ಸಾಮಾಜಿಕ ಜಾಲತಾಣಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಭಾರತ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಪರಿಚಯಿಸಲು ಮುಂದಾಗಿದೆ. ಸೋಷಿಯಲ್ ಮೀಡಿಯಾಗಳನ್ನು ಹೊಣೆಗಾರ ಸಂಸ್ಥೆಗಳನ್ನಾಗಿಸಬೇಕು ಎನ್ನುವುದು ನಿರ್ವಿವಾದ. ಆದರೆ ಭಾರತದ ಸರ್ಕಾರದ ಹೊಸ ನೀತಿಗಳ ಉದ್ದೇಶವನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ

ಭಾರತ ಸರ್ಕಾರ ಗುರುವಾರ ಹೊಸ ಮಾಹಿತಿ ತಂತ್ರಜ್ಞಾನ ನಿಯಮಗಳು 2021ರ ಅಡಿ ಸಾಮಾಜಿಕ ಜಾಲತಾಣಗಳು ಮತ್ತು ಸ್ಟ್ರೀಮಿಂಗ್ (ಒಟಿಟಿ) ತಾಣಗಳ ಮೇಲೆ ನೈತಿಕ ನಡಾವಳಿಯ ಮಾರ್ಗಸೂಚಿಗಳನ್ನು ಘೋಷಣೆ ಮಾಡಿದೆ.
ಅಂದರೆ ಸರ್ಕಾರದ ಸಂಪ್ರದಾಯವಾದಿ, ಸಂಸ್ಕಾರಿ ಧೋರಣೆ ಈಗ ಸಾಮಾಜಿಕ ಜಾಲತಾಣಗಳ ವ್ಯಾಪ್ತಿಗೂ ಹಿಗ್ಗಿದೆ ಎನ್ನಬಹುದು. ದಶಕ್ಕೂ ಹಳೆಯದಾದ ಕಾನೂನಿನಲ್ಲಿ ಹೊಸ ಬದಲಾವಣೆ ತರುವ ಮೂಲಕ ಗುರುವಾರದ ಪತ್ರಿಕಾಗೋಷ್ಠಿಯಲ್ಲಿ ಸಚಿವ ಸಚಿವರ ಶಂಕರ್ ಪ್ರಸಾದ್ ಮತ್ತು ಪ್ರಕಾಶ್ ಜಾವಡೇಕರ್ ಈ ಘೋಷಣೆ ಮಾಡಿದ್ದಾರೆ.
ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್ ಹೆಸರಿನ ಈ ಹೊಸ ನಿಯಮಗಳ ಪ್ರಕಾರ ಯಾವುದೇ ಟ್ವೀಟ್/ಮಾಹಿಯ ಮೂಲ ಏನು ಎಂಬುದನ್ನು ವೇದಿಕೆ ಕಲ್ಪಿಸಿದ ತಾಣಗಳನ್ನು ಕೇಳಿ ಮಾಹಿತಿ ಪಡೆದುಕೊಳ್ಳಬಹುದು. ಅಷ್ಟೇ ಅಲ್ಲದೆ ಬಳಕೆದಾರರ ಅಧಿಕೃತತೆಯನ್ನು ಸ್ವಯಂ ಪ್ರೇರಿತವಾಗಿ ಪರಿಶೀಲಿಸುವ ಅವಕಾಶವನ್ನು ಹೊಂದಿದೆ.
ಸಾಮಾಜಿಕ ಜಾಲತಾಣಗಳನ್ನು ಮತ್ತು ಸ್ಟ್ರೀಮಿಂಗ್ ತಾಣಗಳನ್ನು ಪರೋಕ್ಷವಾಗಿ ನಿಯಂತ್ರಣದ ಚೌಕಟ್ಟಿಗೆ ತರುವ ಕೆಲಸವನ್ನು ಈ ಹೊಸ ನಿಯಮಗಳು ಮಾಡಿವೆ.

