31ನೇ ವರ್ಷದ ಇಗ್ನೊಬೆಲ್ ಪ್ರಶಸ್ತಿಗಳ ಘೋಷಣೆಯಾಗಿದೆ. ಹತ್ತು ವಿಭಾಗಗಳಲ್ಲಿ ನಡೆದ ಅಸಹಜ, ವಿಚಿತ್ರ ಹಾಗೂ ವಿಶಿಷ್ಟ ಸಂಶೋಧನೆಗಳಿಗೆ ಪ್ರಶಸ್ತಿ ಘೋಷಿಸಲಾಗಿದೆ. ಯಾವುವು ಆ ಸಂಶೋಧನೆಗಳು? ಮುಂದೆ ಓದಿ.
ಇಂಪ್ರಾಬಬಲ್ ಸಂಸ್ಥೆ ಹಾಸ್ಯಾಸ್ಪದ ಎನಿಸುವ ವಿಚಿತ್ರವಾದ ಸಂಶೋಧನೆಗಳಿಗೆ ನೀಡುವ ಈ ಸಾಲಿನ 31ನೇ ಇಗ್ನೋಬೆಲ್ ಪ್ರಶಸ್ತಿಗಳು ಘೋಷಣೆಯಾಗಿದೆ. ಯಾವ ವಿಭಾಗದಲ್ಲಿ, ಯಾವ ಸಂಶೋಧನೆಗೆ ಪ್ರಶಸ್ತಿ ಬಂದಿದೆ ಎಂಬ ವಿವರಗಳು, ಇಲ್ಲಿವೆ
ಅರ್ಥಶಾಸ್ತ್ರ ವಿಭಾಗ
ಬೊಜ್ಜಿಗೂ ದೇಶದ ಭ್ರಷ್ಟಚಾರಕ್ಕೂ ಸಂಬಂಧವಿದೆಯಾ? ಇದೆಯಂತೆ! ಆದರೆ ನಮ್ಮ ನಿಮ್ಮ ಬೊಜ್ಜಲ್ಲ, ರಾಜಕಾರಣಿಗಳ ಬೊಜ್ಜಿಗೂ ಭ್ರಷ್ಟಚಾರಕ್ಕೂ ಸಂಬಂಧವಿದೆ ಎಂದು ಪಾವ್ಲೋ ಬ್ಲಾವಾಟ್‌ಸ್ಕಿ ಅವರು ನಡೆಸಿರುವ ಅಧ್ಯಯನ ಸಾಬೀತು ಮಾಡಿದೆ! ಫ್ರಾನ್ಸ್, ಸ್ವಿಟ್ಜರ್‌ಲೆಂಡ್, ಆಸ್ಟ್ರೇಲಿಯಾ, ಆಸ್ಟ್ರೀಯಾ, ಚೆಕ್ ಗಣರಾಜ್ಯದ ಮತ್ತು ಇಂಗ್ಲೆಂಡ್‌ನಲ್ಲಿ ನಡೆಸಿದ ಅಧ್ಯಯನದ ಪ್ರಕಾರ ದೇಶದಲ್ಲಿ ಭ್ರಷ್ಟಾಚಾರ ಯಾವ ಪ್ರಮಾಣದಲ್ಲಿದೆ ಇದೆ ಎಂಬುದನ್ನು ಅರಿಯುವುದಕ್ಕೆ ರಾಜಕಾರಣಿಗಳ ಬೊಜ್ಜು ನೆರವಾಗುತ್ತದೆಯಂತೆ!
ಜೀವಶಾಸ್ತ್ರ ವಿಭಾಗ
ಮನುಷ್ಯ ಮತ್ತು ಬೆಕ್ಕಿನ ಸಂವಹನದಲ್ಲಿ ವ್ಯಕ್ತವಾಗುವ ಕೂಗು, ಮುಲುಕುವ, ಪಿಸುಗುಡುವ, ಇತ್ಯಾದಿಗಳ ಸದ್ದುಗಳನ್ನು ಅಧ್ಯಯನ ಮಾಡಿದ ಸೂಸೇನ್ ಶಾಟ್ಸ್‌ಗೆ ಜೀವಶಾಸ್ತ್ರದ ಇಗ್ನೊಬೆಲ್ ದೊರೆತಿದೆ.
