ಭಾರತದಿಂದ ಹೊರ ನಡೆದ ಫೋರ್ಡ್‌; ಮಹಿಂದ್ರಾ ಪಾಲುದಾರಿಕೆ ಮುಂದುವರಿಕೆ

ವಾಹನೋದ್ಯಮ ಭಾರಿ ಹಿನ್ನಡೆಯನ್ನು ಎದುರಿಸುತ್ತಿರುವಾಗಲೇ ಪ್ರತಿಷ್ಠಿತ ಫೋರ್ಡ್‌ ಸಂಸ್ಥೆ ಭಾರತದಿಂದ ನಿರ್ಗಮಿಸಿದೆ. ಸ್ಥಳೀಯ ಕಂಪನಿಗಳಲ್ಲಿ ಅದರ ಪಾಲುದಾರಿಕೆ ಮುಂದುವರೆಯಲಿದೆ. ಆದರೆ ಈ ನಡೆ ದೇಶದ ವಾಹನೋದ್ಯಮ ಕಾಣುತ್ತಿರುವ ಸಂಕಷ್ಟವನ್ನು ಸ್ಪಷ್ಟವಾಗಿ ಹೇಳುತ್ತಿರುವಂತಿದೆ

ಎರಡು ದಶಕಗಳ ನಂತರ ಭಾರತದಿಂದ ಫೋರ್ಡ್ ನಿರ್ಗಮಿಸುತ್ತಿದೆ. ಸಂಪೂರ್ಣವಾಗಿ ಅಲ್ಲ, ಬದಲಾಗಿ ಭಾರತದಲ್ಲಿನ ತನ್ನ ವ್ಯವಹಾರವನ್ನು ಮುಂದಿನ ದಿನಗಳಲ್ಲಿ‌ಮಹೀಂದ್ರ ಒಡೆತನದ ಕಂಪನಿಯಲ್ಲಿ ಪಾಲುದಾರಿಕೆ ಮೂಲಕ ನಿಯಂತ್ರಿಸಲಿದೆ. 

ಫೋರ್ಡ್ ಎಂಬ ಬ್ರ್ಯಾಂಡ್, ಶೋರೂಮ್‌ಗಳು, ಬಿಡಿಭಾಗ ಲಭ್ಯತೆ ನಿರಾತಂಕವಾಗಿ ಮುಂದುವರಿಯಲಿದೆ. 2017ರಲ್ಲಿ ಜನರಲ್ ಮೋಟಾರ್ಸ್ ನಿರ್ಗಮನ ನಂತರ ವಿಶ್ವದ ನಾಲ್ಕನೆಯ ಅತಿದೊಡ್ಡ‌ ಮಾರುಕಟ್ಟೆಯಾದ ಭಾರತದಿಂದ ನಿರ್ಗಮಿಸುತ್ತಿರುವ ಎರಡನೆಯ ಅಮೆರಿಕನ್ ವಾಹನ ಕಂಪನಿ ಫೋರ್ಡ್ ಆಗಿದೆ.

ಎರಡು ದಶಕಗಳ ಪ್ರಯತ್ನದ ನಂತರವೂ ಭಾರತದಲ್ಲಿ ಜಪಾನ್ ಹಾಗೂ ಕೊರಿಯನ್ ಕಂಪನಿಗಳಾದ ಸುಝುಕಿ, ಹೋಂಡಾ, ಟೊಯೋಟಾ, ಹ್ಯುಂಡೈ ಮತ್ತು ದೇಶೀಯ ಟಾಟಾ ಜತೆಗೆ ಸ್ಪರ್ಧೆಯೊಡ್ಡಲು ಫೋರ್ಡ್‌ಗೆ ಸಾಧ್ಯವಾಗಲಿಲ್ಲ. ಹಾಗಾಗಿ ಭಾರತದಿಂದ ನಿರ್ಗಮಿಸಲು ಅರ್ಡೋರ್ ಅಟೋಮೋಟಿವ್ ಪ್ರೈ ಲಿ.‌ ಎಂಬ ಹೊಸ ಕಂಪನಿ ಸ್ಥಾಪಿಸಿ ಮಹೀಂದ್ರ ಆ್ಯಂಡ್ ಮಹೀಂದ್ರಕ್ಕೆ ಅದರ ಶೇ. 51 ಪಾಲು ನೀಡಿ ಮುಂದಿನ ವ್ಯವಹಾರಗಳನ್ನು ಈ ಜಂಟಿ ಕಂಪನಿ ಮೂಲಕ ನಿರ್ವಹಿಸಲಿದೆ.

ಹೊಸ ವಿಚಾರಗಳು ಇಂದಿನ ವಾಹನೋದ್ಯಮವನ್ನು ಅಲ್ಲೋಲ ಕಲ್ಲೋಲ ಮಾಡುತ್ತಿದೆ, ಹೊಸ ವ್ಯವಹಾರ ಸೂತ್ರಗಳು, ನಿರಂತರ ಬದಲಾಗುತ್ತಿರುವ ಜನರ ಮನಸ್ಥಿತಿಗಳ ಕಾರಣ ಇವನ್ನೆಲ್ಲಾ ಒಂದೇ ಕಂಪನಿ ನಿರ್ವಹಿಸಲು ಸಾಧ್ಯವಿಲ್ಲ.

ಬಿಲ್ ಫೋರ್ಡ್, ಜಾಗತಿಕ ಫೋರ್ಡ್ ಕಂಪನಿಯ ಕಾರ್ಯಕಾರಿ‌ ಚೇರ್ಮನ್.

ಫೋರ್ಡ್‌ನ ಭಾರತ ನಿರ್ಗಮನ ಜಾಗತಿಕ ನೀತಿಯ ಪರಿಣಾಮವಾಗಿದೆ‌. ವರ್ಷಗಳಿಂದ ಲಾಭ ಮಾಡಿಕೊಳ್ಳಲಾಗದ ಮಾರುಕಟ್ಟೆಯಿಂದ ನಿರ್ಗಮಿಸಲು ಫೋರ್ಡ್ ಜೂನ್‌ನಲ್ಲಿ ತೀರ್ಮಾನ ಕೈಗೊಂಡಿತ್ತು. ಪರಿಣಾಮವಾಗಿ ಐರೋಪ್ಯ ಮಾರುಕಟ್ಟೆಯನ್ನು ಮುಂದಿನ ವರ್ಷದೊಳಗೆ ಹಂತ ಹಂತವಾಗಿ “ಮರುವಿನ್ಯಾಸ” ಮಾಡುವ ಮೂಲಕ ಅಲ್ಲಿನ 12,000 ಮಂದಿಯ ಉದ್ಯೋಗಕ್ಕೆ ಕತ್ತರಿ ಹಾಕಲಿದೆ. 

ಕಂಪನಿಯ ವಿದಾಯ ನಿರ್ಣಯವನ್ನು ಮುಂಬೈ‌ನಲ್ಲಿ ನಡೆದ ಪತ್ರಿಕಾ ಪ್ರಕಟಣೆ ಕಾರ್ಯಕ್ರಮದಲ್ಲಿ ಫೋರ್ಡ್‌ನ ಕಾರ್ಯಕಾರಿ ಚೇರ್ಮನ್ ಬಿಲ್ ಫೋರ್ಡ್ ಮಿಶಿಗನ್‌ನಿಂದ ವಿಡಿಯೋ ಕಾನ್ಫರೆನ್ಸಿಂಗ್‌ ಮೂಲಕ ಪ್ರಕಟಿಸಿದರು. ಹೊಸ ವಿಚಾರಗಳು ಇಂದಿನ ವಾಹನೋದ್ಯಮವನ್ನು ಅಲ್ಲೋಲ ಕಲ್ಲೋಲ ಮಾಡುತ್ತಿದೆ, ಹೊಸ ವ್ಯವಹಾರ ಸೂತ್ರಗಳು, ನಿರಂತರ ಬದಲಾಗುತ್ತಿರುವ ಜನರ ಮನಸ್ಥಿತಿಗಳ ಕಾರಣ ಇವನ್ನೆಲ್ಲಾ ಒಂದೇ ಕಂಪನಿ ನಿರ್ವಹಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಹೊಸ ಕಂಪನಿಯಲ್ಲಿ ಮಹೀಂದ್ರದ ಪಾಲು

ಚೆನ್ನೈನಲ್ಲಿನ ಫೋರ್ಡ್‌ನ  ಜಾಗತಿಕ ವಹಿವಾಟು ಘಟಕ ಮತ್ತು ಗುಜರಾತಿನಲ್ಲಿನ ಎಂಜಿನ್ ತಯಾರಿ ಘಟಕ ಹೊರತುಪಡಿಸಿ ಉಳಿದೆಲ್ಲ ಸ್ವೊತ್ತು ಬಹುತೇಕ ಮುಂದಿನ ವರ್ಷದ ಮಧ್ಯಭಾಗದಲ್ಲಿ ಜಂಟಿ ನಿರ್ವಹಣೆಯ ಕಂಪನಿಗೆ ವರ್ಗವಾಗಲಿದೆ. ಜಂಟಿ ಕಂಪನಿಯ ಅಭಿವೃದ್ಧಿಗೆ ಶೇ‌. 51 ಪಾಲುದಾರ ಮಹೀಂದ್ರ ₹657 ಕೋಟಿ ಹೂಡಿಕೆ ಮಾಡಲಿದೆ.

ಈ ಜಂಟಿ ಕಂಪನಿ ಸ್ಥಳೀಯ ಮಾರುಕಟ್ಟೆ ಹಾಗೂ ಸದ್ಯ ರಫ್ತು ಮಾರುಕಟ್ಟೆಗಳಿಗೂ ಫೋರ್ಡ್ ಬ್ರ್ಯಾಂಡ್‌ನ ವಾಹನಗಳನ್ನು ತಯಾರಿಸಲಿದೆ. ರಫ್ತು ವಾಹನಗಳನ್ನು ಬೆಲೆ ನೀಡಿ ಜಾಗತಿಕ ಫೋರ್ಡ್ ಖರೀದಿಸಿ ಉಳಿದೆಡೆ ಮಾರಾಟ ಮಾರುತ್ತದೆ. ಹೊಸದಾಗಿ ವಿನ್ಯಾಸಗೊಳಿಸುವ ಎಸ್‌ಯುವಿ ಪ್ಲಾರ್ಟ್ಫಾರ್ಮನ್ನು ಮಹೀಂದ್ರ ತನ್ನ ಬ್ರ್ಯಾಂಡ್‌ಗೂ ಬಳಸಿಕೊಳ್ಳಲಿದೆ. ಆದರೆ ಉಳಿದಂತೆ ಮಹೀಂದ್ರ ಹಾಗೂ ಪೋರ್ಡ್ ಪ್ರತ್ಯೇಕ ಜಾಲದಲ್ಲಿ ಪ್ರತ್ಯೇಕ ಬ್ರ್ಯಾಂಡ್‌ಗಳಾಗಿಯೇ ಉಳಿಯಲಿವೆ.

1995ರಲ್ಲಿ ಫೋರ್ಡ್ ಮಹೀಂದ್ರದ ಜತೆಗೆ ಜಂಟಿ ಪಾಲುದಾರಿಕೆಯಲ್ಲಿ ಮಹೀಂದ್ರ ಫೋರ್ಡ್ ಇಂಡಿಯಾ ಲಿ. ಮೂಲಕ ಮಾರುಕಟ್ಟೆ ಪ್ರವೇಶಿಸಿತ್ತು. ಫೋರ್ಡ್ ಎಸ್ಕಾರ್ಟ್‌ನ ಸಾಮಾನ್ಯ ಯಾಶಸ್ಸಿನ ತರುವಾಯ 1998ರಲ್ಲಿ ತನ್ನ ಪಾಲನ್ನು ಶೇ. 72ಕ್ಕೆ ಏರಿಸಿಕೊಂಡು ಮಹೀಂದ್ರದ ಪಾಲನ್ನು ಇಳಿಸಿ ಫೋರ್ಡ್ ಇಂಡಿಯಾ ಪ್ರೈ ಲಿ. ಸ್ಥಾಪಿಸಿತ್ತು. 

