ಓಪನ್ ಡೇಟಾ (ಮುಕ್ತ ದತ್ತಾಂಶ) ನೀತಿಯನ್ನು ಯುರೋಪಿಯನ್ ಒಕ್ಕೂಟ ಮತ್ತು ಇತರೆ ದೇಶಗಳು ಜಾರಿಗೆ ತಂದಾಗ, ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸುತ್ತದೆ ಮತ್ತು ಖಾಸಗಿತನ ಕಾಪಾಡುವುದಕ್ಕೆ ಮಾರ್ಗಸೂಚಿಗಳನ್ನು ಅನುಸರಿಸುತ್ತವೆ. ಇಲ್ಲಿ ದೇಶವಾಗಲಿ, ರಾಜ್ಯವಾಗಲಿ, ಖಾಸಗಿತನವನ್ನು ಉಪೇಕ್ಷೆ ಮಾಡಿ ಈ ನೀತಿಯನ್ನು ಅನುಸರಿಸುತ್ತವೆ ಎಂದರೆ ಅದು ಅಪರಾಧವಾಗುತ್ತದೆ ಎಂದು ಮಾಜಿ ಮಾಹಿತಿ ತಂತ್ರಜ್ಞಾನ ಸಚಿವ, ಕಾಂಗ್ರೆಸ್ ಮುಖಂಡ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಮುಕ್ತ ದತ್ತಾಂಶ ನೀತಿ ಕುರಿತು ‘ಟೆಕ್ ಕನ್ನಡ’ಕ್ಕೆ ಪ್ರತಿಕ್ರಿಯಿಸಿದ ಅವರು, ಮುಕ್ತ ದತ್ತಾಂಶ ನೀತಿ ಜಾರಿಯಾಗಬೇಕು. ನಾನು ಅದರ ಪರ. ಆದರೆ ಡೇಟಾವನ್ನು ಸರ್ಕಾರದ ನೀತಿಗಳನ್ನು ರೂಪಿಸಲು, ಸರ್ಕಾರದ ಯೋಜನೆಗಳನ್ನು ಜಾರಿಗೆ ತರುವುದಕ್ಕೆ ಹೇಗೆ ಬಳಸುತ್ತಾರೆ ಎಂಬುದು ಬಹಳ ಮುಖ್ಯ ಎಂದಿದ್ದಾರೆ.
ಪ್ರಿಯಾಂಕ್ ಖರ್ಗೆ ಅವರು ನೀಡಿದ ಪ್ರತಿಕ್ರಿಯೆ ಸಾರಾಂಶ ಹೀಗಿದೆ:
- ಖಾಸಗಿ ವ್ಯಕ್ತಿಗಳನ್ನು ಡೇಟಾ ಬಳಸಿ ಪರಿಹಾರ ರೂಪಿಸಲು, ಸೇವೆ ನೀಡಲು ಉತ್ತೇಜಿಸಬೇಕು. ಅದೆಲ್ಲಕ್ಕೂ ಮುಖ್ಯವಾಗಿ ಸರ್ಕಾರ ಆಡಳಿತ ಚುರುಕುಗೊಳಿಸುವ ನಿಟ್ಟಿನಲ್ಲಿ ಏನು ಮಾಡುತ್ತಾರೆ ಎಂಬುದನ್ನು ನೋಡಬೇಕಿದೆ.
- ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಡೇಟಾವನ್ನು ನೀಡುತ್ತೀರೆಂದು ಭಾವಿಸೋಣ. ಇದು ಜನಪ್ರಿಯ ಮಾರ್ಗಗಳಲ್ಲಿ ವಾಹನಗಳನ್ನು ಹೆಚ್ಚಿಸುವುದು ಇತ್ಯಾದಿ ಸೇವೆಗಳನ್ನು ಸುಧಾರಿಸಲು ಬಳಸಬಹುದು. ಯೋಜನೆ ಕುರಿತ ಮಾಹಿತಿ ಹೊರಹಾಕಿದರೆ, ಅದರ ಅನುಷ್ಠಾನ ಕುರಿತು ಪ್ರಶ್ನಿಸುವುದಕ್ಕೆ ನೆರವಾಗುತ್ತದೆ.
- ಉದಾಹರಣೆಗೆ, ಬೆಂಗಳೂರು ವಿಮಾನ ನಿಲ್ದಾಣದಿಂದ ಶಿವಾಜಿನಗರಕ್ಕೆ ದಿನಕ್ಕೆ ನೂರು ಬಸ್‌ಗಳು ಸಂಚರಿಸುತ್ತವೆ. ಆ ನೂರು ಬಸ್‌ಗಳಲ್ಲಿ ಹತ್ತು ಸಾವಿರ ಜನ ಇರುತ್ತಾರೆ. ಈ ಡೇಟಾ ಒಪ್ಪಿತ. ಆದರೆ ಪ್ರಿಯಾಂಕ್ ಖರ್ಗೆ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಶಿವಾಜಿನಗರಕ್ಕೆ ಪ್ರಯಾಣ ಮಾಡಿದರು ಎಂಬುದು ಖಾಸಗಿತನದ ಉಲ್ಲಂಘನೆ.
