ಹೇಳಿದ್ದನ್ನು ಮಾಡುವ ಗೂಗಲ್‌ ನೆಸ್ಟ್‌ ಹಬ್‌ ಈಗ ಭಾರತದಲ್ಲೂ ಲಭ್ಯ

ಇಂಟರ್‌ನೆಟ್‌ ಆಫ್‌ ಥಿಂಗ್ಸ್‌ ಮನೆಗಳಲ್ಲಿ ಹೆಚ್ಚು ಹೆಚ್ಚು ಬಳಕೆ ಮಾಡಲಾರಂಭಿಸಿದ ಮೇಲೆ, ಸ್ಮಾರ್ಟ್‌ ಡಿವೈಸ್‌ಗಳು ಮನೆಯಲ್ಲಿ ಹೆಚ್ಚು ಹೆಚ್ಚಾಗಿ ಸ್ಥಾನ ಪಡೆದುಕೊಳ್ಳುತ್ತಿರುವ ಹೊತ್ತಲ್ಲಿ ಗೂಗಲ್, ನೆಸ್ಟ್‌ಹಬ್‌ ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ

ಸುಸ್ತಾಗಿದೆ, ಹಾಸಿಗೆಗೆ ಹೊರಳಾಗಿದೆ. ಆಗ ಹಾಲ್‌ನಲ್ಲಿರುವ ಟಿವಿ ಆಫ್‌ ಮಾಡದೇ ಬಂದಿದ್ದು ನೆನಪಾಗುತ್ತದೆ. ಅಡುಗೆ ಮನೆಯ ಲೈಟ್‌ ಕೂಡ ಹಾಗೇ ಉರಿಯಲು ಬಿಟ್ಟಿರುವುದೂ ನೆನಪಾಗುತ್ತದೆ. ಇಂಥ ಹೊತ್ತಲ್ಲಿ, ಇದ್ದಲಿಂದಲೇ ಎಲ್ಲವನ್ನು ಆರಿಸುವಂತಿದ್ದರೆ ಎಷ್ಟು ಚೆನ್ನಾಗಿತ್ತು ಎಂದೆನಿಸಿರುತ್ತದೆ, ಅಲ್ಲವೆ?

ಇಂಟರ್‌ನೆಟ್‌ ಆಫ್‌ ಥಿಂಗ್ಸ್‌ ತಂತ್ರಜ್ಞಾನ ಇದನ್ನು ಸಾಧ್ಯವಾಗಿಸಿದೆ. ಇಂಟರ್‌ನೆಟ್‌ ಮೂಲಕ ಬೆಸೆಯಬಹುದಾದ ಸಾಧನಗಳನ್ನು ಈಗ ಎಲ್ಲಿಂದಲೂ ನಿಯಂತ್ರಿಸಬಹುದು. ಈ ತಂತ್ರಜ್ಞಾನ ಹೆಚ್ಚು ಹೆಚ್ಚು ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲೇ ಗೂಗಲ್‌, ಅಮೆಜಾನ್‌ ಥರದ ಕಂಪನಿಗಳು ಹೊಸ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ತರುತ್ತಿವೆ. ಈಗ ಗೂಗಲ್‌ ನೆಸ್ಟ್‌ ಹಬ್‌ನ ಸರದಿ. ಕಳೆದ ಅಕ್ಟೋಬರ್‌ನಲ್ಲೇ ಗೂಗಲ್‌ ಹೋಮ್‌ ಹಬ್‌ ಹೆಸರಿನಲ್ಲಿ ಬಿಡುಗಡೆಯಾಗಿದ್ದ ಈ ಸಾಧನ ಮನೆಯಲ್ಲಿ ಎಲ್ಲ ಸ್ಮಾರ್ಟ್‌ ಸಾಧನಗಳನ್ನು ನಿಯಂತ್ರಿಸಲು ಬಳಸಬಹುದಾದ ಕೇಂದ್ರ ಸಾಧನ.

ಗೂಗಲ್‌ ಅಸಿಸ್ಟಂಟ್‌ ಒಳಗೊಂಡಿರುವ ಈ ಧ್ವನಿ ರೂಪದ ಆದೇಶಗಳನ್ನು ಸ್ವೀಕರಿಸುತ್ತದೆ ಮತ್ತು ಅದನ್ನು ಕಾರ್ಯಗತಗೊಳಿಸುತ್ತದೆ. ಅಂದರೆ ಲೈಟ್ಸ್‌ ಆಫ್‌ ಮಾಡಲು ಹೇಳಬಹುದು, ಹವಾಮಾನ ವರದಿ ಕೇಳಬಹುದು. ನಿರ್ದಿಷ್ಟ ಮಾಹಿತಿ ಹುಡುಕಲು ಸೂಚಿಸಬಹುದು.

ದೊಡ್ಡ ಸ್ಪೀಕರ್‌ಗೆ ಏಳು ಇಂಚಿನ ಸ್ಕ್ರೀನಿನ ಫೋನ್‌ ಜೋಡಿಸಿದಂತೆ ಕಾಣುವ ಈ ಸಾಧನದ ಮೂಲಕ ಮನೆಯಲ್ಲಿರುವ ಸೆಕ್ಯುರಿಟಿ ಕ್ಯಾಮೆರಾ, ಎಸಿ, ಟಿವಿ, ದೀಪಗಳು ಎಲ್ಲವನ್ನೂ ನಿಯಂತ್ರಿಸುವ ಜೊತೆಗೆ, ಹಾಡು ಕೇಳಬಹುದು, ಪಾಡ್‌ಕಾಸ್ಟ್‌ ಆಲಿಸಬಹುದು ಯೂಟ್ಯೂಬ್‌ನಲ್ಲಿ ವಿಡಿಯೋಗಳನ್ನು ನೋಡಬಹುದು.

ಅಮೆಜಾನ್‌ ಎಕೊಗೆ ಪ್ರತಿಸ್ಪರ್ಧಿ ಎಂದು ಬಿಂಬಿಸಲಾಗಿರುವ ಈ ಸಾಧನ ಸದ್ಯ ವಿಶೇಷ ದರ 9999 ರೂ.ಗಳಿಗೆ ದೊರೆಯುತ್ತಿದೆ. ಆದರೆ ಭಾರತೀಯ ಧ್ವನಿಗಳನ್ನು ಇದು ಸಮರ್ಥವಾಗಿ ಗುರುತಿಸಿ, ಕಾರ್ಯನಿರ್ವಹಿಸಬಲ್ಲುದೆ ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