ಬಾಯಿ ಇಲ್ಲ, ಆದರೂ ತಿಂದು ಅರಗಿಸಿಕೊಳ್ಳಬಲ್ಲದು, ಮಿದುಳಿಲ್ಲ, ಆದರೂ ಕಲಿಯಬಲ್ಲದು, ಏನಿದು?

ಪ್ಯಾರಿಸ್‌ನ ಝೂಲಾಜಿಕಲ್‌ ಪಾರ್ಕ್‌ ಈಗ ವಿಶೇಷ ಆರ್ಕಷಣೆಯಾಗಿದೆ. ಇಲ್ಲಿಗೆ ಬಂದಿರುವ ವಿಶಿಷ್ಟವಾದ ಜೀವಿ ಆಕರ್ಷಣೆಗೆ ಕಾರಣ. ಬ್ಲಾಬ್‌ ಎಂದು ಕರೆಸಿಕೊಳ್ಳುವ ಇದು ನೋಡಲು ಫಂಗಸ್‌ನಂತೆ ಇದ್ದರೂ ಪ್ರಾಣಿಯಂತೆ ಎಲ್ಲ ರೀತಿಯ ದೈಹಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿದೆ

ವಿಜ್ಞಾನಿಗಳು ‘ಬ್ಲಾಬ್‌’ ಎಂದು ಹೆಸರಿಟ್ಟಿರುವ ಈ ಹಳದಿ ಬಣ್ಣದಲ್ಲಿರುವ ಜೀವಿ ಕೈಯಿಲ್ಲ, ಹೊಟ್ಟೆಯಿಲ್ಲ, ಕಣ್ಣಿಲ್ಲ. ಆದರೆ ಆಹಾರವನ್ನು ಗುರುತಿಸಿ, ತಿಂದು, ಅರಗಿಸಿಕೊಳ್ಳಬಲ್ಲದು. ಇದೊಂದು ಏಕಕೋಶ ಜೀವಿಯಾಗಿದ್ದು ಬುಧವಾರದಿಂದ ಪ್ಯಾರಿಸ್‌ ಝೂಲಾಜಿಕಲ್‌ ಪಾರ್ಕ್‌ನಲ್ಲಿ ಪ್ರದರ್ಶನಕ್ಕೆ ಇರಿಸಲಾಗಿದ್ದು, ಅಚ್ಚರಿಯ ಆಕರ್ಷಣೆಯಾಗಿದೆ.

ಸಾಮಾನ್ಯವಾಗಿ ಏಕಕೋಶ ಜೀವಿಗಳು ಬರಿಗಣಿಗೆ ಕಾಣಿಸುವುದಿಲ್ಲ. ಆದರೆ ಲೋಳೆಯಂತಿರುವ ಇದು ಫಂಗಸ್‌ನಂತೆ ಸಾಮಾನ್ಯ ಕಣ್ಣಿಗೂ ಕಾಣಿಸುತ್ತದೆ. ಆದರೆ ಪ್ರಾಣಿಯಂತೆ ವರ್ತಿಸುತ್ತದೆ. ಫೈಸೇರಮ್‌ ಪಾಲಿಸೆಫಲಮ್‌ ಎಂದು ವೈಜ್ಞಾನಿಕವಾಗಿ ಕರೆಸಿಕೊಳ್ಳುತ್ತದೆ. ಅಂದರೆ ಹಲವು ತಲೆಗಳಿರುವ ಜೀವಿ ಎಂದರ್ಥ. ಇದು ಕಾಲಿಲ್ಲದಿದ್ದರೂ ಚಲಿಸಬಲ್ಲದು ಹಾಗೂ ಯಾವುದೇ ಗಾಯಗಳಾದರೆ ಎರಡು ನಿಮಿಷಗಳಲ್ಲಿ ತಾನೇ ಗುಣಪಡಿಸಿಕೊಳ್ಳಬಲ್ಲದು!

ಪ್ಯಾರಿಸ್‌ ಮ್ಯೂಸಿಯಂ ಆಫ್‌ ನ್ಯಾಚುರಲ್‌ ಹಿಸ್ಟರಿಯ ನಿರ್ದೇಶಕ ಬ್ರೂನೋ ಡೇವಿಡ್‌, ದಿ ಗಾರ್ಡಿಯನ್‌ ಪತ್ರಿಕೆಯೊಂದಿಗೆ ಮಾತನಾಡುತ್ತಾ, ‘ ಇದಕ್ಕೆ ಮಿದುಳಿಲ್ಲ. ಆದರೂ ಕಲಿಯಬಲ್ಲದು. ಅಷ್ಟೇ ಅಲ್ಲ, ಇನ್ನೊಂದು ಬ್ಲಾಬ್‌ನೊಂದಿಗೆ ಕೂಡಿಸಿದರೆ, ಕಲಿತ ಒಂದು ಬ್ಲಾಬ್‌, ಇನ್ನೊಂದು ಬ್ಲಾಬ್‌ಗೆ ತನ್ನ ಜ್ಞಾನವನ್ನು ದಾಟಿಬಲ್ಲದು” ಎಂದು ತಿಳಿಸಿದ್ದಾರೆ!

ವಿಕಿಪೀಡಿಯಾದ ವಿವರಗಳು ಹೇಳುವಂತೆ ಬ್ಲಾಬ್‌ ಎಂದು ಮುದ್ದಾಗಿಸಿ ಕರೆಸಿಕೊಳ್ಳುವ ಈ ಏಕ ಕೋಶ ಜೀವಿ ತಣ್ಣನೆಯ, ತೇವವಿರುವ , ಕೊಳೆತ ಎಲೆಗಳು, ಮುರಿದು ಬಿದ್ದ ಮರದ ದಿಮ್ಮೆಗಳ ಲ್ಲಿ ಕಾಣಿಸಿಕೊಳ್ಳುತ್ತದೆ. ಬರಿಗಣ್ಣಿಗೆ ಕಾಣುವ ಈ ಜೀವಿ ಬ್ಯಾಕ್ಟೀರಿಯಾ, ಫಂಗಸ್‌ ಮುಂತಾದವು ತಿಂದು ಬದುಕುತ್ತದೆ.

ಬುದ್ಧಿವಂತಿಕೆಯೇ ಬೆರಗು

ಸರಿಯಾದ ಆಕಾರವೇ ಇಲ್ಲದ ಈ ಜೀವಿಗೆ ಆಲೋಚಿಸುವ ಶಕ್ತಿ ಇದೆ ಎಂಬುದೇ ವಿಜ್ಞಾನಿಗಳಲ್ಲಿ ಕುತೂಲಹ, ಬೆರಗಿಗೆ ಕಾರಣವಾಗಿರುವ ಸಂಗತಿ. ಹೆಚ್ಚು ಪೌಷ್ಟಿಕ ಮತ್ತು ಪೌಷ್ಟಿಕವಲ್ಲದ ಆಹಾರಗಳನ್ನು ಇದರ ಎದುರು ಇರಿಸಿದಾಗ, ಪೌಷ್ಟಿಕ ಆಹಾರವನ್ನೇ ಆಯ್ಕೆ ಮಾಡಿಕೊಳ್ಳುವ ಮೂಲಕ ತನ್ನ ಬುದ್ಧಿವಂತಿಕೆಯನ್ನು ಪ್ರದರ್ಶಿಸಿದೆ. ಪ್ಲೈಮೌತ್‌ ವಿಶ್ವವಿದ್ಯಾಲಯದ ಮ್ಯೂಸಿಕ್‌ ಟೆಕ್ನಾಲಜಿ ವಿಭಾಗದ ಎಡ್ವರ್ಡ್‌ ಬ್ರಾಂಡ್‌ ಸಂಗೀತ ಸೃಷ್ಟಿಸುವ ಕೆಲಸದಲ್ಲಿ ಬ್ಲಾಬ್‌ನ ಸ್ಮರಣ ಶಕ್ತಿಯನ್ನು ಪರೀಕ್ಷಿಸಿದ್ದನ್ನು ತಿಳಿಸಿದ್ದಾರೆ.

ಬ್ಲಾಬ್‌ ಜೀವಿಯೊಂದರ ಆಲೋಚನಾ ಶಕ್ತಿಯ ಮೂಲವನ್ನು ಕಂಡುಕೊಳ್ಳಲು ನೆರವಾಗಲಿದೆ ಎಂಬುದು ವಿಜ್ಞಾನಿಗಳಿಗೆ ಉತ್ಸಾಹ ಉಂಟು ಮಾಡಿರುವ ವಿಷಯ. ಅಕ್ಟೋಬರ್‌ 26ರಂದು ಪ್ಯಾರಿಸೈನ್ಸ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ‘ದಿ ಬ್ಲಾಬ್‌ ಎ ಜೀನಿಯಸ್‌ ವಿತೌಟ್‌ ಎ ಬ್ರೇನ್’ ಹೆಸರಿನ ಡಾಕ್ಯುಮೆಂಟರಿ ಪ್ರದರ್ಶನಗೊಳ್ಳುತ್ತಿದೆ.
ಅಂದ ಹಾಗೇ ಬ್ಲಾಬ್‌ ಎಂದು ಹೆಸರು ಬರಲು ಕಾರಣ 1958ರಲ್ಲಿ ತೆರೆ ಕಂಡ ಇದೇ ಹೆಸರಿನ ಹಾರರ್‌ ಮೂವಿ. ಇದರಲ್ಲಿ ತನ್ನ ದಾರಿಯಲ್ಲಿ ಸಿಗುವುದೆಲ್ಲವನ್ನು ತಿಂದುಬಿಡುವ ಜೀವಿಯಾಗಿ ಕಾಣಿಸಿಕೊಂಡಿತ್ತು.
ಮೇಲ್ನೋಟಕ್ಕೆ ಯಾರೋ ವಾಂತಿ ಮಾಡಿಕೊಂಡಿದ್ದಾರೆ ಎನ್ನಿಸುವ ಹಳದಿ ಕಲೆ, ನಿಜಕ್ಕೂ ಗಮನ ಸೆಳೆಯುವುದಿಲ್ಲ. ಆದರೆ ಇದರ ಸ್ವಭಾವ ವೈಶಿಷ್ಟ್ಯಗಳೇ ಆಕರ್ಷಿಸುತ್ತಿವೆ.