ಡ್ರೈವರ್‌ ಲೆಸ್‌ ಕಾರುಗಳನ್ನು ನಿರ್ಮಿಸಲು ಕೈಜೋಡಿಸಿದ ಐಐಎಸ್‌ಸಿ, ವಿಪ್ರೊ

ಡ್ರೈವರ್‌ಲೆಸ್‌ ಕಾರುಗಳ ಬಗ್ಗೆ ಜಾಗತಿಕ ಚರ್ಚೆ ನಡೆಯುತ್ತಿದೆ. ದೊಡ್ಡ ಮೋಟರ್‌ ಕಂಪನಿಗಳು ಈಗಾಗಲೇ ಪ್ರಯೋಗಾರ್ಥ ಡ್ರೈವರ್‌ ಲೆಸ್‌ ಕಾರುಗಳನ್ನು ರಸ್ತೆಗಿಳಿಸಿದ್ದಾರೆ. ಈಗ ಬೆಂಗಳೂರಿನ ಪ್ರತಿಷ್ಠಿತ ಸಂಶೋಧನಾ ಸಂಸ್ಥೆ ಭಾರತೀಯ ವಿಜ್ಞಾನ ಸಂಸ್ಥೆ ಹಾಗೂ ಐಟಿ ಸಂಸ್ಥೆ ವಿಪ್ರೊ ಜೊತೆಯಾಗಿ ಡ್ರೈವರ್‌ ಲೆಸ್‌ ಕಾರು ನಿರ್ಮಿಸಲು ಮುಂದಾಗಿವೆ

ಬೆಂಗಳೂರು ಇತ್ತೀಚೆಗೆ ಗಮನಸೆಳೆದಿದ್ದು ಬಾದಲ್‌ ನಂಜುಂಡಸ್ವಾಮಿ ಅವರ ಗಗನಯಾನಿಯೊಬ್ಬ ಚಂದ್ರನ ಮೇಲೆ ಹೆಜ್ಜೆ ಇಟ್ಟಣ ಅಣುಕು ವಿಡಿಯೋ ಮೂಲಕ. ರಸ್ತೆಗುಂಡಿಗಳು ಬೆಂಗಳೂರಿನಲ್ಲಿ ಯಾವ ಪ್ರಮಾಣದಲ್ಲಿವೆ ಎಂದರೆ ಅದು ಚಂದ್ರನ ಮೇಲಿನ ನಡಿಗೆಯಂತೆ ಅನ್ನಿಸುತ್ತದೆ ಎಂದು ಕಲಾವಿದ ಸ್ಥಳೀಯ ಆಡಳಿತವನ್ನು ಚುಚ್ಚಿದ್ದರು.

ಭಾರತೀಯ ರಸ್ತೆಗಳು ಹೀಗಿರುವಾಗ ಇಲ್ಲಿ ಡ್ರೈವರ್‌ ಲೆಸ್‌ ಕಾರುಗಳನ್ನು ಚಲಾಯಿಸುವುದು ಎಂಥ ಸವಾಲಾಗಿರಬಹುದು ಊಹಿಸಿ.

ವಿಪ್ರೋ ಮತ್ತು ಐಐಎಸ್‌ಸಿ ಭಾರತೀಯ ರಸ್ತೆಗಳಿಗೆ ಹೊಂದುವ ಚಾಲಕನಿಲ್ಲದ ಕಾರನ್ನು ನಿರ್ಮಿಸುವುದಕ್ಕೆ ಮುಂದಾಗಿವೆ. 2020ರ ಮಾರ್ಚ್‌ ಹೊತ್ತಿಗೆ ಕಾರನ್ನು ಸಾರ್ವಜನಿಕರಿಗೆ ಪರಿಚಯಿಸುವ ಗುರಿ ಇಟ್ಟುಕೊಂಡು ಕೆಲಸ ಮಾಡುತ್ತಿವೆ.

ಈ ಉದ್ದೇಶದೊಂದಿಗೆ ಕಳೆದ ತಿಂಗಳು ಸ್ಥಾಪಿಸಲಾದ ವಿಪ್ರೊಐಐಎಸ್ಸಿ ರೀಸರ್ಚ್‌ ಅಂಡ್‌ ಇನ್ನೋವೇಷನ್‌ ನೆಟ್‌ವರ್ಕ್‌ ಭಾಗವಾಗಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ.