ಪರಿಸರ ಶಾಸ್ತ್ರ ವಿಭಾಗ
ತಿಂದು ಎಲ್ಲೆಲ್ಲೊ ಅಂಟಿಸಲಾದ ಚ್ಯೂಯಿಂಗ್ ಗಮ್‌ನಲ್ಲಿ ಇರುವ ವಿವಿಧ ಜಾತಿಯ ಬ್ಯಾಕ್ಟೀರಿಯಾಗಳು ಅಧ್ಯಯನಕ್ಕೆ ಡಿಎನ್‌ಎ ವಿಶ್ಲೇಷಣೆಯನ್ನು ಅನುಸರಿಸುವ ಕುರಿತು ಅಧ್ಯಯನಕ್ಕೆ ಲೀಲಾ ಸತಾರಿ, ಅಲ್ಬಾ ಗಿಲ್ಲೆನ್, ವಿಡಾ ವೆರ್ಡು ಮತ್ತು ಮ್ಯಾನ್ಯುಯೆಲ್ ಪೋರ್ಕರ್ ತಂಡಕ್ಕೆ ಪ್ರಶಸ್ತಿ ಬಂದಿದೆ.
ರಸಾಯನಶಾಸ್ತ್ರ ವಿಭಾಗ
ಚಿತ್ರಮಂದಿರದೊಳಗಿನ ಗಾಳಿಯಲ್ಲಿ ಇರುವ ವಾಸನೆಯಿಂದ, ಪ್ರೇಕ್ಷಕರು ನೋಡುತ್ತಿರುವ ಚಿತ್ರದಲ್ಲಿರುವ ಹಿಂಸೆ, ಸೆಕ್ಸ್, ಸಮಾಜ ಬಾಹಿರ ಚಟುವಟಿಕೆಗಲು, ಮಾದಕ ವಸ್ತುಗಳ ಬಳಕೆ ಮತ್ತು ಅಶ್ಲೀಲ ಭಾಷೆಯ ಬಳಕೆಯನ್ನು ಅರಿಯುವ ಅಧ್ಯಯನಕ್ಕೆ ಪ್ರಶಸ್ತಿ ಲಭಿಸಿದೆ. ಜರ್ಮನಿ, ಇಂಗ್ಲೆಂಡ್, ನ್ಯೂಜಿಲೆಂಡ್, ಗ್ರೀಸ್, ಸೈಪ್ರಸ್ ಮತ್ತು ಆಸ್ಟ್ರಿಯಾಗಳಲ್ಲಿ ಈಕುರಿತು ಯಾರ್ಗ್ ವಿಕರ್, ನಿಕೊಸ್ ಕ್ರಾಟರ್ ಅವರ ತಂಡ ಅಧ್ಯಯನ ನಡೆಸಿ ಪ್ರಶಸ್ತಿಗೆ ಭಾಜನವಾಗಿದೆ.
ವೈದ್ಯಕೀಯ ಪ್ರಶಸ್ತಿ ವಿಭಾಗ
ಮೂಗು ಕಟ್ಟಿದೆಯೇ? ವಿಕ್ಸ್ ಆಕ್ಷನ್ ತಗೊಳ್ಳುವುದು ಒಂದು ದಾರಿ. ಆದರೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ ಕಟ್ಟಿರುವ ಮೂಗು ಸರಿಹೋಗುತ್ತದೆ ಮತ್ತು ಉಸಿರಾಟ ಸಲೀಸಲಾಗುತ್ತದೆ ಎಂದು ಆಲ್ಕೆ ಸೆಮ್ ಬುಲತ್ ಅವರ ತಂಡ ಪತ್ತೆ ಮಾಡಿದೆಯಂತೆ.
ಶಾಂತಿ ಪ್ರಶಸ್ತಿ ವಿಭಾಗ
ಮುಖದ ಮೇಲೆ ಗುದ್ದು ಬೀಳದಿರಲಿ ಎಂಬ ಕಾರಣಕ್ಕೆ ಗಂಡಸರು ಗಡ್ಡ ಬೆಳೆಸಿಕೊಳ್ಳುತ್ತಾರೆ ಎಂಬ ಸಂಶೋಧನೆಗೆ ಮಾಡಿದ ಈತನ್ ಬೆಸರಿಸ್, ಸ್ಟೀವನ್ ನೇಲ್‌ವೇ ಮತ್ತು ಡೇವಿಡ್ ಕ್ಯಾರಿಯರ್ ಅವರಿಗೆ ಶಾಂತಿ ಪ್ರಶಸ್ತಿ ಲಭಿಸಿದೆ.