ಜಾಗತಿಕವಾಗಿ ಮಹೀಂದ್ರ

ದಕ್ಷಿಣ ಕೊರಿಯಾದ ವಾಹನ ತಯಾರಿಕಾ ಕಂಪನಿ ಸ್ಸಾಂಗ್ಯಾಂಗ್ ಮೋಟಾರ್ಸನ್ನು ಮಹೀಂದ್ರ 2011ರಲ್ಲಿ ಖರೀದಿಸಿತು. ಸದ್ಯದ ಆಲ್ಟುರಾಸ್ ಹಾಗೂ ಎಕ್ಕ್ಸ್‌ಯು‌ವಿ 300 ಸ್ಸಾಂಗ್ಯಾಂಗ್ ತಂಡದ ಕೊಡುಗೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಸಾಂಗ್ಯಾಂಗ್ ಬ್ರ್ಯಾಂಡನ್ನು ಉಳಿಸಿಕೊಳ್ಳಲಾಗಿದೆ.

ಫೆರಾರಿ, ಪೋರ್ಶೆ, ರೋಲ್ಸ್ ರಾಯ್ಸ್‌ಗೆ ವಿನ್ಯಾಸ ಹಾಗೂ ನಿರ್ಮಾಣ ಮಾಡಿಕೊಡುತ್ತಿದ್ದ ಇಟಲಿ ಮೂಲದ ಕಂಪನಿ ಫಿನ್ನಿನ್ಫೆರೀನಾವನ್ನು ಮಹೀಂದ್ರ 2015ರಲ್ಲಿ ಖರೀದಿಸಿತು. ತನ್ನ ಎಲ್ಲಾ ಹೊಸ ವಿನ್ಯಾಸಗಳಿಗೆ ಈ ತಂಡವನ್ನು ಕಂಪನಿ ಆಶ್ರಯಿಸುತ್ತಿದೆ. ಮರ್ರಾಜೋದಲ್ಲಿ ಅದರ ಪರಿಣಾಮ ಕಾಣಬಹುದು. 

ಟ್ರಕ್ ಹಾಗೂ ಬಸ್‌ಗಳಿಗಾಗಿ 2010ರಿಂದ ಅಮೆರಿಕನ್ ಟ್ರಕ್‌ ಕಂಪನಿ ನೆವಿಸ್ಟಾರ್ ಜತೆ ಪಾಲುದಾರಿಕೆ ಹೊಂದಿದ್ದ ಮಹೀಂದ್ರ 2015ರಲ್ಲಿ ಹೊರಬಂದು ಪಾಲುದಾರಿಕೆಯಿಲ್ಲದೆ ಟ್ರಕ್ ಹಾಗೂ ಬಸ್ ವಿಭಾಗ ನಿರ್ವಹಿಸುತ್ತಿದೆ.

ನಷ್ಟದಲ್ಲಿದ್ದ ಕೈನೆಟಿಕ್ ಮೋಟಾರ್ ಕಂಪನಿಯನ್ನು ಖರೀದಿಸಿ 2008ರಲ್ಲಿ‌ ಮಹೀಂದ್ರ ಟೂ ವ್ಹೀಲರ್ ವಿಭಾಗ ಅಸ್ಥಿತ್ವಕ್ಕೆ ಬಂತು. ಇಟಲಿಯ ಎಸ್‌ವೈ‌ಎಂ ಜತೆಗಿನ ಪಾಲುದಾರಿಕೆ ಇದಕ್ಕಿದೆ. ಮಹೀಂದ್ರ ಮೋಜೋ ಎಸ್‌ವೈ‌ಎಂನ ಇಂಜಿನಿಯರಿಂಗ್ ಆಗಿತ್ತು.

ಆದರೆ ಜಾವಾದ ಮಾತೃಸಂಸ್ಥೆ ಕ್ಲಾಸಿಕ್ ಲೆಜೆಂಡ್ಸ್‌ನಲ್ಲಿ ಸಿಂಹಪಾಲು ಮಹೀಂದ್ರ ಇಟ್ಟುಕೊಂಡಿದೆ. ಜಾವಾದ ಎಂಜಿನ್ ಮೋಜೋದ ಎಂಜಿನ್‌ನ ಅಂತರ್ವಿನ್ಯಾಸದಲ್ಲಿ ಹೋಲಿಕೆಯಿರುವುದು ಸಹಜವೇ.