ಅಮರವಾಗಲು ಹೊಸ ದಾರಿ !| ಜನಪ್ರಿಯ ಲೇಖಕ, ಭಾಷಣಕಾರ ದೀಪಕ್‌ಚೋಪ್ರಾ ಡಿಜಿಟಲ್‌ ಕ್ಲೋನ್‌!!

ನಮ್ಮದೇ ಜೀನ್‌ಗಳನ್ನು ಬಳಸಿ, ನಮ್ಮನ್ನೇ ಹೋಲುವ ತದ್ರೂಪು ಸೃಷ್ಟಿಯನ್ನು ವಿಜ್ಞಾನಿಗಳು ಕಂಡುಕೊಂಡು ಬಹಳ ಕಾಲವಾಗಿದೆ. ಜೈವಿಕವಾಗಿ ನಡೆಯುವ ಈ ಪ್ರಕ್ರಿಯೆಗೆ ವಿರೋಧ ವ್ಯಕ್ತವಾಗಿತ್ತು. ಈಗ ತಂತ್ರಜ್ಞಾನದ ಸರದಿ. ಜನಪ್ರಿಯ ಲೇಖಕ ದೀಪಕ್‌ ಚೋಪ್ರಾ ಅವರ ಡಿಜಿಟಲ್‌ ಕ್ಲೋನ್‌ ಸಿದ್ಧವಾಗಿದೆ

ವ್ಯಕ್ತಿತ್ವ ವಿಕಸನ, ನಾಯಕತ್ವ, ಆಧುನಿಕ ಅಧ್ಯಾತ್ಮ ಹೀಗೆ ಹಲವು ವಿಷಯಗಳ ಬಗ್ಗೆ ಪುಸ್ತಕ ಮತ್ತು ಭಾಷಣಗಳ ಮೂಲಕ ಜನಪ್ರಿಯವಾಗಿರುವ ದೀಪಕ್‌ ಚೋಪ್ರಾ ಈಗ ಒಬ್ಬರಲ್ಲ, ಇಬ್ಬರು ಆಗಿದ್ದಾರೆ!

ಹೌದು, ದೀಪಕ್‌ ಚೋಪ್ರಾ ತಮ್ಮ ತದ್ರೂಪು ಒಂದನ್ನು ಸಿದ್ಧಪಡಿಸಿದ್ದು, ನಿಮ್ಮ ಮೊಬೈಲ್‌, ಲ್ಯಾಪ್‌ಟಾಪ್‌ಗಳ ಪರದೆ ಮೇಲೆ ಪ್ರತ್ಯಕ್ಷವಾಗಿ ನಿಮ್ಮೊಂದಿಗೆ ಮಾತನಾಡಬಲ್ಲರು.

ಹೇಗೆ ಎಂದು ಕೇಳಿದಿರಾ? ದೀಪಕ್‌ ಚೋಪ್ರಾ ತಮ್ಮದೇ ತದ್ರೂಪನ್ನು ಸಿದ್ಧಪಡಿಸಿದ್ದಾರೆ. ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ತಂತ್ರಜ್ಞಾನವನ್ನು ಬಳಸಿಕೊಂಡು ಡಿಜಿಟಲ್‌ ಕ್ಲೋನ್‌ ಸಿದ್ಧಪಡಿಸಿದ್ದಾರೆ. ಆಪ್‌ ರೂಪದಲ್ಲಿ ಲಭ್ಯವಿರುವ ಇದು, ಯಾವುದೇ ವ್ಯಕ್ತಿಯೊಂದಿಗೆ, ಅವರ ಮನಸ್ಥಿತಿ ಹೇಗಿದೆ ಎಂದು ಕೇಳಬಲ್ಲದು, ಒತ್ತಡ ಕುರಿತು ಚರ್ಚಿಸಿ, ಏನು ಮಾಡಬೇಕು ಎಂಬ ಸಲಹೆಯನ್ನು ನೀಡಬಲ್ಲದು!

ಸಿನೆಟ್‌.ಕಾಂನ ಸ್ಕಾಟ್‌ ಸ್ಟೀನ್‌ ದೀಪಕ್‌ ಚೋಪ್ರಾ ಅವರ ಡಿಜಿಟಲ್‌ ಕ್ಲೋನ್‌ ಮತ್ತು ಸ್ವತಃ ದೀಪಕ್‌ ಅವರೊಂದಿಗೆ ಸಂದರ್ಶನ ನಡೆಸಿದ್ದು, ಈ ಕುರಿತು ವಿವರವಾಗಿ ತಮ್ಮ ಅನುಭವವನ್ನು ದಾಖಲಿಸಿದ್ದಾರೆ.

ಎಐ ಫೌಂಡೇಷನ್‌ ಜೊತೆಗೂಡಿ, ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಆಧರಿಸಿದ ದೀಪಕ್‌ಚೋಪ್ರಾ ಡಿಜಿಟಲ್‌ ಕ್ಲೋನ್ ಸಿದ್ಧಪಡಿಸಲಾಗಿದೆ. ಇದು ಉಚಿತವಾಗಿ ಲಭ್ಯವಿದೆ. ತನ್ನೊಂದಿಗೆ ಯಾರೇ ಮಾತನಾಡಿದರು, ಅವರೊಂದಿಗೆ ವೈಯಕ್ತಿಕ ಸಂಬಂಧವನ್ನು ಬೆಳೆಸುತ್ತದೆ. ಸಮಸ್ಯೆಗಳಿಗೆ ಸೂಕ್ತ ಪರಿಹಾರವನ್ನು ಸೂಚಿಸುತ್ತದೆ.

