಂಪರ್ಕವೊಂದಿದ್ದರೆ ಪ್ರಪಂಚದೆಲ್ಲೆಡೆಯ ಸುದ್ದಿಗಳನ್ನು ಕ್ಷಣಾರ್ಧದಲ್ಲಿಯೇ ಪಡೆಯಬಹುದಾಗಿದೆ. ತಂತ್ರಜ್ಞಾನದ ಅಗಾಧ ಬೆಳವಣಿಗೆಯಿಂದಾಗಿ ಸುದ್ದಿತಾಣಗಳು, ವೆಬ್‌ಪೋರ್ಟಲ್‌ಗಳು, ಮಾಹಿತಿಕೋಶಗಳು, ಆಡಿಯೋ-ವಿಡಿಯೋ ಆಧರಿತ ನವಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳು ನಮಗೆ ಸಾವಿರಾರು ವಿಷಯವಸ್ತುಗಳನ್ನು ದಿನವಿಡೀ ತಲುಪಿಸುತ್ತಲೇ ಇರುತ್ತವೆ. ದಿನಗಳದಂತೆ ಇದು ಮಾಹಿತಿ ಮಹಾಸ್ಫೋಟವಾಗಿ ಬದಲಾಗಿದೆ.

ವೈವಿಧ್ಯಮಯ ಸಾಮಾಜಿಕ ಜಾಲತಾಣಗಳ ಲಭ್ಯತೆಯಿಂದಾಗಿ ಇಂದು ಪ್ರತಿಯೊಬ್ಬರೂ ತಮ್ಮ ಆಲೋಚನೆ, ಅಭಿಪ್ರಾಯಗಳನ್ನು ಹತ್ತಾರು ಜನರಿಗೆ ಸುಲಭವಾಗಿ ತಲುಪಿಸುವ, ಮಾಧ್ಯಮವಾಗಿ ಹೊರಹೊಮ್ಮುವ ಅಪರೂಪದ ಅವಕಾಶಗಳನ್ನು ಪಡೆದಿದ್ದಾರೆ. ಇದು ಮಾಹಿತಿ ಮಹಾಪೂರಕ್ಕೆ ವೃತ್ತಿಪರರು ಸೃಷ್ಟಿಸಿ, ವಿತರಿಸಿದ ಮಾಹಿತಿಗಳಲ್ಲದೇ, ವೈಯಕ್ತಿಕ ಕೊಡುಗೆಗಳನ್ನು ಸೇರಿಸಿದೆ. ಈ ಬೆಳವಣಿಗೆಯನ್ನು ಸಕಾರಾತ್ಮಕವಾಗಿ ಪರಿಗಣಿಸಿದರೇ, ಸಮಾಜದಲ್ಲಿ ಮುಕ್ತವಾಗಿ ವಿಷಯ ತಿಳಿಯುವ, ಹಂಚಿಕೊಳ್ಳುವ ವಿಫುಲ ದಾರಿಗಳನ್ನು ತೆರೆದಿಟ್ಟಿದೆ ಎನ್ನಬಹುದು. ಆದರೆ ದಿನಪತ್ರಿಕೆ, ಟೆಲಿವಿಷನ್ ನ್ಯೂಸ್ ಚಾನೆಲ್‌ಗಳು, ಆನ್‌ಲೈನ್ ಸುದ್ದಿತಾಣಗಳ ಜೊತೆಗೆ ಸಾಮಾಜಿಕ ಮಾಧ್ಯಮಗಳು ತಂದು ರಾಶಿ ಹಾಕುತ್ತಿರುವ ಮಾಹಿತಿಯಲ್ಲಿ ಅಗತ್ಯ-ಅನಗತ್ಯ, ಗಟ್ಟಿ-ಜೊಳ್ಳು, ಸುಳ್ಳು-ಸತ್ಯಗಳನ್ನು ಬೇರ್ಪಡಿಸುವುದು, ಅರಿಯುವುದು ನಮಗಿಂದು ಕಷ್ಟಕರವಾಗಿದೆ. ವಿಷಯವೊಂದರ ಸುತ್ತ ಸೃಷ್ಟಿಯಾಗುವ ಇಂತಹ ಪರಿಸ್ಥಿತಿಯನ್ನೇ ಮಾಹಿತಿಮಾರಿ (Infodemic) ಎನ್ನಲಾಗುತ್ತದೆ. ಈ ಸಂದರ್ಭದವು ಸುಳ್ಳು ಸುದ್ದಿಗಳ ಸುಲಭ, ಯತೇಚ್ಛ ಹರಿದಾಟಕ್ಕೆ ದಾರಿಮಾಡಿಕೊಡುತ್ತದೆ.