ಸಾಮಾಜಿಕ ಜಾಲತಾಣಗಳು
- ಎಲ್ಲ ಸಾಮಾಜಿಕ ಜಾಲತಾಣಗಳ ಕಂಪನಿಗಳು ಒಬ್ಬ ಅಹವಾಲು ಸ್ವೀಕರಿಸುವ ಅಧಿಕಾರಿಯನ್ನು ನೇಮಿಸಬೇಕು. ಈತ ಗ್ರಾಹಕರ ಅಥವಾ ಬಳಕೆದಾರರ ದೂರುಗಳಿಗೆ ಮೂರು ದಿನಗಳ ಒಳಗಾಗಿ ಸ್ವೀಕರಿಸಿದ ಮಾಹಿತಿ ಒದಗಿಸಬೇಕು ಮತ್ತು ತಿಂಗಳ ಒಳಗೆ ಪರಿಹರಿಸಬೇಕು
- ಸಮ್ಮತಿ ಇಲ್ಲದೆ ಪ್ರಕಟಿಸಿದ ಬೆತ್ತಲೆ-ಅರೆಬೆತ್ತಲೆ ಚಿತ್ರಗಳ ವಿರುದ್ಧ ದೂರು ಬಂದ 24 ಗಂಟೆಗಳ ಒಳಗಾಗಿ ತಾಣದಿಂದ ತೆಗೆದು ಹಾಕಬೇಕು. ಡೀಪ್‌ಫೇಕ್ ಮತ್ತು ದ್ವೇಷಕ್ಕಾಗಿ ಪ್ರಕಟಿಸಿದ ಅಶ್ಲೀಲ ವಿಡಿಯೋಗಳಿಗೂ ಇದು ಅನ್ವಯಿಸುತ್ತದೆ.
- ಗೃಹ, ವಿದೇಶಾಂಗ ವ್ಯವಹಾರ, ರಕ್ಷಣಾ, ಗುಪ್ತರ, ಮಾಹಿತಿ ಮತ್ತು ತಂತ್ರಜ್ಞಾನ ಹಾಗೂ ಮಹಿಳಾ ಮತ್ತು ಮಕ್ಕಳ ಇಲಾಖೆಯ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿಯೊಂದು ರಚನೆಯಾಗಲಿದ್ದು, ನಿಯಮಗಳನ್ನು ಪಾಲಿಸದೇ ಇದ್ದ ಪಕ್ಷದಲ್ಲಿ, ಈ ಸಮಿತಿ ಸಾಮಾಜಿಕ ಜಾಲತಾಣಗಳ ಕಂಪನಿಗಳ ಮುಖ್ಯಸ್ಥರನ್ನು ಕರೆಸಿ ವಿಚಾರಣೆ ಮಾಡುವ ಅಧಿಕಾರವನ್ನು ಹೊಂದಿರುತ್ತದೆ.
- ಪರಿಹಾರ ಅಧಿಕಾರಿಯ ಜೊತೆಗೆ, ನೋಡಲ್ ಅಧಿಕಾರಿಯನ್ನು ನೇಮಿಸಬೇಕಾಗಿದ್ದು, ಇವರು ಕಾನೂನುಪಾಲನೆಗೆ ಸಂಬಂಧಿಸಿದ ಯಾವುದೇ ಅಧಿಕಾರಿ/ಇಲಾಖೆಯೊಂದಿಗೆ ಸಂಪರ್ಕಕ್ಕೆ ಸದಾ ಲಭ್ಯವಿರಬೇಕು ಎಂದು ತಿಳಿಸಲಾಗಿದೆ.
- ಈ ಸಾಮಾಜಿಕ ಜಾಲತಾಣ ಕಂಪನಿಗಳು ಪ್ರತಿ ತಿಂಗಳು ಬಂದ ದೂರುಗಳು ಅವುಗಳಲ್ಲಿ ಎಷ್ಟು ಪರಿಹರಿಸಲಾಗಿದೆ ಎಂಬ ಬಗ್ಗೆ ವರದಿಯನ್ನು ನೀಡಬೇಕು
- ಯಾವುದೇ ವೈರಲ್ ಆದ ಮೆಸೇಜ್‌ನ ಮೂಲ/ವ್ಯಕ್ತಿಯನ್ನು ಗುರುತಿಸುವುದಕ್ಕೆ ಬದ್ಧವಾಗಿರಬೇಕು ಎಂದಿವೆ. ಸಂದೇಶದಲ್ಲಿ ಏನಿತ್ತು ಎಂಬುದನ್ನು ಬಯಲು ಮಾಡಬೇಕಿಲ್ಲ ಎಂಬ ರಿಯಾಯಿತಿ ನೀಡಿದೆ.
- ಕೋರ್ಟ್ ಆದೇಶದ ಮೇರೆಗೆ ಅವಹೇಳನಕಾರಿ, ಕಾನೂನು ಬಾಹಿರವಾದ ಮಾಹಿತಿಯನ್ನು ತಾಣದಿಂದ ಆದೇಶ ಬಂದ 36ಗಂಟೆಗಳ ಒಳಗೆ ತೆಗೆದು ಹಾಕಬೇಕೆಂದು ಹೊಸ ನಿಯಮ ಹೇಳುತ್ತದೆ. ಯಾವುದು ಅವಹೇಳನಕಾರಿ ಎಂಬ ಬಗ್ಗೆ ಸ್ಪಷ್ಟ ವ್ಯಾಖ್ಯಾನವಿಲ್ಲ.
ಒಬ್ಬ ಬಳಕೆದಾರನ ಖಾತೆಯನ್ನು ನಿರ್ಬಂಧಿಸಲು ನಿರ್ಧರಿಸಿದರೆ, ಅದನ್ನು ಬಳಕೆದಾರರನ ಗಮನಕ್ಕೆ ತಂದ ನಂತರ ಕ್ರಮ ಜರುಗಿಸಬೇಕು. ಅಷ್ಟೇ ಅಲ್ಲ ನಿರ್ಬಂಧಿಸಲಾದ ಖಾತೆಯ ಪರಿಶೀಲನೆಗೆ ಮನವಿ ಮಾಡುವ ಅವಕಾಶವನ್ನೂ ಕೊಡಬೇಕು. ಇದೂ ಈಗಾಗಲೇ ಇದೆ. ಆದರೆ ಸರ್ಕಾರ ಈ ನಿಯಮವನ್ನು ಒತ್ತಿ ಹೇಳುತ್ತಿರುವುದೇಕೆ ಎಂಬ ಕುತೂಹಲವಿದೆ.
ಒಟಿಟಿ ತಾಣಗಳು
ಬಲಪಂಥೀಯ, ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾಗಿರುವ ಒಟಿಟಿ ತಾಣಗಳು ಹೊಸ ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್‌ನ ವ್ಯಾಪ್ತಿಗೆ ಒಳಪಟ್ಟಿವೆ.
ನೆಟ್‌ಫ್ಲಿಕ್ಸ್, ಡಿಸ್ನೆ+, ಹಾಟ್‌ಸ್ಟಾರ್ ಮತ್ತು ಅಮೆಜಾನ್‌ಪ್ರೈಮ್‌ಗಳು ತಾವು ಬಿತ್ತರಿಸುವ ವಿಡಿಯೋಗಳ ಸ್ವಯಂ ಸೆನ್ಸಾರ್ ಮಾಡುವ ಒಂದು ಕ್ರಮವನ್ನು ಅನುಸರಿಸಬೇಕೆಂದು ಸೂಚಿಸುತ್ತದೆ. ಅಂದರೆ ಸ್ವ ನಿಯಂತ್ರಣ ಮಾಡಬೇಕೆನ್ನುತ್ತದೆ.
ಜೊತೆಗೆ ಯು, ಯು/ಎ 7+, ಯು/ಎ13+, ಯು/ಎ16+ ಮತ್ತು ಎ ಎಂಬ ವಿಭಾಗಗಳನ್ನು ಪರಿಚಯಿಸಬೇಕೆಂದು ಸೂಚಿಸಿದೆ.
ವಯಸ್ಕರು ನೋಡುವಂತಹ ವಿಡಿಯೋಗಳಿರುವ ಕಾರಣ ಪೇರೆಂಟಲ್ ಲಾಕ್‌ಅನ್ನು ಪರಿಚಯಿಸಬೇಕೆಂದು ತಾಕೀತು ಮಾಡುತ್ತದೆ.
ಮುಂದಿನ ಹಂತದಲ್ಲಿ ಡಿಜಿಟಲ್ ಸುದ್ದಿ ತಾಣಗಳು ಕೂಡ ಈ ಹೊಸ ಮಾಹಿತಿ ತಂತ್ರಜ್ಞಾನದ ಕಾನೂನಿನ ವ್ಯಾಪ್ತಿಗೆ ಎಳೆತರಲಾಗುತ್ತದೆ.
ಒಟ್ಟಾರೆಯಾಗಿ ಸರ್ಕಾರ ಸಾಮಾಜಿಕ ಜಾಲತಾಣದಲ್ಲಿ ಅನಾಮಿಕತೆ ಇಲ್ಲದಿರುವಂತೆ ಮಾಡುವ ಪ್ರಯತ್ನಕ್ಕೆ ಮುಂದಾಗಿದೆ. ಪ್ರಜಾಸತ್ತಾತ್ಮಕದ ಪರಿಸರದಲ್ಲಿ ಎಲ್ಲವನ್ನೂ ಹೇಳುವ, ಅಧಿಕಾರ ಪ್ರಶ್ನಿಸುವ ಅವಕಾಶವನ್ನು ಇಲ್ಲವಾಗಿಸುವ ನಿಟ್ಟಿನ ಹೆಜ್ಜೆಯಾಗಿಯೇ ಇದು ಕಾಣಿಸುತ್ತಿದೆ.
