ದೇವರ ನಾಡಿನಲ್ಲಿ ಹಡಲ್ ಕಲರವ; ನಿನ್ನೆ-ಇಂದು-ನಾಳಿನ ಸ್ಟಾರ್ಟಪ್‌ಗಳ ಸಮ್ಮಿಲನ

ಸ್ಟಾರ್ಟಪ್‌ ಹಬ್‌ ಎನಿಸಿಕೊಂಡಿರುವ ಬೆಂಗಳೂರಿಗೆ ಸಡ್ಡು ಹೊಡೆಯುವಂತೆ ಕೇರಳ ಸರ್ಕಾರ ಸ್ಟಾರ್ಟಪ್‌ಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಕೋವಲಮ್‌ನಲ್ಲಿ ಇಂದು ಆರಂಭವಾದ ಹಡಲ್‌ ಕೇರಳ ಸಮಾವೇಶ ನವೋದ್ಯಮ ಕ್ಷೇತ್ರದ ಹಲವು ಹೊಸ ಬೆಳವಣಿಗೆ, ಭವಿಷ್ಯದ ಹೊಸ ಸಾಧ್ಯತೆಗಳನ್ನು ಅನಾವರಣ ಮಾಡಿದೆ. ಟೆಕ್‌ ಕನ್ನಡದ ವಿಶೇಷ ವರದಿ ಇಲ್ಲಿದೆ

ಎಲ್ಲೆಲ್ಲೂ ಯುವ ಮುಖಗಳು, ಈಗಷ್ಟೇ ಅಲ್ಲಲ್ಲಿ ಮೂಡುತ್ತಿರುವ ಬಿಳಿ ಗಡ್ಡದಂತೆ ಕೆಲವು ಹೊಸ ಹಿರಿಯರು ಮತ್ತು ಹತ್ತು ಕೈಗಳಲ್ಲಿ ಎಣಿಸಬೇಕಾದಷ್ಟು ನವ್ಯೋದ್ಯಮಗಳು. ಇದು ತಿರುವನಂತಪುರದಲ್ಲಿ ನಡೆಯುತ್ತಿರುವ ಹಡಲ್ ಕೇರಳ 2019. 

ಮಧ್ಯಾಹ್ನ 3 ಗಂಟೆಗೆ ಸಾಂಕೇತಿಕವಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರಿಂದ ಉದ್ಘಾಟನೆಗೊಂಡ ಕಾರ್ಯಕ್ರಮ ವಾಸ್ತವವಾಗಿ ಬೆಳಗ್ಗೆ 10ಕ್ಕೆ ಆರಂಭವಾಗಿತ್ತು. ತಡವಾಗಿ ಶುರುವಾದರೂ ಇಡೀ ಸಮಾವೇಶದ ಆಶಯವನ್ನು ಎತ್ತಿ ಹಿಡಿಯುವ ಕೇರಳ ಸರ್ಕಾರ ಮಾಡಿರುವ, ಮಾಡ ಹೊರಟಿರುವ ಕಾರ್ಯಕ್ರಮಗಳ ಕುರಿತು ವಿಜಯನ್‌ ಮಾತನಾಡಿದರು.

ಜಾಗತಿಕ ಟೆಕ್‌ ದೈತ್ಯ ಎನಿಸಿಕೊಂಡಿರುವ ಸಂಸ್ಥೆಗಳಲ್ಲಿ ಕೇರಳಕ್ಕೆ ಕಾರ್ಯಕ್ಷೇತ್ರ ವಿಸ್ತರಿಸಲು ಆಹ್ವಾನ ನೀಡಿದರು. ಕೇರಳ ಸ್ಟಾರ್ಟಪ್‌ ಮಿಷನ್‌, ಸ್ಟಾರ್ಟಪ್‌ ಇಂಡಿಯಾ ಅಡಿಯಲ್ಲಿ ಕೇರಳದಲ್ಲಿ ನವೋದ್ಯಮಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಡೆದ ಕಾರ್ಯಕ್ರಮಗಳನ್ನು ವಿವರಿಸಿದರು.

