ಭಾರತೀಯ ಪ್ರಾದೇಶಿಕ ಭಾಷೆಗಳ ತಾಕತ್ತು ಗೂಗಲ್ ಗೆ ಗೊತ್ತು..! ಆದರೆ ..!?

ಹಲವು ರಾಜ್ಯಗಳು, ವಿವಿಧ ಭಾಷೆಗಳು ಭಾರತಕ್ಕೆ ವಿವಿಧತೆಯಲ್ಲಿ ಐಕತೆಯನ್ನು ತಂದುಕೊಟ್ಟಿದೆ. ಆದರೆ ಹಲವರು, ಅದರಲ್ಲಿಯೂ ಅಧಿಕಾರಕ್ಕೆ ಬಂದವರು ವಿವಿಧ ಭಾಷೆಗಳ ಪ್ರಾಬಲ್ಯವನ್ನು ಅಡಗಿಸಿ, ದೇಶದಲ್ಲಿ ಹಿಂದಿ ಹೇರಿಕೆಯನ್ನು ಮಾಡುವ ನಿರಂತರ ಪ್ರಯತ್ನವನ್ನು ಮಾಡುತ್ತಲೇ ಇದ್ದಾರೆ

ಪ್ರತಿ ಬಾರಿ ಅಧಿಕಾರಕ್ಕೆ ಬಂದವರು ಹಿಂದಿಯನ್ನು ರಾಷ್ಟ್ರಭಾಷೆ ಎಂದು ಬಿಂಬಿಸುವ ಪ್ರಯತ್ನವನ್ನು ಬ್ರಿಟಿಷರು ಭಾರತವನ್ನು ಬಿಟ್ಟು ಹೋದಾಗಿನಿಂದಲೂ ಪ್ರಯತ್ನಿಸಿಕೊಂಡು ಬಂದಿದ್ದಾರೆ. ಆದರೆ ಎಂದಿಗೂ ಪ್ರಾದೇಶಿಕ ಭಾಷೆಗಳನ್ನು ಬೆಳೆಸುವ ಮತ್ತು ಉಳಿಸಿವ ಪ್ರಯತ್ನಕ್ಕೆ ಕೈ ಹಾಕಿಲ್ಲ. ಅಲ್ಲದೇ ಇಂಗ್ಲೀಷ್ ಭಾಷೆಯ ವ್ಯಾಮೋಹವನ್ನು ಸ್ಟೇಟಸ್ ಎನ್ನುವಂತೆ ಬಿಂಬಿಸುವ ಪ್ರಯತ್ನವು ನಡೆಯುತ್ತಿದೆ.

ಆದರೆ ಇಂದಿನ ಯುಗದಲ್ಲಿ ಸರ್ಕಾರಗಳಿಗೆ ಪ್ರಾದೇಶಿಕ ಭಾಷೆಗಳ ಬೆಲೆ ತಿಳಿಯಲಿ ಬಿಡಲಿ, ಡಿಜಿಟಿಲ್ ಲೋಕದ ದಿಗ್ಗಜರಿಗೆ ಕನ್ನಡ, ತಮಿಳು, ತೆಲುಗು ಸೇರಿದಂತೆ ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ಉತ್ತಮ ಮಾರುಕಟ್ಟೆ ಕಾಣಿಸಿದ್ದು, ಅದಕ್ಕಾಗಿ ಭಾಷೆಯನ್ನು ಬೆಳೆಸುವ ಮತ್ತು ಡಿಜಿಟಲ್ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಇದೇ ಮಾದರಿಯಲ್ಲಿ ಟಿಕ್‌ ದೈತ್ಯ ಗೂಗಲ್ ಭಾರತೀಯ ಭಾಷೆಗಳ ಅಭಿವೃದ್ಧಿಗೆ ಹೂಡಿಕೆ ಮಾಡಲು ಮುಂದಾಗಿದೆ.

ಇದನ್ನು ನೋಡಿ: ‘ಸಿ-ಮಾಸ್ಕ್’ : ಸ್ಮಾರ್ಟ್‌ಪೋನ್‌ ಕನೆಕ್ಟ್‌ ಮಾಡಬಹುದಾದ ವಿಶ್ವದ ಮೊದಲ ‘ಸ್ಮಾರ್ಟ್ ಮಾಸ್ಕ್’

ಗೂಗಲ್ ಫಾರ್ ಇಂಡಿಯಾ( ಭಾರತಕ್ಕಾಗಿ ಗೂಗಲ್) ಕಾರ್ಯಕ್ರಮದಲ್ಲಿ ಮಾತನಾಡಿದ ಗೂಗಲ್ ಮತ್ತು ಆಲ್ಫಾಬೆಟ್‌ನ ಸಿಇಒ ಸುಂದರ್ ಪಿಚೈ, ಮುಂದಿನ ಆರರಿಂದ ಏಳು ವರ್ಷಗಳಲ್ಲಿ ಭಾರತದಲ್ಲಿ ಗೂಗಲ್ ಸುಮಾರು 70000 ಕೋಟಿಗೂ ಅಧಿಕ ಹಣವನ್ನು ಹೂಡಿಕೆ ಮಾಡುವುದು ಎಂದು ತಿಳಿಸಿದ್ದಾರೆ. ಇದರಲ್ಲಿ ಪ್ರಾದೇಶಿಕ ಭಾಷೆಗಳ ವಿಷಯಕ್ಕೆ ಹೆಚ್ಚಿನ ಆದ್ಯತೆ ಎಂಬುದನ್ನು ಒತ್ತಿ ಹೇಳಿದ್ದಾರೆ.

