ಓಲಾ ಎಲೆಕ್ಟ್ರಿಕ್‌ ಸ್ಕೂಟರ್ ಸಂಪೂರ್ಣ ವಿವರ – ನಮ್ಮಲ್ಲೇ ಮೊದಲು (!)

ಓಲಾ ತಯಾರಿಸುತ್ತಿರುವ ಇಲೆಕ್ಟ್ರಿಕ್ ಸ್ಕೂಟರ್ ಬುಕ್ಕಿಂಗ್ ಘೋಷಣೆಯಾದ 24 ತಾಸಿನಲ್ಲೇ ದಾಖಲೆಯ ಒಂದು ಲಕ್ಷ ಬುಕ್ಕಿಂಗ್ ಕಂಡು ಸುದ್ದಿಯಾಗಿದೆ. ಕಾಮನಬಿಲ್ಲಿನಲ್ಲಿರುವ ಬಹುತೇಕ ಎಲ್ಲಾ ಬಣ್ಣಗಳಲ್ಲೂ ಲಭ್ಯ ಇವೆ

ಓಲಾ ತಯಾರಿಸುತ್ತಿರುವ ಇಲೆಕ್ಟ್ರಿಕ್ ಸ್ಕೂಟರ್ ಬುಕ್ಕಿಂಗ್ ಘೋಷಣೆಯಾದ 24 ತಾಸಿನಲ್ಲೇ ದಾಖಲೆಯ ಒಂದು ಲಕ್ಷ ಬುಕ್ಕಿಂಗ್ ಕಂಡು ಸುದ್ದಿಯಾಗಿದೆ. ಕಾಮನಬಿಲ್ಲಿನಲ್ಲಿರುವ ಬಹುತೇಕ ಎಲ್ಲಾ ಬಣ್ಣಗಳಲ್ಲೂ ಲಭ್ಯ ಇವೆ ಎಂಬಂತೆ ವಿವಿಧ ಬಣ್ಣಗಳ ಆಯ್ಕೆ ಬಗ್ಗೆ ಕಂಪನಿ ಈಗಾಗಲೇ ತಿಳಿಸಿದೆ. ಆದರೆ ಸ್ಕೂಟರಿನ ಬಗೆಗಿನ ತಾಂತ್ರಿಕ ವಿವರ ಇನ್ನೂ ಎಲ್ಲಿಯೂ ಹೊರಹಾಕಿಲ್ಲ.

ರಾಜ್ಯದ ಮುಖ್ಯಮಂತ್ರಿ ವಿಚಾರವನ್ನು ಎಲ್ಲಾ ಚಾನಲ್‌ಗಳೂ ತಮ್ಮಲ್ಲೇ ಮೊದಲು ಪ್ರಕಟಿಸಿದ ಈ ಸಂದರ್ಭದಲ್ಲಿ ಓಲಾ ಸ್ಕೂಟರಿನ ತಾಂತ್ರಿಕ ವಿವರಗಳನ್ನು ಕನ್ನಡದ ಸುದ್ದಿಮಾಧ್ಯಮಗಳ ಪೈಕಿ ಟೆಕ್‌ಕನ್ನಡ ನೈಜವಾಗಿ ಮೊದಲ ಬಾರಿಗೆ ಹೊರಹಾಕುತ್ತಿದೆ ಎಂಬುದು ಈ ಸುದ್ದಿಯ ವಿಶೇಷ.


ಓಲಾ ಸ್ಕೂಟರಿಗೆ‌ ಯುರೋಪ್ ಮೂಲ

ಓಲಾದ ಈ ಇಲೆಕ್ಟ್ರಿಕ್ ಸ್ಕೂಟರ್ ಮೂಲತಃ ಇತರ್ಗೋ ಎಂಬ ಡಚ್ ಕಂಪನಿಯೊಂದರ ಆವಿಷ್ಕಾರ. ಆ ಕಂಪನಿ ಮಾರುಕಟ್ಟೆ ಪ್ರವೇಶಿಸಲು ಯೋಜಿಸಿದ ಮೊದಲ ಉತ್ಪನ್ನ ಇತರ್ಗೋ ಆ್ಯಪ್ ಸ್ಕೂಟರ್. ಸ್ಕೂಟರಿನ ಆನ್-ಆಫ್ ಹಾಗೂ ಲಾಕ್-ಅನ್ಲಾಕ್ ಸೇರಿದಂತೆ ಸಂಪೂರ್ಣ ನಿಯಂತ್ರಣ ಆ್ಯಪ್‌ನಿಂದಲೇ‌ ಸಾಧ್ಯವೆಂಬುದು ಅದರ ಹೆಚ್ಚುಗಾರಿಕೆಯಾಗಿತ್ತು. ಆದರೆ ಆ ಸ್ಕೂಟರ್ ಬಿಡುಗಡೆಗೂ ಮುನ್ನವೇ ಓಲಾ ಕಂಪನಿಯನ್ನೇ ಖರೀದಿಸಿತು.