ಮಹಿಳಾ ನವೋದ್ಯಮಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ‘ವಿಂಗ್-ವುಮೆನ್‌ ರೈಸಿಂಗ್‌ ಟುಗೆದರ್‌’ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಮಾವೇಶ ಉದ್ದೇಶಿಸಿ ಮಾತನಾಡಿದ ಟ್ವಿಟರ್‌ ಸಹ ಸಂಸ್ಥಾಪಕ ಬಿಜ್‌ ಸ್ಟೋನ್‌, ಕೊಚ್ಚಿ ಮೂಲದ ಸೀವ್‌ ಹೆಸರಿನ ಸ್ಟಾರ್ಟಪ್‌ನಲ್ಲಿ ಹೂಡಿಕೆ ಮಾಡುತ್ತಿರುವುದಾಗಿ ಹೇಳಿದರು.

ಸೀವ್‌, ಸಂಜಯ್‌ ನೆಡಿಯಾರ್‌ ಎಂಬ ಶ್ರವ್ಯ ದೋಷವಿರುವ ವ್ಯಕ್ತಿ ಸ್ಥಾಪಿಸಿರುವ ಸ್ಟಾರ್ಟಪ್‌. ಇದು ವೆಬ್‌ನಂತಹ ಮೂಲಸೌಕರ್ಯಗಳಿಂದ ಹಿಡಿದು ಫ್ರೀಲಾನ್ಸರ್‌ಗಳು ಮತ್ತು ಏಜನ್ಸಿಗಳಿಗೆ ಅಗತ್ಯವಾಗುವ ಎಲ್ಲ ಸೇವೆಗಳನ್ನು ನೀಡುವ ಕೆಲಸವನ್ನು ಮಾಡುತ್ತಿದೆ.

ಈಗಾಗಲೇ ಅಮೆರಿಕಕ್ಕೆ ಸೇವೆನೀಡುತ್ತಿರುವ ಸೀವ್‌ ಸಂಸ್ಥೆ, ಯುರೋಪ್‌ಗೂ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸುತ್ತಿದ್ದು ಸ್ಟೋನ್‌ ಈ ಬಗ್ಗೆ ಅಪಾರ ಮೆಚ್ಚುಗೆವ್ಯಕ್ತಪಡಿಸಿದರು.

ಕಾರ್ಯಕ್ರಮದ ಜಂಟಿ ಆಯೋಜಕ  ಇಂಟರ್ನೆಟ್‌ ಅಂಡ್‌ ಮೊಬೈಲ್‌ ಅಸೋಸಿಯೇಷನ್‌ ಆಫ್‌ ಇಂಡಿಯಾದ ಸಿಇಒ ಜಿತೇಂದರ್ ಮಿನಾಸ್ ಸ್ವಾಗತ ಹಾಗೂ ದಿಕ್ಸೂಚಿ ಭಾಷಣ ಮಾಡಿದರು‌. 

ದೇಶದಲ್ಲಿ ಮೂರನೇ ಒಂದು ಜನಸಂಖ್ಯೆ ಮೊಬೈಲ್ ಮೂಲಕ ಇಂಟರ್ನೆಟ್ ಬಳಕೆ ಮಾಡುತ್ತಿರುವ ಈ ದಿನಗಳಲ್ಲಿ ಪ್ರಾದೇಶಿಕ ಭಾಷೆಗಳಲ್ಲಿ ಮಾಹಿತಿಗೆ ಅಗಾಧ ಪ್ರಗತಿಯಿದೆ ಮತ್ತು ಇದು ಈ ಕ್ಷಣದ ಅಗತ್ಯ ಎಂದು ಜಿತೇಂದರ್‌ ಅಭಿಪ್ರಾಯ ಪಟ್ಟರು. ಹಾಗೆಯೇ ಹೊಸ ತಂತ್ರಜ್ಞಾನಗಳಾದ ಬ್ಲಾಕ್‌ಚೇ‌ನ್ ಆಧಾರಿತ ವ್ಯವಸ್ಥೆಯಲ್ಲಿ ರೈತರಿಗೆ ವಿಮೆ, ಪೊಲೀಸರಿಗೆ ಗುಪ್ತಚರ ಮಾಹಿತಿ ಸಂಗ್ರಹ, ಸಾಮಾಜಿಕ-ಸಾಮುದಾಯಿಕ ಬೆಳವಣಿಗೆಗಾಗಿ ಬಳಕೆ ಬರುತ್ತಿದೆ ಎಂದು ಹೇಳಿದರು.

ಫೇಸ್‌ಬುಕ್‌ನ ಭಾರತ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಅಜಿತ್ ಮೋಹನ್, ಭಾರತ ಈಗ ಮಾಹಿತಿ ತಂತ್ರಜ್ಞಾನ ಎಂದಲ್ಲ; ಅನಾದಿಯಿಂದ ಭಾಷಾ ವಿಚಾರದಲ್ಲಿ ಪ್ರಾದೇಶಿಕವಾಗಿಯೇ ಇದೆ, ಎಂದರು. 