ಸುಳ್ಳು ಸುದ್ದಿ: ಸುಳ್ಳು ಸುದ್ದಿ (Fake news) ಎಂದರೆ ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿಯೊಂದನ್ನು ಸಾಂಪ್ರದಾಯಿಕ ಅಥವಾ ಆಧುನಿಕ ನವಮಾಧ್ಯಮಗಳ ಮೂಲಕ ದೊಡ್ಡಪ್ರಮಾಣದಲ್ಲಿ ಪಸರಿಸಿ ಓದುಗರನ್ನು ತಪ್ಪುದಾರಿಗೆಳೆಯುವ, ಮೋಸಗೊಳಿಸುವ ಪ್ರಕ್ರಿಯೆಯಾಗಿರುತ್ತದೆ. ಇಂಟರ್‌ನೆಟ್ ಆಧರಿತ ಸಾಮಾಜಿಕ ಸಂಪರ್ಕ ಮಾಧ್ಯಮಗಳು ಈ ಪ್ರಕ್ರಿಯೆಯನ್ನು ಇಂದು ಇನ್ನಿಲ್ಲದಂತೆ ಹೆಚ್ಚಿಸಿವೆ. ಹಿಂದೆ ಸುಳ್ಳುಸುದ್ದಿಗಳನ್ನು ಪೀತ ಪತ್ರಿಕೋದ್ಯಮದ ಭಾಗವಾಗಿಯೂ ನೋಡಲಾಗುತ್ತಿತ್ತು. ಇವು ನಂಬಲರ್ಹವೆಂಬಂತೆ ಕಾಣುವುದಲ್ಲದೇ, ತೀವ್ರವಾಗಿ ಮನವೊಲಿಸುವಂತಿರುತ್ತವೆ.


ಸುಳ್ಳುಸುದ್ದಿಗಳ ಸೃಷ್ಟಿ ಮತ್ತು ಪ್ರಸರಣೆಯು ಓದುಗರನ್ನು ತಪ್ಪುದಾರಿಗೆಳೆಯುವ ಮೂಲಕ ವ್ಯಕಿ ಅಥವಾ ಸಂಸ್ಥೆಯೊಂದಕ್ಕೆ ಹಾನಿಗೀಡುಮಾಡುವ, ಮತ್ತು ರಾಜಕೀಯವಾಗಿ ಅಥವಾ ಆರ್ಥಿಕವಾಗಿ ಲಾಭಗಳಿಸುವ ಉದ್ದೇಶಗಳನ್ನು ಒಳಗೊಂಡಿರುತ್ತದೆ. ಇದಕ್ಕಾಗಿ ವೈಭವೀಕೃತ, ಅಪ್ರಾಮಾಣಿಕ, ಪೂರ್ಣವಾಗಿ ಸಂಬಂಧಿಸದ ಶೀರ್ಷಿಕೆ ಹಾಗೂ ಮಾಹಿತಿಯನ್ನು ಬಳಸಲಾಗಿರುತ್ತದೆ. ಹಲವು ತಜ್ಞರು ಸುಳ್ಳುಸುದ್ದಿ (Fake news) ಎಂಬ ಪದಬಳಕೆಯು ಅದರ ವ್ಯಾಪ್ತಿಯನ್ನು ರಾಜಕೀಯ ಲಾಭಕ್ಕೆ ಮಾತ್ರ ಸೀಮಿತಗೊಳಿಸುತ್ತದೆ. ಇಂದು ಸಮಾಜದಲ್ಲಿ ಹಲವು ರೀತಿಯ, ವಿವಿಧ ಉದ್ದೇಶಗಳನ್ನು ಒಳಗೊಂಡ ಸುಳ್ಳುಸುದ್ದಿಗಳು ಹರಿದಾಡುತ್ತಿರುವ ಕಾರಣ ಅವನ್ನು ಒಟ್ಟಾರೆಯಾಗಿ ತಪ್ಪುಮಾಹಿತಿ (false information) ಎಂದು ಬಳಸುವುದು ಸೂಕ್ತ ಎಂದಿದ್ದಾರೆ. ತಪ್ಪುಮಾಹಿತಿ ಹರಡುವಿಕೆ ತಡೆಯಲು ಹೋರಾಡುತ್ತಿರುವ ಅಂತರಾಷ್ಟ್ರೀಯ ಖ್ಯಾತಿಯ ಫಸ್ಟ್ ನ್ಯೂಸ್ ಡ್ರಾಫ್ಟ್ ಸಂಸ್ಥೆಯ ಮುಖ್ಯಸ್ಥೆ ಕ್ಲೈರ್ ವಾರ್ಡ್ಲ್, ಸುಳ್ಳುಸುದ್ದಿ ಬದಲಾಗಿ ಮಾಹಿತಿ ಮಾಲಿನ್ಯ (Information Pollution) ಎಂದು ಕರೆದಿದ್ದಾರೆ. ಇದು ತಪ್ಪು ಮಾಹಿತಿ (misinformation), ಉದ್ದೇಶಪೂರ್ವಕ ತಪ್ಪು ಮಾಹಿತಿ (disinformation) ಹಾಗೂ ಅಸಮರ್ಪಕ ಮಾಹಿತಿ (malinformation) ಗಳನ್ನು ಒಳಗೊಳ್ಳುತ್ತದೆ. ಭಾರತದಲ್ಲಿ ಸುಳ್ಳುಸುದ್ದಿಗಳು ಇನ್ನೂ ಸಹ ಪರೋಕ್ಷವಾಗಿ ರಾಜಕೀಯ ಲಾಭ, ಆಸಕ್ತಿಗಳ ಸುತ್ತಲೇ ಸುತ್ತುತ್ತಿರುವುದರಿಂದ ಲೇಖನದಲ್ಲಿ ಸುಳ್ಳುಸುದ್ದಿ ಎಂದೇ ಬಳಸಲಾಗಿದೆ.
ನಿಯೋಜಿತ ಪ್ರಚಾರ, ವಿಡಂಬನೆ/ಅಪಹಾಸ್ಯ, ತಪ್ಪುದಾರಿಗೆಳೆಯುವ ಶೀರ್ಷಿಕೆಗಳು, ಪಕ್ಷಪಾತಿ ಅಥವಾ ಪೂರ್ವಗ್ರಹಪೀಡಿತ ಮಾಹಿತಿ, ಅಸಡ್ಡೆ ಪತ್ರಿಕೋದ್ಯಮ, ಕ್ಲಿಕ್‌ಬೈಟ್ (ವೆಬ್‌ತಾಣಕ್ಕೆ ಭೇಟಿ ನೀಡುವಂತೆ ಆಕರ್ಷಿಸುವ, ಪ್ರೇರೇಪಿಸುವ ವಿಷಯದ ಕೊಂಡಿ)ಗಳು ಸುಳ್ಳುಸುದ್ದಿಗಳ ಮಾದರಿಗಳಾಗಿರುತ್ತವೆ. ಇಲ್ಲಿನ ಬಹುತೇಕ ಮಾದರಿಗಳ ಅಸ್ಥಿತ್ವವಿರುವುದು ಅಂತರ್ಜಾಲ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚಾಸ್ಪದ. ಸಾಮಾಜಿಕ ಜಾಲತಾಣಗಳ ಮೂಲಕ ಸುಲಭವಾಗಿ ಕನಿಷ್ಠ ಖರ್ಚಿನಲ್ಲಿ ಸುಳ್ಳನ್ನು ಪ್ರಕಟಿಸಿ, ಸಾವಿರಾರು ಜನರಿಗೆ ಆ ಮಾಹಿತಿ ತಲುಪಿಸುವ ಸಾಧ್ಯತೆ ಹಾಗೂ ಇದಕ್ಕೆ ಯಾವುದೇ ಕಾಯಿದೆ-ಕಾನೂನುಗಳ ತೊಡಕಿಲ್ಲದಿರುವುದು ಸುಳ್ಳುಸುದ್ದಿಗಳ ಪ್ರಸರಣೆಗೆ ವಿಫುಲ ಅವಕಾಶಗಳನ್ನು ಒದಗಿಸಿದೆ ಎಂದು ಸುದರ್ಶನ್ ಸಾಹು (2017) ಅಧ್ಯಯನವೊಂದರಲ್ಲಿ ವಿವರಿಸಿದ್ದಾರೆ. ಜೊತೆಗೆ ಜಾಲತಾಣಗಳಲ್ಲಿ ಹೆಚ್ಚಿನ ಲೈಕ್ಸ್ ಪಡೆಯುವ ಹಪಾಹಪಿ, ಇನ್ನೊಬ್ಬರನ್ನು ಇಕ್ಕಟ್ಟಿಗೆ ಸಿಲುಕಿಸಿ ಮಜಾ ನೋಡುವ ಪ್ರವೃತ್ತಿಗೆ, ಅಪಹಾಸ್ಯಗೊಳಿಸಿ ಅವರ ಸಾಮಾಜಿಕ ಮಾನ್ಯತೆ ಕುಂದಿಸಲು, ಕೆಲವೊಮ್ಮೆ ಆರ್ಥಿಕ ಲಾಭಕ್ಕಾಗಿಯೂ ನಡೆಯುತ್ತಿರುವುದುಂಟು. ಸಾಮಾಜಿಕ ಜಾಲತಾಣಗಳು ಈ ಕುಚೋದ್ಯಕ್ಕೆ ಬೃಹತ್ ವೇದಿಕೆಗಳಾಗಿವೆ.
ಸಾಮಾಜಿಕ ಮಾಧ್ಯಮ: 2020ರ ಜನವರಿಯಲ್ಲಿ ಪ್ರಕಟವಾದ ವರದಿಯ ಪ್ರಕಾರ ವಿಶ್ವದ ಸುಮಾರು ಶೇ. 60ರಷ್ಟು ಜನರು ಅಂದರೆ4.54 ಬಿಲಿಯನ್ ಮಂದಿ ಇಂಟರ್‌ನೆಟ್ ಬಳಸುತ್ತಿದ್ದಾರೆ. ಅವರಲ್ಲಿ 3.8 ಬಿಲಿಯನ್ ಜನರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ (ವಿ ಆರ್ ಸೊಶಿಯಲ್, 2020). ಇದೇ ಸಂದರ್ಭದಲ್ಲಿ ಭಾರತದ 68.8 ಕೋಟಿ ಮಂದಿ ಸಕ್ರಿಯವಾಗಿ ಇಂಟರ್‌ನೆಟ್ ಬಳಸುತ್ತಿದ್ದು, ಇವರಲ್ಲಿ 19-29ರ ವಯೋಮಾನದವರ ಪಾಲು ಶೇ. 72 ರಷ್ಟಿದೆ. ಅಂತರ್ಜಾಲ ಬಳಸುವವರಲ್ಲಿ ಶೇ. 90 ರಷ್ಟು ಜನರು ಮೊಬೈಲ್ ಮೂಲಕವೇ ಈ ಸೌಲಭ್ಯ ಉಪಯೋಗಿಸುತ್ತಿದ್ದಾರೆ.


ಸ್ಮಾರ್ಟ್‌ಫೋನ್ ಹೊಂದಿರುವ ಪ್ರತೀ ಮೂರರಲ್ಲಿ ಎರಡು ಮಂದಿ ಒಂದಿಲ್ಲೊಂದು ಸಾಮಾಜಿಕ ಸಂಪರ್ಕತಾಣಗಳಲ್ಲಿ ಖಾತೆ ಹೊಂದಿದ್ದಾರೆಂಬುದು ಗಮನಾರ್ಹ. ಒಟ್ಟಾರೆ 40ಕೋಟಿ ಭಾರತೀಯರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯರಾಗಿದ್ದಾರೆ ಎಂದು ವರದಿಗಳು ಹೇಳಿವೆ. ಇತ್ತೀಚಿನ ವರ್ಷಗಳಲ್ಲಿ ಗ್ರಾಮೀಣ ಭಾಗದಲ್ಲಿಯೂ ವಾಟ್ಸಾಪ್ ಬಳಕೆ ಹೆಚ್ಚುತ್ತಿರುವುದು ಜಾಲತಾಣಿಗರ ಸಂಖ್ಯೆಯಲ್ಲಿ ಭಾರೀ ಏರಿಕೆ ಕಾಣಲು ಸಾಕ್ಷಿಯಾಗಿದೆ ಎಂದು ಜಾಗತಿಕ ದತ್ತಾಂಶಗಳನ್ನು ಒದಗಿಸುವ ಸ್ಟ್ಯಾಟಿಸ್ಟ (2020) ವರದಿ ಮಾಡಿದೆ. ಮುಂದುವರಿದು ಭಾರತದ ಪ್ರತೀ ಜಾಲತಾಣಿಗನೂ ಸರಾಸರಿ 2.4ಗಂಟೆಗಳನ್ನು ಅವುಗಳ ಮೇಲೆ ವ್ಯಯಿಸುತ್ತಿದ್ದಾನೆ ಹಾಗೂ ಫೇಸ್‌ಬುಕ್, ಯೂಟೂಬ್, ಕೋರಾ, ಇನ್ಸ್ಟಾಗ್ರಾಂ ಹಾಗೂ ಟ್ವಿಟ್ಟರ್‌ಗಳು ಜನಪ್ರಿಯತೆಯಲ್ಲಿ ಅಗ್ರ ಸ್ಥಾನಗಳನ್ನು ಗಳಿಸಿವೆ. ಹೀಗೆ ಭಾರತದ ಸಾಮಾಜಿಕ ಜಾಲತಾಣಗಳ ಬಳಕೆದಾರರ ಸಂಖ್ಯೆ ಮತ್ತು ಪ್ರಭಾವಳಿ ದೊಡ್ಡ ಪ್ರಮಾಣದಲ್ಲಿದೆ.

ಜಾಲತಾಣಗಳಲ್ಲಿ ಸುಳ್ಳುಸುದ್ದಿ: ಸುಳ್ಳುಸುದ್ದಿಯ ಪಿಡುಗು ಭಾರತಕ್ಕೆ ಮಾತ್ರ ಸೀಮಿತವಲ್ಲ. ವಿಶ್ವದಾದ್ಯಂತ ಇದು ವ್ಯಾಪಿಸಿದ್ದು, ಅಂತರಾಷ್ಟ್ರೀಯ ಮಟ್ಟದ ರಾಜಕೀಯ, ವಾಣಿಜ್ಯ-ವ್ಯವಹಾರ, ಆರೋಗ್ಯ ಇನ್ನಿತರೆ ಕ್ಷೇತ್ರಗಳ ಮೇಲೆ ತನ್ನ ಕೆಟ್ಟಪರಿಣಾಮವನ್ನು ಈಗಾಗಲೇ ಸಾಬೀತುಪಡಿಸಿದೆ. 2016ರ ಅಮೇರಿಕಾ ಅಧ್ಯಕ್ಷೀಯ ಚುನಾವಣೆಯ ಸಂದರ್ಭದಲ್ಲಿ ಫೇಸ್‌ಬುಕ್‌ನಲ್ಲಿ ಪ್ರಕಟಗೊಂಡ ಅಗ್ರ 20 ಸುಳ್ಳುಸುದ್ದಿಗಳು 87ಲಕ್ಷ ಶೇರ್ ಹಾಗೂ ಪ್ರತಿಕ್ರಿಯೆಗಳನ್ನು ಪಡೆದಿದ್ದವು. ಇದೇ ಸಮಯದಲ್ಲಿ ಅಲ್ಲಿಯ ಖ್ಯಾತ ದಿನಪತ್ರಿಕೆಗಳಾದ ದಿ ವಾಷಿಂಗ್ಟನ್ ಪೋಸ್ಟ್ ಮತ್ತು ದಿ ನ್ಯೂಯಾರ್ಕ್ ಟೈಮ್ಸ್‌ಗಳು ಪ್ರಕಟಿಸಿದ 20 ಸುದ್ದಿಗಳು 73 ಲಕ್ಷ ಪ್ರತಿಕ್ರಿಯೆ ಮತ್ತು ಹಂಚಿಕೆಗಳನ್ನು ಕಂಡಿದ್ದವು. ಇದು ಸುಳ್ಳುಸುದ್ದಿಗಳು ಜಾಲತಾಣಗಳ ಮೂಲಕ ಅಪಾರ ಜನರನ್ನು ತಲುಪುವ, ಅವರ ಗಮನಸೆಳೆಯುವ ಹಾಗೂ ನಂಬಿಸುವ ಸಾಮರ್ಥ್ಯದ ಮೇಲೆ ಬೆಳಕು ಚೆಲ್ಲುತ್ತದೆ.

ಪ್ರತಿಷ್ಟಿತ ಸೈನ್ಸ್ ಪತ್ರಿಕೆ ಪ್ರಕಟಿಸಿದ (ವೊಸೌಗಿ ಮತ್ತು ತಂಡ,2018) ವರದಿಯೊಂದು, ಟ್ವಿಟ್ಟರ್‌ನಲ್ಲಿ 2006-2017ರ ವರೆಗೆ ಹರಿದಾಡಿದ ತಪ್ಪುಮಾಹಿತಿಗಳ ಕುರಿತು ಅಧ್ಯಯನ ನಡೆಸಿ ಸತ್ಯಕ್ಕಿಂತ ಸುಳ್ಳುಸುದ್ದಿಗೆ ಹೆಚ್ಚು ಜನರನ್ನು ತಲುಪಬಹುದಾದ ಶಕ್ತಿಯಿದೆಯೆಂಬ ಕಟುಸತ್ಯವನ್ನು ಹೊರಗೆಡವಿದೆ. ಅವುಗಳಲ್ಲಿ ಅಗ್ರ ಶೇ. 01 ರಷ್ಟು (ಸುಳ್ಳು)ಸುದ್ದಿಗಳು ವ್ಯಾಪಕವಾಗಿ ಹರಿದಾಡಿ ಒಂದು ಸಾವಿರದಿಂದ ಒಂದು ಲಕ್ಷ ಜನರನ್ನು ತಲುಪಿವೆ. ಆದರೆ ಇದೇ ಸಂದರ್ಭದಲ್ಲಿ ಸತ್ಯಸುದ್ದಿಗಳು ಕೆಲವೊಮ್ಮೆ ಮಾತ್ರ ಸಾವಿರಕ್ಕಿಂತ ಅಧಿಕ ಟ್ವಿಟ್ಟಿಗರಿಂದ ಓದಲ್ಪಟ್ಟಿವೆ ಎಂಬ ಆಘಾತಕಾರಿ ಪ್ರವೃತ್ತಿ ಅಸ್ಥಿತ್ವದಲ್ಲಿರುವುದನ್ನು ತಿಳಿಸಿದೆ.