ಭಾರತದ ಡಿಜಿಟಲೀಕರಣಕ್ಕೆ ಸಹಾಯ ಮಾಡಲು ಮುಂದಾಗಿರುವ ಗೂಗಲ್ ಮುಖ್ಯವಾದ ನಾಲ್ಕು ಕ್ಷೇತ್ರಗಳ ಮೇಲೆ ಹೂಡಿಕೆಯನ್ನು ಮಾಡಲಿದೆ ಎಂದು ತಿಳಿಸಿದ್ದಾರೆ.

ಮೊದಲನೆಯದಾಗಿ ಹಿಂದಿ, ತಮಿಳು, ಪಂಜಾಬಿ ಅಥವಾ ಇನ್ನಾವುದೇ ಭಾಷೆಯನ್ನು ಮಾತನಾಡುವ ಪ್ರತಿಯೊಬ್ಬ ಭಾರತೀಯರಿಗೆ ತಮ್ಮದೇ ಭಾಷೆಯಲ್ಲಿ ಮಾಹಿತಿಯನ್ನು ದೊರೆಯುವಂತೆ ಮಾಡುವುದು ಹಾಗೂ ಅದನ್ನು ಸುಲಭವಾಗಿ ಸಕ್ರಿಯಗೊಳಿಸುವುದಕ್ಕೆ ಗಮನ ಹರಿಸುವುದಾಗಿ ತಿಳಿಸಿದ್ದಾರೆ.

ಎರಡನೆಯದಾಗಿ, ಭಾರತದ ಅನನ್ಯ ಅಗತ್ಯಗಳಿಗೆ ಹೊಸ ಉತ್ಪನ್ನಗಳು ಮತ್ತು ಸೇವೆಗಳನ್ನು ನಿರ್ಮಿಸುವುದು

ಮೂರನೆಯದಾಗಿ, ಸ್ಥಳೀಯ ವ್ಯವಹಾರಗಳಿಗೆ ಸಹಾಯ ಮಾಡುವುದು ಅಥವಾ ಅವುಗಳ ಡಿಜಿಟಲ್ ರೂಪಾಂತರವನ್ನು ಪ್ರಾರಂಭಿಸಲು ಪ್ರೋತ್ಸಾಹಿಸುವುದು.

ನಾಲ್ಕನೆಯದಾಗಿ, ಆರೋಗ್ಯ, ಶಿಕ್ಷಣ ಮತ್ತು ಕೃಷಿಯಂತಹ ಕ್ಷೇತ್ರಗಳಲ್ಲಿ ತಂತ್ರಜ್ಞಾನ ಮತ್ತು ಎಐ ಅನ್ನು ಸಾಮಾಜಿಕ ಒಳಿತಿಗಾಗಿ ಸದುಪಯೋಗಪಡಿಸಿಕೊಳ್ಳುವುದು.

ಇಲ್ಲಿ ಗಮನಿಸಬೇಕಾದ ಅಂಶ ಒಂದೇ ನಮ್ಮ ದೇಶದಲ್ಲಿ ಒಂದೇ ಭಾಷೆ- ಒಂದೇ ಸಂಸ್ಕೃತಿಯನ್ನು ಆಚರಿಸುವಂತೆ ಮಾಡುವುದು ಕಷ್ಟ ಮತ್ತು ಸಾಧ್ಯವಿಲ್ಲ ಎಂಬುವುದು. ನಮ್ಮ ಸರ್ಕಾರಗಳು ಅರಿಯದ ಈ ಸಂಗತಿಯನ್ನು ಅರ್ಥ ಮಾಡಿಕೊಂಡಿರುವ ಟೆಕ್‌ ದೈತ್ಯ, ಭಾರತಕ್ಕಾಗಿ ಅದರಲ್ಲೂ ವಿವಿಧ ಭಾಷೆಗಳಿಗೆ ಮಹತ್ವ ನೀಡಲು ಮುಂದಾಗಿದೆ.

ಭಾರತದಲ್ಲಿ ಇಂಗ್ಲೀಷ್ ಭಾಷೆ ಮತ್ತು ಹಿಂದಿ ಭಾಷೆಗಿಂತಲೂ ಬೇರೆ ಬೇರೆ ಭಾಷೆಗಳನ್ನು ಬಳಕೆ ಮಾಡುವವರ ಸಂಖ್ಯೆ ಅತೀ ಹೆಚ್ಚಿನ ಪ್ರಮಾಣದಲ್ಲಿದ್ದು ಹಾಗಾಗಿ ಅವರನ್ನು  ಡಿಜಿಟಲ್ ಲೋಕದಲ್ಲಿ ಅನಕ್ಷರಸ್ಥರನ್ನಾಗಿ ಮಾಡದೇ ಅವರಿಗೆ ಪ್ರಾದೇಶಿಕ ಭಾಷೆಯಲ್ಲೇ ಇಂಟರ್ನೆಟ್ ಬಳಕೆ ಮಾಡಲು ಅವಕಾಶ ನೀಡುವ ಯೋಜನೆ ಇದಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.