ಡ್ರೈವರ್‌ ಲೆಸ್‌ ಕಾರಿನ ಕುರಿತು ವಿಪ್ರೊ ಮುಖ್ಯಸ್ಥ ಅಜಿಮ್‌ ಪ್ರೇಮ್‌ಜಿ ಅವರಿಗೆ ವಿವರಿಸುತ್ತಿರುವ ರಾಮಚಂದ್ರ ಬೂದಿಹಾಳ್

ವಿಪ್ರೋದ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್‌ ವಿಭಾಗದ ಮುಖ್ಯಸ್ಥ ರಾಮಚಂದ್ರ ಬೂದಿಹಾಳ್‌ ಈ ಯೋಜನೆಯ ನೇತೃತ್ವ ವಹಿಸಿದ್ದು ಐಐಎಸ್‌ಸಿಯ ಏರೊಸ್ಪೇಸ್‌ ಎಂಜಿನಿಯರಿಂಗ್‌, ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌, ಎಲೆಕ್ಟ್ರಿಕಲ್‌ ಕಮ್ಯುನಿಕೇಷನ್‌ ಎಂಜಿನಿಯರಿಂಗ್‌, ಎಲೆಕ್ಟ್ರಾನಿಕ್ಸ್‌ ಸಿಸ್ಟಮ್ಸ್‌ ಎಂಜಿನಿಯರಿಂಗ್‌, ಎಲೆಕ್ಟ್ರಾನಿಕ್‌ ಡಿಸೈನ್‌ ಅಂಡ್‌ ಟೆಕ್ನಾಲಜಿ, ಕಂಪ್ಯೂಟರ್‌ ಸೈನ್ಸ್‌ ಮತ್ತು ಆಟೋಮೇಷನ್‌ ವಿಭಾಗದ 18 ಎಂಜಿನಿಯರ್‌ಗಳ ತಂಡದೊಂದಿಗೆ ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌, ರೊಬೊಟಿಕ್ಸ್‌ ತಂತ್ರಜ್ಞಾನ ಬಳಸಿಕೊಂಡು ಡ್ರೈವರ್‌ ಇಲ್ಲದ ಕಾರು ನಿರ್ಮಾಣ ಕಾರ್ಯ ನಡೆಯುತ್ತಿದೆ.

ಭಾರತದಲ್ಲಿ ವಿದೇಶಗಳಿರುವಂತೆ ಉತ್ತಮ ರಸ್ತೆಗಳು, ಶಿಸ್ತಿನ ಟ್ರಾಫಿಕ್‌ ಇದೆ. ಇಲ್ಲಿ ಡ್ರೈವರ್‌ ಇಲ್ಲದ ಕಾರು ಓಡುವುದು ಕಷ್ಟವಾಗುವುದಿಲ್ಲ. ಆದರೆ ರಸ್ತೆಗುಂಡಿ, ಅನಿಯಮಿತ ಹಂಪ್‌ಗಳು ಇರುವ ಭಾರತದ ರಸ್ತೆಗಳ ಸ್ಥಿತಿ ಅಸಮರ್ಪಕ ಹಾಗೂ ಅನಿರೀಕ್ಷಿತವಾಗಿದ್ದ, ಅದನ್ನು ಅರ್ಥ ಮಾಡಿಕೊಂಡು ಚಲಿಸಲು ಅಗತ್ಯವಾಗುವ ಆಲ್ಗರಿದಮ್‌ ರೂಪಿಸುವ ಪ್ರಯತ್ನ ನಡೆಯುತ್ತಿದೆ ಎಂದು ತಂಡ ತಿಳಿಸಿದೆ.

ಯಾವುದೇ ಜಾಗತಿಕ ಮಾದರಿಗಳನ್ನು ಅನುಸರಿಸದೇ ಸಂಪೂರ್ಣವಾಗಿ ನಮ್ಮದೇ ಎನಿಸುವ ವಿದ್ಯುತ್‌ ಚಾಲಿತ ಕಾರನ್ನು ರೂಪಿಸುವ ಉತ್ಸಾಹದಲ್ಲಿ ಈ ತಂಡವಿದೆ.

ಈಗಾಗಲೇ ಆರು ತಿಂಗಳ ಅವಧಿಯಲ್ಲಿ ಬೆಂಗಳೂರಿನ ರಸ್ತೆಗಳ 1000 ಗಂಟೆಗಳ ಮಾಹಿತಿಯಲ್ಲಿ 100 ಗಂಟೆಗಳ ಅವಧಿಯ ಮಾಹಿತಿಯನ್ನು ಪರಿಷ್ಕರಿಸಿ ಸಂಗ್ರಹಿಸಿದ್ದಾರೆ. 28 ಸೆನ್ಸಾರ್‌ಗಳಿರುವ ಕಾರನ್ನು ರೂಪಿಸುವ ನಿಟ್ಟಿನಲ್ಲಿ ರಾಮಚಂದ್ರ ಅವರ ತಂಡ ಕೆಲಸ ಮಾಡುತ್ತಿದೆ.

ವಿಪ್ರೋ ಸಂಸ್ಥೆ ಮಷೀನ್‌ ಲರ್ನಿಂಗ್, ರೊಬೊಟಿಕ್ಸ್‌ ಮುಂತಾದ ತಾಂತ್ರಿಕ ಸಂಶೋಧನೆ ಸುಮಾರು 9ಕೋಟಿ ರೂ.ಗಳನ್ನು ಹೂಡಿಕೆ ಮಾಡಿದೆ ಎನ್ನಲಾಗಿದೆ.

%d bloggers like this: