ಮದುರೈ ಪೊಲೀಸ್‌ ಆ್ಯಪ್‌ ಅವಾಂತರ| ಮಾಹಿತಿ ಸೋರಿಕೆ ಬಯಲು ಮಾಡಿದ ಸಂಶೋಧಕರು

ಆಧಾರ್‌ ಹಾಗೂ ಇತರೆ ಮಹತ್ವದ ಚರ್ಚೆಗಳಲ್ಲಿ ಖಾಸಗಿತನದ ಸೂಕ್ಷ್ಮ ಸಂಗತಿಗಳನ್ನು ಬಯಲು ಮಾಡಿದ ದುಃಸ್ವಪ್ನದಂತೆ ಕಾಡಿದ ಏಲಿಯಟ್‌ ಆಲ್ಡರ್ಸನ್‌ ಮತ್ತೊಂದು ಸೋರಿಕೆಯ ಮಾಹಿತಿಯನ್ನು ಬಯಲು ಮಾಡಿದ್ದಾರೆ. ಟೆಕ್‌ ಕನ್ನಡದೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ

ವಿಶೇಷ ವರದಿ

ಕೆಲವು ದಿನಗಳಿಂದ ಭಾರತದಲ್ಲಿ ಫೇಶಿಯಲ್‌ ರೆಕಗ್ನಿಷನ್‌ ತಂತ್ರಜ್ಞಾನದ ಕುರಿತು ಭಾರಿ ಚರ್ಚೆ ನಡೆಯುತ್ತಿದೆ. ಹೈದರಾಬಾದಿನಲ್ಲಿ ದೇಶದಲ್ಲೇ ಮೊದಲ ಬಾರಿಗೆ, ಡಿಜಿ ಯಾತ್ರಾ ಹೆಸರಿನಲ್ಲಿ ಈ ಸೇವೆಯನ್ನು ಪರಿಚಯಿಸುವ ತಯಾರಿ ನಡೆಯುತ್ತಿದೆ. ಡಿಜಿಯಾತ್ರಾ ಐಡಿ ಇದ್ದರೆ ಸಾಕು ಬೋರ್ಡ್‌ ಪಾಸ್‌ನ ಅಗತ್ಯವೂ ಇಲ್ಲದೆ ವಿಮಾನ ಹತ್ತಬಹುದು. ಅದಕ್ಕೆ ನೀವು ನಿಮ್ಮ ಮುಖವನ್ನು ಒಂದು ಕ್ಯಾಮೆರಾಗೆ ತೋರಿಸಬೇಕು ಅಷ್ಟೇ.

ಆದರೆ ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬ ಅನುಮಾನಗಳು ವ್ಯಕ್ತವಾಗುತ್ತಿರುವಾಗಲೇ ಮದುರೈ ಪೊಲೀಸ್‌ ಇಲಾಖೆ ಮಾಡಿಕೊಂಡ ಎಡವಟ್ಟು ಬಯಲಾಗಿದೆ.
ಮದುರೈ ಪೊಲೀಸ್‌ ಕಳೆದ ವರ್ಷ, ‘ಕಾಪ್ಸ್‌ಐ’ ಹೆಸರಿನ ಆ್ಯಪ್‌ಅನ್ನು ಪರಿಚಯಿಸಿತ್ತು. ಕಳ್ಳರನ್ನು ಗುರುತಿಸಿ, ಸೆರೆಹಿಡಿಯುವುದು ಈ ಆ್ಯಪ್‌ನ ಉದ್ದೇಶವಾಗಿತ್ತು. ಫೇಶಿಯಲ್‌ ರೆಕಗ್ನಿಷನ್‌ ಮತ್ತು ಹಾಗೂ ಆರ್ಟಿಫಿಶಿಯಲ್‌ ತಂತ್ರಜ್ಞಾನ ಬಳಸಿ ರೂಪಿಸಿದ ಈ ಆ್ಯಪ್‌ ಸುರಕ್ಷಿತವಾಗಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ.

ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ ಕಾಪ್ಸ್‌ಐ ಮೊಬೈಲ್‌ ಅಪ್ಲಿಕೇಷನ್

ಫ್ರಾನ್ಸ್‌ ಸೆಕ್ಯುರಿಟಿ ರೀಸರ್ಚರ್‌ ಎಂದು ಗುರುತಿಸಿಕೊಂಡಿರುವ, ಆಧಾರ್‌, ಬಿಜೆಪಿ ಐಟಿ ಸೆಲ್‌ ಅವಾಂತರಗಳನ್ನು ಬಯಲು ಮಾಡಿದ ಏಲಿಯಟ್‌ ಆಲ್ಡರ್ಸನ್‌ ಮತ್ತು ಓಲಿವರ್‌ ಹೋಗ್‌ ಈ ಅಂಶಗಳನ್ನು ಬಯಲು ಮಾಡಿದ್ದಾರೆ. ಟೆಕ್‌ ಕನ್ನಡದೊಂದಿಗೆ ಈ ಮಾಹಿತಿ ಹಂಚಿಕೊಂಡಿರುವ ಈ ಇಬ್ಬರು, ಕಾಪ್ಸ್‌ಐ ಪೊಲೀಸ್‌ ಅಪ್ಲಿಕೇಷನ್‌ನ ಅಡ್ಮಿನ್‌ ಯೂಸರ್‌ನೇಮ್‌ ಮತ್ತು ಪಾಸ್‌ವರ್ಡ್‌ಗಳು, ಫೋಟೋಗಳು ಇತ್ಯಾದಿ ಎಲ್ಲ ಮಾಹಿತಿಗಳು ಲಭ್ಯವಾಗಿವೆ ಎಂದಿದ್ದಾರೆ.

ಮದುರೈ ಮೂಲದ ಜಿಯೋಮಿಯೋ ಇನ್‌ಫಾರ್ಮ್ಯಾಟಿಕ್ಸ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿ ಈ ಮೊಬೈಲ್‌ ಅಪ್ಲಿಕೇಷನ್‌ ಅನ್ನು ಅಭಿವೃದ್ಧಿಪಡಿಸಿದೆ. 2018ರಲ್ಲೇ ಪರಿಚಯಿಸಲಾದ ಈ ಆ್ಯಪ್‌ಅನ್ನು ಸಾರ್ವಜನಿಕ ಬಳಕೆಗೂ ಮುಕ್ತಗೊಳಿಸಲಾಯಿತು. ಅನುಮಾನಸ್ಪದ ವ್ಯಕ್ತಿಗಳ ಫೋಟೋಗಳನ್ನು ಆ್ಯಪ್‌ಗೆ ಅಪ್‌ಲೋಡ್‌ ಮಾಡುವ ಅವಕಾಶವನ್ನು ನೀಡಿದೆ. ಹೀಗೆ ಸಾವಿರಾರು ಸಂಖ್ಯೆಯಲ್ಲಿ ವ್ಯಕ್ತಿಗಳ ಫೋಟೋ, ಒಟಿಪಿ ಕೋಡ್‌, ಇತ್ಯಾದಿ ವಿವರಗಳು ಈ ಆ್ಯಪ್‌ನಲ್ಲಿದ್ದು ಯಾರಿಗೆ ಬೇಕಾದರೂ ಸುಲಭ ಸಿಗುವಂತಿದೆ.

ಸುರಕ್ಷತೆಯ ನಿಟ್ಟಿನಲ್ಲಿ ಸೂಕ್ತ ಕ್ರಮಕೈಗೊಳ್ಳದ ಆ್ಯಪ್‌ ಅಭಿವೃದ್ಧಿಪಡಿಸಿದ ಕಂಪನಿ, ಈ ಬಗ್ಗೆ ಯಾವುದೇ ಸುಳಿವಿಲ್ಲದ ಪೊಲೀಸ್‌ ಇಲಾಖೆ ಈಗ ಮುಜುಗರ ಅನುಭವಿಸುವಂತಾಗಿದೆ. ಈ ಕುರಿತು ಹೇಳಿಕೆ ಪಡೆಯಲು ಜಿಯೋಮಿಯೋ ಸಂಸ್ಥೆಗೆ, ‘ಟೆಕ್‌ ಕನ್ನಡ’ ಸಂಪರ್ಕಿಸಿದಾಗ ಸಾಫ್ಟ್‌ವೇರ್‌ ಅಭಿವೃದ್ಧಿ ಪಡಿಸುವ ತಂಡ ಲಭ್ಯವಿಲ್ಲ ಎಂಬ ಪ್ರತಿಕ್ರಿಯೆ ಲಭ್ಯವಾಯಿತು. ಆದರೆ ಕಂಪನಿಯು ಡಾಟಾಬೇಸ್‌ ಗೆ ಇದ್ದ ಆಕ್ಸೆಸ್‌ಅನ್ನು ನಿರ್ಬಂಧಿಸುವ ಕೆಲಸವನ್ನು ಮಾಡಿದೆ. ಜೊತೆಗೆ ಫೈರ್‌ಬೇಸ್‌ ಅನ್ನು ಡಿಲೀಟ್‌ ಮಾಡಿದೆ. ಪೊಲೀಸರು ಈ ಕುರಿತು ಮಾಹಿತಿ ನೀಡಲು ಲಭ್ಯವಾಗಿಲ್ಲ.