ಭಾರತ ಸರ್ಕಾರದ ಹೊಸ ನೀತಿಗಳ ಬಗ್ಗೆ ಟ್ವಿಟರ್ ಸಿಇಒ ಜಾಕ್ ಡೊರ್ಸೆ ಪ್ರತಿಕ್ರಿಯಿಸಿದ್ದು, ವಿಶ್ವಾಸಾರ್ಹತೆ ಕುರಿತು ಎಲ್ಲ ಸಂಸ್ಥೆಗಳನ್ನು ಪ್ರಶ್ನೆಗಳನ್ನು ಎದುರಿಸುತ್ತಿವೆ ಎಂದಿದ್ದಾರೆ. ಟ್ವಿಟರ್ ಇಂಡಿಯಾ ಕೂಡ ಹೇಳಿಕೆ ನೀಡಿದ್ದು, ಇಂಟರ್ನೆಟ್ ರಕ್ಷಣೆ ಮತ್ತು ಪ್ರಜಾಸತ್ತಾತ್ಮಕ ನೀತಿಗಳ ನಡುವೆ ಸಮತೋಲನ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸುವುದಾಗಿ ಹೇಳಿದೆ. ‘
ಫೇಸ್‌ಬುಕ್ ಇಂಡಿಯಾ ಹೊಸ ನಿಯಮಗಳನ್ನು ಸ್ವಾಗತಿಸಿ, ”ಮುಕ್ತವಾಗಿ ಹಾಗೂ ಸುರಕ್ಷಿತವಾಗಿ ಅಭಿವ್ಯಕ್ತಿಸುವ ಜನರ ಸಾಮರ್ಥ್ಯವನ್ನು ಉಳಿಸಿ ಬೆಳೆಸುವುದಕ್ಕೆ ನಾವು ಬದ್ಧರಾಗಿದ್ದೇವೆ. ಈ ಹೊಸ ನೀತಿಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡುವುದಾಗಿ ಹೇಳಿಕೆಯಲ್ಲಿ ತಿಳಿಸಿದೆ.
ಕಳೆದ ಒಂದು ವರ್ಷದಲ್ಲಿ ಭಾರತದಲ್ಲಿ ಇಂಟರ್ನೆಟ್, ಸೋಷಿಯಲ್ ಮೀಡಿಯಾ ವಿಷಯವಾಗಿ ಆಗಿರುವ ಬೆಳವಣಿಗೆಗಳು ರಚನಾತ್ಮಕವಾದವು ಎಂದೆನಿಸಿಲ್ಲ. ಮೂಲಭೂತ ಅಗತ್ಯಗಳಾದ ಇಂಟರ್ನೆಟ್ ನಿಷೇಧಿಸಿದ ಪ್ರಕರಣಗಳು ಹೆಚ್ಚಿವೆ. ರಾಷ್ಟ್ರೀಯ ಸುರಕ್ಷತೆಯ ನೆಪದಲ್ಲಿ ಟಿಕ್‌ಟಾಕ್ ಮುಂತಾದ ಚೀನಾ ಮೂಲದ ಮೊಬೈಲ್ ಅಪ್ಲಿಕೇಷನ್‌ಗಳನ್ನು ನಿಷೇಧಿಸಲಾಗಿದೆ. ಈಗ ಸೋಷಿಯಲ್ ಮಿಡಿಯಾಗಳನ್ನು ಹೆಚ್ಚು ಹೊಣೆಗಾರರನ್ನಾಗಿಸಬೇಕೆಂಬ ಕಾರಣಕ್ಕೆ ಹೊಸ ನಿಯಮಗಳನ್ನು ಹೇರಲಾಗುತ್ತಿದೆ.
ಡಿಜಿಟಲ್ ಇಂಡಿಯಾ ಜಪ ಮಾಡುವ ಕೇಂದ್ರ ಸರ್ಕಾರ ಹೊಸ ಕಾಲ ತಂತ್ರಜ್ಞಾನಗಳ ಅಭಿವೃದ್ಧಿ ಸೂಚ್ಯಂಕದಲ್ಲಿ ಟಾಪ್ ಹತ್ತು ದೇಶಗಳಲ್ಲಿ ಕಡೆಯ ಸ್ಥಾನವನ್ನು ಪಡೆದುಕೊಂಡಿಲ್ಲ. ಮಾರುಕಟ್ಟೆ, ಸಂವಹನ, ಸಮುದಾಯ ಸಂಪರ್ಕ ಎಲ್ಲ ನಿಟ್ಟಿನಲ್ಲೂ ಮಹತ್ವದ ಪಾತ್ರವಹಿಸುತ್ತಿರುವ ಸಾಮಾಜಿಕ ಜಾಲತಾಣಗಳ ಮೇಲೆ ನಿಯಂತ್ರಣ ಹೇರುವ ಸರ್ಕಾರದ ನಡೆ ತೀವ್ರ ಪ್ರತಿಗಾಮಿ ನಡೆಯಾಗಿ ಗೋಚರಿಸುತ್ತಿದೆ.