ಮರಳಿದ ಮೊಟೊ ರೇಜರ್‌; ಫ್ಲಿಪ್‌ ಫೋನೀಗಾ, ಫೋಲ್ಡಬಲ್‌ ಸ್ಮಾರ್ಟ್‌ಫೋನ್‌!

ಇದು ವೃತ್ತ ಪೂರ್ಣವಾದಂತಹ ಬೆಳವಣಿಗೆ. ದಶಕದ ಹಿಂದೆ ಹೊಸ ಹವಾ ಸೃಷ್ಟಿಸಿದ್ದ ಮೊಟೊರೋಲಾ ಫೋನುಗಳು ಹೊಸ ಬ್ರ್ಯಾಂಡ್‌ಗಳ ಹಾವಳಿಯಲ್ಲಿ ಕಳೆದು ಹೋಗುವಂತಹ ತಲುಪಿದ್ದವು. ಈಗ ಮತ್ತೆ ಸುದ್ದಿ ಮಾಡಲಾರಂಭಿಸಿದೆ. ಮೊಟೊ ರೇಜರ್‌ನ ಹೊಸ ಮಾಡೆಲ್‌ ಲೀಕ್‌ ಆಗಿದ್ದು ಭರ್ಜರಿ ಆಕರ್ಷಣೆ ಉಂಟು ಮಾಡಿದೆ

ಹಳೆಯ ರೇಜರ್‌, ಹೊಸ ರೇಜರ್‌

ಮೊಟೊರೋಲಾದ ರೇಜರ್‌ ಫೋನ್‌ ಒಂದು ಕಾಲದ ಕ್ರೇಜ್‌. ಪಟ್ಟನೆ ಮಡಿಚಿಟ್ಟುಕೊಳ್ಳುವ, 2 ಮೆಗಾಪಿಕ್ಸೆಲ್‌ ಕ್ಯಾಮೆರಾ, ಬಣ್ಣದ ಸ್ಕ್ರೀನ್‌ ಇದ್ದ ಫ್ಲಿಪ್‌ ಫೋನ್‌ ಆಕರ್ಷಣೆಯಾಗಿತ್ತು. ಆದರೆ ಕಾಲ ಸರಿದಂತೆ ಹೊಸ ಹೊಸ ಬ್ರ್ಯಾಂಡ್‌ಗಳು ಅಗ್ಗದ ಬೆಲೆಯಲ್ಲಿ ಅತ್ಯಾಧುನಿಕ ಫೀಚರ್‌ಗಳ ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿ ಮಿಂಚಲಾರಂಭಿಸಿದವು.

ಮೊಟೊರೊಲಾ, ಎಲ್‌ಜಿ, ಗೂಗಲ್‌ ಜೊತೆಗೆ ಕೈ ಜೋಡಿಸಿ ಹೊಸ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ತಂದರೂ, ತನ್ನ ಹಳೆಯ ವರ್ಚಸ್ಸು ಮತ್ತೆ ಗಳಿಸುವುದು ಕಷ್ಟವೇ ಇತ್ತು. ಆದರೆ ಈಗ ರೇಜರ್‌ ಫೋನನ್ನು ಹೊಸ ಅವತಾರದಲ್ಲಿ ತರುತ್ತಿದೆ. ಇದರ ಹೆಸರು ರೇಜರ್‌ವಿ4. ಈ ಅವತಾರ ನಿಜಕ್ಕೂ ಸ್ಮಾರ್ಟ್‌ಫೋನ್‌ ಪ್ರಿಯರಿಗೆ ಇಷ್ಟವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಅಂಥಹದ್ದೇನಿದೆ ಈ ಫೋನಿನಲ್ಲಿ?

ರೇಜರ್‌, ಫೋಲ್ಡಬಲ್‌ ಸ್ಮಾರ್ಟ್‌ಫೋನ್‌. ಸ್ಯಾಮ್‌ಸಂಗ್‌, ಹುವಾಯಿ ಈಗಾಗಲೇ ಫೋಲ್ಡಬಲ್‌ ಫೋನ್‌ಗಳನ್ನು ಪರಿಚಯಿಸಿದೆ. ಆದರೆ ಮೊಟೊ ಪರಿಚಯಿಸುತ್ತಿರುವ ಫೋಲ್ಡಬಲ್‌ ಫೋನ್‌ ವಿಶಿಷ್ಟವಾಗಿದೆ. ರೇಜರ್‌ ಹಳೆಯ ಫೋನಿನಂತೆ ಇದೂ ಫ್ಲಿಪ್‌ ಮಾದರಿಯಲ್ಲಿದೆ. ಆದರೆ ಬಿಚ್ಚುತ್ತಿದ್ದಂತೆ 6.2 ಇಂಚು ಅಳತೆಯ ಸ್ಕ್ರೀನ್‌ ತೆರೆದುಕೊಳ್ಳುತ್ತದೆ. ಮಡಿಚಿದರೆ, 2.7 ಇಂಚ್‌ ಸ್ಕ್ರೀನ್‌ ಇದೆ.

ಸ್ನ್ಯಾಪ್‌ಡ್ರ್ಯಾಗನ್‌ 710 ಪ್ರೊಸೆಸರ್‌, 6ಜಿಬಿ ರ್ಯಾಮ್‌, 128 ಜಿಬಿ ಸ್ಟೋರೇಜ್‌, 16 ಮೆಗಾ ಪಿಕ್ಸೆಲ್‌ ಹಿಂಬದಿ ಕ್ಯಾಮೆರಾ, 5 ಮೆಗಾ ಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ, ಇ ಸಿಮ್‌ ಸ್ಲಾಟ್‌, ಸಿಟೈಪ್‌ ಯುಎಸ್‌ಬಿ, ಫಿಂಗರ್‌ ಪ್ರಿಂಟರ್‌ ರೀಡರ್‌ ಗಳನ್ನು ಒಳಗೊಂಡಿದೆ. 2510 ಎಂ ಎಎಚ್‌ ಬ್ಯಾಟರಿ ಹೊಂದಿದೆ.

ರೇಜರ್‌ ಸ್ಮಾರ್ಟ್‌ಫೋನ್‌ ಮಡಿಚಿದಾಗ ಹೀಗೆ ಕಾಣುತ್ತದೆ

ಇದರ ಬೆಲೆ ಅಂದಾಜು ಒಂದು ಲಕ್ಷ ರೂ. ಎನ್ನಲಾಗಿದೆ. ಡಿಸೆಂಬರ್‌ ಕೊನೆಗೆ ಪ್ರೀ ಆರ್ಡರ್‌ಗೆ ಮುಕ್ತವಾಗಲಿದ್ದು, 2020ರ ಜನವರಿಯಿಂದ ಈ ಫೋನ್‌ ಡೆಲಿವರಿ ಆರಂಭವಾಗಲಿದೆ. ಪಾಕೆಟ್‌ ಗಾತ್ರದಲ್ಲಿದ್ದು ಸುಲಭವಾಗಿ ಹಿಡಿದುಕೊಳ್ಳುವುದಕ್ಕೆ ಅನುಕೂಲವಾಗುವಂತಹ ವಿನ್ಯಾಸವಿದ್ದರೂ ಈ ಬೆಲೆ ಭಾರತೀಯ ಮಾರುಕಟ್ಟೆಗೆ ಸ್ವಲ್ಪ ದುಬಾರಿ ಎನಿಸುತ್ತದೆ.