ಈ ಬೆಳವಣಿಗೆ ಕುರಿತು ಏಲಿಯಟ್‌ ಆಲ್ಡರ್ಸನ್‌, ಟೆಕ್‌ಕನ್ನಡದೊಂದಿಗೆ ಮಾತಾಡುತ್ತಾ, ” ಇಂಥ ಡಿಜಿಟಲ್‌ ಪ್ರಯೋಗಗಳಿಗೆ ಮುಂದಾಗುವಾಗ ಕಂಪನಿಗಳು ಮಾಹಿತಿ ಸುರಕ್ಷತೆಯನ್ನು ಮಹತ್ವದ ಆದ್ಯತೆಯಾಗಿ ಮುನ್ನೆಚ್ಚರಿಕೆಯನ್ನು ವಹಿಸಬೇಕಾಗುತ್ತದೆ. ಅಲ್ಲದೆ ಇಂಥ ಖಾಸಗಿ ಸಂಸ್ಥೆಗಳನ್ನು ಸರ್ಕಾರಿ ಸೇವೆಯಲ್ಲಿ ಬಳಸಿಕೊಳ್ಳುವಾಗ ಸರ್ಕಾರ ಖಾಸಗಿ ಕಂಪನಿಗಳಿಗೆ ಸರಿಯಾದ ಸವಾಲುಗಳನ್ನು ಒಡ್ಡಬೇಕಾಗುತ್ತದೆ. ಮತ್ತು ಖಾಸಗಿ ಕಂಪನಿಗಳು ಕೂಡ ಮಾಹಿತಿ ಸುರಕ್ಷತೆ ಮತ್ತು ಸಂರಕ್ಷಣೆಗೆ ಉತ್ತಮ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಸರ್ಕಾರ ಇಂಥ ಅನನುಭವಿಗಳ ಜೊತೆಗೆ ಕಾರ್ಯನಿರ್ವಹಿಸಬಾರದು ‘ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಜಿಯೋಮಿಯೋ ಮದುರೈ ಪೊಲೀಸರಿಗೆ ಆರು ಮೊಬೈಲ್‌ ಅಪ್ಲಿಕೇಷನ್‌ಗಳನ್ನು ಅಭಿವೃದ್ಧಿ ಮಾಡಿಕೊಟ್ಟಿದೆ. ಈಗ ಉಳಿದ ಆಪ್‌ಗಳು ಎಷ್ಟು ಸುರಕ್ಷಿತ ಎಂಬ ಪ್ರಶ್ನೆಗಳು ಎದ್ದಿವೆ.

ಖಾಸಗಿ ಸಂಸ್ಥೆಯೊಂದು ಸರ್ಕಾರಿ ಇಲಾಖೆಗಾಗಿ ಸಂಗ್ರಹಿಸಿದ ಮಾಹಿತಿ ಹೀಗೆ ಬಹಿರಂಗಗೊಂಡಿರುವುದು ಖಾಸಗಿತನ ಮತ್ತು ಮಾಹಿತಿ ಸುರಕ್ಷತೆಯ ಬಗ್ಗೆ ಆತಂಕ ಹುಟ್ಟುಹಾಕಿದೆ. ಖಾಸಗಿತನ ಮತ್ತು ಮಾಹಿತಿ ಸುರಕ್ಷತೆಯ ನಿಟ್ಟಿನಲ್ಲಿ ಯಾವುದೇ ಸ್ಪಷ್ಟ ಕಾನೂನು ಇಲ್ಲದ ಹೊತ್ತಲ್ಲಿ ಇಂತಹ ತಂತ್ರಜ್ಞಾನಗಳು ಸರಿಯಾದ ಸಿದ್ಧತೆಯಿಲ್ಲದೆ ಕಾರ್ಯರೂಪಕ್ಕೆ ಬರುವುದು ಇಂಥ ಅವಾಂತರಗಳಿಗೆ ಕಾರಣವಾಗುತ್ತದೆ ಎಂಬ ಟೀಕೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಎದುರಿಸುತ್ತಿದೆ.

ಬೆಳವಣಿಗೆ

ಸುರಕ್ಷತೆಯ ಪ್ರಶ್ನೆಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಮದುರೈ ಪೊಲೀಸರು ಆ್ಯಪ್‌ ಅನ್ನು ಗೂಗಲ್‌ ಪ್ಲೆ ಸ್ಟೋರಿನಿಂದ ತೆಗೆದು ಹಾಕಿದ್ದಾರೆ. ಜೊತೆಗೆ ಕಾಪ್ಸ್‌ಐ ಹೆಸರಿನಲ್ಲಿದ್ದ ಟ್ವಿಟರ್‌ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ದಾರೆ.