ಭೌತಶಾಸ್ತ್ರ ಪ್ರಶಸ್ತಿ ವಿಭಾಗ
ರಸ್ತೆ ಮೇಲೆ ಸಂಚರಿಸುವ ವಾಹನಗಳು ಡಿಕ್ಕಿ ಹೊಡೆಯುವುದು ಮಾಮೂಲಿ. ಆದರೆ ಫುಟ್‌ಪಾತ್ ಮೇಲೆ ನಡೆಯುವ ಪಾದಚಾರಿಗಳೇಕೆ ಢಿಕ್ಕಿ ಹೊಡೆಯುವುದಿಲ್ಲ? ಇದರ ಹಿಂದಿರಬಹುದಾದ ಭೌತಶಾಸ್ತ್ರೀಯ ಅಂಶವನ್ನು ಕಂಡುಕೊಳ್ಳುವುದಕ್ಕೆ ಅಧ್ಯಯನ ನಡೆಸಿದ ಅಲೆಸಾಂಡ್ರೋ ಕಾರ್ಬೆಟ್ಟಾ, ಜಾಸ್ಪರ್ ಮೂಸೆನ್ ಮತ್ತು ತಂಡಕ್ಕೆ ಭೌತಶಾಸ್ತ್ರ ವಿಭಾಗದಲ್ಲಿ ಪ್ರಶಸ್ತಿ ಲಭಿಸಿದೆ.
ಕೈನೆಟಿಕ್ ಪ್ರಶಸ್ತಿ ವಿಭಾಗ
ಫುಟ್‌ಪಾತ್‌ಗಳಲ್ಲಿ ಸಂಚರಿಸುವ ಪಾದಚಾರಿಗಳು ಆಗಾಗ ಢಿಕ್ಕಿ ಹೊಡೆಯುತ್ತಾರೆ ಎಂಬ ಸಂಶೋಧನೆಯೂ ನಡೆದಿದೆ. ಜಪಾನ್, ಸ್ವಿಟ್ಜರ್ ಲ್ಯಾಂಡ್ ಮತ್ತು ಇಟಲಿಯಲ್ಲಿ ಹಿಶಾಶಿ ಮುರಾಕಮಿ, ಕ್ಲಾಡಿಯೋ ಫೆಲಿಸಿಯಾನಿ ಮತ್ತು ತಂಡ ನಡೆಸಿದ ಅಧ್ಯಯನಕ್ಕೆ ಪ್ರಶಸ್ತಿ ಲಭಿಸಿದೆ.
ಎಂಟೊಮಾಲಜಿ ಪ್ರಶಸ್ತಿ ವಿಭಾಗ
ಜಲಂತಗಾರ್ಮಿಗಳಲ್ಲಿ ಜಿರಲೆಗಳನ್ನು ನಿಯಂತ್ರಿಸುವ ಹೊಸ ವಿಧಾನವನ್ನು ಕಂಡುಕೊಂಡ ಜಾನ್ ಮುಲ್‌ರೆನನ್ ಮತ್ತು ತಂಡಕ್ಕೆ ಪ್ರಶಸ್ತಿ ಲಭಿಸಿದೆ.
ಸಾರಿಗೆ ಪ್ರಶಸ್ತಿ ವಿಭಾಗ
ಖಡ್ಗ ಮೃಗವನ್ನು ತಲೆಕೆಳಗಾಗಿ ನೇತು ಹಾಕಿ ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸುವುದು ಸುರಕ್ಷಿತವೆಂಬುದನ್ನು ಕಂಡುಕೊಂಡ ರಾಬಿನ್ ರಾಡ್‌ಕ್ಲಿಫ್ ಮತ್ತ ತಂಡಕ್ಕೆ ಪ್ರಸಸ್ತಿ ಲಭಿಸಿದೆ.