ಡಬ್ಬಾವಾಲಾ ಮೆರುಗು

ಆದರೆ ಕಾರ್ಯಕ್ರಮಕ್ಕೆ ಸೂಕ್ತ ಉತ್ತೇಜನ ನೀಡಿದ್ದು ಡಾ. ಪವನ್ ಅಗರ್ವಾಲ್ ಅವರ ‘ಎ ಜರ್ನಿ ವಿದ್ ಮುಂಬೈ ಡಬ್ಬಾವಾಲಾ’. ಅತಿ ಕಡಿಮೆ ತಂತ್ರಜ್ಞಾನ ಅವಲಂಬಿತ ಮುಂಬೈನ ಡಬ್ಬಾವಾಲಾಗಳ 127 ವರ್ಷಗಳ ಹಳೆಯ ವ್ಯವಸ್ಥೆ ಇಂದಿನ ನವ್ಯೋದ್ಯಮಕ್ಕೆ ಹೇಗೆ ದಾರಿದೀಪವಾಗಬಲ್ಲದು ಎಂಬುದನ್ನು ತಮ್ಮ ಅತ್ಯದ್ಭುತ ಮಾತುಗಳಲ್ಲಿ ಪ್ರಸ್ತುತ ಪಡಿಸಿದರು.

ಪರ್ಯಾಯ ವೇದಿಕೆಗಳಲ್ಲಿ ವಿವಿಧ ಕ್ಷೇತ್ರಗಳ ಪರಿಣಿತರೆದುರು ಹತ್ತು ಹೊಸ ಸ್ಟಾರ್ಟಪ್‌ಗಳು ತಮ್ಮ ಐಡಿಯಾ ಹಾಗೂ ಅದರ ಅಳವಡಿಕೆ ಮತ್ತು ಪರಿಣಾಮಗಳ ಬಗ್ಗೆ ಅವರೆದುರು ಪ್ರಸ್ತಾಪಿಸಿದರು. ನಾಳೆ ಸಂಜೆಗೆ ಇವುಗಳ ವಿಜೇತರನ್ನು ಘೋಷಿಸಲಾಗುತ್ತದೆ.

ಇದುವರೆಗಿನ ಪರಂಪರೆಯಂತೆ ಕೇರಳದಲ್ಲಿ ಖಾಸಗಿ ಉದ್ಯಮಗಳಿಗೆ ನೂರೆಂಟು ಅಡ್ಡಿಗಳು, ಅಡಿಗಡಿಗೆ ಹಳತಾಳ, ಕಪ್ಪು-ಕೆಂಪು ಬಾವುಟ. ಆದರೆ ಏನೇ ಬಂದ್ ಆದರೂ ಇಲ್ಲಿ ಮೊಬೈಲ್ ಬಂದ್ ಆಗುವುದಿಲ್ಲ, ಹಾಗಾಗಿ‌ ತಂತ್ರಜ್ಞಾನ, ಇಂಟರ್ನೆಟ್ ಆಫ್ ಥಿಂಗ್ಸ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆಧರಿತ ತಂತ್ರಾಂಶ ಮೀರಿದ ತಂತ್ರಜ್ಞಾನ ಇಲ್ಲಿ ಬದಲಾವಣೆಯ ತೆಂಕಣ ಗಾಳಿಯಾಗಿದೆ. ಜತೆಗೆ ಹೊಸತನ್ನು ಕುತೂಹಲದಿಂದ ನೋಡುತ್ತಿರುವ, ಹಾಗೂ ಇಂದಿನ ಕಣ್ಣುಗಳಲ್ಲಿ ಭವಿಷ್ಯದ ಸಮಸ್ಯೆಗಳಿಗೆ ಪರಿಹಾರ ಕಾಣಲು ಹಪಹಪಿಸುತ್ತಿರುವ ಯುವ ಮನಸ್ಸುಗಳಿವೆ. ಅಲ್ಲಿನ ಜನ ಸರ್ಕಾರಿ ಸವಲತ್ತುಗಳನ್ನು ಸಮರ್ಥವಾಗಿ ಬಳಸುತ್ತಿದೆ, ಸರ್ಕಾರ ನಿರ್ವಹಿಸುತ್ತಿದೆ.