ಪ್ರಸ್ತುತ ಓಲಾ ರಸ್ತೆಗಿಳಿಸುತ್ತಿರುವುದು ತಾನು ವಶಮಾಡಿಕೊಂಡ ಅದೇ ಆ್ಯಪ್ ಸ್ಕೂಟರನ್ನು. ಅದರ ಬಗೆಗಿನ ಇತರೆ ವಿವರಗಳು ಹಾಗೂ ಪ್ರಸ್ತುತ ಮಾರುಕಟ್ಟೆ ಕಡೆಗೆ ಕೊಂಚ ಗಮನ ಹರಿಸೋಣ.

ಸ್ಫರ್ಧೆಯೊಡ್ಡುವ ಇತರೆ ಕಂಪನಿಗಳು

ಭಾರತದಲ್ಲಿ ಈಗಾಗಲೇ ಹೀರೋಮೋಟೋ ಹೂಡಿಕೆಯಿರುವ ಬೆಂಗಳೂರು ಮೂಲದ ಏಥರ್ 450 ಹಾಗೂ 450ಎಕ್ಸ್ ಸ್ಕೂಟರ್ ಮಾರುಕಟ್ಟೆಯಲ್ಲಿದೆ. ಏಥರ್ ಅತ್ಯುನ್ನತ ದರ್ಜೆಯ ಸ್ಕೂಟರಾಗಿದ್ದು‌ 1.8ಲಕ್ಷ ರೂಪಾಯಿಗಳ ದುಬಾರಿ ಬೆಲೆ ಹೊಂದಿದೆ.

ಅಗ್ಗದ ದರದಲ್ಲಿ, ಅಂದರೆ ಒಂದು‌ ಲಕ್ಷ ರೂಪಾಯಿಗಳ ಒಳಗಿನ ಬೆಲೆಯಲ್ಲಿ ಓಕಿನಾವಾ, ಬೆನ್ಲಿಂಗ್‌ನಂಥ ಕಂಪನಿಯ ವಿವಿಧ ಮಾಡೆಲ್‌ಗಳು ಲಭ್ಯವಿವೆ. ಆದರೆ ಅವುಗಳಲ್ಲಿ ಹಲವು ಬಿಡಿಭಾಗಗಳು ಚೀನಾದಿಂದ ಆಮದು‌ ಮಾಡಿಕೊಂಡಂಥವು. ಒಮ್ಮೆ ಚಾರ್ಜ್ ಮಾಡಿದರೆ 80-120 ಕಿಮೀ ಕ್ರಮಿಸುವ ಇವುಗಳಲ್ಲಿ ಯಾವುದೇ ರೀತಿಯ ಕನೆಕ್ಟಿವಿಟಿಯಾಗಿಲೀ ಹೇಳಿಕೊಳ್ಳುವಂಥ ಪ್ರತ್ಯೇಕತೆಯಾಗಲಿ ಇಲ್ಲ.

ಓಲಾ‌ ಸ್ಕೂಟರಿನಲ್ಲಿ ಆ್ಯಂಡ್ರಾಯ್ಡ್:ಸಾಮಾನ್ಯ ಸ್ಕೂಟರ್‌ಗಳಲ್ಲಿ ಸ್ಪೀಡೋಮೀಟರ್ ಇರುವ ಜಾಗದಲ್ಲಿ ಓಲಾ‌ ಸ್ಕೂಟರಿನಲ್ಲಿ ಏಳು ಇಂಚಿನ ಟಚ್ ಸ್ಕ್ರೀನ್ ಇರಲಿದೆ. ಹಾರ್ನ್ ಸ್ವಿಚ್ಚಿರುವ ಜಾಗದಲ್ಲಿ ಈ ಸ್ಕ್ರೀನಿನ ನ್ಯಾವಿಗೇಶನ್ ಸ್ವಿಚ್ಚುಗಳು ಇರಲಿವೆ. ನಿಯಂತ್ರಣಾ ವ್ಯವಸ್ಥೆಗೆ ಆ್ಯಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂ ಬಳಕೆ‌ ಮಾಡುತ್ತದೆ. ಫೋನನ್ನು ಬ್ಲೂಟೂತ್ ಮುಖೇನ ಕನೆಕ್ಟ್ ಮಾಡಿದರೆ ಸ್ಕೂಟರಿನ ಸ್ಕ್ರೀನ್ ಮೂಲಕವೇ ಫೋನನ್ನು ನಿಯಂತ್ರಿಸಬಹುದು. 