- ಈ ಡೇಟಾ ಅಂದರೆ ಅಂಕಿ ಅಂಶಗಳನ್ನಷ್ಟೇ ಕೊಡಬೇಕು. ಬದಲಿಗೆ ಪ್ರಿಯಾಂಕ್ ಏನ್ ಮಾಡ್ತಾ ಇದ್ದಾನೆ? ಎಲ್ಲಿ ಹೋಗ್ತಾ ಇದ್ದೇನೆ? ಹೇಗೆ ಹೋಗ್ತಾ ಇದ್ದಾನೆ? ಯಾವ ಬಸ್ ರೂಟ್ ತಗೋತಾ ಇದ್ದಾನೆ? ಎಷ್ಟು ಸಾರಿ ಓಡಾಡಿದ? ಇದು ಖಾಸಗಿತನದ ಉಲ್ಲಂಘನೆ.
- ಬಿ ಕೃಷ್ಣ ವರದಿಯನ್ನು ಕೇಂದ್ರ ಸರ್ಕಾರ ಇದುವರೆಗೂ ಅಂಗೀಕರಿಸಿಲ್ಲ. ಈ ಸರ್ಕಾರ ಎಲ್ಲ ರೀತಿಯ ಖಾಸಗಿತನವನ್ನು ಉಲ್ಲಂಘನೆ ಮಾಡಿರುವುದನ್ನು ನೋಡಿದ್ದೇವೆ. ಪೆಗಸಸ್ ಪ್ರಕರಣವೇ ಇದಕ್ಕೆ ಸಾಕ್ಷಿ. ಸರ್ಕಾರವೇ ಖರೀದಿಸಿದೆ. ಎಲ್ಲ ರೀತಿಯ ತಂತ್ರಜ್ಞಾನವನ್ನು ಜನರ ಖಾಸಗಿತನವನ್ನು ಕಸಿಯುವುದಕ್ಕೆ ಬಳಸುತ್ತಿದೆ. ಓಪನ್ ಡೇಟಾ ಪಾಲಿಸಿಯಡಿಯಲ್ಲಿ ಕೇಂದ್ರ ಸರ್ಕಾರ ಊಬರ್ ಓಲಾಗೆ ಡೇಟಾ ಮಾರಿದೆ. ಇದು ಸಂಪೂರ್ಣ ಖಾಸಗಿತನದ ಗಂಭೀರ ಉಲ್ಲಂಘನೆ.
- ಕೊರೊನಾಕ್ಕೆ ಸಂಬಂಧಿಸಿದ ಮಾಹಿತಿಯಾಗಲಿ, ಈಗ ಹೊಸದಾಗಿ ಜಾರಿಗೆ ತಂದಿರುವ ಡಿಜಿಟಲ್ ಹೆಲ್ತ್ ಐಡಿ ಕಾರ್ಡ್ ವಿಷಯದಲ್ಲೇ ನೋಡಿ, ಲಸಿಕೆ ತೆಗೆದುಕೊಂಡಿದ್ದಾರೆ, ಕಾರ್ಡ್‌ಗೆ ಅರ್ಹರು ಎಂದು ಹೇಳಿರುವುದು ಖಾಸಗಿತನದ ಉಲ್ಲಂಘನೆ.
- ಡೇಟಾ ಆಧರಿಸಿದ ಸಮಾಜವಾಗಿ ನಮ್ಮ ಸಮಾಜ ಬದಲಾಗಿದೆ. ಎಲ್ಲವೂ ಡೇಟಾವನ್ನು ಆಧರಿಸಿದೆ. ನೀವು ನೀಡಿದ ಅನುದಾನವನ್ನೇ ಮತ್ತೆ ನೀಡುತ್ತಿದ್ದೀರಿ. ಒಂದೇ ರಸ್ತೆಯ ಮೇಲೆ ಮತ್ತೆ ಮತ್ತೆ ಕಾಮಗಾರಿ ಮಾಡುತ್ತಿದ್ದೀರಿ. ಸಂಪನ್ಮೂಲಗಳ ಸಮಾನ ವಿತರಣೆ ಆಗುತ್ತಿಲ್ಲ… ಜನ ರೀತಿಯ ಪ್ರಶ್ನೆಗಳನ್ನು ಕೇಳುವುದಕ್ಕೆ ಓಪೆನಾ ಡೇಟಾ ಅವಕಾಶ ನೀಡುತ್ತದೆ. ಆದರೆ ಸಾಂವಿಧಾನ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದಾದರೆ, ನಾನು ಅದನ್ನು ಬೆಂಬಲಿಸುವುದಿಲ್ಲ.
- ಈ ಸರ್ಕಾರ ಆರ್ ಟಿ ಇಯನ್ನೇ ಮಾಹಿತಿ ಕೊಡುವುದಿಲ್ಲ. ಏನೇ ಕೇಳಿದರೂ ಮಾಹಿತಿ ಇಲ್ಲ, ಎಷ್ಟು ಜನರಿಗೆ ಕಿಟ್ ಕೊಟ್ಟಿದ್ದೀರಾ? ಎಂದು ಕೇಳಿದರೆ ಗೊತ್ತಿಲ್ಲ ಎನ್ನುತ್ತಾರೆ. ಎಷ್ಟು ಜನ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಕೇಳಿದರೆ, ಗೊತ್ತಿಲ್ಲ ಎನ್ನುತ್ತದೆ. ಹೇಗೆ ಸಾಧ್ಯ?
ಕರ್ನಾಟಕ ಮುಕ್ತ ದತ್ತಾಂಶ ನೀತಿಯ ಪ್ರತಿ
https://drive.google.com/file/d/1545vfo_KXEh4VfqLOQGOEixlsUCOvBlN/view