ವಿದೇಶಗಳ ಜಾಲತಾಣಗಳಲ್ಲಿ ಸುಳ್ಳುಸುದ್ದಿಗಳು ಹರಿದಾಡಿದರೆ, ಭಾರತದಲ್ಲಿ ಮುಖ್ಯವಾಹಿನಿ ಟಿವಿ ಚಾನೆಲ್‌ಗಳಲ್ಲಿಯೇ ಅವು ಪ್ರದರ್ಶನಗೊಂಡಿವೆ ಎಂಬುದು ದುರದೃಷ್ಟಕರ ಸಂಗತಿ. ಕೇಂದ್ರ ಸರ್ಕಾರ 2016ರಲ್ಲಿ ಸಾವಿರ, ಐದುನೂರು ಮುಖಬೆಲೆಯ ನೋಟುಗಳನ್ನು ನಿಷೇಧಿಸಿ ಆದೇಶ ಹೊರಡಿಸಿದಾಗ, ಹೊಸನೋಟುಗಳಲ್ಲಿ ನ್ಯಾನೋ ಜಿ.ಪಿ.ಎಸ್. ಚಿಪ್ ಇರಿಸಲಾಗಿದ್ದು, ಕಪ್ಪುಹಣ ಸಂಗ್ರಹಕ್ಕಿದು ಕಡಿವಾಣ ಹಾಕಲಿದೆ ಎಂದು ಯಾರೋ ಗಾಳಿಸುದ್ದಿ ಹರಡಿದರು. ’ತಾವೇ ಮೊದಲು’ ಸುದ್ದಿ ನೀಡುವ ಧಾವಂತದಲ್ಲಿ ಈ ಸುಳ್ಳುಸುದ್ದಿಯನ್ನು ರಾಷ್ಟ್ರೀಯ ಜೀ ನ್ಯೂಸ್, ಕನ್ನಡದ ಪಬ್ಲಿಕ್ ಟಿವಿ ಹಾಗೂ ಇತರೆ ಚಾನೆಲ್‌ಗಳು ಪ್ರಸಾರಮಾಡಿ ನಗೆಪಾಟಲಿಗೀಡಾಗಿದ್ದವು. ಕಳೆದ ವರ್ಷ 2019ನ್ನು ಸುಳ್ಳುಸುದ್ದಿಗಳ ವರ್ಷ ಎಂದೇ ಕರೆಯಲಾಗಿರುವುದು ಸುಳ್ಳುಸುದ್ದಿಗಳ ಭರಾಟೆ ತಗ್ಗದಿರುವುದನ್ನು ಸಾಕ್ಷೀಕರಿಸುತ್ತದೆ. ಭಾರತದಲ್ಲಿ ಸುಳ್ಳುಸುದ್ದಿಗಳು ಬಹುತೇಕ ರಾಜಕೀಯದ ಸುತ್ತಮುತ್ತ ಸೃಷ್ಟಿಯಾದಂತಹವುವಾಗಿವೆ. ಪುಲ್ವಾಮಾ ಹಾಗೂ ಬಾಲಾಕೋಟ್ ದಾಳಿಯ ನಕಲಿ ವಿಡಿಯೋಗಳು, 2019ರ ಲೋಕಸಭಾ ಚುನಾವಣೆ, ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು, ಜೆಎನ್‌ಯು ಮೇಲಿನ ದಾಳಿ, ಕಠುವಾ ಅತ್ಯಾಚಾರ ಪ್ರಕರಣ ಸಂಬಂಧಿ ಸರಣಿ ಸುಳ್ಳುಸುದ್ದಿಗಳು ವರದಿಯಾಗಿವೆ. ಸುಳ್ಳುಸುದ್ದಿಗಳ ನಿಜಬಣ್ಣ ಬಯಲಿಗೆಳೆಯುವ ಖ್ಯಾತ ವೆಬ್‌ತಾಣ ಆಲ್ಟ್‌ನ್ಯೂಸ್ ಸಂಸ್ಥಾಪಕ ಪ್ರತೀಕ್ ಸಿನ್ಹ, ಕಳೆದ ವರ್ಷಕ್ಕಿಂತ ಹಲವುಪಟ್ಟು ಅಧಿಕ ಸಂಖ್ಯೆಯ ಸುದ್ದಿಗಳ ನೈಜತೆಯನ್ನು 2019ರಲ್ಲಿ ಪರೀಕ್ಷಿಸಿರುವುದಾಗಿ ಎಕಾನಾಮಿಕ್ ಟೈಮ್ಸ್ ಪತ್ರಿಕೆಗೆ ನೀಡಿದ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

%d bloggers like this: