ಭಾರತದ ಮೊದಲ ಮುಸ್ಲಿಂ ಮಹಿಳಾ ಶಿಕ್ಷಕಿ ಫಾತಿಮಾ ಶೇಖ್ ಅವರ ಜನ್ಮದಿನ ಅಂಗವಾಗಿ ಗೂಗಲ್, ವಿಶೇಷ ಡೂಡಲ್‌ನಿಂದ ಅವರನ್ನು ಗೌರವಿಸಿದೆ. ಇದರಿಂದಾಗಿ ಅವರ 191ನೇ ಜನ್ಮದಿನ ಹಿಂದೆಂದಿಗಿಂತ ಹೆಚ್ಚು ಸುದ್ದಿಯಾಗಿದೆ.
ರಾಷ್ಟ್ರ ಮಟ್ಟದ ಸುದ್ದಿ ವಾಹಿನಿಗಳು ತಮ್ಮ ತಮ್ಮ ವೆಬ್‌ಸೈಟಲ್ಲಿ ಈ ಬಗ್ಗೆ ಸುದ್ದಿ ಮಾಡಿದ್ದು ಒಂದೆಡೆಯಾದರೆ ಯೂಟ್ಯೂಬ್‌ಗೆ ಒಂದೇ ದಿನ ಒಬ್ಬರೇ ವ್ಯಕ್ತಿಯ ಬಗ್ಗೆ 20 ಕ್ಕೂ ಹೆಚ್ಚು ವಿಡಿಯೋಗಳು ಅಪ್ಲೋಡ್ ಆಗಿವೆ. ಫಾತಿಮಾ ಶೇಖ್ ಬಗೆಗಿನ ವಿಕಿಪೀಡಿಯಾ ಪುಟವಂತೂ ಒಂದೇ ದಿನ 50ಕ್ಕೂ ಹೆಚ್ಚು ಸಲ ತಿದ್ದುಪಡಿಯಾಗಿದೆ.
ಜ್ಯೋತಿಬಾ ಫುಲೆ ಹಾಗೂ ಸಾವಿತ್ರಿ ಬಾಯಿ ಫುಲೆ ಒಡನಾಡಿಯಾಗಿದ್ದ ಫಾತಿಮಾ ಶೇಖ್ ಕಾರ್ಯಕ್ಷೇತ್ರ ಈಗಿನ ಮಹಾರಾಷ್ಟ್ರದ ಪುಣೆ, ಅದೇ ಅವರ ಹುಟ್ಟೂರೂ ಹೌದು. 1848ರಲ್ಲಿ ದೇಶದಲ್ಲಿ ಬಾಲಕಿಯರಿಗಾಗಿ ಆರಂಭವಾದ ಮೊಟ್ಟ ಮೊದಲ ಶಾಲೆಯಲ್ಲಿ ಗ್ರಂಥಾಲಯ ಸ್ಥಾಪನೆಯಲ್ಲಿ ಫಾತಿಮಾ ಶೇಖ್ ಶ್ರಮವಿದೆ. 1851ರಲ್ಲಿ ಮುಂಬೈನಲ್ಲಿ ಎರಡು ಶಾಲೆಗಳ ಸ್ಥಾಪನೆಯಲ್ಲೂ ಅವರ ಪಾಲಿದೆ ಎನ್ನಲಾಗಿದೆ.
ದಲಿತರಿಗೆ ಶಿಕ್ಷಣ ನೀಡುತ್ತಿದುದಕ್ಕೆ ಫುಲೆ ದಂಪತಿಗಳನ್ನು ಮನೆಯಿಂದ ಹೊರಹಾಕಿದಾಗ ಆಶ್ರಯ ನೀಡಿದ್ದು ಫಾತಿಮಾ ಸಹೋದರ ಮಿಯಾ ಉಸ್ಮಾನ್ ಶೇಖ್. ಅಲ್ಲಿ ಸಾವಿತ್ರಿ ಬಾಯಿ ಫುಲೆ ಮತ್ತು ಫಾತಿಮಾ ಶೇಖ್ ದಲಿತ ಮತ್ತು ಮುಸ್ಲಿಂ ಮಹಿಳೆಯರು ಮತ್ತು ಮಕ್ಕಳಿಗೆ ಶಿಕ್ಷಣ ನೀಡಲು ಆರಂಭಿಸಿದರು. ಆದರೆ ಶಿಕ್ಷಣ ಕಾರ್ಯದ ಹೊತರಾಗಿ ಫಾತಿಮಾ ಶೇಖ್ ಗ್ರಂಥ ಸಂಪಾದನೆ ಅಥವಾ ಪುಸ್ತಕ ರಚನೆಯಲ್ಲಿ ತೊಡಗಿಕೊಳ್ಳಲಿಲ್ಲವಾದ ಕಾರಣ ಅವರ ಬಗ್ಗೆ ದಾಖಲಾದ ಇತಿಹಾಸ ಕಡಿಮೆ. ಫುಲೆ ದಂಪತಿಗಳ ನಡುವಿನ ಪತ್ರವ್ಯವಹಾರವೇ ಫಾತಿಮಾ ಬಗೆಗಿನ ಹೆಚ್ಚಿನ ಮಾಹಿತಿಗೆ ಆಕರ.
2014 ರಲ್ಲಿ ಫಾತಿಮಾ ಶೇಖ್ ಕುರಿತ ಪಠ್ಯವನ್ನು ಮಹಾರಾಷ್ಟ್ರ ಸರಕಾರ ಉರ್ದು ಪಠ್ಯಪುಸ್ತಕದಲ್ಲಿ ಸೇರಿಸಿದೆ.