ಅಮೆರಿಕಾದ ದೈತ್ಯ ವಾಲ್‌ಮಾರ್ಟ್ ಭಾರತದಲ್ಲಿಯೂ ತನ್ನ ಮಳಿಗೆಗಳನ್ನು ತೆರೆಯುವ ಸಾಹಸಕ್ಕೆ ಕೈ ಹಾಕಿತ್ತು. ಆದರೆ ಸರ್ಕಾರದ ಕೆಲವು ನೀತಿ ನಿಯಮಗಳು ವಾಲ್ ಮಾರ್ಟ್ ಕಾರ್ಯಾರಂಭಕ್ಕೆ ಅಡ್ಡಿಯಾಗಿತ್ತು. ಆದರೆ ಈಗ ವಾಲ್ ಮಾರ್ಟ್ ಸಣ್ಣದೊಂದು ಮುಖವಾಡವನ್ನು ಧರಿಸಿ ಭಾರತೀಯ ಮಾರುಕಟ್ಟೆಯಲ್ಲಿ ಹೋಲ್‌ಸೇಲ್ ಸೇವೆಯನ್ನು ಆರಂಭಿಸಲಿದೆ.
ಅಮೆರಿಕಾದಲ್ಲಿ ತನ್ನ ಪ್ರತಿ ಸ್ಪರ್ಧಿಯಾದ ಅಮೆಜಾನ್ ಅನ್ನು ಹಿಂದಿಕ್ಕಲು ಸದಾ ಹಾತೋರೆಯುತ್ತಿರುವ ವಾಲ್ ಮಾರ್ಟ್, ಭಾರತದಲ್ಲಿಯೂ ಅಮೆಜಾನ್ ಅನ್ನು ಕಟ್ಟಿಹಾಕುವ ಸಲುವಾಗಿ ಫ್ಲಿಪ್‌ಕಾರ್ಟ್‌ನಲ್ಲಿ ಬಹುದೊಡ್ಡ ಹುಡಿಕೆಯನ್ನು ಮಾಡಿತ್ತು. ಈಗ ಅದಕ್ಕಿಂತ ಒಂದು ಹೆಜ್ಜೆ ಮುಂದಕ್ಕೆ ಹೋಗಿದೆ.
ಮಾರುಕಟ್ಟೆಯಲ್ಲಿ ಹೊಸದಾಗಿ ಕಾಣಿಸಿಕೊಂಡ ಜಿಯೋ ಮಾರ್ಟ್ ಮತ್ತು ತನ್ನ ಸಮೀಪದ ಪ್ರತಿ ಸ್ಪರ್ಧಿ ಅಮೆಜಾನ್ ಅನ್ನು ಕಟ್ಟಿಹಾಕುವ ಸಲುವಾಗಿ ‘ಫ್ಲಿಪ್‌ಕಾರ್ಟ್ ಹೋಲ್ ಸೇಲ್’, ಹೊಸ ಡಿಜಿಟಲ್ ಮಾದರಿಯ ಸೇವೆಯನ್ನು ಆರಂಭಿಸಲು ಮುಂದಾಗಿದೆ. ಆಗಸ್ಟ್ ನಿಂದ ಫ್ಲಿಪ್‌ಕಾರ್ಟ್ ಹೋಲ್ ಸೇಲ್ ಶುರುವಾಗಲಿದೆ.
ಇದನ್ನು ಓದಿ: ಭಾರತದಲ್ಲಿ ತಯಾರಾದ ಚೀನಾ ಫೋನ್ ‘ರೆಡ್‌ಮಿ ನೋಟ್ 9’: ಕೊಟ್ಟ ಕಾಸಿಗೆ ಲಾಸ್ ಅಂತೂ ಇಲ್ಲ..!
ವಾಲ್ ಮಾರ್ಟ್, ತಾನು ಹೂಡಿಕೆ ಮಾಡಿರುವ ಫ್ಲಿಪ್‌ಕಾರ್ಟ್ ಮೂಲಕ ದೇಶದಲ್ಲಿ ಹೊಸ ಅಲೆಯನ್ನು ಮೂಡಿಸಲಿದೆ. ಇದರ ಮೊದಲ ಹಂತ ಎನ್ನುವಂತೆ ಫ್ಲಿಪ್‌ಕಾರ್ಟ್ ಗ್ರೂಪ್ಸ್ ವಾಲ್‌ಮಾರ್ಟ್ ಇಂಡಿಯಾದ ಪೂರ್ಣ ಪ್ರಮಾಣದ ಶೇರ್‌ಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದ್ದು, ಈ ಮೂಲಕ ದೇಶದಲ್ಲಿ ಹೊಸ ಶಕೆಯನ್ನು ಆರಂಭಿಸಲು ಮುಂದಾಗಿದೆ.
ಈ ಬಗ್ಗೆ ಪ್ರಕಟಣೆಯನ್ನು ನೀಡಿರುವ ಫ್ಲಿಪ್‌ಕಾರ್ಟ್, ದೇಶದಲ್ಲಿ ಇರುವ ಸಣ್ಣ ಕಿರಾಣಿ ಸ್ಟೋರ್‌ಗಳಿಗೆ ಸಹಾಯ ಮಾಡುವ ಸಲುವಾಗಿ ಫ್ಲಿಪ್‌ಕಾರ್ಟ್ ಹೋಲ್‌ಸೇಲ್ ಅನ್ನು ಆರಂಭಿಸಲಿದ್ದು, ಸ್ಥಳೀಯ ತಯಾರಕರು ಮತ್ತು ಮಾರಾಟಗಾರರು ಫ್ಲಿಪ್‌ಕಾರ್ಟ್ ಹೋಲ್‌ಸೇಲ್ ವ್ಯವಹಾರದೊಂದಿಗೆ ಪಾಲುದಾರಿಕೆ ಹೊಂದಿದ್ದಾರೆ. ಈ ಪಾಲುದಾರರು ದೇಶಾದ್ಯಂತ ವ್ಯಾಪಕ ವ್ಯಾಪ್ತಿಯನ್ನು ಪಡೆಯುತ್ತಾರೆ, ಜೊತೆಗೆ ಸೂಕ್ಷ್ಮ ಮಾರುಕಟ್ಟೆ ಒಳನೋಟಗಳು ಮತ್ತು ವೆಚ್ಚ-ಪರಿಣಾಮಕಾರಿ ವಿತರಣೆಯನ್ನು ಪಡೆಯುತ್ತಾರೆ ಎಂದು ತಿಳಿಸಿದೆ.
” ಫ್ಲಿಪ್‌ಕಾರ್ಟ್ ಹೋಲ್‌ಸೇಲ್ ಪ್ರಾರಂಭದೊಂದಿಗೆ, ನಮ್ಮ ಸಾಮರ್ಥ್ಯಗಳನ್ನು ತಂತ್ರಜ್ಞಾನ, ಲಾಜಿಸ್ಟಿಕ್ಸ್ ನಂತಹ ಸೇವೆಯನ್ನು ದೇಶಾದ್ಯಂತದ ಸಣ್ಣ ಉದ್ಯಮಗಳಿಗೆ ವಿಸ್ತರಿಸುತ್ತೇವೆ” ಎಂದು ಫ್ಲಿಪ್ಕಾರ್ಟ್ ಗ್ರೂಪ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಲ್ಯಾಣ್ ಕೃಷ್ಣಮೂರ್ತಿ ಹೇಳಿದರು.