ಬ್ಯಾಟರಿ: ಸ್ಕೂಟರಿನ ಮೂಲ ಇಂಧನವಾದ ವಿದ್ಯುತ್ ಸರಬರಾಜಿಗಾಗಿ ಓಲಾ ಸ್ಕೂಟರಿನಲ್ಲಿ ವಿಶೇಷ ವಿನ್ಯಾಸವಿರುವ ಬ್ಯಾಟರಿ ಬಳಕೆ ಮಾಡಲಾಗುತ್ತದೆ. ಅರ್ಧಚಂದ್ರಾಕೃತಿಯ ಮೂರು ಬ್ಯಾಟರಿ ಬಳಕೆ ಮಾಡಲು ಸ್ಕೂಟರಿನಲ್ಲಿ ಅವಕಾಶವಿರಲಿದೆ. ಇಲೆಕ್ಟ್ರಿಕ್‌ ಸ್ಕೂಟರ್‌ಗಳಲ್ಲಿ ಅತಿ ಬೆಲೆಬಾಳುವ ಉಪಕರಣಗಳ ಪೈಕಿ ಬ್ಯಾಟರಿ ಪ್ರಮುಖ. ಹಾಗಾಗಿ ಮೂರು ಬ್ಯಾಟರಿಗಳ ಬಳಕೆಯ ಈ ವಿನ್ಯಾಸ ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ವಿವಿಧ ಸ್ಥರಗಳ ಬೆಲೆಗಳಲ್ಲಿ ಸ್ಕೂಟರನ್ನು ಮಾರಾಟ‌ ಮಾಡಲು ಕಂಪನಿಗೆ ಅವಕಾಶ ಮಾಡಿಕೊಡುತ್ತದೆ.

ಶೋರೂಮ್ ಬೆಲೆಯಲ್ಲಿ ಒಂದೇ ಬ್ಯಾಟರಿ ಅಳವಡಿಕೆ ಮಾಡಲಿದ್ದು ಹೆಚ್ಚಿನ ಕಿಲೋಮೀಟರ್ ಚಾಲನೆಯ ಅಗತ್ಯವಿರುವ ಗ್ರಾಹಕರು ಅಗತ್ಯಕ್ಕೆ ತಕ್ಕಂತೆ ಹೆಚ್ಚುವರಿಯಾಗಿ ಒಂದು ಅಥವಾ ಎರಡು ಬ್ಯಾಟರಿಗಳನ್ನು ಕೊಳ್ಳಬಹುದು. ಬ್ಯಾಟರಿಗಳು ಸ್ಕೂಟರಿನ ತಳದಲ್ಲಿ ಕೂರುವಂಥದ್ದು ವಿನ್ಯಾಸ ಹೊಂದಿದೆ – ಅರ್ಥಾತ್ ಸವಾರ ಕಾಲಿಡುವ ಫ್ಲೋರ್ ಬೋರ್ಡಿನಲ್ಲಿ – ಅದನ್ನು ಸೀಟಿನ ಒಳಗಿಂದ ಹಾಕಿ-ತೆಗೆದು ಮಾಡಬಹುದು. ಅಂದಹಾಗೆ ಪ ಪ್ರತಿ‌ ಬ್ಯಾಟರಿ ಸುಮಾರು 80ಕಿಮೀಗಳ‌ ರೇಂಜ್ ಒದಗಿಸಲಿದೆ ಹಾಗೂ ಅಂದಾಜು ಏಳು ಕಿಲೋ ತೂಕ ಹೊಂದಿರಲಿದೆ. 

