ಬ್ಯಾಕ್ಟೀರಿಯಾ ವಿಜ್ಞಾನಿ ಕ್ರಿಶ್ಚಿಯನ್‌ ಗ್ರಾಮ್‌ಗೆ ಗೂಗಲ್‌ ಡೂಡಲ್‌ ಗೌರವ

ಇಂದು ಡೆನ್ಮಾರ್ಕಿನ ಜೀವ ವಿಜ್ಞಾನಿ ಹ್ಯಾನ್ಸ್‌ ಕ್ರಿಶ್ಚಿಯನ್‌ ಗ್ರಾಮ್‌ ಅವರ 166ನೇ ಜನ್ಮದಿನ. ಈ ಸಂದರ್ಭಕ್ಕಾಗಿ ಡೆನ್ಮಾರ್ಕಿನ ಕಲಾವಿದರೊಬ್ಬರು ಡೂಡಲ್‌ ರಚಿಸಿ ಕೊಟ್ಟಿದ್ದಾರೆ

ಇಂದು ಹ್ಯಾನ್ಸ್‌ ಕ್ರಿಶ್ಚಿಯನ್‌ ಗ್ರಾಮ್‌ ಅವರ 166ನೇ ಜನ್ಮ ದಿನ ಆಚರಿಸಲಾಗುತ್ತಿದೆ. ಬ್ಯಾಕ್ಟೀರಿಯಾಗಳನ್ನು ವಿಂಗಡಿಸುವ ಅನನ್ಯ ಪದ್ಧತಿ ಪರಿಚಯಿಸಿದ ಈ ವಿಜ್ಞಾನಿಗೆ ಡೆನ್ಮಾರ್ಕಿನ ಕಲಾವಿದ ಮಿಕ್ಕೆಲ್‌ ಸೊಮ್ಮರ್‌ ಅವರು ರಚಿಸಿದ ಡೂಡಲ್ ಮೂಲಕ ಗೂಗಲ್‌ ಗೌರವ ಸಲ್ಲಿಸಿದೆ.

ಹ್ಯಾನ್ಸ್‌ ಕ್ರಿಶ್ಚಿಯನ್‌ ಗ್ರಾಮ್‌. 1878ರಲ್ಲಿ ವೈದ್ಯಕೀಯ ಅಭ್ಯಾಸ ಆರಂಭಿಸಿದ ಇವರು 1884ರಲ್ಲಿ ಬ್ಯಾಕ್ಟೀರಿಯಾಗಳನ್ನು ವಿಂಗಡಿಸುವ ಸರಳ ಹಾಗೂ ಮಹತ್ವದ ವಿಧಾನವನ್ನು ಕಂಡುಕೊಂಡರು. ಅದೇ ವಿಧಾನ ಇಂದಿಗೂ, ‘ಗ್ರಾಮ್‌ ಸ್ಟೇನ್‌’ ಹೆಸರಿನಲ್ಲಿ ಬಳಕೆಯಾಗುತ್ತಿದೆ.

ಬ್ಯಾಕ್ಟೀರಿಯಾಗಳನ್ನು ವರ್ಗೀಕರಿಸಲು ಸೂಕ್ಷ್ಮ ದರ್ಶಕದಲ್ಲಿ ನೋಡುವಾಗ ಅವುಗಳ ಗುಣಗಳ ಮೇಲೆ ವಿಭಾಗಿಸುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಅದಕ್ಕಾಗಿ ಗ್ರಾಮ್‌ ರಾಸಾಯನಿಕ ದ್ರಾವಣವನ್ನು ಹಾಕಿ, ಅದಕ್ಕೆ ಬ್ಯಾಕ್ಟೀರಿಯಾಗಳು ಪ್ರತಿಕ್ರಿಯಿಸುವ ರೀತಿಯನ್ನು ಆಧರಿಸಿ ಪ್ರತ್ಯೇಕಿಸುವ ಮಾರ್ಗವನ್ನು ಅನುಸರಿಸಿದ್ದರು.

ಅದಕ್ಕಾಗಿ ಗ್ರಾಮ್‌ ಕ್ರಿಸ್ಟಲ್‌ ವಯಲೆಟ್‌ ದ್ರಾವಣವನ್ನು ಬಳಸಿದರು. ಈ ದ್ರಾವಣ ಹೀರಿಕೊಳ್ಳುವ ಬ್ಯಾಕ್ಟೀರಿಯಾ ನೇರಳೆ ಬಣ್ಣಕ್ಕೆ ತಿರುಗಿದರೆ ಅದನ್ನು ಧನಾತ್ಮಕ ಬ್ಯಾಕ್ಟೀರಿಯಾ ಎಂದು, ಕೆಂಪು ಬಣ್ಣಕ್ಕೆ ತಿರುಗಿದರೆ, ಅದನ್ನು ಋಣಾತ್ಮಕ ಬ್ಯಾಕ್ಟೀರಿಯಾ ಎಂದು ಕರೆದರು. ಈ ವಿಧಗಳನ್ನು ಗ್ರಾಮ್‌ ಪಾಸಿಟಿವ್, ಗ್ರಾಮ್‌ ನೆಗೆಟಿವ್ ಎಂದು ಕರೆಯಲಾಗುತ್ತದೆ.

ನೂರು ವರ್ಷಗಳಿಂದ ಬಳಕೆಯಲ್ಲಿರುವ ಈ ವಿಧಾನವನ್ನು ಪರಿಚಯಿಸಿದಾಗ ಗ್ರಾಮ್‌, ‘ನಾನು ಈ ವಿಧಾನವನ್ನು ಪರಿಚಯಿಸಿದ್ದೇನಾದರೂ, ಇದು ಅಪೂರ್ಣ ಮತ್ತು ನ್ಯೂನ್ಯತೆಗಳಿಂದ ಕೂಡಿದೆ ಎಂಬ ಎಚ್ಚರವಿದೆ. ಆದರೆ ಮತ್ತಷ್ಟು ವಿಜ್ಞಾನಿಗಳಕೈಯಲ್ಲಿ ಇದು ಹೆಚ್ಚು ಉಪಯುಕ್ತವಾಗಿ ಬದಲಾಗಬಹುದು ಎಂಬ ವಿಶ್ವಾಸವಿದೆ’ ಎಂದು ಹೇಳಿದ್ದರು.

ಕೋಪನ್‌ಹೇಗನ್‌ನಲ್ಲಿ 1853ರ ಸೆಪ್ಟೆಂಬರ್‌ 13ರಂದು ಜನಿಸಿದ ಗ್ರಾಮ್‌, ಕೋಪನ್‌ಹೇಗನ್‌ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದರು. ಇದೇ ವಿಶ್ವವಿದ್ಯಾಲಯದಲ್ಲಿ ಪ್ರಾಣಿಶಾಸ್ತ್ರಜ್ಞ ಜಾಪೆಚ್ಯು ಸ್ಟೀನ್‌ಸ್ಟ್ರುಪ್‌ಗೆ ಸಹಾಯಕರಾಗಿ ಕೆಲಸ ಮಾಡಿದರು. ಎಂಟು ವರ್ಷಗಳ ಕಾಲ ಯುರೋಪ್‌ ಪ್ರವಾಸ ನಡೆಸಿದರು.