ಕ್ಲೋನ್‌ ಸಿದ್ಧಪಡಿಸಿರುವ ಕುರಿತು ಮಾತನಾಡಿರುವ ಚೋಪ್ರಾ, ” ನನಗೀಗ 73 ವರ್ಷ. ಆರೋಗ್ಯವಾಗಿದ್ದೇನೆ. ಆದರೆ ಈ ದೇಹಕ್ಕೆ ಸಾವು ಎಂಬುದಿದೆ. ನಾನು ಹೋದ ಮೇಲೆ, ಈ ಡಿಜಿಟಲ್‌ ದೀಪಕ್‌ ಚೋಪ್ರಾ, ನನ್ನೆಲ್ಲಾ ಕೆಲಸಗಳನ್ನು ಮುಂದುವರೆಸುತ್ತದೆ” ಎನ್ನುತ್ತಾರೆ. ಅಂದರೆ ದೀಪಕ್‌ ಚೋಪ್ರಾ ಡಿಜಿಟಲ್‌ ರೂಪದಲ್ಲಿ ಅಮರರಾಗಬಹುದು ಎಂದಿದ್ದಾರೆ. ತಮ್ಮ ಡಿಜಿಟಲ್‌ ಕ್ಲೋನ್‌ ಅನ್ನು’ ಡಿಜಿಟಲ್‌ ಬೇಬಿ ದೀಪಕ್‌’ ಎಂದು ಕರೆಯುವ ದೀಪಕ್‌, ‘ಪ್ರತಿ ಸಂಭಾಷಣೆಯಿಂದಲೂ ಹೊಸತನ್ನು ಕಲಿಯುವ ಕ್ಲೋನ್‌, ಬಹಳ ಬೇಗ, ಹರೆಯ, ವಯಸ್ಕನ ಹಂತವನ್ನು ದಾಟಿ ಪ್ರಬುದ್ಧ ವ್ಯಕ್ತಿಯಾಗುವುದು. ಮನುಷ್ಯರಿಗೆ ಇರುವ ಸಮಯದ ಮಿತಿಯಿಲ್ಲದಿರುವುದರಿಂದ ಅತಿ ವೇಗವಾಗಿ ಕೆಲಸ ಮಾಡಬಲ್ಲದು” ಎನ್ನುತ್ತಾರೆ.

”ನಾನು ಇದರಿಂದ ಕಲಿಯುತ್ತೇನೆ. ಅದು ನನ್ನಿಂದ ಕಲಿಯುತ್ತದೆ. ಈಗ ನಾವು ಇಬ್ಬರು ಅವಳಿ” ಎಂಬ ಮಾತನ್ನೂ ಸೇರಿಸಿದ್ದಾರೆ. ದೀಪಕ್‌ ಚೋಪ್ರಾ ಡಿಜಿಟಲ್‌ ಕ್ಲೋನ್‌ ಹೇಗಿದೆ ನೀವೇ ನೋಡಿ:

ಎಐ ಫೌಂಡೇಷನ್‌ ದೀಪಕ್‌ ಅವರ ಮಾದರಿಯಲ್ಲೇ ಹಲವು ಗಣ್ಯರ ಡಿಜಿಟಲ್‌ ಕ್ಲೋನ್‌ ಸಿದ್ಧಪಡಿಸುತ್ತಿದೆ. ಕಿಮ್‌ ಜಾಂಗ್‌, ರಿಚರ್ಡ್ಸ್‌ ಬ್ರಾಸನ್‌ ಸೇರಿದಂತೆ ಹಲವರ ಕ್ಲೋನ್‌ಅನ್ನು ಪ್ರಾಯೋಗಿಕವಾಗಿ ಸಿದ್ಧಪಡಿಸಿದೆ.

ಸಾವಿನನಂತರವೂ ತಮ್ಮ ವ್ಯಕ್ತಿತ್ವವನ್ನು ಅಮರವಾಗಿಸಲು ಬಯಸುವ ಹಣವಂತರು ಈ ತಂತ್ರಜ್ಞಾನದ ಬಗ್ಗೆ ಆಸಕ್ತಿ ತೋರುತ್ತಿದ್ದಾರೆ. ಡೀಪ್‌ ಫೇಕ್‌ ವಿಡಿಯೋಗಳು ವ್ಯಾಪಕವಾಗುತ್ತಾ, ಆತಂಕ ಹುಟ್ಟಿಸುತ್ತಿರುವ ಹೊತ್ತಲ್ಲಿ ಈ ಡಿಜಿಟಲ್‌ ಕ್ಲೋನ್‌ಗಳು ಎಷ್ಟು ಸರಿ ಎಂಬ ಬಗ್ಗೆ ಚರ್ಚೆಗಳು ಆರಂಭವಾಗಿವೆ.

ಆದರೆ ಎಐ ಫೌಂಡೇಷನ್‌ ಈ ಕ್ಲೋನ್‌ಗಳು, ಪರಿಶೀಲನೆಗೆ ಒಳಪಡುತ್ತವೆ, ನೈತಿಕ ಚೌಕಟ್ಟಿನಲ್ಲಿ ಕೆಲಸ ಮಾಡುವಂತೆ ನಿಯಂತ್ರಿಸಲಾಗುತ್ತದೆ ಎಂಬ ಭರವಸೆಯನ್ನು ನೀಡಿವೆ. ಆದರೆ ಇದು ಎಷ್ಟರ ಮಟ್ಟಿಗೆ ಸಾಧ್ಯವಾಗುತ್ತದೆ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರವಿಲ್ಲ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.