ತಾಂತ್ರಿಕತೆ:ಇಲೆಕ್ಟ್ರಿಕ್‌ ಸ್ಕೂಟರುಗಳು ಸಾಮಾನ್ಯವಾಗಿ ಎರಡು ರೀತಿಯ ಮೋಟಾರುಗಳಲ್ಲಿ ಒಂದನ್ನು ಬಳಸುತ್ತದೆ. ಮೊದಲನೆಯದು ಹಬ್ ಮೋಟಾರ್. ಅಂದರೆ ಹಿಂಬದಿ ಚಕ್ರದ ಒಳಗೆ ಕೂರುವ‌ ಮೋಟಾರ್. ಈ ವ್ಯವಸ್ಥೆಯಲ್ಲಿ ವಾಸ್ತವದಲ್ಲಿ ಚಕ್ರವೇ‌ ಮೋಟಾರ್ ಎನ್ನಬಹುದು.

ಮತ್ತೊಂದು ಬಗೆಯದ್ದು ಬೆಲ್ಟ್ ಬಳಕೆ‌ ಮಾಡುವ ಬೆಲ್ಟ್ ಡ್ರೈವ್. ಬೈಕಿನ ಎಂಜಿನ್ನಿನಿಂದ ಚಕ್ರಕ್ಕೆ ಹೇಗೆ ಚೈನ್ ಮೂಲಕ ಸಂಪರ್ಕ ಸಾಧಿಸಲಾಗುತ್ತದೋ ಹಾಗೆ ಇಲೆಕ್ಟ್ರಿಕ್ ಮೋಟಾರಿನಿಂದ ಚಕ್ರಕ್ಕೆ ರಬ್ಬರ್ ಬೆಲ್ಟ್ ಮೂಲಕ ಸಂಪರ್ಕ ಸಾಧಿಸಲಾಗುತ್ತದೆ.

ಓಲಾ‌ ಸ್ಕೂಟರಿನಲ್ಲಿ 4 ಕಿಲೋವ್ಯಾಟ್‌ನ ಬೆಲ್ಟ್ ಡ್ರೈವ್‌ವುಳ್ಳ ಮೋಟಾರ್ ಬಳಕೆ ಮಾಡಲಾಗುವುದು ಎನ್ನಲಾಗಿದೆ.  ನಿಂತಲ್ಲಿಂದ 3.9 ಸೆಕೆಂಡುಗಳಲ್ಲಿ 45 ಕಿಮೀ ವೇಗವನ್ನು ಪಡೆಯಬಹುದು. ಪ್ರಸ್ತುತ ಮಾರುಕಟ್ಟೆಯಲ್ಲಿರುವ ಯಾವುದೇ ಪೆಟ್ರೋಲ್‌ ಸ್ಕೂಟರಿನ ಪಿಕಪ್‌ಗೆ ಹೋಲಿಸಿದರೆ ಇದು ಅತ್ಯದ್ಭುತ. 

ಸ್ಥಳಾವಕಾಶ:ಬ್ಯಾಟರಿ ಪ್ಲೋರ್ ಬೋರ್ಡಿನ ಅಡಿಯಲ್ಲಿ ಇರುವ‌ ಕಾರಣ ಸೀಟಿನಡಿ ದಂಡಿಯಾಗಿ ಸ್ಥಳಾವಾಕಾಶ ಇರಲಿದೆ. ಎರಡು ಫುಲ್ ಫೇಸ್ ಹೆಲ್ಮೆಟ್‌ಗಳನ್ನು ಇಡುವಷ್ಟು ಅಗಾಧ ಸ್ಥಳಾವಕಾಶ ಸೀಟಿನ ಕೆಳಗೆ ಇರುವುದು ಅನೂಕೂಲ ಒದಗಿಸಲಿದೆ. 


ತಾಂತ್ರಿಕ ವಿವರಣೆ: ಬ್ಯಾಟರಿ: 1.1 Wh x 3

ಮೋಟಾರ್: 4 kW

ಚಾರ್ಜಿಂಗ್ ಅವಧಿ: ಸಾಮಾನ್ಯ ಚಾರ್ಜರಿನಲ್ಲಿ 5.5 ಗಂಟೆ, ಫಾಸ್ಟ್ ಚಾರ್ಜರಿನಲ್ಲಿ 2.3 ಗಂಟೆ

ಗರಿಷ್ಟ ವೇಗ: ಗಂಟೆಗೆ 70 ಕಿಮೀ

ಇತರೆ ಸೌಲಭ್ಯಗಳು: ಜಿಪಿಎಸ್-ನ್ಯಾವಿಗೇಶನ್, ವೈಫೈ, 4ಜಿ ಸಂಪರ್ಕ, OTA ಅಪ್ಡೇಟ್.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

%d bloggers like this: